ETV Bharat / entertainment

ಬೆಳಗಾವಿ ಜೊತೆ ನಾನಾ ನಂಟು: 2 ತಿಂಗಳು ಇಲ್ಲೇ ವಾಸ್ತವ್ಯ; ಬೆಳಗಾವಿ ಮಟನ್, ರೊಟ್ಟಿ ಊಟ ಇಷ್ಟಪಟ್ಟಿದ್ದ ನಟಸಾಮ್ರಾಟ್!

ನಾನಾ ಪಾಟೇಕರ್ ಅವರ ಪ್ರಹಾರ ಸಿನಿಮಾದ ಪ್ರಮುಖ ದೃಶ್ಯಾವಳಿಗಳನ್ನು ಬೆಳಗಾವಿಯ ಮರಾಠಾ ಲಘು ಪದಾತಿದಳದ ಕಮಾಂಡೋ ತರಬೇತಿ ಕೇಂದ್ರದಲ್ಲಿ ಚಿತ್ರಿಕರಿಸಲಾಗಿತ್ತು. ವರದಿ: ಸಿದ್ದನಗೌಡ ಪಾಟೀಲ್

NANA PATEKAR HAD SPECIAL CONNECTION WITH BELAGAVI: PRAHAAR WAS SHOT HERE
ನಾನಾ ಪಾಟೇಕರ್ ಅವರು ಬೆಳಗಾವಿಗೆ ಭೇಟಿ ನೀಡಿದ ಸಂದರ್ಭ (ETV Bharat)
author img

By ETV Bharat Karnataka Team

Published : October 9, 2026 at 4:28 PM IST

3 Min Read
Choose ETV Bharat

ಬೆಳಗಾವಿ: ಭಾರತೀಯ‌ ಚಿತ್ರರಂಗ ಕಂಡ ಅದ್ಭುತ ನಟ ನಾನಾ ಪಾಟೇಕರ್ ಇನ್ನಿಲ್ಲ. ಆದರೆ, ಅವರ ಅಭಿನಯ, ನಟಿಸಿದ ಪಾತ್ರ, ಮಾಡಿದ ಸಾಮಾಜಿಕ ಕಾರ್ಯಗಳು ಎಂದೆಂದಿಗೂ ಜೀವಂತ. ಈ ಮೇರು ನಟ ಬೆಳಗಾವಿ ಜೊತೆಗೆ ನಿಕಟ ಬಾಂಧವ್ಯ ಹೊಂದಿದ್ದರು. ಅಲ್ಲದೇ ಅವರ ನಿರ್ದೇಶನದ ಮೊದಲ ಚಿತ್ರ ‘ಪ್ರಹಾರ-ದಿ ಫೈನಲ್ ಅಟ್ಯಾಕ್’ ಚಿತ್ರ ಶೂಟಿಂಗ್ ಆಗಿದ್ದು ಕೂಡ ಇಲ್ಲೇ!

ಭಾರತೀಯ ಸೇನೆಯಲ್ಲಿ ಕಮಾಂಡೋ ಪಡೆಯ ಅತ್ಯಂತ ಕಠಿಣ ತರಬೇತಿಯನ್ನು ಆಧರಿಸಿ ತಯಾರಿಸಿದ ಸಿನಿಮಾ ಪ್ರಹಾರದ ಪ್ರಮುಖ ದೃಶ್ಯಾವಳಿಗಳನ್ನು ಬೆಳಗಾವಿಯ ಮರಾಠಾ ಲಘು ಪದಾತಿದಳದ ಕಮಾಂಡೋ ತರಬೇತಿ ಕೇಂದ್ರದಲ್ಲಿ ಚಿತ್ರಿಕರೀಸಲಾಗಿತ್ತು. ರಕ್ಷಣಾ ಸಚಿವಾಲಯದಿಂದ ಅನುಮತಿ ಪಡೆದು, ಇದೇ ಕೇಂದ್ರದಲ್ಲಿ ಕಮಾಂಡೋ ತರಬೇತಿ ಪಡೆದು, ಮೇಜರ್ ಪ್ರತಾಪ್ ಚೌಹಾಣ ಪಾತ್ರಕ್ಕೆ ನಾನಾ ಪಾಟೇಕರ್ ಸಿದ್ಧವಾಗಿದ್ದರು.

ಬೆಳಗಾವಿ ಜೊತೆ ನಾನಾ ನಂಟು: 2 ತಿಂಗಳು ಇಲ್ಲೇ ವಾಸ್ತವ್ಯ; ಬೆಳಗಾವಿ ಮಟನ್, ರೊಟ್ಟಿ ಊಟ ಇಷ್ಟಪಟ್ಟಿದ್ದ ನಟಸಾಮ್ರಾಟ್! (ETV Bharat)

ಇನ್ನು ಶೂಟಿಂಗ್ ಸಂದರ್ಭದಲ್ಲಿ ಎರಡು ತಿಂಗಳಿಗೂ ಹೆಚ್ಚು ದಿನ ಕ್ಯಾಂಪ್‌ನಲ್ಲಿರುವ ಗ್ರೀನ್ ಹೋಟೆಲ್‌ನಲ್ಲಿ ನಾನಾ ಪಾಟೇಕರ್ ವಾಸ್ತವ್ಯ ಹೂಡಿದ್ದರು. ಈ ಅವಧಿಯಲ್ಲಿ ಬೆಳಗಾವಿಯ ಹಲವು ಜನರನ್ನು ತಮ್ಮ ಸ್ನೇಹಿತರನ್ನಾಗಿ ಮಾಡಿಕೊಂಡಿದ್ದರು. ಅದಾದ ಬಳಿಕ ಸಮಯ ಸಿಕ್ಕಾಗಲೆಲ್ಲಾ ತಮ್ಮ ಸ್ನೇಹಿತರನ್ನು ಭೇಟಿ ಆಗಲು ಬೆಳಗಾವಿಗೆ ಬರುತ್ತಿದ್ದರು. ಮುಂದೆ ಕನ್ನಡದ ಯಕ್ಷ ಚಿತ್ರದ ಚಿತ್ರೀಕರಣಕ್ಕಾಗಿ ಮತ್ತೆ ಬೆಳಗಾವಿಗೆ ಬಂದಿದ್ದರು. ಕಿತ್ತೂರು ಕೋಟೆಯಲ್ಲಿ ಈ ಸಿನಿಮಾದ ಕೆಲ ದೃಶ್ಯಗಳ ಶೂಟಿಂಗ್ ಮಾಡಲಾಗಿದೆ. ಕೊನೆಯದಾಗಿ 2025 ಜೂನ್ 25ರಂದು ಇಲ್ಲಿನ ಖಾಸಗಿ ಆಸ್ಪತ್ರೆಯೊಂದರ ಉದ್ಘಾಟನೆಗೆ ಬಂದಿದ್ದರು.‌ ಇದೇ ಅವರ ಬೆಳಗಾವಿ ಅಂತಿಮ‌ ಭೇಟಿ ಆಗಿದೆ.

'ಐಡಿಯಲ್ ಸಲೂನ್‌' ಮೆಚ್ಚಿದ್ದ ನಾನಾ: ಪ್ರಹಾರ ಸಿನಿಮಾದಲ್ಲಿ ಕಮಾಂಡೋ ಪ್ರಶಿಕ್ಷಣಾರ್ಥಿಗಳ ಕಟಿಂಗ್ ಮಾಡುವ ದೃಶ್ಯ ಬರುತ್ತದೆ. ಇದರಲ್ಲಿ ಬೆಳಗಾವಿ ಕ್ಯಾಂಪ್ ನಲ್ಲಿರುವ ಐಡಿಯಲ್ ಸಲೂನ್‌ನ ಅರುಣ ಮಾನೆ ಮತ್ತು ಪ್ರಕಾಶ ಮಾನೆ ಸೋದರರು ಕೂಡ ನಟಿಸಿದ್ದಾರೆ. ಸಿನಿಮಾ ಶೂಟಿಂಗ್ ಸಿದ್ಧತೆಗೆ ಬಂದ ವೇಳೆ ನಾನಾ ಪಾಟೇಕರ್ ಇದೇ ಸಲೂನ್ ನಲ್ಲಿ ಸೇನಾಧಿಕಾರಿ ಪಾತ್ರದ ರೀತಿಯ ಕಟಿಂಗ್ ಮಾಡಿಸಿಕೊಂಡಿದ್ದರು. ಬಳಿಕ ಚಿತ್ರೀಕರಣ ಶುರುವಾದ ಮೇಲೆ ಎಲ್ಲ ಪಾತ್ರಧಾರಿಗಳ ಕೇಶವಿನ್ಯಾಸವನ್ನು ಇದೇ ಮಾನೆ ಬ್ರದರ್ಸ್ ಕೈಯಿಂದ ಮಾಡಿಸಿದ್ದರು. ಅಲ್ಲದೇ ಅವರಲ್ಲಿನ ವೃತ್ತಿಕೌಶಲ ಗುರುತಿಸಿ, ಮಾನೆ ಸಹೋದರರಿಗೂ ಪ್ರಹಾರ ಸಿನಿಮಾದಲ್ಲಿ ಪಾತ್ರ ಕೊಟ್ಟಿದ್ದು ವಿಶೇಷ.

ಈಟಿವಿ ಭಾರತ ಜೊತೆಗೆ ಮಾತನಾಡಿದ ಮಾಜಿ ಮೇಯರ್ ವಿಜಯ್ ಮೋರೆ, ಪ್ರಹಾರ ಸಿನಿಮಾ ಶೂಟಿಂಗ್ ನಮ್ಮ ಬೆಳಗಾವಿ ನಗರದಲ್ಲಿ ಆಗಿತ್ತು. ಶೂಟಿಂಗ್ ವೇಳೆ ನಾನಾ ಅವರು 20 ಅಡಿ ಮೇಲಿನಿಂದ ಬಿದ್ದು ಗಾಯಗೊಂಡಿದ್ದರು. ಆಗ ಅವರನ್ನು ಕೊಲ್ಹಾಪುರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ತಿಂಗಳು ಬೆಳಗಾವಿಯಲ್ಲಿ ಇದ್ದಾಗ, ಇಲ್ಲಿನ ಆದಿನಾರಾಯಣ ಹೋಟೆಲ್ ನಲ್ಲಿ ಸ್ಪೇಷಲ್ ಮೀನಿನ ಊಟ, ಕಿರ್ಲೋಸ್ಕರ್ ರಸ್ತೆಯಲ್ಲಿನ ಪ್ರಕಾಶ ಲಂಚ್ ಹೋಮ್, ಮಿತ್ರ ಸಮಾಜ ಹೋಟೆಲ್ ನಲ್ಲಿ ಮಿಸಳ್ ತಿನ್ನಲು ಬರುತ್ತಿದ್ದರು. ಬೆಳಗಾವಿ ಮಟನ್, ರೊಟ್ಟಿ ಊಟ ತುಂಬಾ ಇಷ್ಟಪಡುತ್ತಿದ್ದರು ಎಂದರು.

ಹೀಗೆ ಬೆಳಗಾವಿಯಲ್ಲಿ ಅವರ ನೆನಪು ಸಾಕಷ್ಟಿದೆ. ನಾಗೇಶ ಪಾವಸೆ, ಅಜಿತ್ ಗರಗಟ್ಟಿ ಸೇರಿ ಬಹಳಷ್ಟು ಸ್ನೇಹಿತರ ಬಳಗವನ್ನು ಸಂಪಾದಿಸಿದ್ದರು. ಅದರಲ್ಲಿ ನಾನೂ ಒಬ್ಬ. ನೀನು ರಾಜಕಾರಣ ಮತ್ತು ಸಮಾಜಸೇವೆ ಎರಡೂ ಮಾಡಬೇಡ. ಸಮಾಜಸೇವೆ ಅಷ್ಟೇ ಮಾಡು ಅಂತಾ ಸಲಹೆ ಕೊಟ್ಟಿದ್ದರು. ನಿಮ್ಮ ಶಾಂತಾಯಿ ವೃದ್ಧಾಶ್ರಮಕ್ಕೆ ಬರುತ್ತೇನೆ. ಅಲ್ಲಿನ ಅಜ್ಜ-ಅಜ್ಜಿಯರ ಜೊತೆಗೆ ಊಟ ಮಾಡುತ್ತೇನೆ ಎಂದಿದ್ದರು. ಆದರೆ, ಅದಕ್ಕೂ ಮೊದಲು ಅವರು ನಮ್ಮನ್ನು ಅಗಲಿದ್ದು ತುಂಬಾ ದುಃಖ ಆಗುತ್ತಿದೆ ಎಂದು ಎಂದು ವಿಜಯ್ ಮೋರೆ ಸ್ಮರಿಸಿಕೊಂಡರು.

NANA PATEKAR HAD SPECIAL CONNECTION WITH BELAGAVI: PRAHAAR WAS SHOT HERE
ನಾನಾ ಪಾಟೇಕರ್ ಅವರು ಬೆಳಗಾವಿಗೆ ಭೇಟಿ ನೀಡಿದ ಸಂದರ್ಭ (ETV Bharat)

ಈಟಿವಿ ಭಾರತಕ್ಕೆ ಮಾಹಿತಿ ನೀಡಿದ ಬೆಳಗಾವಿ ಗಣಾಚಾರಿ ಗಲ್ಲಿಯ ನಾಗೇಶ ಪಾವಸೆ, ಪುಣೆ ಜಿಲ್ಲೆಯ ಖಡಕ್ವಾಸ್ಲಾದಲ್ಲಿರುವ ನಾನಾ ಪಾಟೇಕರ ಅವರ ಜಮೀನಿನಲ್ಲಿ ಹಲವು ವರ್ಷಗಳ ಕಾಲ ನಾನು ಕೃಷಿ ಮಾಡಿದ್ದೇನೆ. ಅಷ್ಟೇ ಅಲ್ಲದೇ ಕೆಲವು ವರ್ಷಗಳ ಹಿಂದೆ ನನಗೂ ಕೃಷಿ ಕೆಲಸ ಕಲಿಸುವಂತೆ ನಾನಾ ಆಸೆ ವ್ಯಕ್ತಪಡಿಸಿದರು. ಆಗ ಒಬ್ಬ ವಿದ್ಯಾರ್ಥಿಯಂತೆ ಒಂದೊಂದೆ ಕೆಲಸ ಕಲಿತಿದ್ದರು. ಅಷ್ಟು ದೊಡ್ಡ ನಟನಾಗಿದ್ದರೂ ತುಂಬಾ ಸರಳ ಜೀವಿ ಆಗಿದ್ದರು. ನಮ್ಮ ಕುಟುಂಬಕ್ಕೆ ಅತ್ಯಾಪ್ತರಾಗಿದ್ದರು. ನಮ್ಮ ಮನೆಯ ಸುಖ-ದುಃಖದ ಕಾರ್ಯಕ್ರಮಗಳಲ್ಲಿ ತಪ್ಪದೇ ಪಾಲ್ಗೊಳ್ಳುತ್ತಿದ್ದರು. ನಮ್ಮ ತಂದೆ ನಿಧನರಾದಾಗಲೂ ಮನೆಗೆ ಬಂದು ಸಾಂತ್ವನ ಹೇಳಿದ್ದರು. ಕಳೆದ ವರ್ಷ ಬೆಳಗಾವಿಗೆ ಬಂದಿದ್ದ ವೇಳೆ ನನ್ನ ತಾಯಿಯ ಆರೋಗ್ಯ ವಿಚಾರಿಸಿ ಹೋಗಿದ್ದರು ಎಂದು ನೆನಪಿಸಿಕೊಂಡರು‌.

ಇದನ್ನೂ ಓದಿ: ಒಲೆಗೆ ಸಂಗ್ರಹಿಸಿಟ್ಟಿದ್ದ ಕಟ್ಟಿಗೆಯಲ್ಲೇ ನನ್ನ ಅಂತ್ಯಕ್ರಿಯೆ ನಡೆಸಿ ಎಂದಿದ್ದ ನಾನಾ ಪಾಟೇಕರ್: ಅಂತ್ಯಸಂಸ್ಕಾರಕ್ಕೆ ಸಿದ್ಧತೆ, ವಿಡಿಯೋ