'ವಾರಣಾಸಿಯನ್ನು ಜಗತ್ತು ವೀಕ್ಷಿಸೋದನ್ನು ನೋಡಲು ಕಾತರನಾಗಿದ್ದೇನೆ': ರಾಜಮೌಳಿ ಜನ್ಮದಿನಕ್ಕೆ ವಿಶೇಷವಾಗಿ ಶುಭಕೋರಿದ ಮಹೇಶ್ ಬಾಬು
ಬಹುನಿರೀಕ್ಷಿತ ಚಿತ್ರದಲ್ಲಿ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ನಟಿಸಿದ್ದು, ಮುಂದಿನ ವರ್ಷ ಏಪ್ರಿಲ್ 7ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

By ETV Bharat Entertainment Team
Published : October 10, 2026 at 4:38 PM IST
ಬಾಹುಬಲಿ, ಆರ್‌ಆರ್‌ಆರ್ ಖ್ಯಾತಿಯ ಪ್ರತಿಭಾನ್ವಿತ ಚಲನಚಿತ್ರ ನಿರ್ದೇಶಕ ಎಸ್ಎಸ್ ರಾಜಮೌಳಿ ಅವರಿಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. 53ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸ್ಟಾರ್ ಡೈರೆಕ್ಟರ್ಗೆ ಕುಟುಂಬಸ್ಥರು, ಆಪ್ತರು, ಸಿನಿ ಸ್ನೇಹಿತರೂ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭಾಶಯಗಳ ಮಳೆ ಹರಿಸಿದ್ದಾರೆ. ಅವರ ಮುಂಬರುವ ಬಹುನಿರೀಕ್ಷಿತ ಚಿತ್ರದ ನಾಯಕ ನಟ ಮಹೇಶ್ ಬಾಬು ಕೂಡಾ ವಿಶೇಷವಾಗಿ ಶುಭ ಕೋರಿದ್ದಾರೆ.
ಹೌದು, ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಅವರಿಂದು ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಾ ಹೃದಯಸ್ಪರ್ಶಿ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 'ಬಾಹುಬಲಿ' ನಿರ್ದೇಶಕರು ನಗುತ್ತಿರುವ ಫೋಟೋವೊಂದನ್ನು ಹಂಚಿಕೊಂಡಿರುವ ದಕ್ಷಿಣ ಚಿತ್ರರಂಗದ ಖ್ಯಾತ ತಾರೆ, ಆ ಖ್ಯಾತ ನಿರ್ದೇಶಕರೊಂದಿಗೆ ಕೆಲಸ ಮಾಡುವ ಕುರಿತಾದ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ. "ನಿಮಗೆ ಇದು ಅತ್ಯಂತ ಸ್ಮರಣೀಯ ಹುಟ್ಟುಹಬ್ಬವಾಗಲಿ ರಾಜಮೌಳಿ ಸರ್. ನಾವಿಬ್ಬರೂ ಸೇರಿ ರೂಪಿಸುತ್ತಿರುವ ವಿಷಯವನ್ನು ಜಗತ್ತು ನೋಡಲು ನಾನು ಕಾತರನಾಗಿದ್ದೇನೆ" ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ವಾರಣಾಸಿ ಸಿನಿಮಾ ಸುತ್ತಲಿನ ತಮ್ಮ ನಿರೀಕ್ಷೆ ಮತ್ತು ಕುತೂಹಲವನ್ನು ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮುನ್ನ, 'ಆರ್‌ಆರ್‌ಆರ್' ನಟ ಜೂನಿಯರ್ ಎನ್‌ಟಿಆರ್ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಎಸ್.ಎಸ್ ರಾಜಮೌಳಿ ಅವರೊಂದಿಗಿನ ಕ್ಯಾಂಡಿಡ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಚಿತ್ರದೊಂದಿಗೆ ಜೂನಿಯರ್ ಎನ್‌ಟಿಆರ್, "ಸದಾ ಮಾನದಂಡಗಳನ್ನು ಏರಿಸುತ್ತಾ, ತಾವೇ ಸ್ವತಃ ಅವುಗಳನ್ನು ಮೀರಿ ಬೆಳೆಯುವ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯಗಳು. ಐ ಲವ್ ಯು ಜಕ್ಕಣ್ಣ" ಎಂದು ಬರೆದುಕೊಂಡಿದ್ದರು.
'ವಾರಣಾಸಿ' ನಿರ್ಮಾಪಕರಲ್ಲಿ ಒಬ್ಬರಾದ ಎಸ್.ಎಸ್.ಕಾರ್ತಿಕೇಯ ಅವರು ತಮ್ಮ ಚಿತ್ರದ ಬಗ್ಗೆ ಮಾತನಾಡುತ್ತಾ, ಈ ಬಹುನಿರೀಕ್ಷಿತ ಚಿತ್ರದ ಪೋಸ್ಟ್-ಪ್ರೊಡಕ್ಷನ್ ಕೆಲಸಗಳು ಶರವೇಗದಲ್ಲಿ ನಡೆಯುತ್ತಿವೆ ಮತ್ತು ಎಲ್ಲವೂ ಯೋಜನೆಯಂತೆ ನಡೆದರೆ, ಮುಂದಿನ ವರ್ಷದ ಜನವರಿ ವೇಳೆಗೆ ಅವು ಪೂರ್ಣಗೊಳ್ಳಲಿವೆ ಎಂದು ತಿಳಿಸಿದ್ದರು.
ಇದನ್ನೂ ಓದಿ: 'ಫ್ರೆಂಡ್! ನಿಮಗೆ ಯಾವುದರ ಭಯ?': ದೆಹಲಿ ಪ್ರತಿಭಟನೆಗೂ ಮುನ್ನ ರೈಲುಗಳ ರದ್ದತಿಗೆ ಪ್ರಕಾಶ್ ರಾಜ್ ಪ್ರತಿಕ್ರಿಯೆ
ಈ ಬಿಗ್ ಬಜೆಟ್ ಪ್ರಾಜೆಕ್ಟ್ನಲ್ಲಿ ಮಹೇಶ್ ಬಾಬು ಅವರು 'ರುದ್ರ'ನಾಗಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ 'ಮಂದಾಕಿನಿ'ಯಾಗಿ ಮತ್ತು ಪೃಥ್ವಿರಾಜ್ ಸುಕುಮಾರನ್ 'ಕುಂಭ'ನಾಗಿ ನಟಿಸಿದ್ದಾರೆ. ಖ್ಯಾತ ತಾರೆಯರು ತೆರೆಹಂಚಿಕೊಂಡಿರುವ ಈ ಸಿನಿಮಾ 2027ರ ಏಪ್ರಿಲ್ 7ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಆಸ್ಕರ್ ವಿಜೇತ ಎಂ.ಎಂ.ಕೀರವಾಣಿ ಸಂಗೀತ ಸಂಯೋಜಿಸಿರುವ ಈ ಚಿತ್ರ ಸಂಪೂರ್ಣ ಚಿತ್ರತಂಡಕ್ಕೆ ಪ್ರತಿಷ್ಠೆಯ ಸಿನಿಮಾವಾಗಿದ್ದು, ಬಹುಕೋಟಿಗಳಲ್ಲಿ ನಿರ್ಮಾಣಗೊಂಡಿದೆ. ಸಿನಿಮಾ ಎಷ್ಟರ ಮಟ್ಟಿಗೆ ಗೆಲುವು ಸಾಧಿಸುತ್ತದೆ ಅನ್ನೋದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: 'ನಿಮ್ಮ ದೇಶಗಳಲ್ಲಿರುವ ಪ್ರೇಮದ ಊರುಗಳಿಂದ ನಮ್ಮ ಪ್ರೇಮದ ಊರಿಗೆ ಬರಬೇಕೆಂದು ಕೇಳಿಕೊಳ್ಳುತ್ತಿದ್ದೀವಿ': ವಿದೇಶಗಳಲ್ಲಿ ಬಿಡುಗಡೆ

