ETV Bharat / entertainment

ಕುಮಾರ್ ಬಂಗಾರಪ್ಪ ನಟನೆಯ 'ಸರ್ಕಾರಿ ನ್ಯಾಯಬೆಲೆ ಅಂಗಡಿ' ಸಿನಿಮಾ ಪೋಸ್ಟರ್ ರಿಲೀಸ್ ಮಾಡಿದ ಸಚಿವ ಸೋಮಣ್ಣ

'ಸರ್ಕಾರಿ ನ್ಯಾಯಬೆಲೆ ಅಂಗಡಿ' ಎಂಬ ಸಿನಿಮಾ ತೆರೆಗೆ ಬರುತ್ತಿದೆ. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿದರು.

Minister V. Somanna praises the social concern film 'Sarkari Nyaybele Angadi'
ಚಿತ್ರ ತಂಡದೊಂದಿಗೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ (ETV Bharat)
author img

By ETV Bharat Karnataka Team

Published : March 4, 2026 at 7:50 AM IST

2 Min Read
Choose ETV Bharat

ಬೆಂಗಳೂರು: 'ಸರ್ಕಾರಿ ನ್ಯಾಯಬೆಲೆ ಅಂಗಡಿ'. ಹೀಗೊಂದು ಹೆಸರಿನ ಸಿನಿಮಾ ಕನ್ನಡದಲ್ಲಿ ತೆರೆಗೆ ಬರುತ್ತಿದೆ. ಇದೀಗ ಈ ಸಿನಿಮಾ ಸದ್ದಿಲ್ಲದೆ ಚಿತ್ರೀಕರಣವನ್ನೂ ಮುಗಿಸಿದೆ. ಸಿನಿಮಾ ಹೆಸರೇ ಹೇಳುವಂತೆ ಇದು ಸರ್ಕಾರಿ ನ್ಯಾಯಬೆಲೆ ಅಂಗಡಿ ಮತ್ತು ಪಡಿತರ ವ್ಯವಸ್ಥೆಯ ಸುತ್ತ ನಡೆಯುವ ಕಥಾಹಂದರ. ಪಕ್ಕಾ ಗ್ರಾಮೀಣ ಸೊಗಡಿನ ಸಿನಿಮಾದ ಸಂಪೂರ್ಣ ಚಿತ್ರೀಕರಣವನ್ನು ಮಂಡ್ಯ ಜಿಲ್ಲೆಯಲ್ಲೇ ನಡೆಸಿರುವುದು ವಿಶೇಷ.

ರಾಗಿಣಿ ದ್ವಿವೇದಿ, ಕುಮಾರ ಬಂಗಾರಪ್ಪ, ದೊಡ್ಡಣ್ಣ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವ ಚಿತ್ರದ ಪೋಸ್ಟರ್ ಅನ್ನು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಬಿಡುಗಡೆಗೊಳಿಸಿದ್ದಾರೆ.

Minister V. Somanna praises the social concern film 'Sarkari Nyaybele Angadi'
ಚಿತ್ರ ತಂಡದೊಂದಿಗೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ (ETV Bharat)

ಈ ಸಂದರ್ಭದಲ್ಲಿ ಮಾತನಾಡಿದ ಸೋಮಣ್ಣ, "ಜನಸಾಮಾನ್ಯರು, ಬಡವರು ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸರ್ಕಾರಿ ನ್ಯಾಯಬೆಲೆ ಅಂಗಡಿಗಳ ಮೂಲಕ ದಿನಸಿ ಮತ್ತು ಆಹಾರವನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿವೆ. ಆದರೆ, ಈ ವ್ಯವಸ್ಥೆಯಲ್ಲಿರುವ ಕೆಲವು ಲೋಪಗಳಿಂದ ಇದರ ಉದ್ದೇಶ ಪರಿಣಾಮಕಾರಿಯಾಗಿ ಈಡೇರುತ್ತಿಲ್ಲ. ಈಗ ಇದೇ ವಿಷಯವನ್ನು ಸಿನಿಮಾ ಮಾಡಿರುವ ಇಂಥದ್ದೊಂದು ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಸಾಮಾಜಿಕ ಕಳಕಳಿಯ ವಿಷಯಗಳನ್ನು ಸಿನಿಮಾ ಮೂಲಕ ಹೇಳಿದಾಗ, ಅದು ಪರಿಣಾಮಕಾರಿಯಾಗಿ ಪ್ರೇಕ್ಷಕರನ್ನು ತಲುಪುತ್ತದೆ. ಈ ಚಿತ್ರ ಜನ ಜಾಗೃತಿ ಮೂಡಿಸಿ ಯಶಸ್ವಿಯಾಗಲಿ" ಎಂದು ಶುಭ ಹಾರೈಸಿದರು.

ನಾಯಕ ನಟ ಕುಮಾರ್ ಬಂಗಾರಪ್ಪ ಮಾತನಾಡಿ, "ಇಡೀ ದೇಶದಲ್ಲಿಯೇ ಸರ್ಕಾರಿ ನ್ಯಾಯಬೆಲೆ ಅಂಗಡಿ ಮತ್ತು ಪಡಿತರ ವ್ಯವಸ್ಥೆಯ ಮೇಲೆ ಮೂಡಿಬರುತ್ತಿರುವ ಮೊಟ್ಟ ಮೊದಲ ಸಿನಿಮಾ ಇದು. ಇಡೀ ಗ್ರಾಮೀಣ ಪರಿಸರದ ಹಿನ್ನೆಲೆಯಲ್ಲಿ ಸಿನಿಮಾ ಸಾಗುತ್ತದೆ. ಮನರಂಜನೆ ಜತೆಗೆ ಒಂದು ಒಳ್ಳೆಯ ಸಂದೇಶವಿದೆ. ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಏನೇನು ವ್ಯವಹಾರಗಳು, ಅವ್ಯವಹಾರಗಳು ನಡೆಯುತ್ತವೆ ಎಂಬುದನ್ನು ಸಮಾಜಕ್ಕೆ ತೋರಿಸುವಂಥ ಕಥೆ. ಎಲ್ಲಾ ಥರದ ಆಡಿಯನ್ಸ್‌ಗೂ ಕನೆಕ್ಟ್‌ ಆಗುವಂಥ ಸಿನಿಮಾ. ಇಡೀ ಸಿನಿಮಾವನ್ನು ಮಂಡ್ಯ ಜಿಲ್ಲೆಯ ಗ್ರಾಮೀಣ ಪರಿಸರದಲ್ಲಿ ಚಿತ್ರೀಕರಿಸಿದ್ದು ಅದ್ಭುತ ಅನುಭವ. ನಿರ್ಮಾಪಕರು, ನಿರ್ದೇಶಕರು ಮತ್ತು ತಂತ್ರಜ್ಞರ ಸಹಕಾರದಿಂದ 'ಸರ್ಕಾರಿ ನ್ಯಾಯಬೆಲೆ ಅಂಗಡಿ' ತುಂಬಾ ಚೆನ್ನಾಗಿ ಮೂಡಿಬರುತ್ತಿದೆ. ಸಿನಿಮಾ ಚಿತ್ರೀಕರಣ ಮುಗಿದಿದ್ದೇ ಗೊತ್ತಾಗಲಿಲ್ಲ. ಬಹುಕಾಲದ ಬಳಿಕ ಇಂಥದ್ದೊಂದು ಸಾಮಾಜಿಕ ಕಳಕಳಿಯ ಚಿತ್ರದಲ್ಲಿ ಅಭಿನಯಿಸಿರುವುದಕ್ಕೆ ಖುಷಿ ಇದೆ" ಎಂದರು.

Minister V. Somanna praises the social concern film 'Sarkari Nyaybele Angadi'
ಚಿತ್ರ ತಂಡ (ETV Bharat)

ನಟಿ ರಾಗಿಣಿ ದ್ವಿವೇದಿ ಪಾರ್ವತಿ ಎಂಬ ಗ್ರಾಮೀಣ ಮಹಿಳೆಯ ಪಾತ್ರ ಮಾಡಿದ್ದಾರೆ. ಜಯಶಂಕರ ಟಾಕೀಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರವನ್ನು ತೇಜು ಮೂರ್ತಿ ಮತ್ತು ಪದ್ಮಾವತಿ ಚಂದ್ರಶೇಖರ್‌ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಹಾಡುಗಳಿಗೆ ಅನಂತ್‌ ಆರ್ಯನ್‌ ಸಂಗೀತ ಸಂಯೋಜಿಸುತ್ತಿದ್ದಾರೆ. ಬಿ.ರಾಮಮೂರ್ತಿ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯಿರುವ ಚಿತ್ರಕ್ಕೆ ಸಾತ್ವಿಕ್‌ ಪವನ್‌ ಕುಮಾರ್‌ ಛಾಯಾಗ್ರಹಣ ಮತ್ತು ನಿರ್ದೇಶನವಿದೆ.

ನಿರ್ಮಾಪಕರಾದ ಭಾ.ಮ.ಹರೀಶ್‌, ಭಾ.ಮ.ಗಿರೀಶ್‌, ಚೆಲುವ ಮೂರ್ತಿ ಸೇರಿದಂತೆ ಚಿತ್ರರಂಗ ಮತ್ತು ರಾಜಕೀಯ ಗಣ್ಯರು ಪೋಸ್ಟರ್ ಬಿಡುಗಡೆ ವೇಳೆ ಹಾಜರಿದ್ದರು.

Minister V. Somanna praises the social concern film 'Sarkari Nyaybele Angadi'
ಚಿತ್ರ ತಂಡದೊಂದಿಗೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ (ETV Bharat)

ಸುಮಾರು 52 ದಿನಗಳ ಕಾಲ ಚಿತ್ರೀಕರಣ ನಡೆಸಿರುವಚಿತ್ರತಂಡ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತರವಾಗಿದೆ. ಇದೇ ವರ್ಷ ಸಿನಿಮಾ ತೆರೆ ಕಾಣುವ ನಿರೀಕ್ಷೆ ಇದೆ. ಕನ್ನಡದೊಂದಿಗೆ ದೇಶದ ಇತರ ಭಾಷೆಗಳಲ್ಲೂ ಸಿನಿಮಾವನ್ನು ತಲುಪಿಸುವ ಯೋಚನೆಯಲ್ಲಿದೆ ಚಿತ್ರತಂಡ.

ಇದನ್ನೂ ಓದಿ: ದುನಿಯಾ ವಿಜಯ್ ನಟನೆಯ 'ಭೀಮಾ ತೀರದಲ್ಲಿ' ಸಿನಿಮಾ ಡಿಜಿಟಲ್ ತಂತ್ರಜ್ಞಾನದೊಂದಿಗೆ ಮರು ಬಿಡುಗಡೆ