ETV Bharat / entertainment

ಕಬ್ಜ ಬಳಿಕ ಕನ್ನಡಕ್ಕೆ ಮರಳಿದ ಪುನೀತ್ ರಾಜ್‍ಕುಮಾರ್ ಅಭಿನಯದ 'ಯಾರೇ ಕೂಗಾಡಲಿ' ಸಿನಿಮಾ ನಿರ್ದೇಶಕ

ಯುವನಟ ಸಂದೀಪ್ ನಾಗರಾಜ್ ನಾಯಕ ನಟನಾಗಿ ಅಭಿನಯಿಸುತ್ತಿರುವ 'ಕವಳ' ಚಿತ್ರದ ಮುಹೂರ್ತ ಸಮಾರಂಭ ನಗರದ ಕಾಡು ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿತು.

'Kavala' Muhurat ceremony
'ಕವಳ' ಮುಹೂರ್ತ ಸಮಾರಂಭ (Photo: ETV Bharat)
author img

By ETV Bharat Entertainment Team

Published : February 27, 2026 at 2:50 PM IST

2 Min Read
Choose ETV Bharat

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಯಾರೇ ಕೂಗಾಡಲಿ ಚಿತ್ರವನ್ನು ನಿರ್ದೇಶಿಸಿದ್ದ ತಮಿಳು ನಿರ್ದೇಶಕ ಸಮುದ್ರಖನಿ (samuthirakani), ಉಪೇಂದ್ರ ಅವರ ಕಬ್ಜ ಚಿತ್ರದಲ್ಲೂ ಅಭಿನಯಿಸಿದ್ದು, ಇದೀಗ ಮತ್ತೆ 'ಕವಳ' ಎಂಬ ಚಿತ್ರದ ಮೂಲಕ ಕನ್ನಡಕ್ಕೆ ಮರಳಿದ್ದಾರೆ. ಯುವನಟ ಸಂದೀಪ್ ನಾಗರಾಜ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಕವಳ ಚಿತ್ರದ ಮುಹೂರ್ತ ಸಮಾರಂಭ ನಗರದ ಕಾಡು ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕ್ರೇಜಿಸ್ಟಾರ್ ರವಿಚಂದ್ರನ್ ಚಿತ್ರಕ್ಕೆ ಚಾಲನೆ ನೀಡಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.

ಈ ಹಿಂದೆ ಆರ್.ಎಕ್ಸ್.ಸೂರಿ, ಭೈರಾದೇವಿ ಚಿತ್ರಗಳನ್ನು ನಿರ್ದೇಶಿಸಿದ್ದ ಶ್ರೀ ಜೈ ಅವರು ಈ ಚಿತ್ರದ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಸಂದೀಪ್ ನಾಗರಾಜ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ತಮಿಳಿನ ಹೆಸರಾಂತ ತಂತ್ರಜ್ಞ ಸಮುದ್ರಖನಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

'Kavala' Muhurat ceremony
'ಕವಳ' ಸಿನಿಮಾಗೆ ರವಿಚಂದ್ರನ್​ ಸಾಥ್ (Photo: ETV Bharat)

ನಿರ್ದೇಶಕ ಶ್ರೀ ಜೈ ಮಾತನಾಡಿ, ಕವಳ ಎಂದರೆ ತಾಂಬೂಲ‌. ಅದನ್ನು ಜಗಿದಾಗ ಬರುವ ಕೆಂಪುಬಣ್ಣವನ್ನು ಚಿತ್ರದಲ್ಲಿ ಹೇಳಿದ್ದೇವೆ‌. ಒಂದಷ್ಟು ನೈಜಘಟನೆಗಳನ್ನು ಸ್ಪೂರ್ತಿಯಾಗಿಟ್ಟುಕೊಂಡು ಈ ಚಿತ್ರದ ಕಥೆ ಹೆಣೆದಿದ್ದೇನೆ. ಒಂದು ಸ್ಟ್ರಾಂಗ್ ರೀಸನ್​​ಗೋಸ್ಕರ ಹರಿಯುವ ರಕ್ತಧಾರೆ. ಕವಳನ ಕಥೆ ಸ್ಪೂರ್ತಿಯಾಗಿರಬಹುದು. ಅದರೆ, ಇದು ಆತನದೇ ಕಥೆಯಲ್ಲ. ಯುಗಾದಿ ನಂತರ ಆರಂಭಿಸಿ ಕಾಶಿ, ಹೈದರಾಬಾದ್ ಸೇರಿದಂತೆ ಹಲವಾರು ಲೊಕೇಶನ್​​ಗಳಲ್ಲಿ ಶೂಟ್ ಮಾಡುವ ಯೋಜನೆಯಿದೆ. ಸಮುದ್ರಖನಿ ಅವರ ಪಾತ್ರ, ಹೊರರಾಜ್ಯದಿಂದ ಬಂದವರು ಹೇಗೆ ಕನ್ನಡ ಮಾತಾಡುತ್ತಾರೋ ಅದೇ ರೀತಿ ಇರುತ್ತದೆ. ನಿರ್ಮಾಪಕರು ನನ್ನನ್ನು ನಂಬಿ ದೊಡ್ಡ ಮಟ್ಟದ ಬಂಡವಾಳ ಹಾಕುತ್ತಿದ್ದಾರೆ. ಸ್ಕ್ರಿಪ್ಟ್ ಅದ್ಭುತವಾಗಿ ಮೂಡಿಬಂದಿದೆ ಎಂದರು.

ನಂತರ ಸಮುದ್ರಖನಿ ಮಾತನಾಡಿ, ಕನ್ನಡದಲ್ಲಿ ಪುನೀತ್ ರಾಜಕುಮಾರ್ ಅವರ ಜೊತೆ ಎರಡು ಸಿನಿಮಾ ಮಾಡಿದ್ದು ಮರೆಯಲಾಗದ ಅನುಭವ. ನನಗೆ ಕನ್ನಡ ಸ್ವಲ್ಪ ಬರುತ್ತೆ. ಈ ಚಿತ್ರದಲ್ಲಿ ಒಂದು ನೆಗೆಟಿವ್ ಪಾತ್ರ ಮಾಡುತ್ತಿದ್ದೇನೆ ಎಂದರು.

'Kavala' Film Team
'ಕವಳ' ಚಿತ್ರತಂಡ (Photo: ETV Bharat)

ನಿರ್ಮಾಪಕ ಲೋಕೇಶ್ ಮಾತನಾಡಿ, ಸ್ಟಾರ್ಟಪ್ ಬ್ಯುಸಿನೆಸ್ ಮಾಡುತ್ತಿದ್ದೇನೆ.‌ ಮೊದಲಿಂದಲೂ ಸಿನಿಮಾ ಬಗ್ಗೆ ಒಲವಿತ್ತು ಎಂದರು.

ಮತ್ತೊಬ್ಬ ನಿರ್ಮಾಪಕ ಅಡವಯ್ಯ ಪೂಜಾರ್ ಮಾತನಾಡಿ, ಸುಮಾರು 40 ಕಥೆಗಳನ್ನು ಕೇಳಿ ಇದನ್ನು ಫೈನಲ್ ಮಾಡಿದ್ದೇನೆ. ಗೂಗ್ಲಿಯಲ್ಲಿ ಸಂದೀಪ್ ಅಭಿನಯ ನೋಡಿದ್ದೆ. ನಾಯಕನ ಪಾತ್ರಕ್ಕೆ ಅವರೇ ಬೇಕೆಂದು ನಿರ್ದೇಶಕರಿಗೆ ಒತ್ತಾಯಿಸಿದೆ. ಆದ್ರೆ ಸಮುದ್ರಖನಿ ಅವರ ಒಪ್ಪುತ್ತಾರೆ ಎಂಬ ನಂಬಿಕೆಯಿರಲಿಲ್ಲ ಎಂದು ಹೇಳಿದರು.

ಇದನ್ನೂ ಓದಿ: 'ಚಿತ್ರೀಕರಣದ ವೇಳೆ ಯಾವುದೇ ಅಡೆತಡೆ ಎದುರಾದಾಗ.....': ರಿಷಬ್​ ಶೆಟ್ಟಿ

ನಾಯಕ ಸಂದೀಪ್ ನಾಗರಾಜ್ ಮಾತನಾಡಿ, ನಾನು ಈ ಪಾತ್ರ ಮಾಡುತ್ತೇನೆ ಎಂದು ನಂಬಿ ಇಂಥ ದೊಡ್ಡ ಪಾತ್ರ ಕೊಟ್ಟಿದ್ದಾರೆ. ‌ಚೆನ್ನಾಗಿ ನಿರ್ವಹಿಸುತ್ತೇನೆ ಎಂದು ಭರವಸೆ ಕೊಟ್ಟರು.‌

'Kavala' Film Team
'ಕವಳ' ಚಿತ್ರತಂಡ (Photo: ETV Bharat)

ಕವಳ ಚಿತ್ರದ ಉಳಿದ ಪಾತ್ರಗಳಲ್ಲಿ ಹಿರಿಯ ನಟರಾದ ಅಚ್ಯುತ್ ಕುಮಾರ್, ರಂಗಾಯಣ ರಘು, ನಾಜರ್, ಈಶ್ವರಿರಾವ್, ಬಲ ರಾಜ್ವಾಡಿ, ಕಿಶೋರ್, ಶ್ರವಣ್, ಗಿಲ್ಲಿ ನಟ, ಪ್ರಕಾಶ್ ತುಮ್ಮಿನಾಡ್ ಹಾಗೂ ಇತರರು ನಟಿಸುತ್ತಿದ್ದಾರೆ.

ಇದನ್ನೂ ಓದಿ: ಅನ್​ಸ್ಟಾಪಬಲ್​ ರಶ್ಮಿಕಾ: ನವವಧು ಕೈಯಲ್ಲಿದೆ ಬರೋಬ್ಬರಿ 12 ಸಿನಿಮಾ; ವೃತ್ತಿಗೆ ಮದುವೆ ಅಡ್ಡಿಯಾಗೋಲ್ಲವೆಂದ್ರು ಕೊಡಗಿನ ಬೆಡಗಿ

ಈ ಚಿತ್ರಕ್ಕೆ ಎ.ಕರುಣಾಕರನ್ ಅವರ ಛಾಯಾಗ್ರಹಣ, ಕೆ.ಕೆ.ಸೆಂಥಿಲ್ ಪ್ರಸಾದ್ ಅವರ ಸಂಗೀತ, ಅರ್ಜುನ್ ರಾಜ್, ವಿಕ್ರಮ್ ಮೋರ್ ಅವರ ಸಾಹಸ, ಕಲೈ, ಮುರಳಿ ಅವರ ನೃತ್ಯ, ದೀಪು ಎಸ್.ಕುಮಾರ್ ಅವರ ಸಂಕಲನವಿದೆ. ರಾಧಾಕೃಷ್ಣ ಆರ್ಟ್ಸ್ ಹಾಗೂ ಡ್ರೀಮ್ ವರ್ಲ್ಡ್ ಸಿನಿಮಾಸ್ ಮೂಲಕ ಲೋಕೇಶ್ ಬಿ ಹಾಗೂ ಅಡವಯ್ಯ ಪೂಜಾರ್ ನಿರ್ಮಾಣ ಮಾಡುತ್ತಿದ್ದಾರೆ.