ETV Bharat / entertainment

'ಇದು ರಾಮನ ಯುಗದ ಆರಂಭ': ರಾಮಾಯಣ ರಿಲೀಸ್ ಡೇಟ್​ ಕನ್ಫರ್ಮ್; ಅಡ್ವಾನ್ಸ್​ ಬುಕಿಂಗ್​ ಯಾವಾಗ ಪ್ರಾರಂಭ?

'ರಾಮಾಯಣ: ಭಾಗ 1' 2026ರ ನವೆಂಬರ್ 5ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಚಿತ್ರತಂಡವು ಹೊಸ ಪೋಸ್ಟರ್ ಅನ್ನು ಅನಾವರಣಗೊಳಿಸಿದ್ದು, ದಸರಾ ಹಬ್ಬದಂದು ಮುಂಗಡ ಬುಕಿಂಗ್ ಆರಂಭವಾಗಲಿದೆ ಎಂದು ಖಚಿತಪಡಿಸಿದೆ.

Ramayana Advance Booking
ರಾಮಾಯಣ ಅಡ್ವಾನ್ಸ್ ಬುಕಿಂಗ್ (Photo: Film Poster)
author img

By ETV Bharat Entertainment Team

Published : October 12, 2026 at 9:40 AM IST

2 Min Read
Choose ETV Bharat

ಬಹುನಿರೀಕ್ಷಿತ 'ರಾಮಾಯಣ: ಭಾಗ 1' ಜಾಗತಿಕ ಬಿಡುಗಡೆ ದಿನಾಂಕವನ್ನು ಅಂತಿಮವಾಗಿ ನಿರ್ಮಾಪಕರು ಖಚಿತಪಡಿಸಿದ್ದಾರೆ. ಈ ಮೂಲಕ ಬಿಡುಗಡೆಯ ಕುರಿತು ಇತ್ತೀಚೆಗೆ ಉಂಟಾಗಿದ್ದ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರವು 2026ರ ನವೆಂಬರ್ 5ರಂದು ಪ್ರಪಂಚದಾದ್ಯಂತದ ಚಿತ್ರಮಂದಿರಗಳಲ್ಲಿ ಎಲ್ಲಾ ಪ್ರೀಮಿಯಂ ಸ್ವರೂಪಗಳಲ್ಲಿ (ಫಾರ್ಮ್ಯಾಟ್‌ಗಳಲ್ಲಿ) ಬಿಡುಗಡೆಯಾಗಲಿದೆ. ದಸರಾ ಹಬ್ಬದಂದು ಮುಂಗಡ ಬುಕಿಂಗ್ ಆರಂಭವಾಗಲಿದೆ.

ನವರಾತ್ರಿಯ ಮೊದಲ ದಿನವಾದ ಭಾನುವಾರ, ಅಕ್ಟೋಬರ್ 11ರಂದು ಈ ಘೋಷಣೆಯನ್ನು ಮಾಡಿದ್ದಾರೆ. ಚಿತ್ರತಂಡವು ರಣ್​​ಬೀರ್ ಕಪೂರ್ (ಶ್ರೀರಾಮ), ಸಾಯಿ ಪಲ್ಲವಿ (ಸೀತೆ), ರವಿ ದುಬೆ (ಲಕ್ಷ್ಮಣ) ಮತ್ತು ಯಶ್ (ರಾವಣ) ಅವರನ್ನೊಳಗೊಂಡ ಹೊಸ ಪೋಸ್ಟರ್ ಅನ್ನು ಸಹ ಅನಾವರಣಗೊಳಿಸಿತು.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಹಂಚಿಕೊಂಡ ತಂಡ, "ಹೊಸ ಯುಗದ ಆರಂಭವನ್ನು ಸಂಭ್ರಮಿಸುವ ಈ ಶುಭ ಸಂದರ್ಭದಲ್ಲಿ, ಇದು ರಾಮನ ಯುಗದ ಆರಂಭ" ಎಂದು ಘೋಷಿಸಿತು. ಭಾರತೀಯ ಮಹಾಕಾವ್ಯವೊಂದರ ಅತ್ಯಂತ ಮಹತ್ವಾಕಾಂಕ್ಷೆಯ ಚಲನಚಿತ್ರ ರೂಪಾಂತರದ ಕುರಿತಾದ ನಿರೀಕ್ಷೆಯನ್ನು ಈ ಘೋಷಣೆಯು ಮತ್ತಷ್ಟು ಹೆಚ್ಚಿಸಿದೆ.

ಗೊಂದಲದ ನಂತರ 'ರಾಮಾಯಣ' ಭಾಗ 1ರ ಬಿಡುಗಡೆ ದಿನಾಂಕ ಖಚಿತ: ಇತ್ತೀಚಿನ ಪ್ರಮೋಶನಲ್​ ಕಂಟೆಂಟ್ಸ್ ಹಾಗೂ ವರದಿಗಳಲ್ಲಿ ವಿವಿಧ ದಿನಾಂಕಗಳು ಪ್ರಸ್ತಾಪವಾಗಿದ್ದ ಹಿನ್ನೆಲೆಯಲ್ಲಿ ಗೊಂದಲ ಉಂಟಾಗಿತ್ತು. ಸೋನಿ ಪಿಕ್ಚರ್ಸ್ ಬಿಡುಗಡೆ ಮಾಡಿದ್ದ ಅಂತಾರಾಷ್ಟ್ರೀಯ ಟ್ರೇಲರ್‌ನಲ್ಲಿ, ನವೆಂಬರ್ 6 ಅನ್ನು ಜಾಗತಿಕ ಬಿಡುಗಡೆ ದಿನಾಂಕವೆಂದು ಉಲ್ಲೇಖಿಸಲಾಗಿತ್ತು. ಅದೇ ವೇಳೆ, ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಈ ಚಿತ್ರವನ್ನು ಭಾರತದಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆ ಮಾಡುವ ಗುರಿ ಹೊಂದಲಾಗಿದೆ ಎಂದು ಸುಳಿವು ನೀಡಿದ್ದರು. ನವೆಂಬರ್ 5ರಂದು ಭಾರತೀಯ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದ್ದು, ನವೆಂಬರ್ 4ರಂದು ಪ್ರೇಯ್ಡ್​​ ಪ್ರದರ್ಶನಗಳು ನಡೆಯಲಿವೆ ಎಂಬ ವರದಿಗಳಿದ್ದವು. ಆದ್ರೆ ಇದೀಗ ಬಂದಿರುವ ಪ್ರಕಟಣೆಯು, 2026ರ ನವೆಂಬರ್ 5 ಅನ್ನು ಚಿತ್ರದ ಜಾಗತಿಕ ಬಿಡುಗಡೆಯ ದಿನಾಂಕವನ್ನಾಗಿ ಖಚಿತಪಡಿಸಿದೆ. ದಸರಾ ಹಬ್ಬದಂದು ಮುಂಗಡ ಬುಕಿಂಗ್ ಆರಂಭವಾಗಲಿದ್ದು, ಮೊದಲ ಭಾಗಕ್ಕಾಗಿ ಪ್ರೇಕ್ಷಕರು ಶೀಘ್ರದಲ್ಲೇ ತಮ್ಮ ಟಿಕೆಟ್‌ಗಳನ್ನು ಕಾಯ್ದಿರಿಸಿಕೊಳ್ಳಬಹುದಾಗಿದೆ.

ಹೊಸ ಪೋಸ್ಟರ್​ನ ಹಿನ್ನೆಲೆಯಲ್ಲಿ ಯಶ್ ಅವರು ರಾವಣನ ಪಾತ್ರದಲ್ಲಿ ಭವ್ಯವಾಗಿ ಮೂಡಿಬಂದಿದ್ದಾರೆ. ಪಾತ್ರಗಳ ವಿನ್ಯಾಸ, ವೇಷಭೂಷಣ ಹಾಗೂ ಅದ್ದೂರಿ ಹಿನ್ನೆಲೆಯ ಮೂಲಕ ಚಿತ್ರದ ದೃಶ್ಯ ವೈಭವದ ಝಲಕ್ ಅನ್ನು ಈ ನವ ಪೋಸ್ಟರ್ ಕಟ್ಟಿಕೊಟ್ಟಿದೆ.

ಚಿತ್ರದಲ್ಲಿ ರಣ್​ಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ಯಶ್ ರಾವಣನಾಗಿ, ಸನ್ನಿ ಡಿಯೋಲ್ ಹನುಮಂತನಾಗಿ ಹಾಗೂ ರವಿ ದುಬೆ ಲಕ್ಷ್ಮಣನಾಗಿ ನಟಿಸುತ್ತಿದ್ದಾರೆ.

ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರವನ್ನು ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್, ಎಂಟು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದಿರುವ ಡಿಎನ್‌ಇಜಿ ಸಂಸ್ಥೆಯ ಸಹಯೋಗದಲ್ಲಿ ಹಾಗೂ ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಪಾಲುದಾರಿಕೆಯಲ್ಲಿ ನಿರ್ಮಿಸಿದೆ. ಎರಡು ಭಾಗಗಳಲ್ಲಿ ಮೂಡಿಬರಲಿರುವ ಈ ಮಹಾಕಾವ್ಯದ ಮೊದಲ ಭಾಗ ನವೆಂಬರ್ 5, 2026ರಂದು ಬಿಡುಗಡೆಯಾಗಲಿದ್ದು, ಎರಡನೇ ಭಾಗವು 2027ರ ದೀಪಾವಳಿ ಸಂದರ್ಭದಲ್ಲಿ ತೆರೆಗೆ ಬರಲಿದೆ.

Kannada actor Yash in the role of Ravana.
ರಾವಣನ ಪಾತ್ರದಲ್ಲಿ ಕನ್ನಡ ನಟ ಯಶ್ (Photo: Film Poster)

ಹಿಂದಿ, ತೆಲುಗು, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಐಮ್ಯಾಕ್ಸ್ ಸೇರಿದಂತೆ ವಿವಿಧ ಪ್ರೀಮಿಯಂ ಪ್ರದರ್ಶನ ಸ್ವರೂಪಗಳಲ್ಲಿ ಚಿತ್ರವನ್ನು ವೀಕ್ಷಿಸಬಹುದಾಗಿದೆ. ವಿದೇಶದಲ್ಲಿ ಜಾಗತಿಕ ವಿತರಣೆಯ ಜವಾಬ್ದಾರಿಯನ್ನು ಸೋನಿ ಪಿಕ್ಚರ್ಸ್ ವಹಿಸಿಕೊಂಡಿದ್ದು, ಹಿಂದಿ ಭಾಷೆಯ ಮಾರುಕಟ್ಟೆಯಲ್ಲಿ ಧರ್ಮ ಪ್ರೊಡಕ್ಷನ್ಸ್ ವಿತರಕರಾಗಿ ಕಾರ್ಯನಿರ್ವಹಿಸಲಿದೆ.

ಇದನ್ನೂ ಓದಿ: 'ರಾವಣನಾಗಿ ಯಶ್ ಇಷ್ಟವಾದ್ರು, ದಕ್ಷಿಣದವರು ಪುರಾಣಗಳನ್ನು ಅರಿತಿದ್ದಾರೆ': ರಾಮಾಯಣ ಪಾತ್ರ ವರ್ಗದ ಬಗ್ಗೆ ರಮಾನಂದ್ ಸಾಗರ್ ಮೊಮ್ಮಗ ಹೇಳಿದ್ದಿಷ್ಟು!

ಭಾರತೀಯ ಮಹಾಕಾವ್ಯದ ಕಥೆಯನ್ನು ಅಂತಾರಾಷ್ಟ್ರೀಯ ಮಟ್ಟದ ತಾಂತ್ರಿಕ ಗುಣಮಟ್ಟ ಮತ್ತು ಅದ್ದೂರಿ ದೃಶ್ಯಗಳೊಂದಿಗೆ ತೆರೆಗೆ ತರಲು ಸಿದ್ಧವಾಗಿರುವ ರಾಮಾಯಣ ಚಿತ್ರದ ಬಗ್ಗೆ ಈಗಾಗಲೇ ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಾಗಿದೆ. ಹೊಸ ಪೋಸ್ಟರ್ ಹಾಗೂ ಬಿಡುಗಡೆ ದಿನಾಂಕದ ಘೋಷಣೆಯೊಂದಿಗೆ ಚಿತ್ರದ ಮೊದಲ ಭಾಗದ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: 'ನಿಮ್ಮ ದೇಶಗಳಲ್ಲಿರುವ ಪ್ರೇಮದ ಊರುಗಳಿಂದ ನಮ್ಮ ಪ್ರೇಮದ ಊರಿಗೆ ಬರಬೇಕೆಂದು ಕೇಳಿಕೊಳ್ಳುತ್ತಿದ್ದೀವಿ': ವಿದೇಶಗಳಲ್ಲಿ ಬಿಡುಗಡೆ