Photos: 'ನಾನು ಈ ವ್ಯಕ್ತಿ ಬಗ್ಗೆ ಪುಸ್ತಕ ಬರೆಯಬಲ್ಲೆ!' ವಿಜಯ್ರನ್ನು 'ನನ್ನ ಗಂಡ' ಎಂದು ಪರಿಚಯಿಸಿದ ರಶ್ಮಿಕಾ
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಉದಯಪುರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ತಮ್ಮ ವಿವಾಹದ ಸುಂದರ ಕ್ಷಣಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಜೋಡಿ ಮೇಲೆ ಪ್ರೀತಿಯ ಧಾರೆಯೆರೆಯುತ್ತಿದ್ದಾರೆ.

By ETV Bharat Entertainment Team
Published : February 27, 2026 at 7:13 AM IST
ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಅವರ ದೀರ್ಘಕಾಲದ ಪ್ರೀತಿಗೆ ಮದುವೆ ಎಂಬ ಅಧಿಕೃತ ಮುದ್ರೆ ಬಿದ್ದಿದೆ. ಕಳೆದ ದಿನ ಉದಯಪುರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಸಂಬಂಧದ ಬಗ್ಗೆ ಹಲವು ವರ್ಷಗಳಿಂದ ಇದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಅಭಿಮಾನಿಗಳಿಂದ ಪ್ರೀತಿಯಿಂದ 'ವಿರೋಷ್' ಎಂದು ಕರೆಸಿಕೊಳ್ಳುವ ಈ ಜೋಡಿ ಗುರುವಾರ ಸಂಜೆ ತಮ್ಮ ವಿವಾಹದ ಬಹು ಸುಂದರ ಕ್ಷಣಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ತಮ್ಮ ಅಫೀಶಿಯಲ್ ಇನ್ಸ್ಟಾಗ್ರಾಮ್ನಲ್ಲಿ ರಶ್ಮಿಕಾ ಮದುವೆಯ ಸರಣಿ ಫೋಟೋಗಳನ್ನು ಹಂಚಿಕೊಂಡು ವಿಜಯ್ ಅವರನ್ನು ತಮ್ಮ ಪತಿ ಎಂದು ಪರಿಚಯಿಸಿದರು. ಸುಂದರ ಪೋಸ್ಟ್ ಶೇರ್ ಮಾಡಿದ ಕೊಡಗಿನ ಬೆಡಗಿ, "ಹಾಯ್, ಮೈ ಲವ್ಸ್, ನಿಮಗೀಗ 'ನನ್ನ ಗಂಡ'ನನ್ನು ಪರಿಚಯಿಸುತ್ತಿದ್ದೇನೆ! ಮಿಸ್ಟರ್ ವಿಜಯ್ ದೇವರಕೊಂಡ! ನಿಜವಾದ ಪ್ರೀತಿ ಹೇಗಿರುತ್ತದೆ ಎಂದು ನನಗೆ ಕಲಿಸಿದ ವ್ಯಕ್ತಿ, ಶಾಂತಿಯಿಂದ ಇರುವುದು ಹೇಗಿರುತ್ತದೆ ಎಂದು ನನಗೆ ತೋರಿಸಿದ ವ್ಯಕ್ತಿ! ಪ್ರತಿದಿನ ದೊಡ್ಡ ಕನಸು ಕಾಣುವುದು ಸಂಪೂರ್ಣ ಸರಿ ಎಂದು ನನಗೆ ಹೇಳುತ್ತಿದ್ದ ವ್ಯಕ್ತಿ ಮತ್ತು ನಾನು ಎಂದಿಗೂ ಸಾಧಿನೆಗೈಯಬಹುದು, ನಾನು ಭಾವಿಸುವುದಕ್ಕಿಂತ ಹೆಚ್ಚಿನದನ್ನು ಸಾಧಿಸಲು ಸಮರ್ಥಳೆಂದು ನಿರಂತರವಾಗಿ ಹೇಳುತ್ತಿದ್ದ ವ್ಯಕ್ತಿ ವಿಜಯ್ ದೇವಕೊಂಡ!" ಎಂದು ಬರೆದುಕೊಂಡಿದ್ದಾರೆ.
"ಯಾರೂ ನೋಡದ ಹಾಗೆ ನೃತ್ಯ ಮಾಡುವುದನ್ನು ಎಂದಿಗೂ ತಡೆಯದ ವ್ಯಕ್ತಿ... ಸ್ನೇಹಿತರೊಂದಿಗೆ ಪ್ರಯಾಣಿಸುವುದನ್ನು ನನಗೆ ತೋರಿಸಿದ ವ್ಯಕ್ತಿ ಮತ್ತು ನನ್ನನ್ನು ನಂಬಿ, ನಾನು ಈ ವ್ಯಕ್ತಿಯ ಬಗ್ಗೆ ಒಂದು ಪುಸ್ತಕ ಬರೆಯಬಲ್ಲೆ! ನಾನು ಯಾವಾಗಲೂ ಹೇಗಿರಬೇಕೆಂದು ಕನಸು ಕಂಡಿದ್ದೆನೋ ಹಾಗಾಗಿದ್ದೇನೆ. ಅವಳೀಗ (ರಶ್ಮಿಕಾ) ಏನಾಗಿದ್ದಾಳೋ ಅದನ್ನು ಮಾಡಿದ್ದೇ ನೀವು (ವಿಜಯ್)! ನಾನು ನಿಜವಾಗಿಯೂ ಧನ್ಯಳಾಗಿದ್ದೇನೆ! ವಿಜ್ಜು, ನಿಮ್ಮ ಬಗ್ಗೆ ನನಗಿರುವ ಭಾವನೆಗಳನ್ನು ವಿವರಿಸಲು ಪದಗಳ ಕೊರತೆಯಿದೆ!! ನಾನದನ್ನು ನಿಮಗೆ ಈಗಾಗಲೇ ಹೇಳಿದ್ದೇನೆ!!" ಎಂದು ಬರೆದುಕೊಂಡಿದ್ದಾರೆ.
ಮುಂದುವರೆದು, "ನಿಮಗೆ ಗೊತ್ತಾ, ಇದ್ದಕ್ಕಿದ್ದಂತೆ ನನ್ನ ಎಲ್ಲಾ ಸಾಧನೆಗಳು, ಹೋರಾಟಗಳು, ಸಂತೋಷ, ದುಃಖ, ಜೀವನ - ಎಲ್ಲವೂ ಈಗ ಹೆಚ್ಚು ಅರ್ಥಪೂರ್ಣವಾಗಿದೆ - ಏಕೆಂದರೆ ನಾನು ನಿಮ್ಮನ್ನು ಹೊಂದಿದ್ದೇನೆ - ಇದಕ್ಕೆಲ್ಲಾ ಸಾಕ್ಷಿಯಾಗುತ್ತಿದ್ದೇನೆ. ಇದೆಲ್ಲದರ ದೊಡ್ಡ ಭಾಗವಾಗಿದ್ದೇನೆ! ನಾನು ನಿಮ್ಮ ಹೆಂಡತಿಯಾಗಲು ತುಂಬಾನೇ ಉತ್ಸುಕಳಾಗಿದ್ದೇನೆ! ನಿಮ್ಮ ಹೆಂಡತಿಯಾಗಲು! ನಿಮ್ಮ ಹೆಂಡತಿ ಎಂದು ಕರೆಸಿಕೊಳ್ಳಲು!! ಇದು ಪಾರ್ಟಿ ಟೈಮ್! ಒಟ್ಟಿಗೆ ಅತ್ಯುತ್ತಮ ಜೀವನವನ್ನು ನಡೆಸೋಣ! ಐ ಲವ್ ಯೂ!" ಎಂದು ಬರೆದುಕೊಂಡಿದ್ದಾರೆ.
ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ನಡೆದ ಸಾಂಪ್ರದಾಯಿಕ ಸಮಾರಂಭದಲ್ಲಿ ಸಪ್ತಪದಿ ತುಳಿದರು. ವಿವಾಹ ಸಮಾರಂಭವು ಬೆಳಗ್ಗೆ 10.10ಕ್ಕೆ ಐಟಿಸಿ ಹೋಟೆಲ್ಸ್‌ನ ದಿ ಮೆಮೆಂಟೋಸ್‌ನಲ್ಲಿ ಆಪ್ತ ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ನಡೆಯಿತು. ಇದು ಉದಯಪುರದ ಅರಾವಳಿ ಬೆಟ್ಟಗಳಲ್ಲಿರುವ ಒಂದು ಐಷಾರಾಮಿ ಹೋಟೆಲ್ ಆಗಿದ್ದು, ಗೌಪ್ಯತೆ ಮತ್ತು ರಮಣೀಯ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ವಿರೋಶ್ ಜೋಡಿ ಶಾಂತಿಯುತ ಮತ್ತು ಖಾಸಗಿ ಸಮಾರಂಭ ನಡೆಸಲು ಈ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: 'ದರ್ಶನ್ ಆ ಕೃತ್ಯಕ್ಕೆ ಕೈ ಹಾಕಿಲ್ಲವೆಂಬ ನಂಬಿಕೆಯಿದೆ, ಕಾಲ ಉತ್ತರಿಸಲಿದೆ': 'ಹಯಗ್ರೀವ' ನಟ ಧನ್ವೀರ್ ಗೌಡ ಸಂದರ್ಶನ
ಇಬ್ಬರೂ ಮೊದಲ ಬಾರಿಗೆ 2018ರ ತೆಲುಗು ಹಿಟ್ ಚಿತ್ರ ಗೀತಾ ಗೋವಿಂದಮ್ನಲ್ಲಿ ತೆರೆಹಂಚಿಕೊಂಡರು. ಈ ರೊಮ್ಯಾಂಟಿಕ್ ಡ್ರಾಮಾ ಅವರನ್ನು ಆನ್ಸ್ಕ್ರೀನ್ನ ದಿ ಬೆಸ್ಟ್ ಜೋಡಿಯನ್ನಾಗಿ ಮಾಡಿತು. 2019ರಲ್ಲಿ ಡಿಯರ್ ಕಾಮ್ರೇಡ್ಗಾಗಿ ಮತ್ತೆ ಒಂದಾದರು. ಸಿನಿಮಾ ಈವೆಂಟ್ಗಳಲ್ಲಿ, ಖಾಸಗಿ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಜೊತೆಯಲ್ಲೇ ಕಾಣಿಸಿಕೊಳ್ಳುತ್ತಿದ್ದ ಹಿನ್ನೆಲೆ, ವದಂತಿಗಳು ಅಂದಿನಿಂದಲೇ ಪ್ರಾರಂಭವಾಗಿತ್ತು.
ಕೆಲ ಅಭಿಮಾನಿಗಳು ಅವರ ಸೋಷಿಯಲ್ ಮೀಡಿಯಾ ಪೋಸ್ಟ್ಗಳ ಸಾಮ್ಯತೆಗಳನ್ನು ಬಹಿರಂಗಪಡಿಸಿದರು. ಅದಾಗ್ಯೂ, ಇಬ್ಬರೂ ತಮ್ಮ ವೈಯಕ್ತಿಕ ಜೀವನವನ್ನು ಬಹಳ ಗೌಪ್ಯವಾಗಿಡಲು ನಿರ್ಧರಿಸಿದರು. ಭಾನುವಾರ, ಫೆಬ್ರವರಿ 22ರವರೆಗೂ ಯಾವುದೇ ಅಧಿಕೃ ಘೋಷಣೆ, ಹೇಳಿಕೆ ಕೊಟ್ಟಿರಲಿಲ್ಲ. ಭಾನುವಾರ ಸಂಜೆ ಅಧಿಕೃತ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ತಮ್ಮ ಮದುವೆಯನ್ನು ಅನೌನ್ಸ್ ಮಾಡಿ ಗಮನ ಸೆಳೆದರು.
ಇದನ್ನೂ ಓದಿ: Photo: ಮಾಜಿ ಸಂಸದರ ಪುತ್ರಿ ರಚನಾ ಜೊತೆ ದಾಂಪತ್ಯಕ್ಕೆ ಕಾಲಿಟ್ಟ ನಟ ದುಶ್ಯಂತ್
ಕಳೆದ ದಿನ ಬೆಳಗ್ಗೆ 10 ಗಂಟೆ ಸುಮಾರಿಗೆ ತೆಲುಗು ಸಂಪ್ರದಾಯಗಳ ಪ್ರಕಾರ ವಿವಾಹ ಜರುಗಿದ್ದರೆ, ಸಂಜೆ 4.30ಕ್ಕೆ ಕೊಡವ ಶೈಲಿಯ ವಿವಾಹವನ್ನು ನಡೆಸಿದ್ದಾರೆ ಎಂದು ವರದಿಯಾಗಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವಿರೋಶ್ ಮದುವೆ ಫೋಟೋಗಳದ್ದೇ ಸದ್ದು.

