'ಕೂರ್ಗ್ ಹುಡುಗಿಯ 'ಪ್ರೇಮದ ಊರಲಿ' ಯಶಸ್ವಿಯಾಗಿದೆ, ಹೆಮ್ಮೆಯಿದೆ, ಇದು ಕೇವಲ ಆರಂಭ': ರಶ್ಮಿಕಾ ಮಂದಣ್ಣ
ಪ್ರೇಮದ ಊರಲಿ ಸಿನಿಮಾ ನಿರೀಕ್ಷೆಗೂ ಮೀರಿದ ಯಶಸ್ಸು ಕಾಣುತ್ತಿದ್ದು, ರಶ್ಮಿಕಾ ಮಂದಣ್ಣ, ರಿಷಬ್ ಶೆಟ್ಟಿ, ವಸಿಷ್ಠ ಸಿಂಹ ಸೇರಿ ಹಲವರು ತಮ್ಮ ಮೆಚ್ಚುಗೆಯ ಜೊತೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

By ETV Bharat Entertainment Team
Published : October 12, 2026 at 11:00 AM IST
ಒಂದೊಳ್ಳೆ ಸಿನಿಮಾಗೆ ಯಶಸ್ಸು ಖಚಿತ ಅನ್ನೋದನ್ನು 'ಪ್ರೇಮದ ಊರಲಿ' ಸಾಬೀತುಪಡಿಸಿದೆ. ನವಪ್ರತಿಭೆಗಳು ಕೈ ಜೋಡಿಸಿ ಕೇವಲ 2 ಕೋಟಿ ರೂಪಾಯಿಯಲ್ಲಿ ನಿರ್ಮಾಣಗೊಂಡು ಬಾಕ್ಸ್ ಆಫೀಸ್ನಲ್ಲಿ 50 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವಲ್ಲಿ ಮನೋಜ್ ಕುಮಾರ್ ನಿರ್ದೇಶನದ ಸಿನಿಮಾ ಯಶಸ್ವಿಯಾಗಿದೆ. ಶ್ರೀರಾಮ್, ತಪಸ್ವಿನಿ ಪೂಣಚ್ಚ, ರಮಿಕಾ ಶಿವು ಹಾಗೂ ರಂಗಾಯಣ ರಘು ಮುಖ್ಯಭೂಮಿಕೆಯಲ್ಲಿರುವ ಚಿತ್ರಕ್ಕೆ ಪ್ರೇಕ್ಷಕರು ಮಾತ್ರವಲ್ಲದೇ ಸಿನಿಗಣ್ಯರೂ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಕೂರ್ಗ್ ಹುಡುಗಿಯ ಸಿನಿಮಾ ಯಶಸ್ವಿಯಾಗಿದ್ದು, ಹೆಮ್ಮೆಯಿದೆ ಎಂದು ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ತಿಳಿಸಿದ್ದಾರೆ.
ರಶ್ಮಿಕಾ ಮಂದಣ್ಣ ಪ್ರಶಂಸೆ: ಚಿತ್ರದ ದೃಶ್ಯವನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡ ಬಹುಭಾಷಾ ನಟಿ ರಶ್ಮಿಕಾ, ''ಕೊಡಗಿನ ಹುಡುಗಿ ತಪಸ್ವಿನಿ ಪೂಣಚ್ಚ ನಟಿಸಿದ ಸಿನಿಮಾ ಚಿತ್ರಮಂದಿರಗಳಲ್ಲಿ ಅದ್ಭುತ ಪ್ರದರ್ಶನ ಕಾಣುತ್ತಿದೆ!! ನಿಮ್ಮ ಬಗ್ಗೆ ನನಗೆ ಅತೀವ ಹೆಮ್ಮೆ ಇದೆ! ನನ್ನ ಸುಂದರ ಹುಡುಗಿಯೇ, ನಿಮಗೆ ನನ್ನ ಅಪಾರ ಪ್ರೀತಿ ಮತ್ತು ಅಪ್ಪುಗೆಗಳು! ಇದು ಕೇವಲ ಆರಂಭವಷ್ಟೇ!! ನಿಮ್ಮ ಎಲ್ಲಾ ಕನಸುಗಳು ನನಸಾಗಬೇಕೆಂದು ನಾನು ನನ್ನ ಹೃದಯದಿಂದ ಆಶಿಸುತ್ತೇನೆ! ಥ್ಯಾಂಕ್ ಯು ಅನುಶ್ರೀ, ಇಂದು ನಿಮ್ಮನ್ನು ಭೇಟಿಯಾಗಿದ್ದು ತುಂಬಾ ಸಂತೋಷವಾಯಿತು!'' ಎಂದು ಬರೆದುಕೊಂಡಿದ್ದಾರೆ.

ಖ್ಯಾತ ನಟ ವಸಿಷ್ಠ ಸಿಂಹ ವಿಮರ್ಷೆ: ಕನ್ನಡ ಚಿತ್ರರಂಗದ ಬೇಡಿಕೆಯ ತಾರೆ ವಸಿಷ್ಠ ಸಿಂಹ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಳ್ಳುವ ಮೂಲಕ ಪ್ರೇಮದ ಊರಲಿ ಸಿನಿಮಾಗೆ ತಮ್ಮ ವಿಮರ್ಷೆ ಕೊಟ್ಟಿದ್ದಾರೆ.
ನಿರ್ದೇಶಕ ಮನೋಜ್ ಕುಮಾರ್ ಸರ್ ಅವರಿಗೆ ತುಂಬು ಹೃದಯದ ಅಪ್ಪುಗೆ. ಅದ್ಭುತ ಕಲಾತ್ಮಕತೆ! ಚಲನಚಿತ್ರದ ಪ್ರತಿಯೊಂದು ದೃಶ್ಯ ಮತ್ತು ಪ್ರತಿಯೊಂದು ಧ್ವನಿಯಲ್ಲೂ ನಿಮ್ಮ ಶ್ರಮ ಎದ್ದು ಕಾಣುತ್ತದೆ. ನಿಮ್ಮ ಮುಂದಿನ ಯೋಜನೆಗಳಿಗಾಗಿ ಕುತೂಹಲದಿಂದ ಕಾಯುತ್ತಿದ್ದೇನೆ.
ರಂಗಾಯಣ ರಘು ಸರ್, ನೀವೊಬ್ಬ ನಿಜವಾದ ರತ್ನ. ಶ್ರೀರಾಮ್, ನೀವು ಬಂದಿದ್ದೀರಿ - ಅದೂ ಎಂತಹ ಅದ್ಭುತ ರೀತಿಯಲ್ಲಿ! ಹೀಗೆಯೇ ಮುಂದುವರಿಯಿರಿ ಗೆಳೆಯ, ನಿಮ್ಮ ಸಾಧನೆಗೆ ಆಕಾಶವೇ ಮಿತಿ!. ರಮಿಕಾ ಶಿವು, ನೀವು ನಿಜಕ್ಕೂ ಅದ್ಭುತ. ನಿಮ್ಮ ಉಪಸ್ಥಿತಿ ಮತ್ತು ಪ್ರದರ್ಶನ ಎಷ್ಟು ಪ್ರಭಾವಶಾಲಿಯಾಗಿದೆ ಎಂಬುದನ್ನು ವಿವರಿಸಲು ಪದಗಳೇ ಸಾಲುತ್ತಿಲ್ಲ. ನೀವು ಕಾರ್ಯಕ್ರಮದ ಆಕರ್ಷಣೆಯ ಕೇಂದ್ರಬಿಂದುವಾಗಿದ್ದೀರಿ ಮತ್ತು ಸಹಜವಾಗಿ ಜನರ ಮನಸ್ಸನ್ನೂ ಗೆದ್ದಿದ್ದೀರಿ. ತಪಸ್ವಿನಿ ಪೂಣಚ್ಚ, ಮೊನಾಲಿಸಾ ಈಗ ಅಧಿಕೃತವಾಗಿ ರುಕ್ಮಿಣಿಯಾಗಿದ್ದಾರೆ. ಕ್ಲೈಮ್ಯಾಕ್ಸ್‌ನಲ್ಲಿ ನಿಮ್ಮ ಅಭಿನಯ ಅದ್ಭುತವಾಗಿದೆ.
ಸುನಾದ್ ಗೌತಮ್, ಅದ್ಭುತ..!! ಹಿನ್ನೆಲೆ ಸಂಗೀತ ತುಂಬಾ ಇಷ್ಟವಾಯಿತು ಮತ್ತು ಶೀರ್ಷಿಕೆ ಗೀತೆಯಂತೂ ಮನಸ್ಸಿಗೆ ಮುಟ್ಟುವಂತಿದೆ. ಪದೇ ಪದೇ ಕೇಳುತ್ತಲೇ ಇದ್ದೇನೆ..!! ನಿಮ್ಮ ಸಂಗೀತವು ನಮ್ಮ ಕಿವಿಗಳನ್ನು ಇನ್ನಷ್ಟು ಹೆಚ್ಚು ಸಮೃದ್ಧಗೊಳಿಸುತ್ತಲೇ ಇರಲಿ ಎಂದು ಹಾರೈಸುತ್ತೇನೆ.
ನಿಮ್ಮ ಎಲ್ಲಾ ಪ್ರಯತ್ನಗಳು, ತ್ಯಾಗಗಳು ಮತ್ತು ಸಾಧನೆಗಳಿಗಾಗಿ.... ಖಂಡಿತವಾಗಿಯೂ ಸಿನಿಮಾವನ್ನು ಮತ್ತೆ ವೀಕ್ಷಿಸುತ್ತೇನೆ - ವಸಿಷ್ಠ ಸಿಂಹ ಎಂದು ಬರೆದುಕೊಂಡಿದ್ದಾರೆ.
ಪೋಸ್ಟ್ಗೆ, ''ಪ್ರೇಮದ ಊರಲಿ..!! ಸರಳ, ಸುಂದರ, ಸುಮಧುರ, ಪ್ರಾಮಾಣಿಕ ಸಿನಿಮಾ, ಬಹಳ ಬಹಳ ವರ್ಷಗಳ ನಂತರ ಸಿನಿಮಾ ನೋಡುತ್ತಾ ಕಣ್ಣುಗಳು ತುಂಬಿಬಂದವು. ನಿಮ್ಮೂರಿಗೆ ಕರೆಸಿ ಮನಸೂರೆ ಆಗುವಂತೆ ಮಾಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು. ಪ್ರೇಮದ ಊರಲಿ ಚಿತ್ರದ ನಾಗಾಲೋಟ ಹೀಗೆಯೇ ಮುಂದುವರಿಯಲಿ. ನೂರಾರು ಕೋಟಿ ಗಳಿಸಲಿ'' ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ.
ಒಂದು ಒಳ್ಳೆಯ ಸಿನಿಮಾ ಬಂದಾಗ ಅದನ್ನು ಗೆಲ್ಲಿಸುತ್ತಾರೆ ಅನ್ನೋದನ್ನ ನಮ್ಮ ಜನ ಮತ್ತೊಮ್ಮೆ Prove ಮಾಡಿದ್ದಾರೆ. #PremadaOorali ಅದಕ್ಕೆ ಒಂದು ಒಳ್ಳೆಯ ಉದಾಹರಣೆ. ❤️ ಹಲವು ದಿನಗಳ ನಂತರ ಒಂದು ಕನ್ನಡ ಸಿನಿಮಾಗೆ ಜನರಿಂದ ಇಷ್ಟು ಪ್ರೀತಿ ಮತ್ತು ಬೆಂಬಲ ಸಿಗುತ್ತಿರುವುದನ್ನು ನೋಡೋಕೆ ತುಂಬಾ ಖುಷಿಯಾಗುತ್ತಿದೆ. ನಮ್ಮ ಕನ್ನಡ ಜನತೆಯ ಈ ಪ್ರೀತಿಗೆ ಹೃದಯಪೂರ್ವಕ ಧನ್ಯವಾದಗಳು. ❤️ Really happy to see #PremadaOorali getting such a great response from the audience. After a long time, it feels so good to see a Kannada film being celebrated with so much love. Congratulations to #RangayanaRaghu Anna, #ShreeRaam , #ManojKumar, #ThapaswiniPoonacha , @Devendramamatha , #VanillaEntertainments and the entire team. ❤️ Wishing the film more love, success and many more celebrations ahead. ಇಡೀ @PremadaOorali ಚಿತ್ರತಂಡಕ್ಕೆ ಹೃದಯಪೂರ್ವಕ ಶುಭಾಶಯಗಳು. ❤️
— Rishab Shetty (@shetty_rishab) October 4, 2026
ಇದನ್ನೂ ಓದಿ: 2 ಕೋಟಿ ಬಜೆಟ್, 427 ಕೋಟಿ ಕಲೆಕ್ಷನ್: 'ಹನುಮಾನ್ ಅಂಶ್'ನಂತೆ ದಾಖಲೆ ಬರೆಯುತ್ತಿದೆ ಕನ್ನಡದ 'ಪ್ರೇಮದ ಊರಲಿ'!
ಸಿನಿಮಾ ಯಶಸ್ಸು ಕಾಣಲು ಪ್ರಾರಂಭವಾದ ಸಂದರ್ಭ ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದ ರಿಷಬ್ ಶೆಟ್ಟಿ, ''ಒಂದೊಳ್ಳೆ ಸಿನಿಮಾವನ್ನು ಗೆಲ್ಲಿಸುತ್ತಾರೆ ಅನ್ನೋದನ್ನು ನಮ್ಮ ಜನ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಹಲವು ದಿನಗಳ ಬಳಿಕ ಒಂದು ಕನ್ನಡ ಸಿನಿಮಾಗೆ ಜನರಿಂದ ಇಷ್ಟು ಪ್ರೀತಿ ಮತ್ತು ಬೆಂಬಲ ಸಿಗುತ್ತಿರುವುದನ್ನು ನೋಡಲು ಬಹಳ ಖುಷಿಯಾಗುತ್ತಿದೆ. ನಮ್ಮ ಕನ್ನಡ ಜನತೆಯ ಪ್ರೀತಿಗೆ ಹೃದಯಪೂರ್ವಕ ಧನ್ಯವಾದಗಳು. ಈ ಸಿನಿಮಾ ಮತ್ತಷ್ಟು ಯಶಸ್ಸು ಕಾಣಲಿ ಎಂದು ಬಯಸುತ್ತೇನೆ'' ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ: 'ಇದು ರಾಮನ ಯುಗದ ಆರಂಭ': ರಾಮಾಯಣ ರಿಲೀಸ್ ಡೇಟ್ ಕನ್ಫರ್ಮ್; ಅಡ್ವಾನ್ಸ್ ಬುಕಿಂಗ್ ಯಾವಾಗ ಪ್ರಾರಂಭ?

