ETV Bharat / entertainment

ಹೊಸ ಸಾಹಸಕ್ಕೆ ಕೈ ಹಾಕಿದ ಕಿಚ್ಚ ಸುದೀಪ್ ಮಡದಿ ಪ್ರಿಯಾ: ಜನ್ಮದಿನದಂದು ಘೋಷಣೆ

'ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ' ಮೂಲಕ ಹೊಸಬರಿಗೆ ವೇದಿಕೆ ಸೃಷ್ಟಿಸಲು ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಸಜ್ಜಾಗಿದ್ದಾರೆ.

Sudeep Priya
ಸುದೀಪ್​ ಪ್ರಿಯಾ ದಂಪತಿ (Photo: ETV Bharat)
author img

By ETV Bharat Entertainment Team

Published : January 7, 2026 at 2:23 PM IST

2 Min Read
Choose ETV Bharat

ಸುದೀಪ್​​. ಕನ್ನಡ ಚಿತ್ರರಂಗದ ಬಹುಬೇಡಿಕೆ ನಟ. ಅಭಿಮಾನಿಗಳಿಂದ ಅಭಿನಯ ಚಕ್ರವರ್ತಿ ಎಂದೇ ಕರೆಸಿಕೊಳ್ಳುವ ಸುದೀಪ್​​ ಓರ್ವ ಫ್ಯಾಮಿಲಿ ಮ್ಯಾನ್ ಕೂಡಾ ಹೌದು. ಪ್ರೀತಿಸಿ ಮದುವೆಯಾದ ಪ್ರಿಯಾ ಅವರು ತಮ್ಮ ಶಕ್ತಿ ಎಂದು ಸದಾ ಹೇಳಿಕೊಂಡು ಬಂದಿದ್ದಾರೆ. ಇದೀಗ ​​ಪ್ರಿಯಾ ಸುದೀಪ್ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ.

ಸ್ಯಾಂಡಲ್​ವುಡ್ ಬಾದ್ ಷಾ ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಸುದೀಪ್‌ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ದಿನದಂದು ಅವರು ಹೊಸ ಹೆಜ್ಜೆ ಇಟ್ಟಿದ್ದಾರೆ. ಈಗಾಗಲೇ ನಿರ್ಮಾಪಕಿ ಹಾಗೂ ವಿತರಕಿಯಾಗಿರುವ ಪ್ರಿಯಾ ಸುದೀಪ್, ಪ್ರತಿಭಾನ್ವಿತ ಕಲಾವಿದರಿಗೆ ಅವಕಾಶ ಕಲ್ಪಿಸಲು ಮುಂದಾಗಿದ್ದಾರೆ.

ಪ್ರಿಯಾ ಸುದೀಪ್ ಅವರು 'ಸುಪ್ರಿಯಾನ್ವಿ' ಮೂಲಕ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರುವುದು ಗೊತ್ತೇ ಇದೆ. ಇವರ ನಿರ್ಮಾಣದ 'ಮ್ಯಾಂಗೋ ಪಚ್ಚ' ಚಿತ್ರದ ಮೂಲಕ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ನಾಯಕರಾಗುತ್ತಿದ್ದಾರೆ.‌ ಈ ಸಿನಿಮಾ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಅಲ್ಲದೇ ಇತ್ತೀಚೆಗೆ ಮ್ಯಾಕ್ಸ್ ಚಿತ್ರವನ್ನೂ ರಾಜ್ಯಾದ್ಯಂತ ವಿತರಿಸಿದ್ದರು. ಇದೀಗ ತಮ್ಮದೇ 'ಸುಪ್ರಿಯಾನ್ವಿ‌' ಮೂಲಕ ಹೊಸ ಪ್ರತಿಭೆಗಳಿಗೆ ವೇದಿಕೆ‌ ಕಲ್ಪಿಸಲು ತೀರ್ಮಾನ ಮಾಡಿದ್ದಾರೆ.

ಪ್ರಿಯಾ ಸುದೀಪ್ ಹುಟ್ಟುಹಬ್ಬಕ್ಕೆ ನಿರ್ಮಾಣ‌ ಸಂಸ್ಥೆಯಾದ 'ಸುಪ್ರಿಯಾನ್ವಿ‌ ಪಿಕ್ಚರ್​ ಸ್ಟುಡಿಯೋ'ದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಿಯಾ ಸುದೀಪ್, ''ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋಸ್‌ನ ಲೋಗೋ ಅನಾವರಣ ಇಲ್ಲಿದೆ. ಭದ್ರಕಾಳಿ ಮಾತೆಯ ಪವಿತ್ರ ಆಶೀರ್ವಾದ ಮತ್ತು ನಮ್ಮ ಅಮೂಲ್ಯ ಪ್ರೇಕ್ಷಕರ ಆತ್ಮೀಯ ಪ್ರೋತ್ಸಾಹವನ್ನು ನಾವು ಕೋರುತ್ತಾ, ನಮ್ಮ ಕಥೆಗಳು ನಿಮ್ಮ ಕಲ್ಪನೆಯನ್ನು ಬೆಳಗಿಸಲಿ ಮತ್ತು ನಿಮ್ಮ ಹೃದಯ ಮತ್ತು ಮನಸ್ಸಿನಲ್ಲಿ ಉಳಿಯಲಿ'' ಎಂದು ಬರೆದುಕೊಂಡಿದ್ದಾರೆ.

Supriyanvi Picture
ಸುಪ್ರಿಯಾನ್ವಿ ಪಿಕ್ಚರ್ (Photo: Poster)

ಈ ಕ್ಷಣವು ಬಲವಾದ ಕಂಟೆಂಟ್, ಹೊಸ ಧ್ವನಿಗಳು ಮತ್ತು ಪ್ರಭಾವಶಾಲಿ ಸಿನಿಮಾಗಳಿಗೆ ಮೀಸಲಾಗಿರುವ ಸೃಜನಾತ್ಮಕ ವೇದಿಕೆಯ ಪ್ರಾರಂಭವನ್ನು ಸೂಚಿಸುತ್ತದೆ. ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಅರ್ಥಪೂರ್ಣ ಸಿನಿಮಾ ಮತ್ತು ಶಕ್ತಿಯುತ ಕಥೆಗಳ ಭರವಸೆಯೊಂದಿಗೆ ಮುಂದುವರಿಯುತ್ತದೆ. ಹೊಸ ಪ್ರಯಾಣ ಇಂದು ಪ್ರಾರಂಭವಾಗುತ್ತದೆ - ಮುಂದಿನದಕ್ಕಾಗಿ ಸಿದ್ಧ ಆಗಿರಿ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಉಪ್ಪಿ ಬಣ್ಣ ಹಚ್ಚಿ 37 ವರ್ಷ: ಡೈರೆಕ್ಷನ್ To ಹೀರೋ; ಅಪಶಕುನಗಳಿಗೆ ಕುಗ್ಗದ ರಿಯಲ್​ ಸ್ಟಾರ್​​ ರಿಯಲ್​ ಸ್ಟೋರಿ

ಸುಪ್ರಿಯಾನ್ವಿ ಪ್ರೊಡಕ್ಷನ್ ಅಡಿ‌ ಹೊಸ ಹೊಸ ಕಥೆಗಳಿಗೆ, ಪ್ರತಿಭಾನ್ವಿತ ಕಲಾವಿದರಿಗೆ ಅವಕಾಶ ಕಲ್ಪಿಸಲು ಪ್ರಿಯಾ ಸುದೀಪ್ ಮುಂದಾಗಿದ್ದಾರೆ. ವಿಭಿನ್ನ ಬಗೆಯ ಕಂಟೆಂಟ್ ಆಧಾರಿತ ಸಿನಿಮಾಗಳು ಸುಪ್ರಿಯಾನ್ವಿ ಪ್ರೊಡಕ್ಷನ್ ನಡಿ ಮೂಡಿ ಬರಲಿದೆ. ಸಿನಿಮಾಗಳು ಶೀಘ್ರದಲ್ಲೇ ಘೋಷಣೆಯಾಗಲಿದೆ.

ಇದನ್ನೂ ಓದಿ: Interview: ಆಟೋ ಡ್ರೈವರ್ ಆಗಿದ್ದ ರವಿವರ್ಮ ಇಂದು ಪ್ಯಾನ್ ಇಂಡಿಯಾ ಸಾಹಸ ನಿರ್ದೇಶಕ

ಸುದೀಪ್​ ಅವರ ಸಿನಿಮಾ ವಿಚಾರ ಗಮನಿಸೋದಾದ್ರೆ, 2025ರ ಕ್ರಿಸ್ಮಸ್​ಗೆ ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಿದ ಮಾರ್ಕ್​​ ನಿರೀಕ್ಷೆಯಂತೆ ಯಶಸ್ಸು ಕಂಡಿದೆ. ಸತ್ಯ ಜ್ಯೋತಿ ಫಿಲ್ಮ್ಸ್ ಹಾಗೂ ಕಿಚ್ಚ ಕ್ರಿಯೇಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡ ಮಾರ್ಕ್​​​ ಚಿತ್ರಮಂದಿರಗಳಲ್ಲಿ ಪ್ರದರ್ಶನ ಮುಂದುವರಿಸಿದೆ. ನಟನ ಮುಂದಿನ ಚಿತ್ರಗಳಿಗಾಗಿ ಅಭಿಮಾನಿಗಳು ಕಾತರರಾಗಿದ್ದು, 'ಸುಪ್ರಿಯಾನ್ವಿ‌ ಪಿಕ್ಚರ್​ ಸ್ಟುಡಿಯೋ'ದಡಿ ಹೊಸ ಸಿನಿಮಾ ಮೂಡಿಬರಲಿದೆಯಾ ಎಂದು ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸಿದ್ದಾರೆ.