ಕನ್ನಡ ಸಿನಿಮಾಗಳ ಬಗ್ಗೆ OTTಗಳಿಗಿರುವ ತಾತ್ಸಾರ ಬದಲಾಗಬೇಕು: ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್
ಕನ್ನಡ ಸಿನಿಮಾಗಳಿಗೆ ಪ್ರತಿಷ್ಠಿತ ಒಟಿಟಿ ಫ್ಲಾಟ್ಫಾರ್ಮ್ಗಳಲ್ಲಿ ಸಿಗುವ ಮನ್ನಣೆ ಹಾಗೂ ಆದಾಯದ ಬಗ್ಗೆ 'ತೀರ್ಥರೂಪ ತಂದೆಯವರಿಗೆ' ಸಿನಿಮಾದ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಅವರು ಈಟಿವಿ ಭಾರತ ಜೊತೆ ಮಾತನಾಡಿದ್ದಾರೆ.

Published : March 4, 2026 at 9:58 AM IST
ಸ್ಟಾರ್ ನಟರ ಸಿನಿಮಾಗಳನ್ನು ಹೊರತುಪಡಿಸಿ ಹೊಸಬರ ಹಾಗೂ ಕಂಟೆಂಟ್ ಸಿನಿಮಾಗಳನ್ನು ಪ್ರತಿಷ್ಠಿತ ಒಟಿಟಿ ಕಂಪನಿಗಳು ಖರೀದಿ ಮಾಡುತ್ತಿಲ್ಲ ಎಂಬುದು ಕನ್ನಡ ಚಿತ್ರರಂಗದ ದೂರು. ಹೊಸಬರ ಕನ್ನಡ ಸಿನಿಮಾಗಳಿಗೆ ಪರ್ ವ್ಯೂ ಲೆಕ್ಕದಂತೆ ಹಣ ಸಿಗುತ್ತದೆ ಎನ್ನುವುದು ಗೊತ್ತಿದ್ದ ವಿಷಯ. ಆದರೆ ಅದು ಎಷ್ಟು ಎನ್ನುವುದು ನಿಗೂಢವಾಗಿಯೇ ಉಳಿದಿತ್ತು. ಈ ಬಗ್ಗೆ ಚಿತ್ರತಂಡದವರು ಬಹಿರಂಗವಾಗಿ ಹೇಳುತ್ತಿರಲಿಲ್ಲ. ಮತ್ತೊಂದು ಕಡೆ, OTTಯವರು ಇದನ್ನು ನಿಗೂಢ ರಹಸ್ಯ ಎಂಬಂತೆ ಕಾಪಾಡಿಕೊಂಡು ಬಂದಿದ್ದರು. ಇದೀಗ 'ತೀರ್ಥರೂಪ ತಂದೆಯವರಿಗೆ' ಸಿನಿಮಾದ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಈ ಬಗ್ಗೆ ಧ್ವನಿ ಎತ್ತಿದ್ದಾರೆ.
ಅಮೇಜಾನ್ ಪ್ರೈಂನಲ್ಲಿ ತೀರ್ಥರೂಪ ತಂದೆಯವರಿಗೆ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ನಿಹಾರ್ ಮುಕೇಶ್, ರಚನಾ ಇಂದರ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರ ಥಿಯೇಟರ್ಗಳಲ್ಲಿ ನೀರಸ ಪ್ರದರ್ಶನ ನೀಡಿತ್ತು. ಚಿತ್ರವನ್ನು ಪ್ರೈಮ್ ಸಂಸ್ಥೆಯವರು ದುಡ್ಡು ಕೊಟ್ಟು ಖರೀದಿ ಮಾಡಿಲ್ಲ. ಬದಲಿಗೆ ವೀವ್ಸ್ ಆಧಾರದ ಮೇಲೆ ಪೇಮೆಂಟ್ ಮಾಡುವ ಆಯ್ಕೆ ಮೂಲಕ ಖರೀದಿಸಿದ್ದಾರೆ. ಸಿನಿಮಾವನ್ನು ಒಂದು ಗಂಟೆ ವೀಕ್ಷಿಸಿದರೆ ತಂಡದವರಿಗೆ ಸಿಗೋದು ನಾಲ್ಕು ರೂಪಾಯಿ ಎಂದು ರಾಮೇನಹಳ್ಳಿ ಜಗನ್ನಾಥ್ ತಿಳಿಸಿದರು.

1. ಒಟಿಟಿ ಪ್ಲಾಟ್ ಫಾರ್ಮ್ಗಳಲ್ಲಿ ಕಂಟೆಂಟ್ ಸಿನಿಮಾಗಳಿಗೆ ಯಾಕೆ ತಾರತಮ್ಯ?
ನಾನೂ ಕೂಡ ಈ ಪ್ರಶ್ನೆಗೆ ಉತ್ತರ ಹುಡುಕುವ ಹುಡುಕಾಟದಲ್ಲಿ ಇದ್ದೀನಿ. 2018ನೇ ವರ್ಷದಿಂದ ಒಟಿಟಿಗಳು ಬಂದ ಮೇಲೆ ಒಂದು ಮಾನದಂಡ ಇದೆ. ಅದೇನಪ್ಪ ಅಂದ್ರೆ ಸಿನಿಮಾಗಳು ಚಿತ್ರಮಂದಿರಗಳನ್ನು ಪ್ರದರ್ಶನ ಆದಾಗ ಒಟಿಟಿ ವ್ಯಾಪಾರಕ್ಕೆ ಅನುಕೂಲ ಆಗುತ್ತೆ. ಆದ್ರೆ ಒಳ್ಳೆ ಸಿನಿಮಾಗಳಿಗೆ ಥಿಯೇಟರ್ಗೆ ಜನರು ಬಂದಿಲ್ಲ ಅಂದಾಗ ನಿಮ್ಮ ಸಿನಿಮಾಗೆ ಜನ ಬಂದಿಲ್ಲ ಎಂಬ ನೆಪ ಹೇಳಿ ಸಿನಿಮಾ ಖರೀದಿಸೋದಿಕ್ಕೆ ಯೋಚನೆ ಮಾಡ್ತಾರೆ. ಸಿನಿಮಾಗೆ ಜನ ಬರಬೇಕು ಅಂದ್ರೆ ದೊಡ್ಡ ಮಟ್ಟದ ಪ್ರಚಾರ ಬೇಕು. ಮತ್ತೊಂದು ಕಡೆ ಸಿನಿಮಾ ನೋಡುವ ಪ್ರೇಕ್ಷಕರು ಕೂಡ ಒಟಿಟಿಗೆ ಬರುತ್ತೆ, ಯಾಕೆ ಥಿಯೇಟರ್‌ನಲ್ಲಿ ನೋಡಬೇಕು ಅಂತಾ ಫಿಕ್ಸ್ ಆಗಿರುತ್ತಾರೆ. ಇನ್ನು ಒಟಿಟಿಗೆ ಬಂದ್ರೆ ಒಳ್ಳೆ ಬಿಸಿನೆಸ್ ಆಗಿರುತ್ತೆ ಅಂತಾ ಅಂದುಕೊಂಡಿರುತ್ತಾರೆ. ಆದ್ರೆ ಕಳೆದ ಎರಡು ಮೂರು ವರ್ಷಗಳಿಂದ ಪ್ರೈಮ್ ಅಲ್ಲದೆ ಬೇರೆ ಒಟಿಟಿಗಳು ಯಾವುದೇ ಕನ್ನಡ ಸಿನಿಮಾಗಳನ್ನು ಖರೀದಿ ಮಾಡ್ತಾ ಇಲ್ಲ. ಒಪ್ಪಂದ ಪ್ರಕಾರ ಒಂದು ಗಂಟೆಗೆ ಅಂತಾ ಮೊದಲು 6 ರೂಪಾಯಿ ಕೊಡ್ತಾ ಇದ್ರು ಈಗ ಒಂದು ಗಂಟೆಗೆ 4 ರೂಪಾಯಿ ಕೊಡ್ತಾ ಇದ್ದಾರೆ. ಮುಂದಿನ ದಿನಗಳಲ್ಲಿ ಅದೂ ಕೂಡ ಕಮ್ಮಿ ಮಾಡ್ತಾರೆ ಎಂಬ ಮಾತುಗಳು ಕೇಳಿ ಬರ್ತಾ ಇದೆ ಎಂದು ರಾಮೇನಹಳ್ಳಿ ಜಗನ್ನಾಥ್ ಅಸಮಾಧಾನ ಹೊರಹಾಕಿದರು.
2. ಕಂಟೆಂಟ್ ಇರುವ ಸಿನಿಮಾ ಮಾಡಿದಾಗ ನಿಮ್ಮಂಥ ಭರವಸೆಯ ನಿರ್ದೇಶಕರಿಗೆ ಎಷ್ಟು ನಿರಾಸೆ ಆಗುತ್ತೆ?
ನಮ್ಮ ಸಿನಿಮಾಗಳಿಗೆ ಹೆಚ್ಚು ಮನ್ನಣೆ ಸಿಗ್ತಾ ಇಲ್ಲ. ಆದರೆ ಆ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಳ್ಳಲ್ಲ. ನಾವು ನಮ್ಮ ಸಿನಿಮಾಗಳನ್ನು ಜನರು ಎಷ್ಟರ ಮಟ್ಟಿಗೆ ಒಪ್ಪಿಕೊಳ್ಳುತ್ತಾರೆ, ವ್ಯಾಪಾರದ ದೃಷ್ಟಿಕೋನದಿಂದ ನಮ್ಮ ಸಿನಿಮಾಗೆ ಹಾಕಿದ ಬಂಡವಾಳಕ್ಕೆ ಯಾವ ರೀತಿ ರಿಟರ್ನ್ ಬರುತ್ತೆ ಎಂದು ಯೋಚನೆ ಮಾಡ್ತಾ ಇರ್ತೀವಿ. ಇನ್ನು ಕಂಟೆಂಟ್ ಸಿನಿಮಾವನ್ನು ಜನರಿಗೆ ಹೇಗೆ ಮುಟ್ಟಿಸಬೇಕು? ಆ ಚಿತ್ರವನ್ನು ಜನರು ಎಷ್ಟು ಮೆಚ್ಚುತ್ತಾರೆ ಅನ್ನೋದು ಮುಖ್ಯವಾಗುತ್ತೆ. ಅದಕ್ಕೆ ನನ್ನ ಮೊದಲ ಸಿನಿಮಾ ಹೊಂದಿಸಿ ಬರೆಯಿರಿ ಚಿತ್ರವನ್ನು ಥಿಯೇಟರ್‌ನಲ್ಲಿ ಬರೀ 38 ಸಾವಿರ ಜನ ನೋಡಿದ್ರು. ಆದ್ರೆ ಒಟಿಟಿಯಲ್ಲಿ 100 ಮಿಲಿಯನ್ ಆಗಿತ್ತು. ಒಂದು ಕೋಟಿ ಕನ್ನಡಿಗರು ನಮ್ಮ ಸಿನಿಮಾವನ್ನು ನೋಡಿದ್ದರು. ಅದೇ ಎರಡನೇ ಸಿನಿಮಾ ತೀರ್ಥರೂಪ ತಂದೆಯವರಿಗೆ ಸಿನಿಮಾ ಥಿಯೇಟರ್ ಸೆಟ್ಟಪ್, ಒಳ್ಳೆ ಪ್ರಮೋಷನ್ ಕೂಡ ಮಾಡಿದ್ವಿ. ಸಿನಿಮಾ ನೋಡಿದವರು ಎಲ್ಲಾ ಚೆನ್ನಾಗಿದೆ ಆದ್ರೆ ಈ ಕಥೆಯನ್ನು ನೇಮ್ ಫೇಮ್ ಇರುವ ಹೀರೋ ಜೊತೆ ಮಾಡಿದ್ರೆ ಚೆನ್ನಾಗಿ ಇರ್ತಾ ಇತ್ತು ಅಂತಾ ಹೇಳಿದರು. ಇಂತಹ ಕಥೆಯನ್ನು ಯಾವ ಹೀರೋಗೆ ಮಾಡಬೇಕು, ಅವರು ಒಪ್ಪಿಕೊಳ್ಳುತ್ತಾರಾ ಅಂತಾ ಹಲವು ಪ್ರಶ್ನೆಗಳು ಇರುತ್ತೆ. ಇನ್ನು ಬೇರೆ ಭಾಷೆಯಲ್ಲಿ ಈ ರೀತಿಯ ಕಂಟೆಂಟ್ ಸಿನಿಮಾಗಳು ದೊಡ್ಡ ಮಟ್ಟದ ಸಕ್ಸಸ್ ಜೊತೆಗೆ ಬಿಸಿನೆಸ್ ಕೂಡ ಆಗುತ್ತೆ. ಆ ರೀತಿಯ ಸಿನಿಮಾಗಳು ಕನ್ನಡದಲ್ಲಿ ಬಂದ್ರೆ ಆಗಲ್ಲ. ಕಂಟಿನ್ಯೂ ಆಗಿ ಇಂತಹ ಸಿನಿಮಾಗಳು ಬಂದಾಗ ನಮ್ಮ ಕನ್ನಡ ಸಿನಿಮಾಗಳಿಗೆ ಮಾನ್ಯತೆ ಸಿಗುತ್ತೆ.
3. ಪ್ರತಿಷ್ಠಿತ ಒಟಿಟಿ ಪ್ಲಾರ್ಟ್ ಫಾರ್ಮ್ಗಳು ಯಾಕೆ ಒಳ್ಳೆಯ ಕಥೆ ಹಾಗು ಕಂಟೆಂಟ್ ಸಿನಿಮಾಗಳಿಗೆ ಹೆಚ್ಚು ಒತ್ತು ಕೊಡುತ್ತಿಲ್ಲ?
ಮೊದಲು ಈ ತಾರತಮ್ಯ ಬದಲಾಗಬೇಕು. ನಮ್ಮ ಭಾಷೆಯ ಸಿನಿಮಾಗಳಿಗೆ ತಾರತಮ್ಯ ಮಾಡ್ತಾರೆ. ಇನ್ನು ನೆಟ್ಫ್ಲಿಕ್ಸ್ ಒಟಿಟಿಯಲ್ಲಿ ಎಲ್ಲಾ ಭಾಷೆಯ ಆಪ್ಷನ್ ಇದೆ. ಆದ್ರೆ ಕನ್ನಡ ಮಾತ್ರ ಇಲ್ಲ. ಆದ್ರೂ ಬೆಂಗಳೂರಿನಲ್ಲೇ ಅತೀ ಹೆಚ್ಚು ಜನ ನೋಡುವ ಒಟಿಟಿ ನೆಟ್ಫ್ಲಿಕ್ಸ್. ಹೀಗಾಗಿ ಒಟಿಟಿಗಳ ತಾರತಮ್ಯ ಬಗ್ಗೆ ದೊಡ್ಡ ಮಟ್ಟದ ಧ್ವನಿ ಎತ್ತಿದಾಗ ಬದಲಾವಣೆ ಸಾಧ್ಯ.
4. ಇದಕ್ಕೆ ಪರಿಹಾರವೇ ಇಲ್ಲವೇ?
ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗು ಕನ್ನಡ ನಿರ್ಮಾಪಕರ ಸಂಘಗಳು ಹಾಗು ಕಲಾವಿದರು ಮನಸ್ಸು ಮಾಡಿದರೆ ಸಾಧ್ಯ ಇದೆ. ಪಕ್ಕದ ತೆಲುಗು, ತಮಿಳು, ಮಲಯಾಳಂ ಚಿತ್ರರಂಗದಲ್ಲಿ ಸಾಧ್ಯವಾಗಿದ್ದು, ಕನ್ನಡದಲ್ಲಿ ಯಾಕೇ ಸಾಧ್ಯ ಆಗುತ್ತಿಲ್ಲ ಎಂಬ ನೋವು ಕಾಡುತ್ತಿರುವುದು ನಿಜ.
ಇದನ್ನೂ ಓದಿ: 'ಪ್ರೇಮದ ಊರಲಿ' ಚಿತ್ರದ ಟೀಸರ್ ರಿಲೀಸ್: ನನಗ ಹಳ್ಳಿ ಕಥೆ ಇಷ್ಟ- ರಂಗಾಯಣ ರಘು

