ದಳಪತಿ ವಿಜಯ್ ಫ್ಯಾನ್ಸ್ಗೆ ಮತ್ತೆ ನಿರಾಸೆ, ಸದ್ಯಕ್ಕಿಲ್ಲ 'ಜನ ನಾಯಗನ್' ರಿಲೀಸ್: ಸೆನ್ಸಾರ್ಗೆ ಹೈಕೋರ್ಟ್ ತಡೆ
'ಜನ ನಾಯಗನ್'ಗೆ ತಕ್ಷಣ ಯು/ಎ ಪ್ರಮಾಣಪತ್ರ ನೀಡುವಂತೆ ಸಿಬಿಎಫ್‌ಸಿಗೆ ನಿರ್ದೇಶಿಸಿದ್ದ ಏಕ ಸದಸ್ಯ ಪೀಠ ಆದೇಶಕ್ಕೆ ಮದ್ರಾಸ್ ಹೈಕೋರ್ಟ್ ತಡೆ ನೀಡಿದೆ.

By ETV Bharat Entertainment Team
Published : January 10, 2026 at 12:07 PM IST
ಚೆನ್ನೈ (ತಮಿಳುನಾಡು): ಸೌತ್ ಸೂಪರ್ ಸ್ಟಾರ್ ವಿಜಯ್ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಚಿತ್ರ 'ಜನ ನಾಯಗನ್'ಗೆ ತಕ್ಷಣ ಯು/ಎ ಪ್ರಮಾಣಪತ್ರ ನೀಡುವಂತೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ)ಗೆ ನಿರ್ದೇಶನ ನೀಡಿದ್ದ ಏಕಸದಸ್ಯ ಪೀಠದ ಆದೇಶಕ್ಕೆ ಮದ್ರಾಸ್ ಹೈಕೋರ್ಟ್ ಶುಕ್ರವಾರ ತಡೆ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಮಣೀಂದ್ರ ಮೋಹನ್ ಶ್ರೀವಾಸ್ತವ ನೇತೃತ್ವದ ಪೀಠ, 'ಆದೇಶ ಹೊರಡಿಸುವ ಮೊದಲು ಸಿಬಿಎಫ್‌ಸಿಗೆ ಪ್ರತಿಕ್ರಿಯಿಸಲು ಸಾಕಷ್ಟು ಸಮಯ ನೀಡಲಾಗಿಲ್ಲ' ಎಂದು ಹೇಳಿದೆ. ನಿಜವಾದ ತುರ್ತು ಪರಿಸ್ಥಿತಿ ಇಲ್ಲ ಎಂಬುದನ್ನು ಗಮನಿಸಿದ ಪೀಠ, 'ಸೆನ್ಸಾರ್ ಪ್ರಮಾಣಪತ್ರವಿಲ್ಲದೇ ಬಿಡುಗಡೆ ದಿನಾಂಕ ನಿಗದಿಪಡಿಸುವ ಮೂಲಕ ಚಿತ್ರ ನಿರ್ಮಾಪಕರು ನ್ಯಾಯಾಲಯದ ಮೇಲೆ ಒತ್ತಡ ಹೇರುತ್ತಿರುವಂತೆ ತೋರುತ್ತಿದೆ' ಎಂದು ಹೇಳಿದೆ.
"ನೀವು ಸುಳ್ಳು ತುರ್ತುಸ್ಥಿತಿಯನ್ನು ಸೃಷ್ಟಿಸುತ್ತಿದ್ದೀರಿ ಮತ್ತು ವ್ಯವಸ್ಥೆಯ ಮೇಲೆ ಒತ್ತಡ ಹೇರುತ್ತಿದ್ದೀರಿ" ಎಂದು ಚಿತ್ರದ ನಿರ್ಮಾಪಕರಿಗೆ ಮುಖ್ಯ ನ್ಯಾಯಮೂರ್ತಿಗಳು ತಿಳಿಸಿದ್ದಾರೆ. ಸಿನಿಮಾದ ಪ್ರಮಾಣೀಕರಣ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಅವರು ಕಾಯಬೇಕಿತ್ತು ಎಂದು ಕೂಡಾ ಹೇಳಿದೆ.
ಸಿಬಿಎಫ್‌ಸಿ ಇನ್ನೂ ಯಾವುದೇ ಪ್ರಮಾಣಪತ್ರವನ್ನು ನೀಡಿಲ್ಲ ಎಂಬುದನ್ನು ಗಮನಿಸಿದ ನ್ಯಾಯಾಲಯವು, ಮೇಲ್ಮನವಿ ಇತ್ಯರ್ಥವಾಗುವವರೆಗೆ ಏಕ ಸದಸ್ಯ ಪೀಠದ ಆದೇಶವನ್ನು ಜಾರಿಗೆ ತರಲು ಸಾಧ್ಯವಿಲ್ಲ ಎಂದು ಹೇಳಿದೆ. ಸಿಬಿಎಫ್‌ಸಿಗೆ ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸಲು ಸೂಕ್ತ ಅವಕಾಶವನ್ನು ನೀಡಬೇಕಾಗಿತ್ತು ಎಂದೂ ಅಭಿಪ್ರಾಯಪಟ್ಟಿದೆ.
ಏಕ ಸದಸ್ಯ ಪೀಠದ ಆದೇಶವಾದ ಬೆನ್ನಲ್ಲೇ ಸಿಬಿಎಫ್‌ಸಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. ಈ ವೇಳೆ ವಿಚಾರಣೆಯ ಸಮಯದಲ್ಲಿ ಪ್ರಮಾಣೀಕರಣ ಪ್ರಕ್ರಿಯೆ ಇನ್ನೂ ಮುಂದುವರೆದಿದೆ. ನಿರ್ಮಾಪಕರು ಶೀಘ್ರವೇ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ ಎಂದು ವಾದಿಸಿದರು.
ಜನವರಿ 9ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ಹೇಳಿದ್ದರು. ಆದರೆ ಸೆನ್ಸಾರ್ ಪ್ರಮಾಣಪತ್ರವಿಲ್ಲದೇ ಬಿಡುಗಡೆ ದಿನಾಂಕವನ್ನು ನಿಗದಿಪಡಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು.
ವಿಜಯ್ ಚಿತ್ರಕ್ಕೆ ಸಿಬಿಎಫ್‌ಸಿಗೆ ಯು/ಎ ಪ್ರಮಾಣಪತ್ರ ನೀಡುವಂತೆ ನಿರ್ದೇಶಿಸಿದ್ದ ಏಕ ಸದಸ್ಯ ಪೀಠದ ಆದೇಶವನ್ನು ಹೈಕೋರ್ಟ್ ಈಗ ತಡೆಹಿಡಿದಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಜನವರಿ 21ರಂದು ನಡೆಯಲಿದೆ.
ಇದನ್ನೂ ಓದಿ: Fact check: 24 ಗಂಟೆಯಲ್ಲಿ 200M+ ವೀಕ್ಷಣೆಯಾದ 'ಟಾಕ್ಸಿಕ್' ಟೀಸರ್ನಲ್ಲಿ ಯಶ್ ಜೊತೆಗಿರುವ ನಟಿ ಯಾರು?
ಪ್ರಕಾಶ್ ರಾಜ್, ಪೂಜಾ ಹೆಗ್ಡೆ, ಮಮಿತಾ ಬೈಜು, ಪ್ರಿಯಾಮಣಿ ಮತ್ತು ಗೌತಮ್ ವಾಸುದೇವ್ ಮೆನನ್ ಸೇರಿ ಇತರರು ಪ್ರಮುಖ ಪಾತ್ರಗಳಲ್ಲಿರುವ ಜನ ನಾಯಗನ್ ಚಿತ್ರ ಜನವರಿ 9ರಂದು ಬಿಡುಗಡೆಯಾಗಬೇಕಿತ್ತು. ಆದರೆ ಚಿತ್ರದ ಪ್ರಮಾಣೀಕರಣ (ಸೆನ್ಸಾರ್) ಸಮಸ್ಯೆಯಿಂದಾಗಿ ಈಗ ಮುಂದೂಡಲ್ಪಟ್ಟಿದೆ. "ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ" ಎನ್ನುವ ಆರೋಪ ಇದ್ದು, ವಿಷಯವೀಗ ನ್ಯಾಯಾಲಯದಲ್ಲಿದೆ.
ಇದನ್ನೂ ಓದಿ: 'ಜನ ನಾಯಗನ್'ಗೆ U/A ಪ್ರಮಾಣಪತ್ರ ನೀಡುವಂತೆ CBFCಗೆ ಮದ್ರಾಸ್ ಹೈಕೋರ್ಟ್ ಆದೇಶ
ಹೆಚ್.ವಿನೋತ್ ನಿರ್ದೇಶನದ 'ಜನ ನಾಯಗನ್' ಡಿಸೆಂಬರ್ 18ರಂದು ಸೆನ್ಸಾರ್‌ಶಿಪ್‌ಗೆ ಕಳುಹಿಸಿತ್ತು. ಡಿಸೆಂಬರ್ 19ರಂದು, ಸೆನ್ಸಾರ್ ಮಂಡಳಿ ಕೆಲ ದೃಶ್ಯಗಳನ್ನು ತೆಗೆದುಹಾಕಲು ಮತ್ತು ಕೆಲ ಡೈಲಾಗ್ಗಳನ್ನು ಮ್ಯೂಟ್ ಮಾಡಲು ಸೂಚನೆ ನೀಡಿತ್ತೆಂದು ವರದಿ ಆಗಿದೆ. ಸೆನ್ಸಾರ್ ಮಂಡಳಿಸೂಚಿಸಿದ ಬದಲಾವಣೆಗಳನ್ನು ಮಾಡಿದ ನಂತರವೂ, ಪ್ರಮಾಣಪತ್ರವನ್ನು ನೀಡಲಾಗಿಲ್ಲ ಎಂದು ಅರ್ಜಿದಾರರಾದ ಚಲನಚಿತ್ರ ನಿರ್ಮಾಣ ಸಂಸ್ಥೆ ಈ ಹಿಂದೆ ತಿಳಿಸಿತ್ತು.

