ETV Bharat / entertainment

ಅನ್​ಸ್ಟಾಪಬಲ್​ ರಶ್ಮಿಕಾ: ನವವಧು ಕೈಯಲ್ಲಿದೆ ಬರೋಬ್ಬರಿ 12 ಸಿನಿಮಾ; ವೃತ್ತಿಗೆ ಮದುವೆ ಅಡ್ಡಿಯಾಗೋಲ್ಲವೆಂದ್ರು ಕೊಡಗಿನ ಬೆಡಗಿ

2025ರಲ್ಲಿ ಬ್ಯಾಕ್​ ಟು ಬ್ಯಾಕ್​ 5 ಹಿಟ್ ಸಿನಿಮಾಗಳನ್ನು ಕೊಟ್ಟ ರಶ್ಮಿಕಾ ಮಂದಣ್ಣ ಅವರ ಕೈಯಲ್ಲಿ ಸುಮಾರು 12 ಚಿತ್ರಗಳಿವೆ. ಇದು ಇಂದಿನ ನಟಿಯರು ಮದುವೆಯ ನಂತರವೂ ವೃತ್ತಿಪರವಾಗಿ ಅಭಿವೃದ್ಧಿ ಹೊಂದುತ್ತಿದ್ದಾರೆ ಎಂಬುದನ್ನು ಸಾಬೀತುಪಡಿಸಿದೆ.

Rashmika Mandanna
ನಟಿ ರಶ್ಮಿಕಾ ಮಂದಣ್ಣ (Photo: ANI)
author img

By ETV Bharat Entertainment Team

Published : February 27, 2026 at 10:42 AM IST

4 Min Read
Choose ETV Bharat

ಭಾರತೀಯ ಚಿತ್ರರಂಗದಲ್ಲಿ ಮದುವೆ ಎಂದರೆ ನಟಿಯ ವೃತ್ತಿಜೀವನದ ಅಂತ್ಯ ಎಂಬ ಕಾಲವಿತ್ತು. ಅನೇಕ ಪ್ರಮುಖ ನಟಿಯರು ತಮ್ಮ ವಿವಾಹದ ಬಳಿಕ ಬಿಗ್​ ಸ್ಕ್ರೀನ್​​ನಿಂದ ನಿಧಾನವಾಗಿ ಕಣ್ಮರೆಯಾದರು. ಕೆಲವರು ವೈಯಕ್ತಿಕ ಜೀವನಕ್ಕೆ ಹೆಚ್ಚಿನ ಒತ್ತು ಕೊಟ್ರೆ, ಹಲವರಿಗೆ ಉತ್ತಮ ಪಾತ್ರಗಳು, ಅವಕಾಶಗಳು ಸಿಗಲಿಲ್ಲ ಎಂಬ ಮಾತಿದೆ. ಆದರೆ ಇಂದು ಇಂಥ ವಿಷಯಗಳಲ್ಲಿ ಬದಲಾವಣೆ, ಬೆಳವಣಿಗೆಯಾಗಿದೆ. ಈ ಬದಲಾವಣೆ ಪ್ರವೃತ್ತಿಯ ಒಂದು ಪ್ರಮುಖ, ಉತ್ತಮ ಉದಾಹರಣೆ ಎಂದರೆ 'ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ'.

ಕನ್ನಡ ಚಿತ್ರರಂಗದಿಂದ ವೃತ್ತಿಜೀವನ ಆರಂಭಿಸಿ, ಭಾರತದ ಬಹುಭಾಷೆಗಳಲ್ಲಿ ಬೇಡಿಕೆ ಹೊಂದಿರುವ ನ್ಯಾಷನಲ್​​ ಕ್ರಶ್​ ಖ್ಯಾತಿಯ ರಶ್ಮಿಕಾ ಮಂದಣ್ಣ ಪ್ರಸ್ತುತ ಸುಮಾರು 12 ಪ್ರಾಜೆಕ್ಟ್​ಗಳನ್ನು ಹೊಂದಿದ್ದಾರೆ. ಈ ಸಂಖ್ಯೆಯೇ ಬಹಳಷ್ಟು ಹೇಳುತ್ತಿವೆ. ಚಲನಚಿತ್ರೋದ್ಯಮ ನಿಧಾನವಾಗಿ ಹೇಗೆ ಬದಲಾಗುತ್ತಿದೆ ಎಂಬುದನ್ನು ಈ ಸಂಖ್ಯೆ ಎತ್ತಿ ಹಿಡಿದಿದೆ. ವೈವಾಹಿಕ ಜೀವನದ ಜೊತೆಗೆ ಪ್ರತಿಭೆ, ಸಾಮರ್ಥ್ಯ ಪ್ರದರ್ಶನ, ಸಾಧನೆಯ ಸಾಕಾರವೂ ಬಹಳ ಮುಖ್ಯ ಎಂಬುದನ್ನು ಇದು ಒತ್ತಿ ಹೇಳುತ್ತಿದೆ.

ಈ ಹಿಂದೆ, ಹಸೆಮಣೆಯೇರಿದ ನಂತರ ಹಲವು ಜನಪ್ರಿಯ ನಟಿಯರು ಕ್ಯಾಮರಾದಿಂದ ಹಿಂದೆ ಸರಿದರು. ಅನುಷ್ಕಾ ಶರ್ಮಾ, ರಾಧಿಕಾ ಪಂಡಿತ್​​​, ಆಸಿನ್ ತೊಟ್ಟುಂಕಲ್ ಮತ್ತು ಇಲಿಯಾನಾ ಡಿ'ಕ್ರೂಜ್ ಅವರಂತೆ ಖ್ಯಾತ ನಟಿಯರು ಮದುವೆಯ ನಂತರ ಚಲನಚಿತ್ರಗಳನ್ನು ತೊರೆದರು. ಟ್ವಿಂಕಲ್ ಖನ್ನಾ ಬೇರೆಯದೇ ಕ್ಷೇತ್ರವನ್ನು ಆರಿಸಿಕೊಂಡರು. ಬರವಣಿಗೆ ಮತ್ತು ವ್ಯವಹಾರದತ್ತ ತಮ್ಮ ಗಮನಹರಿಸಿದರು. ಮಾಧುರಿ ದೀಕ್ಷಿತ್ ಸ್ವಲ್ಪ ಕಾಲ ವಿದೇಶಕ್ಕೆ ತೆರಳಿದ್ದರು. ಐಶ್ವರ್ಯಾ ರೈ ಬಚ್ಚನ್​ ಅವರ ಸಿನಿಮಾ ಸಂಖ್ಯೆ ಕಡಿಮೆಯಾಯಿತು. ಭಾಗ್ಯಶ್ರೀ, ಗಾಯತ್ರಿ ಜೋಶಿ ಮತ್ತು ಆಯೇಷಾ ಟಕಿಯಾ ಕೂಡಾ ಮದುವೆಯ ನಂತರ ನಿಯಮಿತ ನಟನಾ ಯೋಜನೆಗಳಿಂದ ದೂರ ಸರಿದರು. ಹಲವು ವರ್ಷಗಳವರೆಗೆ, ಈ ಪ್ರವೃತ್ತಿ ಸಾಮಾನ್ಯ ಎಂದೇ ಭಾವಿಸಲಾಗಿತ್ತು. ಪುರುಷ ಕಲಾವಿದರು ಬಾಕ್ಸ್​ ಆಫೀಸ್​ನಲ್ಲಿ ಆಳ್ವಿಕೆ ನಡೆಸುತ್ತಿರುವಾಗ ನಾಯಕಿಯರು ಮಸುಕಾಗುವ, ನಿಧಾನವಾಗಿ ಹಿಂದೆ ಸರಿಯುವ ಪ್ರವೃತ್ತಿಗೆ ಪ್ರೇಕ್ಷಕರು ಒಗ್ಗಿಕೊಂಡಿದ್ದರು.

'ಕಾಕ್‌ಟೇಲ್ 2': ಆದರೆ, ಕರುನಾಡಿನ ರಶ್ಮಿಕಾ ಮಂದಣ್ಣ ಅವರ ಪ್ರಯಾಣವು ವಿಭಿನ್ನ, ಹೊಸ ಕಥೆಯನ್ನೇ ಹೇಳುತ್ತಿದೆ. 'ಕಾಕ್‌ಟೇಲ್ 2' ಅನ್ನು ಪೂರ್ಣಗೊಳಿಸಿದ್ದು, ರಶ್ಮಿಕಾ ಈಗಾಗಲೇ ತಮ್ಮ ಮುಂದಿನ ದೊಡ್ಡ ಸಿನಿಮಾಗಳ ಬಿಡುಗಡೆಗಳಿಗೆ ತಯಾರಿ ನಡೆಸುತ್ತಿದ್ದಾರೆ. ಕಾಕ್‌ಟೇಲ್ 2ನಲ್ಲಿ ಶಾಹಿದ್ ಕಪೂರ್ ಮತ್ತು ಕೃತಿ ಸನೋನ್​ ಜೊತೆ ತೆರೆಹಂಚಿಕೊಂಡಿದ್ದು, ಹೋಮಿ ಅದಜಾನಿಯಾ ನಿರ್ದೇಶಿಸಿದ್ದಾರೆ. ಚಿತ್ರೀಕರಣ ಇತ್ತೀಚೆಗಷ್ಟೇ ಮುಕ್ತಾಯಗೊಂಡಿದೆ. ಸೈಫ್ ಅಲಿ ಖಾನ್, ದೀಪಿಕಾ ಪಡುಕೋಣೆ ಮತ್ತು ಡಯಾನಾ ಪೆಂಟಿ ನಟಿಸಿದ ಮೂಲ ಕಾಕ್‌ಟೇಲ್ (2012) ಆಧುನಿಕ ಪ್ರೇಮಕಥೆಯಾಗಿದ್ದು, ಭಾರಿ ಯಶಸ್ಸನ್ನು ಕಂಡಿತ್ತು. ಇದರ ಮುಂದುವರಿದ ಭಾಗ ಇದೇ ವರ್ಷ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಶಾಹಿದ್ ಜೊತೆ ರೊಮ್ಯಾಂಟಿಕ್​ ಡ್ರಾಮಾ: ಕಾಕ್ಟೇಲ್ 2 ನಂತರ ರಶ್ಮಿಕಾ ಮತ್ತು ಶಾಹಿದ್ ಮತ್ತೊಂದು ರೊಮ್ಯಾಂಟಿಕ್​ ಡ್ರಾಮಾಗಾಗಿ ಮತ್ತೆ ಒಂದಾಗುವ ಸಾಧ್ಯತೆಗಳಿವೆ ಎಂದು ವರದಿಗಳು ಸೂಚಿಸಿವೆ. ಸ್ಟ್ರಾಂಗ್​ ಆನ್​​ ಸ್ಕ್ರೀನ್​ ಕೆಮಿಸ್ಟ್ರಿ ಮೇಲೆ ಚಿತ್ರತಂಡ ಕೆಲಸ ಮಾಡುತ್ತಿದೆ ಎಂದು ಹೇಳಲಾಗಿದೆ. ರಶ್ಮಿಕಾ ಅವರ ಸ್ಟಾರ್ ಪವರ್‌ನಲ್ಲಿ ಚಿತ್ರರಂಗ ಎಷ್ಟು ನಂಬಿಕೆಯಿಟ್ಟಿದೆ ಎಂಬುದನ್ನು ಇದು ಒತ್ತಿ ಹೇಳಿದೆ.

ರಣಬಾಲಿ: ಇದಲ್ಲದೇ ಪತಿ ವಿಜಯ್ ದೇವರಕೊಂಡ ಜೊತೆ 'ರಣಬಾಲಿ'ಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಬ್ರಿಟಿಷ್ ಆಳ್ವಿಕೆ ಕಾಲದ ಒಂದು ಪೀರಿಯಾಡಿಕಲ್​ ಆ್ಯಕ್ಷನ್ ಡ್ರಾಮಾ ಆಗಿದೆ. ಇದು ವಸಾಹತುಶಾಹಿ ದಬ್ಬಾಳಿಕೆ ಮತ್ತು ಶೌರ್ಯದ ಬಗ್ಗೆ ಹೇಳಲಿದ್ದು, ವಿರೋಶ್​ ಜೋಡಿಯ ಮೂರನೇ ಸಿನಿಮಾ ಆಗಲಿದೆ.

ಪುಷ್ಪ 3: ಅಲ್ಲು ಅರ್ಜುನ್ ಜೊತೆಗೆ 'ಪುಷ್ಪ 3: ದಿ ರಾಂಪೇಜ್‌'ನಲ್ಲಿ ಶ್ರೀವಲ್ಲಿ ಪಾತ್ರದಲ್ಲಿ ಮರಳಲಿದ್ದಾರೆ. ನಿರ್ದೇಶಕ ಸುಕುಮಾರ್ ಅವರು ಮೂರನೇ ಭಾಗದಲ್ಲಿ ಪಾತ್ರವನ್ನು ವಿಸ್ತರಿಸಿದ್ದಾರೆ ಎಂದು ವರದಿಯಾಗಿದೆ. ಮಾಧ್ಯಮ ವರದಿಗಳು, ನಟಿಯ ಸ್ಕ್ರೀನ್​ ಸ್ಪೇಸ್ ಈ ಬಾರಿ ನಾಯಕನ ಸ್ಕ್ರೀನ್​ ಸ್ಪೇಸ್​ಗೆ ಸಮನಾಗಿರಬಹುದು ಎಂದು ಹೇಳಿವೆ. ಇದು ಮಾಸ್ ಆ್ಯಕ್ಷನ್ ಫ್ರಾಂಚೈಸಿಯಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ.

ಅಟ್ಲೀ ನಿರ್ದೇಶನದ ಸಿನಿಮಾದಲ್ಲಿ ರಶ್ಮಿಕಾ: ಅಟ್ಲೀ ನಿರ್ದೇಶನದ 'AA22xA6' ಎಂಬ ತಾತ್ಕಾಲಿಕ ಶೀರ್ಷಿಕೆಯ ಬಿಗ್ ಬಜೆಟ್ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ವರದಿಗಳ ಪ್ರಕಾರ, ನಟಿ ದಿಟ್ಟ ನಕಾರಾತ್ಮಕ ಪಾತ್ರವನ್ನು ನಿರ್ವಹಿಸಬಹುದು. ಇದು ನಿಜವಾದರೆ, ರಶ್ಮಿಕಾರ ಮುದ್ದಿನ ಹುಡುಗಿ ಇಮೇಜ್‌ನಿಂದ ಪ್ರಮುಖ ಬದಲಾವಣೆ ಆಗಲಿದೆ.

ಅನಿಮಲ್ ಪಾರ್ಕ್: ಬ್ಲಾಕ್​ಬಸ್ಟರ್ ಅನಿಮಲ್ ಚಿತ್ರದ ಮುಂದುವರಿದ ಭಾಗವಾದ 'ಅನಿಮಲ್ ಪಾರ್ಕ್' ಸಿನಿಮಾ ಕೂಡಾ ನಟಿಯ ಕೈಯಲ್ಲಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರದಲ್ಲಿ ಬಾಲಿವುಡ್​ ಸೂಪರ್ ಸ್ಟಾರ್ ರಣ್​​ಬೀರ್ ಕಪೂರ್ ಅವರೊಂದಿಗೆ ಮತ್ತೆ ಒಂದಾಗುತ್ತಿದ್ದಾರೆ. ರಶ್ಮಿಕಾ ಈಗಾಗಲೇ ಈ ಮುಂದುವರಿದ ಭಾಗವನ್ನು "ಮ್ಯಾಡ್​ನೆಸ್​" ಎಂದು ವರ್ಣಿಸಿದ್ದಾರೆ. ಸ್ಕ್ರಿಪ್ಟ್‌ನ ಕೇವಲ ಒನ್​ ಲೈನ್​​​​ ತಮ್ಮನ್ನು ಮತ್ತೆ ಚಿತ್ರಕ್ಕೆ ಮರಳಲು ಮನವೋಲಿಸಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಮೈಸಾ: ನಟಿಯ ಮುಂಬರುವ ಸಿನಿಮಾಗಳ ಪೈಕಿ 'ಮೈಸಾ' ಎಂಬ ರಾ ಆ್ಯಕ್ಷನ್​​ ಥ್ರಿಲ್ಲರ್ ಇದ್ದು, ಇದರಲ್ಲವರು ಉಗ್ರ ಬುಡಕಟ್ಟು ಮಹಿಳೆ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈಗಾಗಲೇ ನಟಿಯ ಫಸ್ಟ್​ ಲುಕ್​​​ ಅನಾವರಣಗೊಂಡಿದ್ದು, ನಿರೀಕ್ಷೆಗಳು ದೊಡ್ಡ ಮಟ್ಟದಲ್ಲಿದೆ.

ಆರ್‌ಸಿ 17: ಆರ್​ಆರ್​ಆರ್​ ಸ್ಟಾರ್ ರಾಮ್ ಚರಣ್ ಜೊತೆ ಬಹುನಿರೀಕ್ಷಿತ 'ಆರ್‌ಸಿ 17' ಚಿತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇದೊಂದು ಬಿಗ್​ ಬಜೆಟ್​ನ​​ ದೇಶಭಕ್ತಿ ಡ್ರಾಮಾವಾಗುವ ನಿರೀಕ್ಷೆಯಿದೆ.

ಅನುರಾಗ್ ಬಸು ಸಿನಿಮಾದಲ್ಲಿ ಮಂದಣ್ಣ: ಬಾಲಿವುಡ್​ನ ಖ್ಯಾತ ನಿರ್ದೇಶಕ ಅನುರಾಗ್ ಬಸು ಅವರೊಂದಿಗಿನ ಯೋಜನೆಯಲ್ಲಿ ನಟಿ ಕೈ ಜೋಡಿಸಿದ್ದಾರೆ.

ಏಕ್ ಸಾಥ್ ದೋ ದೋ: ರಶ್ಮಿಕಾ 'ಏಕ್ ಸಾಥ್ ದೋ ದೋ' ಶೀರ್ಷಿಕೆಯ ಚಿತ್ರದಲ್ಲೂ ನಟಿಸಿದ್ದಾರೆ. ಆದಾಗ್ಯೂ, ಬಹಳ ಸಮಯದಿಂದ ಈ ಸಿನಿಮಾ ಬಗ್ಗೆ ಯಾವುದೇ ಅಧಿಕೃತ ಅಪ್ಡೇಟ್ ಬಂದಿಲ್ಲ.

ಸಾಯಿ ಶ್ರೀನಿವಾಸ್ ಬೆಲ್ಲಂಕೊಂಡ ಜೊತೆ ಸ್ಕ್ರೀನ್​ ಶೇರ್: ಕೆ.ಎಸ್ ನಿರ್ದೇಶನದ ತೆಲುಗು ಬಯೋಪಿಕ್ ಸ್ಟುವರ್ಟ್‌ಪುರಂ ಡೊಂಗಾದಲ್ಲಿ ಸಾಯಿ ಶ್ರೀನಿವಾಸ್ ಬೆಲ್ಲಂಕೊಂಡ ಅವರೊಂದಿಗೆ ರಶ್ಮಿಕಾ ನಟಿಸುವುದಾಗಿ ಘೋಷಿಸಲಾಗಿದೆ. ಇದು ಕುಖ್ಯಾತ ಕಳ್ಳ ಟೈಗರ್ ನಾಗೇಶ್ವರ ರಾವ್ ಅವರ ಜೀವನವನ್ನು ಆಧರಿಸಿದೆ.

ರೈನ್‌ಬೋ: ಇದಲ್ಲದೇ, ಅವರು ರೈನ್‌ಬೋ ಚಿತ್ರವನ್ನು ಸಹ ನಿರ್ವಹಿಸುತ್ತಿದ್ದಾರೆ. ತೆಲುಗು-ತಮಿಳು ದ್ವಿಭಾಷಾ ಫ್ಯಾಂಟಸಿ ರೊಮ್ಯಾಂಟಿಕ್​ ಡ್ರಾಮಾ ಈಗಾಗಲೇ ನಿರ್ಮಾಣ ಹಂತದಲ್ಲಿದೆ. ಇದೊಂದು ಮಹಿಳಾ ಪ್ರದಾನ ಸಿನಿಮಾವಾಗಿದೆ.

ಇದನ್ನೂ ಓದಿ: ಶೂಟಿಂಗ್​ ವೇಳೆ ಭೇಟಿ, ಸ್ನೇಹ, ಪ್ರೀತಿ, ವಿವಾಹ: ವಿಜಯ್​ ರಶ್ಮಿಕಾಗೂ ಮೊದಲು ಸೆಟ್​​​ನಲ್ಲಿ ಪ್ರೀತಿಸಿ ಮದುವೆಯಾದ ಸೆಲೆಬ್ರಿಟಿಗಳಿವರು

ಹೀಗೆ ರಶ್ಮಿಕಾ ಮಂದಣ್ಣ ಕೈಯಲ್ಲಿ ವಿವಿಧ ಜಾನರ್​ನ ಹಲವು ಸಿನಿಮಾಗಳಿವೆ. ಒಂದೇ ರೀತಿಯ ಪಾತ್ರಕ್ಕೆ ಸಿಲುಕಿಕೊಳ್ಳದೇ, ರೊಮ್ಯಾಂಟಿಂಕ್, ಆ್ಯಕ್ಷನ್, ಪೀರಿಯಾಡಿಕಲ್​ ಡ್ರಾಮಾ, ಥ್ರಿಲ್ಲರ್ ಮತ್ತು ಎಕ್ಸ್​​ಪರಿಮೆಂಟಲ್​​ ಸಿನಿಮಾಗಳನ್ನೂ ಮಾಡುತ್ತಿದ್ದಾರೆ. ಸೌಂದರ್ಯ ಸ್ಪರ್ಧೆಯಲ್ಲಿ ಗೆಲ್ಲುವುದರಿಂದ ಹಿಡಿದು "ಪ್ಯಾನ್-ಇಂಡಿಯಾ ನಟಿ"ಯಾಗುವವರೆಗಿನ ಅವರ ಪ್ರಯಾಣವು ಸ್ಪೂರ್ತಿದಾಯಕ. ಕನ್ನಡ ಚಿತ್ರ ಕಿರಿಕ್ ಪಾರ್ಟಿಯೊಂದಿಗೆ ವೃತ್ತಿಜೀವನ ಪ್ರಾರಂಭಿಸಿ, ತೆಲುಗಿನ ಗೀತಾ ಗೋವಿಂದಮ್ ಮೂಲಕ ಭಾರಿ ಖ್ಯಾತಿ ಗಳಿಸಿ, ಕಾಲಾನಂತರದಲ್ಲಿ ಬಹು ಭಾಷೆಗಳಲ್ಲಿ ಸಿನಿಮಾ, ಅಭಿಮಾನಿಗಳನ್ನು ಸಂಪಾದಿಸಿದರು. ಇಂದು ದಕ್ಷಿಣ ಚಿತ್ರರಂಗ ಮತ್ತು ಬಾಲಿವುಡ್ ಎರಡರಲ್ಲೂ ಪ್ರೇಕ್ಷಕರನ್ನು ಆಕರ್ಷಿಸಬಲ್ಲ ಕೆಲವೇ ನಟಿಯರ ಪೈಕಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಮುಂದಿನ ಸಿನಿಮಾಗಳಿಗಾಗಿ ಅಭಿಮಾನಿಗಳು ಕಾತರರಾಗಿದ್ದಾರೆ.

ಇದನ್ನೂ ಓದಿ: ರಶ್ಮಿಕಾರನ್ನು ಮದುವೆಯಾಗಲು ಒಮ್ಮೆ 'ಭಯಪಟ್ಟಿದ್ದ' ವಿಜಯ್ ಈಗ 'ನನ್ನ ಹೆಂಡತಿ' ಎಂದು ಪರಿಚಯಿಸಿದ್ರು!