ETV Bharat / entertainment

80ರ ದಶಕದ ಕಥೆ ಹೇಳಲು ನವೆಂಬರ್ 14ಕ್ಕೆ ತೆರೆಗೆ ಬರ್ತಿದೆ 'ಪಾಠಶಾಲಾ' ಸಿನಿಮಾ

ಅರಣ್ಯ ನಾಶ, ಅದರ ಉಳಿವು ಮತ್ತು ಮಕ್ಕಳ‌ ಬಾಲ್ಯದ ಕಥಾಹಂದರ ಹೊಂದಿರುವ ಪಾಠಶಾಲಾ ಚಿತ್ರ ನವೆಂಬರ್ 14ರಂದು ತೆರೆಗೆ ಬರಲು ಸಜ್ಜಾಗುತ್ತಿದೆ.

Paatashaala cinema
ಪಾಠಶಾಲಾ ಸಿನಿಮಾದ ಚಿತ್ರತಂಡ (ETV Bharat)
author img

By ETV Bharat Karnataka Team

Published : October 15, 2025 at 7:35 PM IST

2 Min Read
Choose ETV Bharat

ಅರಣ್ಯ ನಾಶ, ಅದರ ಉಳಿವು ಮತ್ತು ಮಕ್ಕಳ‌ ಬಾಲ್ಯ ಸೇರಿದಂತೆ ಸೂಕ್ಷ್ಮ‌ ವಿಚಾರಗಳ ಕಥಾಹಂದರ ಹೊಂದಿರುವ ಸಿನಿಮಾ 'ಪಾಠಶಾಲಾ'. ಸದ್ಯ ಟ್ರೇಲರ್​ನಿಂದಲೇ ಸ್ಯಾಂಡಲ್​ವುಡ್​​ನಲ್ಲಿ ಗಮನ ಸೆಳೆಯುತ್ತಿರೋ ಈ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಈ ಕುರಿತು ಚಿತ್ರತಂಡ ಅನುಭವ ಹಂಚಿಕೊಂಡಿದೆ.

ಪಾಠಶಾಲಾ ಎನ್ನುವ ಹೆಸರು ಇದೆ ಎಂದ ಮಾತ್ರಕ್ಕೆ ಇದು ಮಕ್ಕಳ ಚಿತ್ರ ಅಲ್ಲ‌ ಎಂದು ಮಾತನಾಡಿದ ನಿರ್ದೇಶಕ ಹೆದ್ದೂರು ಮಂಜುನಾಥ ಶೆಟ್ಟಿ, "ಈಗಿನ ಶಿಕ್ಷಣ 80ರ ದಶಕದಲ್ಲಿದ್ದ ಹಾಗೆ ಇಲ್ಲ. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ದೊಡ್ಡ ಅಂತರ ಇದೆ. ಈ ವಿಷಯದ ಜೊತೆಗೆ ನನ್ನ ಪತ್ನಿಯ ಚಿಕ್ಕಪ್ಪ ಹೇಳಿದ ಅರಣ್ಯ ಭೂಮಿ ಒತ್ತುವರಿ ಮತ್ತು ತೆರವು ಮಾಡುವ ಸೂಕ್ಷ್ಮ ವಿಷಯವನ್ನಿಟ್ಟುಕೊಂಡು ಸಿನಿಮಾ ಮಾಡಿದ್ದೇವೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ 20 ದಿನಗಳ ಚಿತ್ರೀಕರಣ ನಡೆದಿದೆ. ನಿರ್ಮಾಪಕರು ಕೂಡ ಅಲ್ಲೇ ಸಿಕ್ಕರು. ಚಿತ್ರಕ್ಕೆ "ಓದು ಇಲ್ಲ ಓಡೋಗು" ಎನ್ನುವ ಅಡಿ ಬರಹವಿದೆ. ಅದು ಏಕೆ? ಎನ್ನುವುದನ್ನು ಚಿತ್ರದಲ್ಲಿಯೇ ನೋಡಬೇಕು" ಎಂದು ತಿಳಿಸಿದರು.

ಹಿರಿಯ ಕಲಾವಿದ ಕಿರಣ್ ನಾಯಕ್ ಮಾತನಾಡಿ, "ಚಿತ್ರದಲ್ಲಿ ಸಂಜೀವಣ್ಣ ಎನ್ನುವ ಪಾತ್ರ ಮಾಡಿದ್ದೇನೆ‌. ಅರಣ್ಯ ನಾಶ ಆಗುತ್ತಿರುವುದು ಬುಡುಕಟ್ಟು ಜನರಿಂದ‌ ಅಲ್ಲ, ಬದಲಾಗಿ ಅರಣ್ಯ ಇಲಾಖೆಯಿಂದ. ಈ ಸತ್ಯ ಗೊತ್ತಿದ್ದರೂ ಅನಗತ್ಯವಾಗಿ ಬುಡಕಟ್ಟು ಜನರ ಮೇಲೆ ಆರೋಪ ಹೊರಿಸಲಾಗುತ್ತಿದೆ" ಎಂದು ಹೇಳಿದರು.

Paatashaala cinema
ಪಾಠಶಾಲಾ ಸಿನಿಮಾದ ಬಾಲ ಕಲಾವಿದರು (ETV Bharat)

ಮತ್ತೊಬ್ಬ ನಟ ಅಕ್ಷಯ್ ಮಾತನಾಡಿ, "ಸಿನಿಮಾದಲ್ಲಿ ನನ್ನದು ನವೀನ್ ಎನ್ನುವ ಪಾತ್ರ, ಸೈಕಲ್ ಶಾಪ್ ಇಟ್ಟುಕೊಂಡಿರುತ್ತೇನೆ. ಸಿನಿಮಾ ಚಿತ್ರೀಕರಣದ ಅನುಭವ ಮರೆಯಲಾಗದು" ಎಂದರು.

ಹಿರಿಯ ಕಲಾವಿದರಾದ ಸುಧಾಕರ್ ಬನ್ನಂಜೆ ಮಾತನಾಡಿ, "ನನ್ನದು ಈ ಚಿತ್ರದಲ್ಲಿ ಹೆಡ್ ಮಾಸ್ಟರ್ ಪಾತ್ರವಾಗಿದ್ದು, ಚೆನ್ನಾಗಿ ಮೂಡಿ ಬಂದಿದೆ. 80ರ ದಶಕದಲ್ಲಿ ಶಿಕ್ಷಕರು, ಊರಿನ‌ ಬಗ್ಗೆ ಇದ್ದ ಬಾಂಧವ್ಯ, ಮಕ್ಕಳ ಬಗ್ಗೆ ಇದ್ದ ಕಾಳಜಿ ಚಿತ್ರದಲ್ಲಿದೆ‌. ಇದು ಶೈಕ್ಷಣಿಕ ಪಾಠಶಾಲೆ ಅಲ್ಲ, ಬದುಕಿನ ಪಾಠಶಾಲೆ" ಎಂದು ತಿಳಿಸಿದರು.

ಬಾಲ‌ ಕಲಾವಿದರಾದ ದಿಗಂತ್, ಮಿಥುನ್, ಆಯುಷ್, ಶ್ರೀಯಾನ್, ಅಹನ, ಗೌತಮಿ, ನಿರ್ಮಾಪಕರಾದ ಪ್ರದೀಪ್ ಗುಡ್ಡೇಮನೆ, ಅರುಣ್ ಮಲ್ಲೇಸರ, ಭಾಸ್ಕರ್ ಕಮ್ಮರಡಿ, ರವಿ ಶೆಟ್ಟಿ ಹಾಗೂ ನೃತ್ಯ ನಿರ್ದೇಶಕ ಅರುಣ್, ಅಂಬಿಕಾ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪರಿಸರ ಹಾಗು ಮಕ್ಕಳ ಕುರಿತಾಗಿರೋ ಪಾಠಶಾಲಾ ಚಿತ್ರ ನವೆಂಬರ್ 14 ರಂದು ತೆರೆಗೆ ಬರಲಿದೆ.

ಇವುಗಳನ್ನೂ ಓದಿ: ಅದ್ವಿತಿ ಶೆಟ್ಟಿ ಹಿಂದೆ 'ಲವ್ ಯು' ಅಂತಾ ಓಡಾಡುತ್ತಿರುವ ರೂಪೇಶ್ ಶೆಟ್ಟಿ!

ಉಡಾಳನಾಗಿ ಪ್ರೇಕ್ಷಕರ ಮುಂದೆ ಬರೋದಕ್ಕೆ ಸಜ್ಜಾದ ಪದವಿಪೂರ್ವ ಖ್ಯಾತಿಯ ಪೃಥ್ವಿ ಶಾಮನೂರು