ETV Bharat / entertainment

'ಉಪೇಂದ್ರರನ್ನು ಮದುವೆಯಾಗಿ ಮನೆಗೆ ಬಂದಾಗ ನಿರಂಜನ್‌ ಮಗು, ಈಗ ನಟನಾಗಿ ನೋಡಲು ಖುಷಿಯಾಗುತ್ತದೆ': ಪ್ರಿಯಾಂಕಾ

ಉಪೇಂದ್ರ ಅವರ ತಾಯಿ ಅನಸೂಯಮ್ಮ 'ಸ್ಪಾರ್ಕ್' ಚಿತ್ರದ 'ಮಧುರ ಮುಗುಳು‌ನಗೆ' ಹಾಡನ್ನು ಅನಾವರಣಗೊಳಿಸಿದರು.

Niranjan Sudhindra, Rachana Inder
ನಿರಂಜನ್ ಸುಧೀಂದ್ರ, ರಚನಾ ಇಂದರ್ (ETV Bharat)
author img

By ETV Bharat Entertainment Team

Published : September 3, 2026 at 2:02 PM IST

4 Min Read
Choose ETV Bharat

ಸ್ಯಾಂಡಲ್​ವುಡ್​ ರಿಯಲ್‌ ಸ್ಟಾರ್‌ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್‌ ಸುಧೀಂದ್ರ ಅಭಿನಯಿಸುತ್ತಿರುವ ಬಹುನಿರೀಕ್ಷಿತ ಚಿತ್ರ 'ಸ್ಪಾರ್ಕ್‌'. ಶೀರ್ಷಿಕೆಯಿಂದ ಗಮನ ಸೆಳೆಯುತ್ತಿದ್ದ ಚಿತ್ರವೀಗ ತನ್ನ ಚಿತ್ರೀಕರಣ ಪೂರ್ಣಗೊಳಿಸಿದ್ದು, ಬಿಡುಗಡೆಗೆ ಸಜ್ಜಾಗುತ್ತಿದೆ. ಡಿ.ಮಹಾಂತೇಶ್ ಹಂದ್ರಾಳ್ ನಿರ್ದೇಶನದ ಸಿನಿಮಾ ಈಗಾಗಲೇ ಒಂದು ಹಾಡು ಮತ್ತು ಟೀಸರ್ ಬಿಡುಗಡೆಗೊಳಿಸಿತ್ತು. ಇದೀಗ ಮತ್ತೊಂದು ಹಾಡು ಅನಾವರಣಗೊಂಡಿದ್ದು, ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಹೌದು, ಚಿತ್ರದ 'ಮಧುರ ಮುಗುಳು‌ನಗೆ' ಎಂಬ ಹಾಡು ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಚಿಕ್ಕಮ್ಮ, ನಟಿ ಪ್ರಿಯಾಂಕಾ ಉಪೇಂದ್ರ ಸೇರಿದಂತೆ ಕುಟುಂಬದ ಪ್ರಮುಖರೆಲ್ಲರೂ ಈವೆಂಟ್​ನಲ್ಲಿ ಹಾಜರಿದ್ದರು. ಖುದ್ದು ನಿರಂಜನ್ ಅವರ ಅಜ್ಜಿ (ಉಪೇಂದ್ರ ಅವರ ತಾಯಿ) ಅನಸೂಯಮ್ಮ ಈ ಹಾಡನ್ನು ಬಿಡುಗಡೆಗೊಳಿಸಿದ್ದು ವಿಶೇಷವಾಗಿತ್ತು. ಈ ಪ್ರೇಮಗೀತೆಯನ್ನು ಸಂಗೀತ ನಿರ್ದೇಶಕ ಸಚಿನ್ ಬಸ್ರೂರು ಅವರೇ ಹಾಡಿದ್ದಾರೆ. ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ.‌

Niranjan Sudhindra, Rachana Inder
ನಿರಂಜನ್ ಸುಧೀಂದ್ರ, ರಚನಾ ಇಂದರ್ (ETV Bharat)

ಹಾಡಿನ ಪ್ರದರ್ಶನದ ಬಳಿಕ ಮಾತನಾಡಿದ ಪ್ರಿಯಾಂಕಾ ಉಪೇಂದ್ರ, ನಾನು ವಿವಾಹವಾಗಿ ಮೊದಲ ಬಾರಿಗೆ ಉಪೇಂದ್ರ ಅವರ ಮನೆಗೆ ಬಂದಾಗ ನನ್ನನ್ನು ಸ್ವಾಗತಿಸಿದ್ದಂತಹ ಮಗು ಈತ (ನಿರಂಜನ್‌ ಸುಧೀಂದ್ರ). ಈಗ ನಟನಾಗಿ ನೋಡಲು ತುಂಬಾನೇ ಖುಷಿಯಾಗುತ್ತದೆ. ಈ ಹಾಡು ಬಹಳ ಚೆನ್ನಾಗಿದೆ. ಈ ಹಿಂದೆ ಇದೇ ಚಿತ್ರದ ಶಕಲಕ ಹಾಡು ತೆರೆಕಂಡಾಗ ರೀಲ್ಸ್ ಮಾಡುವ ಬಗ್ಗೆ ನಾನು ಮತ್ತು ಉಪ್ಪಿ ಮಾತನಾಡಿಕೊಂಡಿದ್ದೆವು. ಆದರೆ ನಮಗೆ ಸ್ಟೆಪ್ಸ್ ಹಾಕಲು ಅದಕ್ಕಿಂತ ಈ ಹಾಡು ಸುಲಭವಾದೀತು ಅಂತ ಅನಿಸಿದೆ. ಖಂಡಿತವಾಗಿ ರೀಲ್ಸ್ ಮಾಡುತ್ತೇವೆ. ನಿರಂಜನ್ ಜೊತೆ ನಾನು ಸಿನಿಮಾದಲ್ಲಿಯೂ ಕೆಲಸ ಮಾಡಿದ್ದೇನೆ. ನನ್ನ ಮಗನಿಗೂ ಅವನನ್ನು (ನಿರಂಜನ್‌ ಸುಧೀಂದ್ರ) ನೋಡಿ ಕಲಿಯಲು ಹೇಳುತ್ತಿರುತ್ತೇನೆ. ಹೀಗೆ ಸದಾ ಮಾದರಿಯಾಗಿರು'' ಎಂದು ಹಾರೈಸಿದರು.

ಡಿ.ಮಹಾಂತೇಶ್ ಹಂದ್ರಾಳ್ ನಿರ್ದೇಶನದ 'ಸ್ಪಾರ್ಕ್ ಚಿತ್ರ ಇದೇ ಸೆ.25ರಂದು ತೆರೆಗೆ ಬರಲಿದೆ. ಮಹಾಂತೇಶ್ ಅವರಿಗೆ ಆರಂಭಕಾಲದಲ್ಲಿ ತಮ್ಮ ತಂಡದಲ್ಲಿ ಅವಕಾಶ ನೀಡಿದ ನಿರ್ದೇಶಕ ದಯಾಳ್ ಪದ್ಮನಾಭನ್ ಮತ್ತು ಡಾರ್ಲಿಂಗ್ ಕೃಷ್ಣ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಆಗಮಿಸಿ ಚಿತ್ರದ ಯಶಸ್ಸಿಗೆ ಶುಭ ಕೋರಿದರು.

ಬಳಿಕ ಮಾತನಾಡಿದ ದಯಾಳ್ ಪದ್ಮನಾಭನ್, ''ನಾನು 'ಯೋಗರಾಜ್ ಬಟ್' ಎನ್ನುವ ಸಿನಿಮಾ ಮಾಡುವಾಗ ಅದರ ಡಿಜಿಟಲ್ ಪೋರ್ಶನ್ ಚಿತ್ರೀಕರಣಕ್ಕಾಗಿ ಪರದಾಡುತ್ತಿದ್ದೆ.‌ ಆಗ ನನಗೆ ಸಹಾಯಕರಾಗಿ ಬಂದವರು ಮಹಾಂತೇಶ್. ಹಾಡಿನಲ್ಲಿ ನಂದಿ ಹಿಲ್ಸ್ ಅನ್ನು ಇದುವರೆಗೆ ಕಂಡಿರದಷ್ಟು ವಿಭಿನ್ನವಾಗಿ ತೋರಿಸಿದ್ದಾರೆ. ಒಟ್ಟಿನಲ್ಲಿ ಈಗ ನಾನೇ ಹೆಮ್ಮೆ ಪಡುವಂಥ ಚಿತ್ರ ಮಾಡಿದ್ದಾರೆ. ಕನ್ನಡದ ಎರಡನೇ ಜನರೇಶನ್​​ನಲ್ಲಿ ನಾಯಕರಿಲ್ಲ ಎಂದು ಅಂದುಕೊಂಡಿದ್ದ ಸಂದರ್ಭದಲ್ಲಿ ಈ ಚಿತ್ರದ ನಾಯಕರಾಗಿರುವ ನಿರಂಜನ್ ಸುಧೀಂದ್ರ ಭರವಸೆಯ ಹೀರೋ ಅನಿಸಿದ್ದಾರೆ. ಅದೇ ರೀತಿ ಉಪೇಂದ್ರ ಅವರಿಗೆ ತಮ್ಮ ಅಣ್ಣ ಸುಧೀಂದ್ರ ಅವರೊಡನೆ ಇರುವ ಅನುಬಂಧ ನನಗೆ ಗೊತ್ತು. ಇನ್ನೂ, ಈ ಚಿತ್ರದಲ್ಲಿ ಪ್ರೇಮ್ ಅವರ ಹೊಸ ಲುಕ್ ಇಷ್ಟವಾಯಿತು. ನಾನು ಚೆನ್ನೈನಲ್ಲಿ ಇದ್ದರೂ ಕನ್ನಡ ಚಿತ್ರಗಳನ್ನು ಥಿಯೇಟರ್​ನಲ್ಲೇ ನೋಡುತ್ತಿರುತ್ತೇನೆ. ಕೆಲವೊಮ್ಮೆ ಸಿನಿಮಾದ ಪ್ರಚಾರ ಅತಿಯಾಗಿದೆ ಎಂದು ಅನಿಸುವುದಿದೆ. ಆದರೆ, ಈ ಚಿತ್ರದ ಪ್ರಚಾರ ಹಂತಹಂತವಾಗಿ ಕರಾರುವಕ್ಕಾಗಿ ನಡೆದಿದೆ. ವ್ಯಾಪಾರದ ವಿಚಾರದಲ್ಲಿ ಕನ್ನಡ ಸಿನಿಮಾ ಇಂದಿಗೂ ಕೆಳಹಂತದಲ್ಲಿದೆ. ಇಂಥ ಸಂದರ್ಭದಲ್ಲಿ ಇಷ್ಟು ಗುಣಮಟ್ಟದಲ್ಲಿ ಚಿತ್ರ ಮಾಡಿರುವ ನಿರ್ಮಾಪಕರಿಗೆ ಅಭಿನಂದನೆಗಳು'' ಎಂದು ತಿಳಿಸಿದರು.

Niranjan Sudhindra, Rachana Inder
ರಚನಾ ಇಂದರ್, ನಿರಂಜನ್ ಸುಧೀಂದ್ರ (ETV Bharat)

ಜನಪ್ರಿಯ ನಟ ಡಾರ್ಲಿಂಗ್ ಕೃಷ್ಣ ಮಾತನಾಡಿ, ''ನಿರಂಜನ್ ಸುಧೀಂದ್ರ ಅವರು ಸೋಶಿಯಲ್ ಮೀಡಿಯಾದಲ್ಲಿ ಸ್ಟಂಟ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಡ್ಯಾನ್ಸ್, ಫೈಟ್ ಎಂದು ಸಂಪೂರ್ಣವಾಗಿ ತಯಾರಿ ಪಡೆದಿರುವ ನಟ ಇವರು. ಕನ್ನಡದ ಹೃತಿಕ್ ರೋಶನ್ ಅಂತಾನೇ ಹೇಳಬಹುದು. ಹಾಡಿನಲ್ಲಿ ರಚನಾ ಜೊತೆಗೆ ಮುದ್ದಾದ ಕೆಮಿಸ್ಟ್ರಿ ಇದೆ'' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಚಿತ್ರದ ನಾಯಕ ನಿರಂಜನ್ ಸುಧೀಂದ್ರ ಮಾತನಾಡಿ, ''ನಾನು ಈ ಚಿತ್ರದಲ್ಲಿ ಮಾಧ್ಯಮದ ಪ್ರತಿನಿಧಿಯಾಗಿ ನಟಿಸಿದ್ದೇನೆ. ನನ್ನ ಮೇಲೆ ಚಿತ್ರತಂಡ ಇಟ್ಟಿರುವ ಭರವಸೆ ಕಂಡು ಸಂಬಳ ಮೀರಿ ಕೆಲಸ ಮಾಡಿದ್ದೇನೆ'' ಎಂದರು.

ನಿರಂಜನ್ ಜೋಡಿಯಾಗಿ ರಚನಾ ಇಂದರ್ ನಟಿಸಿದ್ದಾರೆ. ಈ ಚಿತ್ರದಲ್ಲಿ ತಮ್ಮ ಮೊದಲ ಶಾಟ್ ಇದೇ ಹಾಡಿಗಾಗಿ ತೆಗೆಯಲಾಗಿತ್ತು. ನಿರ್ದೇಶಕರ ಸೂಚನೆಯಂತೆ ಚಿತ್ರಕ್ಕಾಗಿ ಗುಂಗುರು ಕೂದಲು ಮಾಡಿಸಿಕೊಂಡಿದ್ದೇನೆ.‌ ಎಂಬಿಬಿಎಸ್ ವಿದ್ಯಾರ್ಥಿನಿಯ ಪಾತ್ರದಲ್ಲಿ ನಟಿಸಿದ್ದೇನೆ ಎಂದು ಮಾಹಿತಿ ನೀಡಿದರು.

Spark Film Team
ಸ್ಪಾರ್ಕ್ ಚಿತ್ರತಂಡಕ್ಕೆ ಪ್ರಿಯಾಂಕಾ ಉಪೇಂದ್ರ ಸಾಥ್ (ETV Bharat)

ಚಿತ್ರದಲ್ಲಿ ಖಳನಟನ ಪಾತ್ರವನ್ನು ಲವ್ಲಿಸ್ಟಾರ್ ಪ್ರೇಮ್ ನಿರ್ವಹಿಸಿದ್ದಾರೆ. ಪ್ರೇಮ್ ಪರವಾಗಿ ಆಗಮಿಸಿ ಮಾತನಾಡಿದ ಪತ್ನಿ ಜ್ಯೋತಿ ಮಾತನಾಡಿ, ಪ್ರೇಮ್ ಅವರಿಗೆ ಆ್ಯಕ್ಷನ್ ರೋಲ್ ಮಾಡಲು ಮೊದಲಿಂದಲೂ ಆಸಕ್ತಿ ಇತ್ತು. ಈ ಚಿತ್ರದ ಮೂಲಕ ಅದು ನೆರವೇರಿದೆ. ಮಾತ್ರವಲ್ಲ, ಈ ಚಿತ್ರಕ್ಕಾಗಿ ಅವರು ತುಂಬಾನೆ ತಯಾರಿ ಮಾಡಿಕೊಂಡಿದ್ದಾರೆ. ಎಂದಿಗೂ ಸಿಗರೇಟು ಸೇದದ ಅವರು ಪಾತ್ರಕ್ಕಾಗಿ ಧೂಮಪಾನ ಮಾಡಿದ್ದಾರೆ ಎಂದು ತಿಳಿಸಿದರು.

ನಟ ಧರ್ಮಣ್ಣ ಕಡೂರು ಮಾತನಾಡಿ, ನಿರ್ದೇಶಕರು ಎಲ್ಲವನ್ನೂ ಚೆನ್ನಾಗಿ ಯೋಜನೆ ಹಾಕಿಕೊಂಡು ಮಾಡಿದ್ದಾರೆ ಎಂದರು. ಬಳಿಕ ಮಾತನಾಡಿದ ನಿರ್ದೇಶಕ ಮಹಾಂತೇಶ್ ಈ ಹಾಡಿನ ಗುಣಮಟ್ಟದ ಹಾಗೆಯೇ ಚಿತ್ರವೂ ಮೂಡಿ ಬಂದಿದೆ. ಅದಕ್ಕೆ ಕಾರಣ ನಿರ್ಮಾಪಕರು ಎಂದರು. ಗುರುಗಳಾದ ದಯಾಳ್ ಅವರಿಂದ ಸಿನಿಮಾ ಮೇಕಿಂಗ್​​ನಲ್ಲಿ ಹಣ ಪೋಲು ಮಾಡದಿರುವುದನ್ನು ಮತ್ತು ಡಾರ್ಲಿಂಗ್ ಕೃಷ್ಣ ಅವರಿಂದ ಭಾವನೆಗಳನ್ನು ಪರದೆಯ ಮೇಲೆ ತೋರಿಸುವುದನ್ನು ಮಾದರಿಯಾಗಿ ತೆಗೆದುಕೊಂಡಿದ್ದಾಗಿ ತಿಳಿಸಿದರು.

Niranjan Sudhindra, Rachana Inder
ರಚನಾ ಇಂದರ್, ನಿರಂಜನ್ ಸುಧೀಂದ್ರ (ETV Bharat)

ಸ್ಪಾರ್ಕ್ ನಿರ್ಮಾಣದಲ್ಲಿ ಭಾಗಿಯಾಗಿರುವ ಅವಿನಾಶ್ ವಸಿಷ್ಠ ಮಾತನಾಡಿ, ನಾನು ಈಗಾಗಲೇ ಚಿತ್ರವನ್ನು ನೋಡಿದ್ದೇನೆ. ಎರಡು ನಿಮಿಷ ಕೂಡಾ ನನ್ನ ಗಮನ ಚಿತ್ರದಿಂದ ಹೊರಗೆ ಬಂದಿಲ್ಲ. ಮಕ್ಕಳಿಂದ ಹಿರಿಯರ ತನಕ ಎಲ್ಲರೂ ಮೆಚ್ಚುವಂಥ ಚಿತ್ರ ಇದು ಎಂದು ಸರ್ಟಿಫಿಕೇಟ್ ನೀಡಿದರು.

ಇದನ್ನೂ ಓದಿ: ಟಾಕ್ಸಿಕ್​​ಗೆ ಫೈಟ್​ ಕೊಡುತ್ತಿರುವ 'ಹನುಮಾನ್ ಅಂಶ್'ನ ವಿದೇಶಿ ವಿತರಣೆ ಹಕ್ಕು ಪಡೆದ ಕೆಜಿಎಫ್​ ಮೇಕರ್ಸ್ ಹೊಂಬಾಳೆ ಫಿಲ್ಮ್ಸ್

ನಿರ್ಮಾಪಕಿ ಡಾಕ್ಟರ್ ಗರಿಮಾ ಮಾತನಾಡಿ, ತಾವು ಮಹಾಂತೇಶ್ ಅವರನ್ನು ನಿರ್ದೇಶಕರಾಗಿ ಆಯ್ಕೆ ಮಾಡುವ ಮೊದಲು ಅರವತ್ತರಷ್ಟು ಮಂದಿಯಲ್ಲಿ ಮಾತನಾಡಿದ್ದೆ.‌ ಅದೇ ರೀತಿ 15 ಮಂದಿ ನಾಯಕರಲ್ಲಿ ಮಾತನಾಡಿದ ಬಳಿಕ ನಿರಂಜನ್ ಅವರನ್ನು ಆಯ್ಕೆ ಮಾಡಿದ್ದೇವೆ. ವೈದ್ಯಕೀಯರಂಗದಿಂದ ಬಂದ ನಾನು ಈಗ ಸಿನಿಮಾ‌ ಮಾಡಲು ಕಲಿತೆ ಎಂದರು.

ಇದನ್ನೂ ಓದಿ: ದಿ ವಿಲನ್ ಬಳಿಕ ಮತ್ತೆ ಒಂದಾದ ಕಿಚ್ಚ-ಜೋಗಿ ಪ್ರೇಮ್​: 'ಇದು ಫ್ಯಾಮಿಲಿ ಮ್ಯಾಟರ್​' - ಈ ದಿನಾಂಕಕ್ಕೆ ಮಹತ್ವದ ಘೋಷಣೆ

ಸದ್ಯ ಹಾಡುಗಳಿಂದ ಗಮನ ಸೆಳೆಯುತ್ತಿರುವ ಈ ಚಿತ್ರ ಸಪ್ಟೆಂಬರ್ 25ರಂದು ತೆರೆಕಾಣಲಿದೆ.