ರಿಷಬ್ ಶೆಟ್ಟಿ ಭಾರತೀಯ ಚಿತ್ರರಂಗದಲ್ಲೇ ಈ ಅಪರೂಪದ ಸಾಧನೆಗೈದ ಏಕೈಕ ನಟ
ರಿಷಬ್ ಶೆಟ್ಟಿ ಮತ್ತು ಕಾಂತಾರಕ್ಕೆ ವಿಶೇಷ ಪರಿಚಯ ಬೇಕಿಲ್ಲ. ಡಿವೈನ್ ಸ್ಟಾರ್ ಅಪರೂಪದ ಸಾಧನೆಯಿಂದ ಜನಮನ ಸೆಳೆಯುತ್ತಿದ್ದಾರೆ.

By ETV Bharat Entertainment Team
Published : January 3, 2026 at 5:23 PM IST
2022ರ ಸೆಪ್ಟಂಬರ್ 30 ಮತ್ತು 2025ರ ಅಕ್ಟೋಬರ್ 2 ಕನ್ನಡ ಚಿತ್ರರಂಗದಲ್ಲಿ ಬಹಳ ಮಹತ್ವದ ದಿನ. ಈ ದಿನದಂದು ತೆರೆಕಂಡ ಕಾಂತಾರ ಮತ್ತು ಕಾಂತಾರ ಚಾಪ್ಟರ್ 1 ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸು ಗಳಿಸುವ ಮೂಲಕ ಕನ್ನಡ ಚಿತ್ರರಂಗದ ಕೀರ್ತಿಯನ್ನು ಗಡಿಮೀರಿ ಹರಡಿದೆ. ಹಲವು ದಾಖಲೆಗಳನ್ನು ಪುಡಿಗಟ್ಟಿರುವ ಈ ಬ್ಲಾಕ್ಬಸ್ಟರ್ ಸಿನಿಮಾಗಳು, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರ ಸಾಧನೆಗಳ ತೂಕವನ್ನು ಇಮ್ಮಡಿಗೊಳಿಸಿದೆ.
ಭಾರತೀಯ ಬಾಕ್ಸ್ ಆಫೀಸ್ ಇತಿಹಾಸದಲ್ಲಿ 'ಕಾಂತಾರ' ಅಪರೂಪದ ದಾಖಲೆಯನ್ನು ನಿರ್ಮಿಸಿದೆ. ಕಾಂತಾರ ಮತ್ತು ಕಾಂತಾರ ಅಧ್ಯಾಯ 1 ವಿಶ್ವದಾದ್ಯಂತ 1,300 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿವೆ. ಕರ್ನಾಟಕದ ಕರಾವಳಿಯಲ್ಲಿ ಹೆಚ್ಚು ಆಚರಿಸಲ್ಪಡುವ, ನಂಬುವ ದೈವಾರಾಧನೆ ಸುತ್ತ ಹೆಣೆಯಲಾದ ಕಥೆ ಹೊರ ರಾಜ್ಯ ಮಾತ್ರವಲ್ಲದೇ ಭಾರತದಾದ್ಯಂತ, ಸಾಗರೋತ್ತರ ಪ್ರದೇಶಗಳಲ್ಲಿಯೂ ಸಖತ್ ಸದ್ದು ಮಾಡಿತು.
2022ರ ಸೆಪ್ಟಂಬರ್ 30ರಂದು ಚಿತ್ರಮಂದಿರಗಳನ್ನು ಪ್ರವೇಶಿಸಿದ ಮೂಲ ಕಾಂತಾರ ಚಿತ್ರ ವಿಶ್ವದಾದ್ಯಂತ 450 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿತು. ಬಲವಾದ ಬಾಯ್ಮಾತಿನ ಪ್ರಚಾರ, ಆಧ್ಯಾತ್ಮಿಕ ಸಂಪರ್ಕದಿಂದ ಈ ಚಿತ್ರವು ಅದ್ಭುತ ಯಶಸ್ಸನ್ನು ಕಂಡಿತು. ಕನ್ನಡವೊಂದರಲ್ಲೇ ನಿರ್ಮಾಣಗೊಂಡಿದ್ದ ಚಿತ್ರ ನಂತರ ಬೇಡಿಕೆ ಮೇರೆಗೆ ಭಾರತದ ಬಹುಭಾಷೆಗಳಿಗೆ ಡಬ್ ಆಗಿ ತೆರೆಕಂಡಿತು. ಪ್ರೇಕ್ಷಕರು ಮಾತ್ರವಲ್ಲದೇ ರಜನಿಕಾಂತ್ ಅವರಂತಹ ದಿಗ್ಗಜ ಕಲಾವಿದರೂ ಈ ಸಿನಿಮಾವನ್ನು ಹಾಡಿ ಹೊಗಳಿದ್ದರು.
ಸಂಪ್ರದಾಯದಲ್ಲಿ ಬೇರೂರಿರುವ ಪ್ರಬಲ ಕಥೆಯು ಪ್ರೇಕ್ಷಕರ ಪ್ರಶಂಸೆ ಜೊತೆಗೆ ಕಮರ್ಷಿಯಲಿ ಯಶಸ್ಸನ್ನು ಸಾಧಿಸಬಹುದು ಎಂಬುದನ್ನು ಸಾಬೀತುಪಡಿಸಿತು. ಪ್ರಾದೇಶಿಕ ಸಿನಿಮಾಗೆ ಒಂದು ಮಹತ್ವದ ತಿರುವು ನೀಡಿತು. ಈ ಯಶಸ್ಸಿನ ಬೆನ್ನಲ್ಲೇ, ಬಹು ಬೇಡಿಕೆಯೊಂದಿಗೆ ನಿರ್ಮಿಸಲಾದ ಕಾಂತಾರ: ಅಧ್ಯಾಯ 1 ಚಿತ್ರವು ಕಾಂತಾರ ಫ್ರಾಂಚೈಸಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿತು. ಬಹು ಭಾಷೆಗಳಲ್ಲಿ 30+ ದೇಶಗಳಲ್ಲಿ ಬಿಡುಗಡೆಯಾದ ಈ ಪ್ರೀಕ್ವೆಲ್ ಜಗತ್ತಿನಾದ್ಯಂತ ಸುಮಾರು 850 ಕೋಟಿ ರೂಪಾಯಿ ಗಳಿಸಿತು. ಈ ಮೂಲಕ ಕಾಂತಾರ ಚಾಪ್ಟರ್ 1, 2025ರ ಅತಿ ಹೆಚ್ಚು ಗಳಿಕೆಯ ಎರಡನೇ ಭಾರತೀಯ ಚಿತ್ರವಾಗಿ ಹೊರಹೊಮ್ಮಿತು.
ಇದನ್ನೂ ಓದಿ: ಮೈಸೂರಿನ ಸಂಗಮ್ ಥಿಯೇಟರ್ಗೆ ಸುದೀಪ್ ಹೋಗದಿರಲು ಅಸಲಿ ಕಾರಣವೇನು? ಆಪ್ತರು ಕೊಟ್ರು ಮಾಹಿತಿ
ಇನ್ನೂ ಈ ಕಾಂತಾರ ಚಿತ್ರದ ಮೂಲಕ ಡಿವೈನ್ ಸ್ಟಾರ್ ಎಂದೇ ಹೆಸರು ಸಂಪಾದಿಸಿದ ರಿಷಬ್ ಶೆಟ್ಟಿ ಅವರು ಅಪರೂಪದ ಸಾಧನೆಗೆ ಪಾತ್ರರಾಗಿದ್ದಾರೆ. ಎರಡೂ ಚಿತ್ರಗಳ ಕಥೆ, ಚಿತ್ರಕಥೆ, ನಿರ್ದೇಶನ ಮತ್ತು ನಟನೆಯಲ್ಲಿ ಮಹತ್ವದ ಪಾತ್ರ ವಹಿಸಿರುವ ರಿಷಬ್ ಶೆಟ್ಟಿ, ಭಾರತೀಯ ಚಿತ್ರರಂಗದಲ್ಲಿ ಒಟ್ಟಾರೆಯಾಗಿ 1,300+ ಕೋಟಿ ರೂಪಾಯಿ ಸಂಪಾದಿಸಿರುವ ಏಕೈಕ ಬರಹಗಾರ, ನಟ, ಮತ್ತು ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ.
ಇದನ್ನೂ ಓದಿ: ತರುಣ್ ಸುಧೀರ್ ಖರೀದಿಸಿದ ಐಷಾರಾಮಿ ಮನೆಯ ಬೆಲೆ ಎಷ್ಟು? ಆಪ್ತರ ಮಾಹಿತಿ ಇಲ್ಲಿದೆ
ಈ ಸಾಧನೆಯು ಅವರನ್ನು ಪ್ಯಾನ್-ಇಂಡಿಯಾದಲ್ಲಿ ಮಟ್ಟದಲ್ಲಿ ಅತಿದೊಡ್ಡ ನಟ - ಲೇಖಕ - ನಿರ್ದೇಶಕನಾಗಿ ಗುರುತಿಸಿದೆ. ಕಾಂತಾರ ಯಶಸ್ಸಿನ ಬೆನ್ನಲ್ಲೇ ಕೋಟ್ಯಂತರ ಸಿನಿಪ್ರಿಯರು ಡಿವೈನ್ ಸ್ಟಾರ್ನ ಮುಂದಿನ ಚಿತ್ರಕ್ಕಾಗಿ ಕಾಯುತ್ತಿದ್ದಾರೆ.

