ETV Bharat / entertainment

'ಕಾಂತಾರ'ಕ್ಕೆ ಮತ್ತೊಂದು ಗರಿ: ಪ್ರತಿಷ್ಠಿತ ಆಸ್ಕರ್​ ರೇಸ್​ಗೆ ಕನ್ನಡದ ಬ್ಲಾಕ್​​​ಬಸ್ಟರ್ ಸಿನಿಮಾ ಎಂಟ್ರಿ

'ಕಾಂತಾರ: ಚಾಪ್ಟರ್ 1' ಮತ್ತು 'ತನ್ವಿ: ದಿ ಗ್ರೇಟ್' ಸಿನಿಮಾಗಳು 'ಅತ್ಯುತ್ತಮ ಚಿತ್ರ' (Best Picture race) ವಿಭಾಗದ ರೇಸ್‌ಗೆ ಪ್ರವೇಶ ಪಡೆದುಕೊಂಡಿದೆ. ಮತದಾನಗಳ ನಂತರ ಫೈನಲ್​ ನಾಮಿನೇಷನ್ಸ್​ ಹೊರಬೀಳಲಿದೆ.

'Kantara: Chapter 1', 'Tanvi The Great' join Oscars 2026 race
ಆಸ್ಕರ್​ ರೇಸ್​ಗೆ ತನ್ವಿ, ಕಾಂತಾರ ಚಾಪ್ಟರ್ 1 ಸಿನಿಮಾಗಳು ಎಂಟ್ರಿ (Photo: Film Posters)
author img

By ETV Bharat Entertainment Team

Published : January 9, 2026 at 9:55 AM IST

2 Min Read
Choose ETV Bharat

98ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ದಿನಗಣನೆ ಶುರುವಾಗಿದೆ. ಭಾರತೀಯ ಸಿನಿಮಾಗಳು ರೇಸ್​ನಲ್ಲಿದ್ದು, ಫೈನಲ್​ ನಾಮಿನೇಷನ್ಸ್​​ ಸದ್ಯದಲ್ಲೇ ಹೊರಬೀಳಲಿದೆ. ಆ ಪೈಕಿ, ಕನ್ನಡ ಚಿತ್ರರಂಗದ ಕೀರ್ತಿ ಪತಾಕೆಯನ್ನು ದೇಶಾದ್ಯಂತ ಹಾರಿಸಿದ 'ಕಾಂತಾರ: ಚಾಪ್ಟರ್ 1'​ ಕೂಡಾ ಸ್ಪರ್ಧೆಗಿಳಿದಿದೆ.

ಡಿವೈನ್​ ಸ್ಟಾರ್​​ ರಿಷಬ್ ಶೆಟ್ಟಿ ಸಾರಥ್ಯದ 'ಕಾಂತಾರ: ಎ ಲೆಜೆಂಡ್ - ಅಧ್ಯಾಯ 1' ಮತ್ತು ಅನುಪಮ್ ಖೇರ್ ಅವರ 'ತನ್ವಿ: ದಿ ಗ್ರೇಟ್' ಚಿತ್ರಗಳು 98ನೇ ಆಸ್ಕರ್‌ನಲ್ಲಿ ಪರಿಗಣನೆಗೆ ಅರ್ಹವಾಗಿರುವ 201 ಸಿನಿಮಾಗಳ ಲಿಸ್ಟ್​ಗೆ (Best Picture race) ಸೇರಿಕೊಂಡಿವೆ.

ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ (AMPAS) ಪ್ರತಿಷ್ಠಿತ ಅತ್ಯುತ್ತಮ ಚಿತ್ರ ಸ್ಪರ್ಧೆಗೆ ನೇರವಾಗಿ ಅರ್ಹತೆ ಪಡೆಯುವ 201 ಅರ್ಹ ಚಲನಚಿತ್ರಗಳ ಹೆಸರನ್ನು ಬಹಿರಂಗಪಡಿಸಿದೆ. ಅಕಾಡೆಮಿಯ ಪ್ರಕಾರ, ಅತ್ಯುತ್ತಮ ಚಿತ್ರಕ್ಕಾಗಿ ಅರ್ಹ ಚಲನಚಿತ್ರಗಳು ಸಾಮಾನ್ಯ ಪ್ರವೇಶಕ್ಕೆ ಬೇಕಾಗಿರುವ ಎಲ್ಲಾ ಹೆಚ್ಚುವರಿ ಅರ್ಹತಾ ಅವಶ್ಯಕತೆಗಳನ್ನು ಪೂರೈಸಿವೆ.

ಹೊಂಬಾಳೆ ಫಿಲ್ಮ್ಸ್​ ಪೋಸ್ಟ್​: ''ನಮ್ಮ ಸಂಸ್ಕೃತಿಯಲ್ಲಿ ಬೇರೂರಿದೆ, ದೈವತ್ವದಿಂದ ನಡೆಸಲ್ಪಡುತ್ತಿದೆ. ಆಸ್ಕರ್ ಅಕಾಡೆಮಿ ಪ್ರಶಸ್ತಿಗಳು 2026ರಲ್ಲಿ ಕಾಂತಾರ ಅಧ್ಯಾಯ 1 ಅತ್ಯುತ್ತಮ ಚಿತ್ರ ಸ್ಪರ್ಧೆಗೆ (Best Picture contending race) ಪ್ರವೇಶಿಸಿದ್ದು ಹೆಮ್ಮೆಯ ಕ್ಷಣ'' ಎಂದು 2025ರ ಬ್ಲಾಕ್​ಬಸ್ಟರ್ ಚಿತ್ರ ಕಾಂತಾರ ಚಾಪ್ಟರ್ 1ನ್ನು ನಿರ್ಮಾಣ ಮಾಡಿದ ಕನ್ನಡದ ಪ್ರತಿಷ್ಠಿತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಬರೆದುಕೊಂಡಿದೆ. ಡಿವೈನ್​​​ ಸ್ಟಾರ್​ನ ಪೋಸ್ಟರ್​ ಅನ್ನೂ ಇಲ್ಲಿ ಹಂಚಿಕೊಳ್ಳಲಾಗಿದೆ.

2025ರ ನವೆಂಬರ್ ಆರಂಭದಲ್ಲಿ, ಅಕಾಡೆಮಿಯು ಅತ್ಯುತ್ತಮ ಸಾಕ್ಷ್ಯಚಿತ್ರ, ಅನಿಮೇಟೆಡ್ ಫೀಚರ್ ಮತ್ತು ಇಂಟರ್​ನ್ಯಾಷನಲ್​​ ಫೀಚರ್​​ ಫಿಲ್ಮ್​ಗೆ ಅರ್ಹವಾದ ಚಲನಚಿತ್ರಗಳನ್ನು ಬಹಿರಂಗಪಡಿಸಿತು. ಆಸ್ಕರ್​ನ ಅಂತಿಮ ನಾಮನಿರ್ದೇಶನಗಳು ಜನವರಿ 22ರಂದು ಪ್ರಕಟಗೊಳ್ಳಲಿದೆ.

ಯಶಸ್ವಿ ಸಿನಿಮಾಗಳ ಸರದಾರ ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ 'ಕಾಂತಾರ: ಅಧ್ಯಾಯ 1' ಸಿನಿಮಾ ತುಳುನಾಡಿನಲ್ಲಿ ಹೆಚ್ಚು ಆಚರಿಸಲ್ಪಡುವ, ನಂಬಲ್ಪಡುವ ದೈವಾರಾಧನೆಯ ಮೂಲದ ಸುತ್ತ ಸುತ್ತುತ್ತದೆ. ನಾಲ್ಕನೇ ಶತಮಾನದ ಕದಂಬ ರಾಜವಂಶ, ಕಾಂತಾರ ಅರಣ್ಯ ಮತ್ತು ಅದರ ಬುಡಕಟ್ಟು ಸಮುದಾಯಗಳ ರಕ್ಷಕ ಬೆರ್ಮೆ ಪಾತ್ರವನ್ನು ನಿರ್ವಹಿಸಿದ ರಿಷಬ್ ಶೆಟ್ಟಿ ಕಥೆಯ ಸುತ್ತ ಸಿನಿಮಾ ಸಾಗುತ್ತದೆ.

ಇದನ್ನೂ ಓದಿ: Interview: ಆಟೋ ಡ್ರೈವರ್ ಆಗಿದ್ದ ರವಿವರ್ಮ ಇಂದು ಪ್ಯಾನ್ ಇಂಡಿಯಾ ಸಾಹಸ ನಿರ್ದೇಶಕ

ಡಿವೈನ್​ ಸ್ಟಾರ್​ ರಿಷಬ್ ಶೆಟ್ಟಿ ಬರೆದು, ನಟಿಸಿ, ನಿರ್ದೇಶಿಸಿರುವ 'ಕಾಂತಾರ ಚಾಪ್ಟರ್ 1' ಸಿನಿಮಾ 2025ರ ಅಕ್ಟೋಬರ್​​ 2ರಂದು ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಿತು. ಅಕ್ಟೋಬರ್ 31ರಂದು ಒಟಿಟಿ ಪ್ಲ್ಯಾಟ್​ಫಾರ್ಮ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರ ಪ್ರಾರಂಭಿಸಿರುವ ಈ ಚಿತ್ರದಲ್ಲಿ ರುಕ್ಮಿಣಿ ವಸಂತ್, ಜಯರಾಮ್ ಮತ್ತು ಗುಲ್ಶನ್ ದೇವಯ್ಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 30+ ದೇಶಗಳಲ್ಲಿ ಬಿಡುಗಡೆ ಆಗಿರುವ ಸಿನಿಮಾ ಗ್ಲೋಬಲ್​ ಬಾಕ್ಸ್​ ಆಫೀಸ್​​ನಲ್ಲಿ ಸರಿ-ಸುಮಾರು 850 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ.

ಇದನ್ನೂ ಓದಿ: 1 ಚಿತ್ರ, 4 ವರ್ಷ, 5 ಚೆಲುವೆಯರು, ಇದು ಕೆಜಿಎಫ್​ ಸ್ಟಾರ್ ಕ್ರೇಜ್​​: 'ಟಾಕ್ಸಿಕ್' ನಟಿಯರ ಬಗ್ಗೆ ನಿರ್ದೇಶಕಿ ಗುಣಗಾನ

ಬಾಲಿವುಡ್​​ ಹಿರಿಯ ನಟ ಅನುಪಮ್ ಖೇರ್ ನಿರ್ದೇಶನದ 'ತನ್ವಿ ದಿ ಗ್ರೇಟ್' ಚಿತ್ರದಲ್ಲಿ ಶುಭಾಂಗಿ ದತ್ ಅವರು ತನ್ವಿ ರೈನಾ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಆಟಿಸಂ ಮತ್ತು ಭಾರತೀಯ ಸೇನೆಯ ವಿಷಯಗಳನ್ನು ಒಳಗೊಂಡಿದೆ. ಶುಭಾಂಗಿ ತಮ್ಮ ದಿವಂಗತ ತಂದೆಯ ಸೇನಾ ಸೇವೆಯಿಂದ ಪ್ರೇರಿತರಾಗಿ, ಅವರ ಹಾದಿಯನ್ನು ಅನುಸರಿಸುವ ಕನಸು ಕಾಣುವ ಯುವತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಪ್ರಸಿದ್ಧ ನಟ ಅನುಪಮ್ ಖೇರ್, ಜಾಕಿ ಶ್ರಾಫ್, ಬೋಮನ್ ಇರಾನಿ ಮತ್ತು ಕರಣ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ 2025ರ ಜುಲೈ 18ರಮದು ಬಿಡುಗಡೆಯಾಯಿತು.