'ಪ್ರೀತಿ, ವಾತ್ಸಲ್ಯದಿಂದ ತುಂಬಿರುವ ಈ ನಿಜ ಜೀವನದ ದೈವಿಕ ಕಥೆಯು ಸಿನಿಮಾವನ್ನು ಮೀರಿಸಲಿದೆ': ವಿರೋಶ್ಗೆ ಪಿಎಂ ಆಶೀರ್ವಾದ
ಉದಯಪುರದಲ್ಲಿ ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಮದುವೆ ಸಂಭ್ರಮ ಸಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಆಶೀರ್ವದಿಸಿದ್ದಾರೆ.

By ETV Bharat Entertainment Team
Published : February 25, 2026 at 1:57 PM IST
ಗುರುವಾರ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಜನಪ್ರಿಯ ತಾರಾ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಪತಿ - ಪತ್ನಿಯಾಗಲಿರುವ ವಿರೋಶ್ಗೆ ಆಶೀರ್ವದಿಸಿದ್ದಾರೆ.
ಪ್ರಧಾನಿ ಪತ್ರದಲ್ಲೇನಿದೆ? "ಫೆಬ್ರವರಿ 26, 2026ರಂದು ನಡೆಯಲಿರುವ ವಿಜಯ್ ಮತ್ತು ರಶ್ಮಿಕಾ ಅವರ ವಿವಾಹಕ್ಕೆ ಆಹ್ವಾನ ಬಂದಿರುವುದು ಸಂತೋಷ ತಂದಿದೆ. ಸಂತೋಷದಾಯಕ ಮತ್ತು ಶುಭ ಸಂದರ್ಭದಲ್ಲಿ ದೇವರಕೊಂಡ ಮತ್ತು ಮಂದಣ್ಣ ಕುಟುಂಬಗಳಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು" ಎಂದು ವಿಜಯ್ ದೇವರಕೊಂಡ ಅವರ ಪೋಷಕರಿಗೆ ಕಳುಹಿಸಿರುವ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಮುಂದುವರೆದು, ಈ ವಿವಾಹವು ವಿಜಯ್ ಮತ್ತು ರಶ್ಮಿಕಾ ಅವರ ಜೀವನದಲ್ಲಿ ಹೊಸ, ಸುಂದರ ಅಧ್ಯಾಯದ ಆರಂಭವನ್ನು ಸೂಚಿಸುತ್ತದೆ. ಜೋಡಿ ಸಪ್ತಪದಿ ತುಳಿಯೋ ಮೂಲಕ ಉತ್ಸಾಹದಿಂದ ಜೀವನಪರ್ಯಂತ ಸ್ನೇಹಿತರಾಗುತ್ತಾರೆ ಎಂದು ಪ್ರಧಾನಿ ತಿಳಿಸಿದರು.
"ವಿಜಯ್ ಅಥವಾ ರಶ್ಮಿಕಾ ಇಬ್ಬರೂ ತಮ್ಮ ಚಿತ್ರಗಳಿಗೆ, ಚಿತ್ರಕಥೆಗಳಿಗೆ ಹೊಸಬರಲ್ಲ. ಆದರೆ ಪ್ರೀತಿ ಮತ್ತು ವಾತ್ಸಲ್ಯದಿಂದ ತುಂಬಿರುವ ಅವರ ನಿಜ ಜೀವನದ ಈ ದೈವಿಕ ಚಿತ್ರಕಥೆಯ ಅಧ್ಯಾಯವು ಬೆಳ್ಳಿ ಪರದೆ ಮೇಲೆ ಅವರು ಸೃಷ್ಟಿಸಿದ ಮ್ಯಾಜಿಕ್ ಅನ್ನು ಖಂಡಿತವಾಗಿಯೂ ಮೀರಿಸುತ್ತದೆ" ಎಂದು ಪ್ರಧಾನಿ ಹೇಳಿದರು.
"ಜೋಡಿಯ ಮುಂಬರುವ ದಿನಗಳು, ತಿಂಗಳುಗಳು ಮತ್ತು ವರ್ಷಗಳು ಹಂಚಿಕೊಳ್ಳುವ ಕನಸುಗಳು ಮತ್ತು ಅವುಗಳ ನೆರವೇರಿಕೆಯಿಂದ ತುಂಬಿರಲಿ. ಚಿಂತನಾಶೀಲತೆ ಮತ್ತು ಪ್ರೀತಿಯಿಂದ, ಜವಾಬ್ದಾರಿಗಳನ್ನು ಹಂಚಿಕೊಳ್ಳಲಿ, ಪರಸ್ಪರರ ಅಪೂರ್ಣತೆಗಳನ್ನು ಸ್ವೀಕರಿಸಲಿ, ಪರಸ್ಪರರ ಸಾಮರ್ಥ್ಯಗಳಿಂದ ಕಲಿಯಲಿ ಮತ್ತು ನಿಜವಾದ ಪಾಲುದಾರರಾಗಿ ಪ್ರಯಾಣಿಸಲಿ" ಎಂದು ಪ್ರಧಾನಿ ಹೇಳಿದರು. ಜೊತೆಗೆ, ಈ ಮಹತ್ವದ ಸಂದರ್ಭದಲ್ಲಿ ಜೋಡಿ ಮತ್ತು ಕುಟುಂಬಗಳಿಗೆ ಆಶೀರ್ವದಿಸಿದರು.
ಉದಯಪುರದದಲ್ಲಿ (ITC Hotels, Ekaaya Udaipur) ನಾಳೆ ಅದ್ಧೂರಿ ವಿವಾಹ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮ ಅತ್ಯಂತ ಖಾಸಗಿಯಾಗಿದ್ದು, ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಮಾತ್ರ ಹಾಜರಿರಲಿದ್ದಾರೆ. ಸ್ಥಳೀಯ ಅಧಿಕಾರಿಗಳು ಮತ್ತು ಹೈದರಾಬಾದ್‌ನ ವಿಶೇಷ ತಂಡಗಳು, ಅಂತಾರಾಷ್ಟ್ರೀಯ ಭದತಾ ತಂಡ ಸೇರಿದಂತೆ ಎಲ್ಲವೂ ಸುಗಮವಾಗಿ ಜರುಗುವಂತೆ ನೋಡಿಕೊಳ್ಳಲು ಮೂರು ಹಂತದ ಭದ್ರತಾ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ ಎಂದು ವರದಿಗಳು ಸೂಚಿಸಿವೆ.
2018ರಿಂದಲೂ ವದಂತಿಗಳ ಬಗ್ಗೆ ಮೌನ ವಹಿಸಿದ್ದ ವಿಜಯ್ ಮತ್ತು ರಶ್ಮಿಕಾ, ಫೆಬ್ರವರಿ 22 ಭಾನುವಾರ ಸಂಜೆ ಜಂಟಿ ಸೋಷಿಯಲ್ ಮೀಡಿಯಾ ಹೇಳಿಕೆ ಮೂಲಕ ತಮ್ಮ ನವಪಯಣವನ್ನು ಅಧಿಕೃತವಾಗಿ ದೃಢಪಡಿಸಿದರು. ತಮ್ಮ ಈ ವಿಶೇಷ ದಿನಕ್ಕೆ ಅಭಿಮಾನಿಗಳು ಇಟ್ಟಿರುವ ವಿರೋಶ್ ಎಂಬ ಹೆಸರನ್ನೇ ಆಯ್ಕೆ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಹೃದಯಸ್ಪರ್ಶಿ ಬರಹದಲ್ಲಿ, ''ಅವರ್ ಡಿಯರೆಸ್ಟ್ ಲವ್ಸ್, ನಾವು ಯಾವುದೇ ಪ್ಲಾನ್ ಮಾಡುವುದಕ್ಕೂ ಮುನ್ನ, ನಾವು ನಮಗಾಗಿ ಏನನ್ನಾದರೂ ಚೂಸ್ ಮಾಡುವುದಕ್ಕೂ ಮೊದಲು, ನೀವು ಈಗಾಗಲೇ ಅಲ್ಲಿಗೆ ತಲುಪಿದ್ದೀರ. ಬಹಳ ಪ್ರೀತಿಯಿಂದ, ನೀವು ನಮಗೊಂದು ಹೆಸರು ಕೊಟ್ಟಿದ್ದೀರಿ. ನೀವು ನಮ್ಮನ್ನು 'ವಿರೋಶ್' ಎಂದು ಕರೆದಿದ್ದೀರಿ. ಹಾಗಾಗಿ ಇಂದು, ಸಂಪೂರ್ಣ ಹೃದಯದಿಂದ, ನಮ್ಮ ಮುಂಬರುವ ಒಟ್ಟು ಸೇರುವಿಕೆಗೆ ಹೆಸರಿಟ್ಟಿದ್ದೇವೆ. ನಾವದನ್ನು ಹೆಸರಿಸಲು ಬಯಸುತ್ತೇವೆ - 'ವಿರೋಶ್ ವಿವಾಹ'. ನಮನ್ನು ತುಂಬಾ ಪ್ರೀತಿಯಿಂದ ಇರಿಸಿಕೊಂಡಿದ್ದಕ್ಕಾಗಿ ಧನ್ಯವಾದಗಳು. ಸದಾ ನೀವು ನಮ್ಮ ಒಂದು ಭಾಗ. ಅಪ್ಪುಗೆ ಮತ್ತು ಪ್ರೀತಿ'' ಎಂದು ಬರೆದುಕೊಂಡಿದ್ದರು.
ಉದಯಪುರದಲ್ಲಿ ನಿನ್ನೆ ಮೆಹೆಂದಿ ಸಮಾರಂಭ ನಡೆದಿದೆ ಎನ್ನಲಾಗಿದೆ. ಇಂದು ಹಲ್ದಿ, ಸಂಗೀತ ಸಂಭ್ರಮ ಜೋರಾಗಿದೆ. ನಾಳೆ ಸಪ್ತಪದಿ ತುಳಿಯಲಿದ್ದು, ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ಜರುಗಲಿದೆ. ಅಭಿಮಾನಿಗಳು ಫೋಟೋಗಳಿಗಾಗಿ ಕಾತರರಾಗಿದ್ದಾರೆ.

