ETV Bharat / entertainment

'ವಿಜಯ್​ 'ಜನ ನಾಯಗನ್' ವಿಶ್ವಾದ್ಯಂತ ಬಿಡುಗಡೆಗೊಳಿಸಲು ಉತ್ಸುಕನಾಗಿದ್ದೇನೆ': ಕನ್ನಡ ನಿರ್ಮಾಪಕ ವೆಂಕಟ್

ಬಹುನಿರೀಕ್ಷಿತ 'ಜನ ನಾಯಗನ್' ಚಿತ್ರವನ್ನು ವಿಶ್ವದಾದ್ಯಂತ ಪ್ರೇಕ್ಷಕರ ಮುಂದೆ ತರಲು ಉತ್ಸುಕನಾಗಿದ್ದೇನೆ ಎಂದು ಕನ್ನಡ ನಿರ್ಮಾಪಕ ವೆಂಕಟ್ ಕೆ.ನಾರಾಯಣ್​ ತಿಳಿಸಿದ್ದಾರೆ.

Producer Venkat K Narayana, Thalapathy Vijay
ನಿರ್ಮಾಪಕ ವೆಂಕಟ್ ಕೆ ನಾರಾಯಣ್, ದಳಪತಿ ವಿಜಯ್ (Photo: ETV Bharat)
author img

By ETV Bharat Entertainment Team

Published : January 5, 2026 at 2:37 PM IST

2 Min Read
Choose ETV Bharat

ಇಡೀ ಭಾರತೀಯ ಚಿತ್ರರಂಗವೇ ಎದುರು ನೋಡುತ್ತಿರುವ ಬಹುನಿರೀಕ್ಷಿತ 'ಜನ ನಾಯಗನ್' (ಜನ ನಾಯಕನ್/Jana Nayagan) ಚಿತ್ರದ ಟ್ರೇಲರ್​​ ಶನಿವಾರ ಸಂಜೆ ಅನಾವರಣಗೊಂಡಿದ್ದು, ಇಡೀ ಇಂಟರ್ನೆಟ್ ಲೋಕದಲ್ಲಿ ಸಂಚಲನ ಸೃಷ್ಟಿಸಿದೆ. ಬಿಡುಗಡೆಯಾದ ಕೇವಲ 5 ನಿಮಿಷಗಳಲ್ಲಿ 5 ಮಿಲಿಯನ್​​ಗೂ ಹೆಚ್ಚು ರಿಯಲ್ ಟೈಮ್ ವೀಕ್ಷಣೆಗಳನ್ನು ಪಡೆಯುವ ಮೂಲಕ ಈ ಟ್ರೇಲರ್ ಹೊಸ ಇತಿಹಾಸ ಸೃಷ್ಟಿಸಿದೆ.

2 ನಿಮಿಷ 52 ಸೆಕೆಂಡುಗಳಷ್ಟಿರುವ ದಿ ಮೋಸ್ಟ್​ ಎಕ್ಸ್​ಪೆಕ್ಟೆಡ್​​​​ ಸಿನಿಮಾ ಅದ್ಭುತ ಆ್ಯಕ್ಷನ್, ರೋಮಾಂಚಕ ಸಂಗೀತ ಮತ್ತು ಭಾವನಾತ್ಮಕ ಸನ್ನಿವೇಶಗಳಿಂದ ಕೂಡಿದೆ. ಪ್ರೇಕ್ಷಕರು ಚಿತ್ರದ ಭರ್ಜರಿ ಮೇಕಿಂಗ್ ಮತ್ತು ವಿಜಯ್ ಅವರ ಸ್ವಾಗ್‌ಗೆ ಫಿದಾ ಆಗಿದ್ದು, ಇದೊಂದು ಕಂಪ್ಲೀಟ್ ಫ್ಯಾಮಿಲಿ ಎಂಟರ್ಟೈನರ್ ಆಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಭಿಮಾನಿಗಳು ತಮ್ಮ ಮೆಚ್ಚಿನ ನಟನ ಸಿನಿಮಾ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಯಶಸ್ಸಿನ ಕುರಿತು ಮಾತನಾಡಿದ ನಿರ್ಮಾಪಕ ವೆಂಕಟ್ ಕೆ.ನಾರಾಯಣ್, "ಮಲೇಷ್ಯಾದಲ್ಲಿ ನಡೆದ ಆಡಿಯೋ ಲಾಂಚ್‌ಗೆ ಸಿಕ್ಕ ಅಭೂತಪೂರ್ವ ಸ್ಪಂದನೆಯೇ ವಿಜಯ್ ಸರ್ ಮತ್ತು ಅವರ ಅಭಿಮಾನಿಗಳ ನಡುವಿನ ಬಾಂಧವ್ಯಕ್ಕೆ ಸಾಕ್ಷಿ. ಮಲೇಷ್ಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ನಮ್ಮ ಚಿತ್ರ ಸೇರ್ಪಡೆ ಆಗಿರುವುದು ಹೆಮ್ಮೆಯ ವಿಷಯ. ಈಗ ಟ್ರೇಲರ್ ಸೃಷ್ಟಿಸಿರುವ ಈ ಅಬ್ಬರವು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಜನವರಿ 9, 2026ರಂದು ಈ ಭವ್ಯ ಚಿತ್ರವನ್ನು ವಿಶ್ವದಾದ್ಯಂತ ಪ್ರೇಕ್ಷಕರ ಮುಂದೆ ತರಲು ನಾವು ಉತ್ಸುಕರಾಗಿದ್ದೇವೆ" ಎಂದು ತಿಳಿಸಿದ್ದಾರೆ.

2026ರ ಬಹುನಿರೀಕ್ಷಿತ ಚಿತ್ರದಲ್ಲಿ ಸೌತ್ ಸೂಪರ್​ ಸ್ಟಾರ್ ದಳಪತಿ ವಿಜಯ್ ಅವರೊಂದಿಗೆ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್, ಪ್ರಿಯಾಮಣಿ ಮತ್ತು ನರೇನ್ ಸೇರಿದಂತೆ ದಕ್ಷಿಣ ಚಿತ್ರರಂಗದ ಘಟಾನುಘಟಿ ಕಲಾವಿದರ ದಂಡೇ ಇದೆ. ಹೆಚ್.ವಿನೋತ್ ನಿರ್ದೇಶನದ ಈ ಚಿತ್ರಕ್ಕೆ ಕನ್ನಡ ಚಿತ್ರರಂಗದ ಪ್ರತಿಷ್ಠಿತ ಚಲನಚಿತ್ರ ಸಂಸ್ಥೆಯಾದ ಕೆವಿಎನ್​ನ ವೆಂಕಟ್ ಕೆ.ನಾರಾಯಣ್​​ ಅವರು ದೊಡ್ಡ ಮಟ್ಟದಲ್ಲಿ ಬಂಡವಾಳ ಹೂಡಿದ್ದಾರೆ. ಸತ್ಯನ್ ಸೂರ್ಯನ್ ಅವರ ಛಾಯಾಗ್ರಹಣ ಹಾಗೂ ಪ್ರದೀಪ್ ಇ ರಾಘವ್ ಅವರ ಸಂಕಲನ ಈ ಚಿತ್ರಕ್ಕಿದೆ.

ಬರೋಬ್ಬರಿ 30 ವರ್ಷಗಳ ನಟನಾ ವೃತ್ತಿಜೀವನ ಹೊಂದಿರುವ ಭಾರತೀಯ ಚಿತ್ರರಂಗದ ಬಹುಬೇಡಿಕೆ ನಟ ವಿಜಯ್ ಅವರ ಕೊನೆಯ ಚಿತ್ರ. ಹಾಗಾಗಿ ಈ ಸಿನಿಮಾ ವಿಭಿನ್ನವಾಗಿ ಸದ್ದು ಮಾಡುತ್ತಿದೆ. ಅಭಿಮಾನಿಗಳು ತಮ್ಮ ಮೆಚ್ಚಿನ ತಾರೆಯ ಕೊನೆ ಸಿನಿಮಾ ಬಗ್ಗೆ ಭಾವನಾತ್ಮಕ ಸಂಬಂಧ ಹೊಂದಿರೋದೊಂತೂ ಸ್ಪಷ್ಟವಾಗಿದೆ.

ಇದನ್ನೂ ಓದಿ: 'ಅಮಲು ಹಾಡಿಗೆ ಕುಡುಕ ಸ್ಪೂರ್ತಿ, ಎಷ್ಟೇ ಕುಡಿದರೂ ನಾನು ಕುಡಿದು ಮಾತನಾಡುತ್ತಿಲ್ಲ ಎನ್ನುತ್ತಿದ್ದ'

'ಜನ ನಾಯಗನ್' ಚಿತ್ರದ ನಿರ್ದೇಶಕ ಹೆಚ್.ವಿನೋತ್ (ವಿನೋದ್​​/H.Vinoth) ಈ ಹಿಂದೆ ಅಜಿತ್ ಕುಮಾರ್ ಅಭಿನಯದ 'ವಲಿಮೈ', 'ತುನಿವು' ಮತ್ತು ಕಾರ್ತಿ ನಟನೆಯ 'ಧೀರನ್ ಅಧಿಗಾರಂ ಒಂಡ್ರು' ಅಂತಹ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಈಗ ದಳಪತಿ ವಿಜಯ್ ಅವರ ಕೊನೆಯ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರುವುದು ಸಿನಿಪ್ರಿಯರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಸಿನಿಮಾ ಇದೇ ಶುಕ್ರವಾರ ಬಹುಭಾಷೆಗಳಲ್ಲಿ ವಿಶ್ವಾದ್ಯಂತ ಚಿತ್ರಮಂದಿರ ಪ್ರವೇಶಿಸಲಿದೆ.

ಇದನ್ನೂ ಓದಿ: ರಿಷಬ್​ ಶೆಟ್ಟಿ ಭಾರತೀಯ ಚಿತ್ರರಂಗದಲ್ಲೇ ಈ ಅಪರೂಪದ ಸಾಧನೆಗೈದ ಏಕೈಕ ನಟ

ಕೆಲ ದಿನಗಳ ಹಿಂದೆ ಮಲೇಷ್ಯಾದಲ್ಲಿ ನಡೆದ ಆಡಿಯೋ ಲಾಂಚ್​ ಈವೆಂಟ್​ ಕೇವಲ ಸಿನಿಮಾ ಸಂಭ್ರಮವಾಗಿ ಉಳಿಯದೇ, ಒಂದು ಐತಿಹಾಸಿಕ ಕ್ಷಣವಾಗಿಯೂ ಗುರುತಿಸಿಕೊಂಡಿದೆ. 80 ಸಾವಿರಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಲೇಷ್ಯಾದಲ್ಲಿ ಅತಿ ಹೆಚ್ಚು ಜನರು ಭಾಗವಹಿಸಿದ ಆಡಿಯೋ ಬಿಡುಗಡೆ ಸಮಾರಂಭ ಎಂಬ ಹೆಗ್ಗಳಿಕೆಯೊಂದಿಗೆ ಅಧಿಕೃತವಾಗಿ 'ಮಲೇಷಿಯನ್ ಬುಕ್ ಆಫ್ ರೆಕಾರ್ಡ್ಸ್'ಗೆ ಸೇರ್ಪಡೆಯಾಗಿದೆ. ಕನ್ನಡ ಚಲನಚಿತ್ರ ನಿರ್ಮಾಣ ಸಂಸ್ಥೆಯ ಬಹುನಿರೀಕ್ಷಿತ ಚಿತ್ರ ಈ ಸಾಧನೆ ಮಾಡಿರುವುದು ಸ್ಯಾಂಡಲ್​ವುಡ್​ಗೆ ಹೆಮ್ಮೆಯನ್ನು ತರಿಸಿದೆ.