ETV Bharat / entertainment

Toxic: ರಾಕಿಂಗ್​ ಸ್ಟಾರ್​ ಯಶ್​ ಬರ್ತ್​​ಡೇಗೆ ಭರ್ಜರಿ ಗಿಫ್ಟ್; ಫ್ಯಾನ್ಸ್ ಪ್ರಶ್ನೆಗೆ ಸಿಕ್ತು ಉತ್ತರ

ಬಹುಸಮಯದಿಂದ ಅಭಿಮಾನಿಗಳು ಕಾತರರಾಗಿದ್ದ ಕ್ಷಣ ಬಂದೇ ಬಿಟ್ಟಿದೆ.

Yash 'Toxic' Look
ಯಶ್​ 'ಟಾಕ್ಸಿಕ್​​' ಲುಕ್ (Photo: Film Poster)
author img

By ETV Bharat Entertainment Team

Published : January 7, 2026 at 4:51 PM IST

2 Min Read
Choose ETV Bharat

ರಾಕಿಂಗ್ ಸ್ಟಾರ್ ಯಶ್. ವಿಶೇಷ ಪರಿಚಯ ಬೇಕೆನಿಸದು. ಕನ್ನಡ ಚಿತ್ರರಂಗದ ಕೀರ್ತಿಯನ್ನು ಗಡಿ ಮೀರಿ ವಿಸ್ತರಿಸಿದ ಪ್ರತಿಭಾನ್ವಿತ ಕಲಾವಿದ. ಕೆಜಿಎಫ್​ ಎನ್ನೋ ಬ್ಲಾಕ್​ಬಸ್ಟರ್ ಚಿತ್ರದ ಮೂಲಕ ತಮ್ಮ ಜನಪ್ರಿಯತೆಯನ್ನು ದುಪ್ಪಟ್ಟುಗೊಳಿಸಿಕೊಂಡ ಯಶ್, ನಾಳೆ, ಜನವರಿ 8ರಂದು ತಮ್ಮ 40ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಕೆಜಿಎಫ್​​ ಸ್ಟಾರ್ ತಮ್ಮ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ತಮ್ಮ ಮುಂಬರುವ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್'​ನಿಂದ ದೊಡ್ಡ ಉಡುಗೊರೆ ಸಿದ್ಧಪಡಿಸಿದ್ದಾರೆ.

ಇಂದು ಖ್ಯಾತ ನಟ ತಮ್ಮ ಅಭಿಮಾನಿಗಳಿಗೆ ಬಿಗ್​ ಸರ್ಪೈಸ್​ ನೀಡಿದ್ದಾರೆ. ಯಶ್ ಅವರ ಟಾಕ್ಸಿಕ್ ಚಿತ್ರದಿಂದ ಭರ್ಜರಿ ಪೋಸ್ಟರ್ ಬಿಡುಗಡೆಯಾಗಿದ್ದು, ನಾಳೆ ಪ್ರೇಕ್ಷಕರು ಸ್ವೀಕರಿಸಲಿರುವ ಸರ್ಪೈಸ್​​ ಕುರಿತಾಗಿನ ಮಾಹಿತಿಯೂ ಇದೆ.

ಯಶ್​​ ಬರ್ತ್​​ಡೇ ಹಿನ್ನೆಲೆ, ಕಳೆದ ಒಂದು ವಾರದಿಂದಲೇ ಸೋಷಿಯಲ್​​ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿತ್ತು. ಟೀಸರ್​, ಟ್ರೇಲರ್​ ಅಥವಾ ನಾಯಕ ನಟನ ಇಂಟ್ರುಡಕ್ಷನ್​ ಗ್ಲಿಂಪ್ಸ್​​ ಅನಾವರಣಗೊಳ್ಳಲಿದೆ ಎಂದು ಹೇಳಲಾಗಿತ್ತು. ಅಧಿಕೃತ ಮಾಹಿತಿ ಕೊಡುವಂತೆ ಚಿತ್ರತಂಡದ ಬಳಿ ಅಭಿಮಾನಿಗಳು ಬೇಡಿಕೆ ಇಟ್ಟಿದ್ದರು. ಆ ಬಗ್ಗೆ ಇಂದು ಚಿತ್ರತಂಡ ಪೋಸ್ಟರ್ ಸಹಿತ ಮಾಹಿತಿ ಹಂಚಿಕೊಂಡಿದೆ. ನಟನ ಹೊಸ ಪೋಸ್ಟರ್ ಅಭಿಮಾನಿಗಳ ಮನಗೆದ್ದಿದೆ.

ಪೋಸ್ಟರ್ ಹಂಚಿಕೊಂಡ ಕೆವಿಎನ್​ ಪ್ರೊಡಕ್ಷನ್ಸ್, ''Revealing the ONE they warned you about. 10:10 AM, 08-01-2026'' ಎಂದು ಬರೆದುಕೊಂಡಿದೆ. ನಾಳೆ ಬೆಳಗ್ಗೆ 10 ಗಂಟೆ 10 ನಿಮಿಷಕ್ಕೆ ಚಿತ್ರದ ಪ್ರಮೋಶನಲ್​ ಕಂಟೆಂಟ್​ ಅನಾವರಣಗೊಳ್ಳಲಿದೆ. ಉತ್ಸುಕ ಅಭಿಮಾನಿಗಳ ಕುತೂಹಲ ದುಪ್ಪಟ್ಟಾಗಿದೆ.

"ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್"ಗಾಗಿ ಅಭಿಮಾನಿಗಳು ಬಹಳ ಕಾತರದಿಂದ ಕಾಯುತ್ತಿದ್ದಾರೆ. ಸಿನಿಮಾ ಕಳೆದ ಏಪ್ರಿಲ್​ನಲ್ಲೇ ಬಿಡುಗಡೆಯಾಗಬೇಕಿತ್ತು. ಆದ್ರೆ ಮಹತ್ವಾಕಾಂಕ್ಷೆಯ ಸಿನಿಮಾ ಹೆಚ್ಚಿನ ಸಮಯ ಬೇಡಿದ ಹಿನ್ನೆಲೆ, ಬರೋಬ್ಬರಿ ಒಂದು ವರ್ಷ ಮುಂದೂಡಿಕೆಯಾಯಿತು.​​ ಮಾರ್ಚ್ 19, 202 ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದ್ದು, ಸಿನಿಮಾ ಕಣ್ತುಂಬಿಕೊಳ್ಳಲು ಸಿನಿಪ್ರಿಯರೂ ಮಾತ್ರವಲ್ಲದೇ ಭಾರತದ ಸಿನಿಗಣ್ಯರೂ ಕಾತರರಾಗಿದ್ದಾರೆ. ಈ ಹಿಂದೊಮ್ಮೆ ಕಿಂಗ್ ಖಾನ್​ ಶಾರುಖ್​​ ಅವರು, ಯಶ್​ ಆದಷ್ಟು ಬೇಗ ಸಿನಿಮಾ ಮಾಡಿ ಎಂದು ತಿಳಿಸಿದ್ದರು.

ಇದನ್ನೂ ಓದಿ: 1 ಚಿತ್ರ, 4 ವರ್ಷ, 5 ಚೆಲುವೆಯರು, ಇದು ಕೆಜಿಎಫ್​ ಸ್ಟಾರ್ ಕ್ರೇಜ್​​: 'ಟಾಕ್ಸಿಕ್' ನಟಿಯರ ಬಗ್ಗೆ ನಿರ್ದೇಶಕಿ ಗುಣಗಾನ

2025ರ ಬ್ಲಾಕ್​ಬಸ್ಟರ್ ಧುರಂಧರ್ 2 ಕೂಡಾ ಅದೇ ದಿನಾಂಕದಂದು ಬಿಡುಗಡೆಯಾಗಲಿದ್ದು ಭರ್ಜರಿ ಬಾಕ್ಸ್​ ಆಫೀಸ್​ ಫೈಟ್​ ಫಿಕ್ಸ್​ ಆಗಿದೆ. ಕಳೆದ ಒಂದು ತಿಂಗಳಿನಿಂದ ಧುರಂಧರ್ 2 ಬಾಕ್ಸ್ ಆಫೀಸ್‌ನಲ್ಲಿ ಬಿರುಗಾಳಿಯೆಬ್ಬಿಸುತ್ತಿದ್ದು, ಚಿತ್ರದ ಮೇಲಿನ ಕ್ರೇಜ್ ಕಡಿಮೆಯಾಗುವ ಯಾವುದೇ ಲಕ್ಷಣಗಳಿಲ್ಲ. ಸಿನಿಪ್ರಿಯರು ಧುರಂಧರ್ 2ಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಮತ್ತೊಂದೆಡೆ, ಯಶ್ 4 ವರ್ಷಗಳ ನಂತರ "ಟಾಕ್ಸಿಕ್"ನೊಂದಿಗೆ ಚಿತ್ರಮಂದಿರಗಳಿಗೆ ಮರಳುತ್ತಿರುವ ಹಿನ್ನೆಲೆ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಪ್ರೇಕ್ಷಕರು ಮೊದಲು ಯಾವ ಚಿತ್ರವನ್ನು ನೋಡಬೇಕೆನ್ನುವ ಗೊಂದಲಕ್ಕೊಳಗಾಗುವ ಸಾಧ್ಯತೆಯಿದೆ. ಈ ಚಿತ್ರಗಳು ಏಕಕಾಲದಲ್ಲಿ ಬಿಡುಗಡೆಯಾಗುತ್ತಿರುವದರಿಂದ, ಕಲೆಕ್ಷನ್​ ಮೇಲೆ ಗಮನಾರ್ಹ ಪರಿಣಾಮ ಬೀರುವ ಸಾಧ್ಯತೆಯಿದೆ. ಅದಾಗ್ಯೂ ಹಬ್ಬದ ವಾರ, ರಜಾ ದಿನಗಳನ್ನು ಗಮನದಲ್ಲಿಟ್ಟುಕೊಂಡು ಚಿತ್ರತಂಡಗಳು ಈ ನಿರ್ಧಾರ ತೆಗೆದುಕೊಂಡಿವೆ.

ಇದನ್ನೂ ಓದಿ: Interview: ಆಟೋ ಡ್ರೈವರ್ ಆಗಿದ್ದ ರವಿವರ್ಮ ಇಂದು ಪ್ಯಾನ್ ಇಂಡಿಯಾ ಸಾಹಸ ನಿರ್ದೇಶಕ

ಚಿತ್ರತಂಡ ಈಗಾಗಲೇ ನಟಿಯರ ಮಾಹಿತಿಯನ್ನು ಅಧಿಕೃತವಾಗಿ ಘೋಷಿಸಿದೆ. ಮೆಲಿಸಾ ಪಾತ್ರದಲ್ಲಿ ಕಾಂತಾರ ಚಾಪ್ಟರ್ 1 ಖ್ಯಾತಿಯ ಕನ್ನಡದ ಖ್ಯಾತ ನಟಿ ರುಕ್ಮಿಣಿ ವಸಂತ್, ಗಂಗಾ ಪಾತ್ರದಲ್ಲಿ ಸೌತ್ ಲೇಡಿ ಸೂಪರ್​ ಸ್ಟಾರ್ ನಯನತಾರಾ, ನಾದಿಯಾ ಪಾತ್ರದಲ್ಲಿ ಬಾಲಿವುಡ್​ ಬೆಡಗಿ ಕಿಯಾರಾ ಅಡ್ವಾಣಿ, ಎಲಿಜಬೆತ್ ಪಾತ್ರದಲ್ಲಿ ಬಾಲಿವುಡ್​ ಜನಪ್ರಿಯ ನಟಿ ಹುಮಾ ಖುರೇಷಿ, ರೆಬೆಕಾ ಪಾತ್ರದಲ್ಲಿ ಬಾಲಿವುಡ್​​ ನಟಿ-ಗಾಯಕಿ ತಾರಾ ಸುತಾರಿಯಾ ಬಣ್ಣ ಹಚ್ಚಿದ್ದು, ಈಗಾಗಲೇ ಪೋಸ್ಟರ್​ಗಳು ಅನಾವರಣಗೊಂಡಿದೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್​ದಾಸ್ ನಿರ್ದೇಶನದ ಟಾಕ್ಸಿಕ್​ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿ ವೆಂಕಟ್ ಕೆ.ನಾರಾಯಣ್​ ಮತ್ತು ಯಶ್ ಬಿಗ್​ ಬಜೆಟ್​ನಲ್ಲಿ ನಿರ್ಮಿಸಿದ್ದಾರೆ.