ETV Bharat / entertainment

'ಕರಾವಳಿ ಸಿನಿಮಾದಲ್ಲಿ 380 ಕೋಣಗಳ ಬಳಕೆ' - ನಿರ್ದೇಶಕ ಗುರುದತ್​ ಗಾಣಿಗ; ಕುತೂಹಲ ಕೆರಳಿಸಿತು ಟ್ರೇಲರ್​

ಗುರುದತ್​ ಗಾಣಿಗ ಆ್ಯಕ್ಷನ್​​ ಕಟ್​ ಹೇಳಿರುವ ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ 'ಕರಾವಳಿ'ಯ ಟ್ರೇಲರ್ ಅನಾವರಣಗೊಂಡಿದೆ.

Raj B Shetty KARAVALI Look
ಕರಾವಳಿ ಸಿನಿಮಾದಲ್ಲಿ ರಾಜ್​ ಬಿ ಶೆಟ್ಟಿ (ETV Bharat)
author img

By ETV Bharat Entertainment Team

Published : July 8, 2026 at 10:11 AM IST

2 Min Read
Choose ETV Bharat

ಒಂದಿಷ್ಟು ಪೋಸ್ಟರ್ಸ್, ಕಥೆಯ ಸುಳಿವು, ಸ್ಟಾರ್ ಕಾಸ್ಟ್ ವಿಚಾರದಲ್ಲಿ ಈಗಾಗಲೇ ಭಾರಿ ಕುತೂಹಲ ಮೂಡಿಸಿದ್ದ ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ 'ಕರಾವಳಿ'ಯ ಟ್ರೇಲರ್​ಗಾಗಿ ಅಭಿಮಾನಿಗಳು ಬಹಳ ಕಾರತರಿಂದ ಕಾಯುತ್ತಿದ್ದರು. ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಕಂಬಳ ಕುರಿತಾದ ಕಥಾಹಂದರ ಹೊಂದಿರುವ ಚಿತ್ರದ ಟ್ರೇಲರ್​​ ಅದ್ದೂರಿಯಾಗಿ ಅನಾವರಣಗೊಂಡಿದೆ.

ಅಭಿಮಾನಿಗಳ ಸಮ್ಮುಖದಲ್ಲೇ ಕರಾವಳಿ ಚಿತ್ರದ ಟ್ರೇಲರ್ ಅನಾವರಣಗೊಂಡಿದೆ. ಸಮಾರಂಭದಲ್ಲಿ ನಾಯಕ ನಟ ಪ್ರಜ್ವಲ್​ ದೇವರಾಜ್​ ಅವರನ್ನು ಹೊರತುಪಡಿಸಿ ನಿರ್ದೇಶಕ ಗುರುದತ್ ಗಾಣಿಗ, ಪ್ರಮುಖ ಪಾತ್ರ ವಹಿಸಿರುವ ನಟ ರಾಜ್ ಬಿ ಶೆಟ್ಟಿ, ನಾಯಕಿಯರಾದ ಸಂಪದಾ, ಸುಷ್ಮಿತಾ, ಪೋಷಕ ನಟರಾದ ಮಿತ್ರ, ಶ್ರೀಧರ್ ಸೇರಿದಂತೆ ಇಡೀ ಚಿತ್ರತಂಡ ಹಾಜರಿತ್ತು.

ಸದ್ಯ ಅನಾವರಣಗೊಂಡಿರುವ ಟ್ರೇಲರ್​ನಲ್ಲಿ, ಕರಾವಳಿ ಸಂಸ್ಕೃತಿ ಜೊತೆಗೆ ಕಂಬಳವೇ ಹೈಲೆಟ್. ಕರಾವಳಿಯ ಹೆಮ್ಮೆಯ ಕ್ರೀಡೆ ಕಂಬಳವನ್ನು ಅತ್ಯಂತ ಸುಂದರವಾಗಿ ಈ ಸಿನಿಮಾ ಮೂಲಕ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಗುರುದತ್ ಗಾಣಿಗ. ಟ್ರೇಲರ್​ ನೋಡಿದ ಬಳಿಕ ಈ ಸಿನಿಮಾದಲ್ಲಿ ಪ್ರಜ್ವಲ್ ಮತ್ತು ರಾಜ್ ಬಿ ಶೆಟ್ಟಿ ನಡುವಿನ ಸಂಬಂಧವೇನು? ಎನ್ನುವ ಪ್ರಶ್ನೆ ಮೂಡಿದೆ. ಸಿನಿಮಾ ತಂಡ ಕೂಡಾ ಈ ಕುತೂಹಲವನ್ನು ಹಾಗೇ ಕಾಯ್ದಿರಿಸಿದೆ. ಇನ್ನೂ, ರಮೇಶ್ ಇಂದಿರಾ, ಮಿತ್ರ ಅವರ ಪಾತ್ರ ಕೂಡಾ ದೊಡ್ಡ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಗುರುದತ್ ಗಾಣಿಗ, ಪ್ರಜ್ವಲ್ ದೇವರಾಜ್ ಅವರ ಡಬ್ಬಿಂಗ್ ವಿವಾದದ ಬಗ್ಗೆ ಸ್ಪಷ್ಟನೆ ನೀಡಿದರು. ಪ್ರಜ್ವಲ್ ಸಂಭಾವನೆ ವಿಚಾರದ ಬಗ್ಗೆಯೂ ಕ್ಲಾರಿಟಿ ನೀಡಿದರು. 1 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ. ಉಳಿದ 25 ಲಕ್ಷ ರೂ. ಕೊಡುವುದಾಗಿ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದರು. ಜೊತೆಗೆ, ಚಿತ್ರದಲ್ಲಿ ಸರಿ-ಸುಮಾರು 380 ಕೋಣಗಳನ್ನು ಬಳಸಿ ಚಿತ್ರೀಕರಣ ನಡೆಸಿದ ಅನುಭವ ಹಂಚಿಕೊಂಡರು.

Raj B Shetty KARAVALI Look
ಕರಾವಳಿ ಸಿನಿಮಾದಲ್ಲಿ 380 ಕೋಣಗಳ ಬಳಕೆ (ETV Bharat)

ರಾಜ್ ಬಿ ಶೆಟ್ಟಿ ಮಾತನಾಡಿ, 'ಇದು ಅಪ್ಪಟ ಕನ್ನಡ ಸಿನಿಮಾ. ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ. ಸಿನಿಮಾ ಎಲ್ಲಾ ಕಡೆ ಟ್ರಾವೆಲ್ ಮಾಡಬೇಕು' ಎಂದರು.

ಉಳಿದಂತೆ ನಟ ಮಿತ್ರ, ನಾಯಕಿಯರಾದ ಸಂಪದಾ ಮತ್ತು ಸುಷ್ಮಿತಾ ಕೂಡಾ ತಮ್ಮ ಪಾತ್ರದ ಬಗ್ಗೆ ಖುಷಿ ವ್ಯಕ್ತಪಡಿಸಿದರು. ಹಿರಿಯ ನಟ ಶ್ರೀಧರ್, ಸಂಗೀತ ನಿರ್ದೇಶಕ ಸಚಿನ್ ಬಸ್ರೂರ್, ಛಾಯಾಗ್ರಾಹಕ ಅಭಿಮನ್ಯು ಸದಾನಂದನ್, ವಿತರಕ ಸುಪ್ರಿತ್ ಸೇರಿದಂತೆ ಇಡೀ ಚಿತ್ರತಂಡ ಈ ಸಂದರ್ಭ ಹಾಜರಿತ್ತು.

Raj B Shetty KARAVALI Look
ಕರಾವಳಿ ಸಿನಿಮಾದಲ್ಲಿ ರಾಜ್​ ಬಿ ಶೆಟ್ಟಿ (ETV Bharat)

ಗುರುದತ್ ಗಾಣಿಗ ಅವರು ನಿರ್ದೇಶನದ ಜೊತೆಗೆ ವಿಕೆ ಫಿಲ್ಮಂ ಅಸೋಸಿಯೇಷನ್​​ನಲ್ಲಿ ತಮ್ಮ ಗಾಣಿಗ ಫಿಲ್ಮ್ಸ್‌ನಡಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕನ್ನಡದ ಪ್ರತಿಷ್ಠಿತ ಚಲನಚಿತ್ರ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವ ಕೆವಿಎನ್ ಪ್ರೊಡಕ್ಷನ್ ಪ್ರೆಸೆನ್ಸ್ ಮಾಡುವ ಜೊತೆಗೆ ವಿತರಣೆಯ ಜವಾಬ್ದಾರಿ ಹೊತ್ತುಕೊಂಡಿದೆ. ಸಿನಿಮಾ ಇದೇ ಜುಲೈ 24ಕ್ಕೆ ತೆರೆಗೆ ಬರುತ್ತಿದೆ.

Prajwal Devraj, Sampada
ಪ್ರಜ್ವಲ್ ದೇವರಾಜ್, ಸಂಪದಾ (ETV Bharat)

ಟ್ರೇಲರ್ ಅಧಿಕೃತ ಬಿಡುಗಡೆಗೂ ಮುನ್ನ ಪ್ರೀಮಿಯರ್​ ನಡೆದಿತ್ತು. ಅಲ್ಲಿ ಟ್ರೇಲರ್​ ವೀಕ್ಷಿಸಿದ ಅಭಿಮಾನಿಗಳು ತಮ್ಮ ಮೆಚ್ಚಿನ ನಟ ಪ್ರಜ್ವಲ್​ ದೇವರಾಜ್​ ಅವರ ಧ್ವನಿ ಇಲ್ಲ ಎಂದು ಗಲಾಟೆ ಮಾಡಿದ್ದರು. ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದರು. ಈ ಬಗ್ಗೆ ಚಿತ್ರತಂಡದ ಓರ್ವರು ಪ್ರತಿಕ್ರಿಯಿಸಿ, ಪ್ರಜ್ವಲ್ ದೇವರಾಜ್ ಅವರಿಗೆ ಕೊಡಬೇಕಾದ ಸಂಭಾವನೆಯಲ್ಲಿ 25 ಲಕ್ಷ ರೂಪಾಯಿಯನ್ನು ನಿರ್ದೇಶಕ ಹಾಗೂ ನಿರ್ಮಾಪಕರಾದ ಗುರುದತ್ ಗಾಣಿಗ ಕೊಟ್ಟಿಲ್ಲ ಎಂಬ ಕಾರಣಕ್ಕೆ ಅವರ ನಡುವೆ ಮನಸ್ತಾಪ ಶುರುವಾಗಿದೆ. ಪ್ರಜ್ವಲ್ ಅವರನ್ನು ಬಿಟ್ಟು ಬೇರೆಯವರ ಕಡೆಯಿಂದ ಚಿತ್ರಕ್ಕೆ ಡಬ್ಬಿಂಗ್ ಮಾಡಿಸಿರೋದು ಕೂಡಾ ಅವರಿಗೆ ಅಸಮಾಧಾನ ಮೂಡಿಸಿದೆ. ಹಾಗಾಗಿ, ಪ್ರಚಾರದಲ್ಲಿ ಅವರು ಭಾಗಿಯಾಗುತ್ತಿಲ್ಲ ಎಂದು ತಿಳಿಸಿದ್ದರು.

ಇದನ್ನೂ ಓದಿ: ರಿಷಬ್​ ಶೆಟ್ಟಿ ಮಹಾನ್​ ಕಾರ್ಯಕ್ಕೆ ಮನದುಂಬಿ ಧನ್ಯವಾದ ಅರ್ಪಿಸಿದ ಗ್ರಾಮಸ್ಥರು

ಇನ್ನೂ, ಸ್ವತಃ ಪ್ರಜ್ವಲ್​ ಅವರು ನಿನ್ನೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು, ಸಂಭಾವನೆಗೆ ಸಂಬಂಧಿಸಿದಂತೆ ಬಿಟ್ಟು ಬೇರೆ ಯಾವುದೇ ವೈಯಕ್ತಿಕ ಮನಸ್ತಾಪಗಳಿಲ್ಲ. ನನಗ ಬರಬೇಕಾದ ಸಂಪೂರ್ಣ ಸಂಭಾವನೆ ಬಂದಿಲ್ಲ ಎಂದು ತಿಳಿಸಿದ್ದರು.

ಇದನ್ನೂ ಓದಿ: Watch: ಕರಾವಳಿ ಟ್ರೇಲರ್​​ನಲ್ಲಿ ಪ್ರಜ್ವಲ್ ದೇವರಾಜ್ ಧ್ವನಿ ಇಲ್ಲವೆಂದು ರೊಚ್ಚಿಗೆದ್ದ ಫ್ಯಾನ್ಸ್

ಸಿನಿಮಾ ಇದೇ ಜುಲೈ 24ರಂದು ಚಿತ್ರಮಂದಿರ ಪ್ರವೇಶಿಸಲಿದೆ.