Watch: ಕರಾವಳಿ ಟ್ರೇಲರ್ನಲ್ಲಿ ಪ್ರಜ್ವಲ್ ದೇವರಾಜ್ ಧ್ವನಿ ಇಲ್ಲವೆಂದು ರೊಚ್ಚಿಗೆದ್ದ ಫ್ಯಾನ್ಸ್
ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ 'ಕರಾವಳಿ' ವಿವಾದದ ಸುಳಿಯಲ್ಲಿ ಸಿಲುಕಿದೆ.

By ETV Bharat Entertainment Team
Published : July 7, 2026 at 4:54 PM IST
ಕರಾವಳಿ. ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಕಥೆ ಮತ್ತು ಸ್ಟಾರ್ ಕಾಸ್ಟ್ ಸಲುವಾಗಿ ಗಮನ ಸೆಳೆದಿರುವ ಚಿತ್ರವೀಗ ವಿವಾದದ ಸುಳಿಯಲ್ಲಿ ಸಿಲುಕಿದ್ದು, ಹಲವು ಅಂತೆ - ಕಂತೆಗಳು ಹರಡಿವೆ.
ಪ್ರಜ್ವಲ್ ದೇವರಾಜ್ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರ ವಹಿಸಿದ್ದು, ಗುರುದತ್ ಗಾಣಿಗ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕರಾವಳಿ ಭಾಗದ ಬಹು ಮುಖ್ಯ ಸಾಂಸ್ಕೃತಿಕ ಕ್ರೀಡೆ ಕಂಬಳ ಕುರಿತಾದ ಸಿನಿಮಾ ಇದೇ ಜುಲೈ 24ಕ್ಕೆ ಬಿಡುಗಡೆಯಾಗುತ್ತಿದೆ. ಇದರ ಅಂಗವಾಗಿ ಗಾಂಧಿನಗರದ ಎಎಮ್ಬಿ ಮಾಲ್ನಲ್ಲಿ ಚಿತ್ರದ ಟ್ರೇಲರ್ ರಿಲೀಸ್ ಈವೆಂಟ್ ನಡೆಯಿತು.
ನಾಯಕ ನಟ ಪ್ರಜ್ವಲ್ ದೇವರಾಜ್ ಅವರ ಅನುಪಸ್ಥಿತಿಯಲ್ಲಿ ನಿರ್ದೇಶಕ ಗುರುದತ್ ಗಾಣಿಗ, ನಟ ರಾಜ್ ಬಿ ಶೆಟ್ಟಿ, ನಟ ಮಿತ್ರ, ನಟಿ ಸಂಪದ ಸೇರಿ ಇಡೀ ಕರಾವಳಿ ಚಿತ್ರತಂಡದ ಸಮ್ಮುಖದಲ್ಲಿ ಕರಾವಳಿ ಟ್ರೇಲರ್ ಅನಾವರಣಗೊಂಡಿದೆ.
ಆದರೆ, ರಿಲೀಸ್ ಆಗಿರುವ ಟ್ರೇಲರ್ನಲ್ಲಿ ನಾಯಕ ನಟ ಪ್ರಜ್ವಲ್ ದೇವರಾಜ್ ಧ್ವನಿ ಇರಲಿಲ್ಲ. ಬೇರೆಯವರ ಧ್ವನಿ ಕೇಳಿದ ಬೆನ್ನಲ್ಲೇ, ಈ ಕಾರ್ಯಕ್ರಮಕ್ಕೆ ಬಂದಿದ್ದ ಪ್ರಜ್ವಲ್ ದೇವರಾಜ್ ಅಭಿಮಾನಿಗಳು ನಿರ್ದೇಶಕ ಗುರುದತ್ ಗಾಣಿಗ ಅವರ ಮೇಲೆ ಕೋಪಗೊಂಡು ಗಲಾಟೆಗೆ ಮುಂದಾದರು. ಸ್ವಲ್ಪ ಹೊತ್ತು ಕೂಗಾಟವಿತ್ತು. ಪೊಲೀಸರು ಬಂದು ಪರಿಸ್ಥಿತಿ ನಿಭಾಯಿಸಿದ್ರು.
ಬಳಿಕ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ನಿರ್ದೇಶಕ ಗುರುದತ್ ಗಾಣಿಗ, ಕರಾವಳಿ ಭಾಷೆಗೆ ಪ್ರಜ್ವಲ್ ದೇವರಾಜ್ ಅವರ ಧ್ವನಿ ಸರಿಯಾಗಿ ಮ್ಯಾಚ್ ಆಗುತ್ತಿರಲಿಲ್ಲ. ಆ ಕಾರಣಕ್ಕೆ ನಾವು ಬೇರೆಯವರಿಂದ ಡಬ್ಬಿಂಗ್ ಮಾಡಿಸಿದ್ದೀವಿ. ಹಾಗಾಗಿ ಟ್ರೇಲರ್ ರಿಲೀಸ್ ಕಾರ್ಯಕ್ರಮಕ್ಕೆ ಪ್ರಜ್ವಲ್ ದೇವರಾಜ್ ಬಂದಿಲ್ಲ ಎಂದು ಸ್ಪಷ್ಟನೆ ಕೊಟ್ಟರು.
ಕಟಪಾಡಿಯಲ್ಲಿ ನಡೆಯುವ ಕಂಬಳಕ್ಕೆ ಸುಮಾರು 700 ವರ್ಷಗಳ ಇತಿಹಾಸವಿದೆ. ಕರಾವಳಿ ಭಾಗದಲ್ಲಿ ನಡೆಯುವ ಕಂಬಳಗಳಲ್ಲಿಯೇ ತುಂಬಾ ಪ್ರಾಮುಖ್ಯತೆ ಪಡೆದುಕೊಂಡಿರುವ ಕಂಬಳ ಎಂದರೆ ಅದು ಕಟಪಾಡಿ ಕಂಬಳ. ತೀರಾ ಸಾಂಪ್ರಾದಾಯಿಕವಾಗಿ ಇಲ್ಲಿ ಕಂಬಳವನ್ನು ನಡೆಸಿಕೊಂಡು ಬರಲಾಗುತ್ತಿದೆ. ವಿಶೇಷ ಎಂದರೆ ಸುಮಾರು 700ವರ್ಷಗಳಿಂದನೂ ಒಂದೇ ಕುಟುಂಬಕ್ಕೆ (ಪೀಳಿಗೆ) ಸೇರಿದವರು ಕಂಬಳ ನಡೆಸುತ್ತಿದ್ದಾರೆ.
ಈ ಸಿನಿಮಾದ ಹೈಲೆಟ್ ಕಂಬಳ ಜೊತೆಗೆ ಅಲ್ಲಿನ ಸಂಸ್ಕೃತಿ, ಸೊಗಡನ್ನು ಛಾಯಾಗ್ರಾಹಕ ಅಭಿಮನ್ಯೂ ಸದಾನಂದನ್ ಅದ್ಭುತವಾಗಿ ಸೆರೆಹಿಡಿದಿದ್ದಾರೆ. ಪ್ರಜ್ವಲ್ ದೇವರಾಜ್‌ಗೆ ನಾಕಿಯಾಗಿ ಸಂಪದಾ ನಟಿಸಿದ್ದಾರೆ. ಉಳಿದಂತೆ ಸಿನಿಮಾದ ಪವರ್ ಫುಲ್ ಪಾತ್ರದಲ್ಲಿ ನಟ ಮಿತ್ರ ಮತ್ತು ರಮೇಶ್ ಇಂದಿರ, ಶ್ರೀಧರ್ ಸೇರಿ ದೊಡ್ಡ ತಾರಾಬಳಗವಿದೆ.
ಗುರುದತ್ ಗಾಣಿಗ ನಿರ್ದೇಶನದ ಜೊತೆಗೆ ವಿಕೆ ಫಿಲ್ಮಂ ಅಸೋಸಿಯೇಷನ್ನಲ್ಲಿ ಗಾಣಿಗ ಫಿಲ್ಮ್ಸ್‌ನಲ್ಲಿ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವ ಕೆವಿಎನ್ ಪ್ರೊಡಕ್ಷನ್ ಕರಾವಳಿ ಸಿನಿಮಾವನ್ನು ಪ್ರೆಸೆನ್ಸ್ ಮಾಡುವ ಜೊತೆಗೆ ವಿತರಣೆಯನ್ನು ಮಾಡುತ್ತಿರುವುದು ವಿಶೇಷ.
ಆದರೆ, ಕರಾವಳಿ ಚಿತ್ರತಂಡ ಓರ್ವರು ಹೇಳುವ ಪ್ರಕಾರ, ಪ್ರಜ್ವಲ್ ದೇವರಾಜ್ ಅವರಿಗೆ ಕೊಡಬೇಕಾದ ಸಂಭಾವನೆಯಲ್ಲಿ 25 ಲಕ್ಷ ರೂಪಾಯಿಯನ್ನು ನಿರ್ದೇಶಕ ಹಾಗೂ ನಿರ್ಮಾಪಕ ಗುರುದತ್ ಗಾಣಿಗ ಕೊಟ್ಟಿಲ್ಲ ಎಂಬ ಕೋಪಕ್ಕೆ ಪ್ರಜ್ವಲ್ ದೇವರಾಜ್ ಹಾಗೂ ನಿರ್ದೇಶಕರ ಮಧ್ಯೆ ಮನಸ್ತಾಪ ಶುರುವಾಗಿದೆ. ಮತ್ತೊಂದು ಕಡೆ ಪ್ರಜ್ವಲ್ ದೇವರಾಜ್ ಬಿಟ್ಟು ಬೇರೆಯವರ ಕಡೆಯಿಂದ ಕರಾವಳಿ ಚಿತ್ರಕ್ಕೆ ಡಬ್ಬಿಂಗ್ ಮಾಡಿಸಿರೋದು ಪ್ರಜ್ವಲ್ ದೇವರಾಜ್ ಅವರಿಗೆ ಅಸಮಾಧಾನ ಮೂಡಿಸಿದೆ. ಈ ಎಲ್ಲ ಕಾರಣಕ್ಕೆ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರ ಅಭಿಮಾನಿಗಳು ರೊಚ್ಚಿಗೆದ್ದಿದ್ದರು ಅಂತಾ ಹೇಳಿದರು.
ಇದನ್ನೂ ಓದಿ: ರಿಷಬ್ ಶೆಟ್ಟಿ ಮಹಾನ್ ಕಾರ್ಯಕ್ಕೆ ಮನದುಂಬಿ ಧನ್ಯವಾದ ಅರ್ಪಿಸಿದ ಗ್ರಾಮಸ್ಥರು
ಮತ್ತೊಂದು ಕಡೆ ಗಾಂಧಿನಗರದ ಸಿನಿಮಾ ಪಂಡಿತರು ಹೇಳುವ ಹಾಗೇ, ಇದು ಪ್ರಚಾರದ ಗಿಮಿಕ್. ಏಕೆಂದರೆ ಇನ್ನುಳಿದಿರುವ 21 ದಿನಗಳಲ್ಲಿ ಪ್ರಚಾರ ಮಾಡೋದು ಕಷ್ಟ. ಆ ಕಾರಣಕ್ಕೆ ಪ್ರಜ್ವಲ್ ದೇವರಾಜ್ ಹಾಗೂ ನಿರ್ದೇಶಕ ಗುರುದತ್ ಗಾಣಿಗ ಮಾಡಿರುವ ಸ್ಟ್ರ್ಯಾಟರ್ಜಿ ಅಂತಾರೆ.
ಇದನ್ನೂ ಓದಿ: 'ಎಲ್ಲರೂ ಬನ್ನಿ, ಆದ್ರೆ'... ಅಭಿಮಾನಿಗಳಿಗೆ ಶಿವಣ್ಣನ ಮನವಿ ಏನು?
ಒಟ್ಟಾರೆ ಸಿನಿಮಾ ಎಷ್ಟರ ಮಟ್ಟಿಗೆ ಪ್ರೇಕ್ಷಕರನ್ನು ತಲುಪಲಿದೆ ಅನ್ನೋದು ಇದೇ ಜುಲೈ 24ರಂದು ಗೊತ್ತಾಗಲಿದೆ.

