ETV Bharat / entertainment

'ಗರ್ಭಿಣಿಯಾಗಿದ್ದಾಗ ಎಷ್ಟು ಸುಂದರವಾಗಿ ಕಾಣುತ್ತಿದ್ದೀರೆಂದವರು, ಹೆರಿಗೆ ನಂತರ ದೈಹಿಕ ನೋಟವನ್ನು ಟೀಕಿಸುತ್ತಾರೆ': ಕಿಯಾರಾ

ಹೆರಿಗೆಯ ನಂತರ ಮಹಿಳೆಯರಿಗೆ ಹೆಚ್ಚಿನ ಬೆಂಬಲ ಬೇಕು. ಹೊಸ ಅಧ್ಯಾಯಕ್ಕೆ ಕಾಲಿಡುವಾಗ ಸಮಾಜ ಮಹಿಳೆಗೆ ಬೆಂಬಲವಾಗಿ ನಿಲ್ಲಬೇಕು ಎಂದು ಹಿಂದಿ ಚಿತ್ರನಟಿ ಕಿಯಾರಾ ಅಡ್ವಾಣಿ ತಿಳಿಸಿದ್ದಾರೆ.

Actress Kiara Advani
ನಟಿ ಕಿಯಾರಾ ಅಡ್ವಾಣಿ (IANS)
author img

By ETV Bharat Entertainment Team

Published : June 1, 2026 at 5:23 PM IST

3 Min Read
Choose ETV Bharat

ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿರುವ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ತಾಯ್ತನ, ಮಹಿಳೆಯರು ಎದುರಿಸುತ್ತಿರುವ ಸವಾಲುಗಳು ಮತ್ತು ಸಮಾಜದಿಂದ ಅವರಿಗೆ ಸಿಗುವ ಟೀಕೆಗಳ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ತಾಯಿಯಾದ ನಂತರ ತಮ್ಮ ಜೀವನದಲ್ಲಾದ ಬದಲಾವಣೆಗಳನ್ನು ಹಂಚಿಕೊಂಡರು. ತಾಯ್ತನ ಎಂದರೆ ಮಗುವನ್ನು ಬೆಳೆಸುವುದು ಮಾತ್ರವಲ್ಲ, ಈ ಹೊಸ ಅಧ್ಯಾಯಕ್ಕೆ ಕಾಲಿಡುವಾಗ ಸಮಾಜ ಮಹಿಳೆಗೆ ಬೆಂಬಲವಾಗಿ ನಿಲ್ಲಬೇಕು ಎಂದು ತಿಳಿಸಿದರು.

ಗರ್ಭಾವಸ್ಥೆಯಲ್ಲಿ ಮಹಿಳೆಯರನ್ನು ಬಹಳ ವಿಶೇಷತೆಯಿಂದ ನಡೆಸಿಕೊಳ್ಳಲಾಗುತ್ತದೆ, ಆದರೆ ಮಗು ಜನಿಸಿದ ಕ್ಷಣದಿಂದ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗುತ್ತದೆ ಎಂದು ಹೇಳಿದರು. ಗರ್ಭಿಣಿಯಾಗಿದ್ದಾಗ "ನೀವು ಎಷ್ಟು ಸುಂದರವಾಗಿ ಕಾಣುತ್ತಿದ್ದೀರಿ" ಅಥವಾ "ನೀವು ಹೊಳೆಯುತ್ತಿದ್ದೀರಿ" ಎಂದು ಹೇಳಿ ಅವರನ್ನು ಹೊಗಳಿದ ಜನರು ಹೆರಿಗೆಯ ನಂತರ ಅವರ ದೈಹಿಕ ನೋಟವನ್ನು ಕುರಿತು ಕಾಮೆಂಟ್‌ಗಳನ್ನು ಮಾಡಲು ಪ್ರಾರಂಭಿಸುತ್ತಾರೆ ಎಂದು ನಟಿ ತಿಳಿಸಿದರು.

ಮಹಿಳೆಯರಿಗೆ ನಿಜವಾಗಿಯೂ ಕಷ್ಟಕರ ಹಂತವು ಹೆರಿಗೆಯ ನಂತರವೇ ಪ್ರಾರಂಭವಾಗುತ್ತದೆ ಎಂದು ಕಿಯಾರಾ ಹೇಳಿದ್ದಾರೆ. "ನೀವು ಗರ್ಭಿಣಿಯಾಗಿರುವಾಗ, ಎಲ್ಲರೂ ನಿಮ್ಮನ್ನು ದೇವತೆಯಂತೆ ನೋಡಿಕೊಳ್ಳುತ್ತಾರೆ. ಆದರೆ ಮಗು ಜನಿಸಿದ ಕ್ಷಣ, ನೀವು ನಿಮ್ಮ ಹಳೆಯ ದೇಹಕ್ಕೆ ಮರಳುತ್ತೀರಿ ಮತ್ತು ತಕ್ಷಣ ಕೆಲಸಕ್ಕೆ ಮರಳುತ್ತೀರಿ ಎಂದು ಅವರು ನಿರೀಕ್ಷಿಸುತ್ತಾರೆ. ಅದಾಗ್ಯೂ, ಮಹಿಳೆಯರಿಗೆ ನಿಜವಾಗಿಯೂ ಸವಾಲಿನ ಹಂತವು ಹೆರಿಗೆಯ ನಂತರ ಪ್ರಾರಂಭವಾಗುತ್ತದೆ. ಆಗಲೇ ಅವರಿಗೆ ಬೆಂಬಲದ ಅಗತ್ಯವಿರುತ್ತದೆ" ಎಂದು ಹೇಳಿದರು.

"ತಾಯ್ತನವು ನನ್ನ ಜೀವನವನ್ನು ಸಂಪೂರ್ಣವಾಗಿ ಪರಿವರ್ತಿಸಿದೆ. ಈ ಅನುಭವವು ಪ್ರತಿಯೊಂದು ವಿಷಯದಲ್ಲೂ ಅಮೂಲ್ಯವಾಗಿದೆ. ನಾನು ಈಗ ಕೆಲಸ ಮಾಡುವ ನಿರ್ದೇಶಕರು ನನ್ನ ಅತ್ಯುತ್ತಮ ಅಭಿನಯಕ್ಕೆ ಸಾಕ್ಷಿಯಾಗುತ್ತಾರೆ. ತಾಯ್ತನವು ನನ್ನ ಜೀವನದಲ್ಲಿ ಹೊಸ ಆಯಾಮವನ್ನು ತೆರೆದಿದೆ. ಪ್ರಪಂಚದ ಬಗ್ಗೆ ನನ್ನ ದೃಷ್ಟಿಕೋನ ಬದಲಾಗಿದೆ" ಎಂದು ಹೇಳಿದರು.

ತಾಯಂದಿರಾದ ನಂತರ ಮಹಿಳೆಯರು ಅನುಭವಿಸುವ ದೈಹಿಕ ಮತ್ತು ಮಾನಸಿಕ ಬದಲಾವಣೆಗಳ ಬಗ್ಗೆ ಮುಕ್ತವಾಗಿ ಮಾತನಾಡುವ ಅವಶ್ಯಕತೆಯಿದೆ ಎಂದು ಕಿಯಾರಾ ಅಭಿಪ್ರಾಯ ವ್ಯಕ್ತಪಡಿಸಿದರು. ಹೆರಿಗೆಯ ನಂತರ ತಮಗೂ ಕೆಲ ಚರ್ಮ ಸಂಬಂಧಿತ ಸಮಸ್ಯೆಗಳು ಎದುರಾಗಿವೆ ಎಂದು ಬಹಿರಂಗಪಡಿಸಿದರು. ಆರಂಭದಲ್ಲಿ ಆತಂಕವನ್ನುಂಟು ಮಾಡಿದರೂ, ಅಂತಿಮವಾಗಿ ಅವುಗಳನ್ನು ಸ್ವೀಕರಿಸಲು ಕಲಿತೆ ಎಂಬುದನ್ನು ಸಂದರ್ಶನದಲ್ಲಿ ಒಪ್ಪಿಕೊಂಡರು.

ತಾಯ್ತನವು ತಮಗೆ ಹೆಚ್ಚಿನ ಪ್ರೀತಿ ಮತ್ತು ದಯೆ ತೋರಿಸಲು ಕಲಿಸಿದೆ ಎಂದು ಸಹ ಇದೇ ವೇಳೆ ತಿಳಿಸಿದರು. "ನಾನು ಈಗ ಮೊದಲಿನಂತೆ ಇಲ್ಲ. ನಾನೀಗ ಸಂಪೂರ್ಣವಾಗಿ ವಿಭಿನ್ನವಾಗಿ ಯೋಚಿಸುತ್ತೇನೆ. ಭಯಕ್ಕೆ ಅವಕಾಶ ನೀಡದೇ ಜೀವನದಲ್ಲಿ ಮುಂದುವರಿಯಲು ನಾನು ಕಲಿತಿದ್ದೇನೆ. ಗಡಿ ನಿಗದಿಪಡಿಸುವುದು ಮತ್ತು ಅವುಗಳನ್ನು ಗೌರವಿಸುವುದು - ಈ ಹಂತದಲ್ಲಿ ನಾನು ಕಲಿತ ಪ್ರಮುಖ ಪಾಠಗಳಾಗಿವೆ" ಎಂದು ಕಿಯಾರಾ ಹಂಚಿಕೊಂಡರು.

ಗೃಹಿಣಿ ಅಥವಾ ತಾಯಿ ವಹಿಸಿಕೊಳ್ಳುವ ಜವಾಬ್ದಾರಿಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ತುಂಬಾನೇ ಕಷ್ಟ ಎಂದು ಕಿಯಾರಾ ಹೇಳಿದ್ದಾರೆ. ಯಾರೇ ಆಗಿರಲಿ ತಮ್ಮ ವೃತ್ತಿಜೀವನದಲ್ಲಿ ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದರೂ, ತಾಯಿಯಾಗುವುದರಲ್ಲಿ ಒಳಗೊಂಡಿರುವ ಜವಾಬ್ದಾರಿಗಳು ಮತ್ತು ಸಮರ್ಪಣೆ ತುಂಬಾ ದೊಡ್ಡದು. ಈ ಕಾರಣಕ್ಕಾಗಿಯೇ, ತಾಯಂದಿರಿಗೆ ಇನ್ನೂ ಹೆಚ್ಚಿನ ಗೌರವವನ್ನು ನೀಡುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಈ ಪ್ರಯಾಣವು ತನ್ನನ್ನು ಹೆಚ್ಚು ಪ್ರಬುದ್ಧಳನ್ನಾಗಿ ಮಾಡಿದೆ ಮತ್ತು ಜೀವನದ ಸಣ್ಣಪುಟ್ಟ ವಿಷಯಗಳನ್ನು ಸಹ ಹೊಸ ದೃಷ್ಟಿಕೋನದಿಂದ ನೋಡಲು ಅನುವು ಮಾಡಿಕೊಟ್ಟಿದೆ ಎಂದು ಹಂಚಿಕೊಂಡರು. ಕಿಯಾರಾ ಮತ್ತು ನಟ ಸಿದ್ಧಾರ್ಥ್ ಮಲ್ಹೋತ್ರಾ ಜುಲೈ 15, 2025ರಂದು ಮಗಳನ್ನು ಬರಮಾಡಿಕೊಂಡರು. ಮಗುವಿನ ಜನನದ ನಂತರ, ನಟಿ ತಮ್ಮ ವೃತ್ತಿಪರ ಜವಾಬ್ದಾರಿಗಳನ್ನೂ ನಿರ್ವಹಿಸುತ್ತಿದ್ದಾರೆ ಮತ್ತು ಕೌಟುಂಬಿಕ ಜೀವನವನ್ನೂ ಗೌರವಿಸುತ್ತಿದ್ದಾರೆ.

ಇದನ್ನೂ ಓದಿ: 'ಇಂದಿನಿಂದ, ಕಪ್ ನಮ್ಮದೇ': ಸತತ 2ನೇ ಬಾರಿ ಟ್ರೋಫಿ ಗೆದ್ದ RCBಗೆ ಕನ್ನಡ ಸೆಲೆಬ್ರಿಟಿಗಳಿಂದ ಜೈಕಾರ

ಕಿಯಾರಾ ಗರ್ಭಿಣಿಯಾಗಿದ್ದಾಗಲೂ ಕೆಲಸ ಮಾಡಿ ಗಮನ ಸೆಳೆದಿದ್ದರು. ಟಾಕ್ಸಿಕ್ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಈ ಸಮಯ ಅವರು ಹಲವಾರು ಸಂಕೀರ್ಣ ಸಾಹಸ ಸನ್ನಿವೇಶಗಳನ್ನು ಸಹ ಪೂರ್ಣಗೊಳಿಸಿದರು. ಮಗುವಿಗೆ ಜನ್ಮ ನೀಡಿದ ಕೇವಲ ಐದು ತಿಂಗಳ ನಂತರ ಸೆಟ್‌ಗೆ ಮರಳುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು. ತಾಯಿಯಾಗಿ ತಮ್ಮ ಹೊಸ ಜವಾಬ್ದಾರಿಗಳನ್ನು ತಮ್ಮ ವೃತ್ತಿಜೀವನದೊಂದಿಗೆ ಸಮತೋಲನಗೊಳಿಸುವ ಮೂಲಕ, ಕಿಯಾರಾ ಅನೇಕ ಮಹಿಳೆಯರಿಗೆ ಸ್ಫೂರ್ತಿಯಾಗಿ ನಿಂತಿದ್ದಾರೆ.

ಇದನ್ನೂ ಓದಿ: 'ಕೊರಗಜ್ಜ' ಬಿಡುಗಡೆಗೂ ಮುನ್ನ ನಿರ್ದೇಶಕ ಸುಧೀರ್ ಅತ್ತಾವರ್​​ಗೆ ಕೋಟಿ ಬೆಲೆ ಬಾಳುವ ಗಿಫ್ಟ್ ನೀಡಿದ ನಿರ್ಮಾಪಕ

ಬಾಲಿವುಡ್​ನಲ್ಲಿ ಬೇಡಿಕೆ ಹೊಂದಿರುವ ಕಿಯಾರಾ ಅಡ್ವಾಣಿ ಅವರು ಕೆಜಿಎಫ್​​​ ಸ್ಟಾರ್ ಯಶ್​ ಮುಖ್ಯಭೂಮಿಕೆಯ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಕನ್ನಡಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಈ ಬಹುನಿರೀಕ್ಷಿತ ಚಿತ್ರವನ್ನು ಗೀತು ಮೋಹನ್ ದಾಸ್ ನಿರ್ದೇಶಿಸಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಚಿತ್ರೀಕರಿಸಲಾದ ಈ ಚಿತ್ರ ಶೀಘ್ರದಲ್ಲೇ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ.