ಮೊದಲ ಭಾನುವಾರ 65 ಲಕ್ಷ ಗಳಿಸಿದ್ದ 'ಪ್ರೇಮದ ಊರಲಿ' 3ನೇ ಸಂಡೇ ಗಳಿಸಿದ್ದು 9.44 ಕೋಟಿ: 17 ದಿನಗಳಲ್ಲಿ 50 ಕೋಟಿಗೂ ಅಧಿಕ!
ಸೆಪ್ಟಂಬರ್ 25ರಂದು ತೆರೆಕಂಡ ಮನೋಜ್ ಕುಮಾರ್ ನಿರ್ದೇಶನದ ಸಿನಿಮಾ ಮೊದಲ ದಿನ ಗಳಿಸಿದ್ದು ಕೇವಲ 10 ಲಕ್ಷ ರೂಪಾಯಿ. ಆದ್ರೆ, ಚಿತ್ರ ತನ್ನ 3ನೇ ಭಾನುವಾರ ಬರೋಬ್ಬರಿ 9.44 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

By ETV Bharat Entertainment Team
Published : October 12, 2026 at 11:57 AM IST
ಸಿನಿಪ್ರಿಯರನ್ನು ಚಿತ್ರಮಂದಿರಗಳಿಗೆ ಕರೆತರಲು ಸದಾ ಅದ್ಧೂರಿ ಮೇಕಿಂಗ್ ಅಥವಾ ಸ್ಟಾರ್ಡಮ್ನ ಅಗತ್ಯವಿರುವುದಿಲ್ಲ. ಒಂದೊಳ್ಳೆ ಕಥೆ, ಪ್ರೇಕ್ಷಕರ ವಿಮರ್ಷೆ ಚಿತ್ರವೊಂದರ ಯಶಸ್ಸಿನಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತವೆ. ಅದರಂತೆ ಇದೀಗ 'ಬಾಯ್ಮಾತಿನ ಪ್ರಚಾರ' ಹೇಗೆ ಸಿನಿಮಾವೊಂದರ ಭವಿಷ್ಯವನ್ನೇ ಬದಲಾಯಿಸಬಲ್ಲದು ಎಂಬುದನ್ನು 'ಪ್ರೇಮದ ಊರಲಿ' ಸಾಬೀತುಪಡಿಸಿದೆ. ಸರಿಸುಮಾರು 2 ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಾಣಗೊಂಡ ಈ ಸಿನಿಮಾ ಕೆಲವೇ ದಿನಗಳಲ್ಲಿ 50 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ಅನಿರೀಕ್ಷಿತ ಯಶಸ್ಸನ್ನು ಕಂಡಿದೆ.
3ನೇ ಭಾನುವಾರ ಅತಿಹೆಚ್ಚು ಕಲೆಕ್ಷನ್: ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಪ್ರೇಮದ ಊರಲಿ ತನ್ನ 3ನೇ ಭಾನುವಾರ ಬರೋಬ್ಬರಿ 9.44 ಕೋಟಿ ರೂಪಾಯಿ (ಗ್ರಾಸ್) ಕಲೆಕ್ಷನ್ ಮಾಡಿದೆ. ಈ ಪೈಕಿ ಚಿತ್ರದ ನೆಟ್ ಕಲೆಕ್ಷನ್ 8 ಕೋಟಿ ರೂಪಾಯಿ. ತೆರೆಕಂಡ ವಾರದ ಅಂದರೆ ಮೊದಲ ಭಾನುವಾರ ಸಿನಿಮಾ ಗಳಿಸಿದ್ದು ಕೇವಲ 65 ಲಕ್ಷ ರೂಪಾಯಿ.
ಪ್ರೇಕ್ಷಕರ 'ಬಾಯ್ಮಾತಿನ ಪ್ರಚಾರ'ದಿಂದ ಗಳಿಕೆಯಲ್ಲಿ ಏರಿಕೆ: 10 ಲಕ್ಷ ರೂಪಾಯಿಯೊಂದಿಗೆ ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸಿದ್ದ ಮನೋಜ್ ಕುಮಾರ್ ನಿರ್ದೇಶನದ 'ಪ್ರೇಮದ ಊರಲಿ' ಸಿನಿಮಾ, ಪ್ರೇಕ್ಷಕರ ಸಕಾರಾತ್ಮಕ ಪ್ರತಿಕ್ರಿಯೆಯಿಂದಾಗಿ ತನ್ನ ಕಲೆಕ್ಷನ್ನಲ್ಲಿ ಏರಿಕೆ ಕಾಣುತ್ತಲೇ ಇದೆ. 2ನೇ ದಿನ 27 ಲಕ್ಷ ರೂಪಾಯಿ, 3ನೇ ದಿನ 65 ಲಕ್ಷ ರೂಪಾಯಿ, 4ನೇ ದಿನ 75 ಲಕ್ಷ ರೂಪಾಯಿ ಗಳಿಸಿದ ಚಿತ್ರ ತನ್ನ 5ನೇ ದಿನ ಕೋಟಿಗೆ ತಲುಪಿ ಬರೋಬ್ಬರಿ 1.09 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ನಂತರದ ದಿನಗಳಲ್ಲಿ 3-4 ಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತಿದ್ದ ಚಿತ್ರ ನಿನ್ನೆ 10 ಕೋಟಿ ರೂಪಾಯಿ ಸಮೀಪಿಸಿದೆ. ನಿರೀಕ್ಷೆಯಂತೆ ಬಾಕ್ಸ್ ಆಫೀಸ್ನಲ್ಲಿ ಉತ್ತಮ ವ್ಯವಹಾರ ನಡೆಯುತ್ತಿದ್ದು, ಚಿತ್ರಮಂದಿರಗಳಲ್ಲಿ ಮತ್ತಷ್ಟು ದಿನ ಯಶಸ್ಸಿನ ಓಟ ಮುಂದುವರೆಸುವ ನಿರೀಕ್ಷೆಯಿದೆ.
17 ದಿನಗಳಲ್ಲಿ ಚಿತ್ರ ಗಳಿಸಿದ್ದೆಷ್ಟು? ಶ್ರೀರಾಮ್, ರಮಿಕಾ ಶಿವು ಮತ್ತು ತಪಸ್ವಿನಿ ಪೂಣಚ್ಚ ಮತ್ತು ರಂಗಾಯಣ ರಘು ಮುಖ್ಯಭೂಮಿಕೆಯಲ್ಲಿರುವ ಒಂದು ಕೌಟುಂಬಿಕ ಕಥಾಹಂದರ ಸೆಪ್ಟಂಬರ್ 25ಕ್ಕೆ ಯಾವುದೇ ಅದ್ಧೂರಿ ಪ್ರಚಾರಗಳಿಲ್ಲದೇ ಚಿತ್ರಮಂದಿರ ಪ್ರವೇಶಿಸಿತು. ಇಂದು 18ನೇ ದಿನದ ಪ್ರದರ್ಶನ ಕಾಣುತ್ತಿದ್ದು, ಒಟ್ಟು 17 ದಿನಗಳಲ್ಲಿ 56.39 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಪೈಕಿ 48.22 ನೆಟ್ ಕಲೆಕ್ಷನ್ ಆಗಿದೆ.
| ದಿನ | ಗ್ರಾಸ್ ಕಲೆಕ್ಷನ್ | ನೆಟ್ ಕಲೆಕ್ಷನ್ | ಶೋಗಳ ಸಂಖ್ಯೆ | ಪ್ರೇಕ್ಷಕರ ಆಕ್ಯುಪೆನ್ಸಿ ರೇಟ್ |
| ಮೊದಲ ದಿನ | 0.10 ಕೋಟಿ ರೂ. | 0.09 ಕೋಟಿ ರೂ. | 60 | ಶೇ.28.0 |
| ಎರಡನೇ ದಿನ | 0.27 ಕೋಟಿ ರೂ. | 0.23 ಕೋಟಿ ರೂ. | 81 | ಶೇ.46.0 |
| ಮುರನೇ ದಿನ | 0.65 ಕೋಟಿ ರೂ. | 0.55 ಕೋಟಿ ರೂ. | 157 | ಶೇ.55.0 |
| ನಾಲ್ಕನೇ ದಿನ | 0.75 ಕೋಟಿ ರೂ. | 0.65 ಕೋಟಿ ರೂ. | 233 | ಶೇ.47.0 |
| ಐದನೇ ದಿನ | 1.09 ಕೋಟಿ ರೂ. | 0.95 ಕೋಟಿ ರೂ. | 312 | ಶೇ.58.0 |
| ಆರನೇ ದಿನ | 1.33 ಕೋಟಿ ರೂ. | 1.15 ಕೋಟಿ ರೂ. | 374 | ಶೇ.55.0 |
| ಏಳನೇ ದಿನ | 1.97 ಕೋಟಿ ರೂ. | 1.70 ಕೋಟಿ ರೂ. | 486 | ಶೇ.58.0 |
| ಎಂಟನೇ ದಿನ | 3.02 ಕೋಟಿ ರೂ. | 2.60 ಕೋಟಿ ರೂ. | 487 | ಶೇ.82.0 |
| ಒಂಭತ್ತನೇ ದಿನ | 3.28 ಕೋಟಿ ರೂ. | 2.80 ಕೋಟಿ ರೂ. | 590 | ಶೇ.75.0 |
| ಹತ್ತನೇ ದಿನ | 4.50 ಕೋಟಿ ರೂ. | 3.85 ಕೋಟಿ ರೂ. | 663 | ಶೇ.84.0 |
| ಹನ್ನೊಂದನೇ ದಿನ | 3.48 ಕೋಟಿ ರೂ. | 3.00 ಕೋಟಿ ರೂ. | 673 | ಶೇ.69.0 |
| ಹನ್ನೆರಡನೇ ದಿನ | 4.25 ಕೋಟಿ ರೂ. | 3.65 ಕೋಟಿ ರೂ. | 834 | ಶೇ.67.0 |
| ಹದಿಮೂರನೇ ದಿನ | 4.50 ಕೋಟಿ ರೂ. | 3.85 ಕೋಟಿ ರೂ. | 911 | ಶೇ.65.0 |
| ಹದಿನಾಲ್ಕನೇ ದಿನ | 4.56 ಕೋಟಿ ರೂ. | 3.90 ಕೋಟಿ ರೂ. | 968 | ಶೇ.62.0 |
| ಹದಿನೈದನೇ ದಿನ | 5.30 ಕೋಟಿ ರೂ. | 4.50 ಕೋಟಿ ರೂ. | 1,178 | ಶೇ.57.0 |
| ಹದಿನಾರನೇ ದಿನ | 7.90 ಕೋಟಿ ರೂ. | 6.75 ಕೋಟಿ ರೂ. | 1,229 | ಶೇ.76.0 |
| ಹದಿನೇಳನೇ ದಿನ | 9.44 ಕೋಟಿ ರೂ. | 8.00 ಕೋಟಿ ರೂ. | 1,291 | ಶೇ.83.0 |
| ಒಟ್ಟು | 56.39 ಕೋಟಿ ರೂ. | 48.22 ಕೋಟಿ ರೂ. | 10,527 | ---- |
ಇದನ್ನೂ ಓದಿ: 2 ಕೋಟಿ ಬಜೆಟ್, 427 ಕೋಟಿ ಕಲೆಕ್ಷನ್: 'ಹನುಮಾನ್ ಅಂಶ್'ನಂತೆ ದಾಖಲೆ ಬರೆಯುತ್ತಿದೆ ಕನ್ನಡದ 'ಪ್ರೇಮದ ಊರಲಿ'!
ಈ ಯಶಸ್ವಿ ಸಿನಿಮಾವನ್ನು ವೆನಿಲ್ಲಾ ಎಂಟರ್ಟೈನ್ಮೆಂಟ್ಸ್, ಜಾನಕಮ್ಮ ಪ್ರೊಡಕ್ಷನ್ ಬ್ಯಾನರ್ ಅಡಿ ಮಮತಾ ದೇವೇಂದ್ರ, ಪ್ರಶಾಂತ್ ಹಾಗೂ ರಮೇಶ್ ನಿರ್ಮಾಣ ಮಾಡಿದ್ದಾರೆ. ಸುನಾದ್ ಗೌತಮ್ ಸಂಗೀತ ನಿರ್ದೇಶನ, ರಾಜ್ಕಾಂತ್ ಎಸ್.ಕೆ.ಛಾಯಾಗ್ರಹಣ, ಹರ್ಷಿತ್ ಪ್ರಭು ಸಂಕಲನ ಈ ಸಿನಿಮಾಗಿದೆ.
ಇದನ್ನೂ ಓದಿ: 'ನಿಮ್ಮ ದೇಶಗಳಲ್ಲಿರುವ ಪ್ರೇಮದ ಊರುಗಳಿಂದ ನಮ್ಮ ಪ್ರೇಮದ ಊರಿಗೆ ಬರಬೇಕೆಂದು ಕೇಳಿಕೊಳ್ಳುತ್ತಿದ್ದೀವಿ': ವಿದೇಶಗಳಲ್ಲಿ ಬಿಡುಗಡೆ

