ETV Bharat / entertainment

'ಕೊರಗಜ್ಜ ದೈವದ ಬಗ್ಗೆ ರೀಲ್ಸ್ ಮಾಡಿ ಎಂದು ಹೇಳಿಲ್ಲ': ನಿರ್ದೇಶಕ ಸುಧೀರ್ ಅತ್ತಾವರ್ ಸ್ಪಷ್ಟನೆ

ಕೊರಗಜ್ಜ ಚಿತ್ರದ ಹಾಡುಗಳ ರೀಲ್ಸ್​​ ಬಗ್ಗೆ ನಿರ್ದೇಶಕ ಸುಧೀರ್ ಅತ್ತಾವರ್ ಸ್ಪಷ್ಟನೆ ನೀಡಿದ್ದಾರೆ.

Producer Trivikrama Sapalya, Director Sudhir Attavar
ನಿರ್ಮಾಪಕ ತ್ರಿವಿಕ್ರಮ ಸಪಲ್ಯ, ನಿರ್ದೇಶಕ ಸುಧೀರ್ ಅತ್ತಾವರ್ (Photo: ETV Bharat)
author img

By ETV Bharat Karnataka Team

Published : January 6, 2026 at 4:09 PM IST

3 Min Read
Choose ETV Bharat

ಹೊಸ ವರ್ಷದ ಶುಭಾರಂಭದಂದು 'ಸಾಂಗ್ಸ್ ಪ್ರೀಮಿಯರ್' ಎನ್ನುವ ವರ್ಣರಂಜಿತ ಕಾರ್ಯಕ್ರಮದಲ್ಲಿ ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲ್ಮ್ಸ್​ ಬ್ಯಾನರ್ ಅಡಿಯ "ಕೊರಗಜ್ಜ" ಚಿತ್ರದ ಎಲ್ಲಾ ಹಾಡುಗಳನ್ನು ಚಿತ್ರತಂಡ ಸುಮಾರು 300ಕ್ಕೂ ಹೆಚ್ಚು ಆಡಿಯೋ ಪ್ಲ್ಯಾಟ್​​ಫಾರ್ಮ್​​​ಗಳಲ್ಲಿ ಝೀ ಮ್ಯೂಜಿಕ್ ಮುಖೇನ ಪ್ರಸಾರ ಮಾಡಿತು. ಚಿತ್ರದ ಹಾಡುಗಳಿಗೆ ರೀಲ್ಸ್ ಸ್ಪರ್ಧೆ ಆಯೋಜಿಸಿದ್ದೇವೆ ಎಂದು ತಂಡ ಖಾಸಗಿ ಹೋಟೆಲ್​​ನಲ್ಲಿ ಅನೌನ್ಸ್​​ ಮಾಡಿತ್ತು. ಅದ್ರೀಗ ಕೊರಗಜ್ಜ ಚಿತ್ರದ ದೈವದ ರೀಲ್ಸ್ ಕೆಲ ದೈವ ನರ್ತಕರ ಕೆಂಗಣ್ಣಿಗೆ ಗುರಿಯಾಗಿದೆ. ಈ ಬಗ್ಗೆ ನಿರ್ದೇಶಕ ಸುಧೀರ್ ಅತ್ತಾವರ್ ಸ್ಪಷ್ಟನೆ ನೀಡಿದ್ದಾರೆ.

ನಿರ್ದೇಶಕ ಸುಧೀರ್ ಅತ್ತಾವರ್ ಮಾತನಾಡಿ, ''ನಾವು ನಮ್ಮ ಚಿತ್ರದ 'ಹಾಡುಗಳ ರೀಲ್ಸ್ ಸ್ಪರ್ಧೆ'ಯನ್ನು ಹಮ್ಮಿಕೊಂಡಿದ್ದೇವೆ. ವಿಜೇತರಿಗೆ ಬಹುಮಾನ ಕೊಡಲಾಗುವುದು ಅಂತಾ ಹೇಳಿದ್ದೇವೆ. 'ಆದ್ರೆ, ದೈವದ ಬಗ್ಗೆ ರೀಲ್ಸ್ ಮಾಡಿ ಎಂದು ಹೇಳಿಲ್ಲ'. ನಮ್ಮ ಮಾತನ್ನು ಕರ್ನಾಟಕದ ಕೆಲ ಭಾಗಗಳಲ್ಲಿ ತಪ್ಪಾಗಿ ಅರ್ಥೈಸಲಾಗಿದೆ. ರೀಲ್ಸ್ ಎಂದರೆ ವಿಡಿಯೋ ತುಣುಕುಗಳು. ಈಗಾಗಲೇ ದೈವಗಳ ಬಗ್ಗೆ ಮತ್ತು ದೈವದ ಆರಾಧನಾ ಕ್ರಮಗಳಾದ ಕೋಲ, ನೇಮ, ತಂಬಿಲ, ಅಗೆಲು... ಹೀಗೆ ದೈವದ ವಿಚಾರವಾಗಿ ಸಹಸ್ರಾರು ರೀಲ್ಸ್ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ. ಹಾಗಿರುವಾಗ ಚಿತ್ರದ ಹಾಡುಗಳಿಗೆ ರೀಲ್ಸ್ ಸ್ಪರ್ಧೆ ಏರ್ಪಡಿಸಿದರೆ ತಪ್ಪೇನು?. ಇನ್ನೂ ಅಶ್ಲೀಲ, ಅಸಂಬದ್ಧ ಮತ್ತು ಅಪಹಾಸ್ಯ ಮಾಡುವ ರೀತಿಯ ರೀಲ್ಸ್ ವಿರುದ್ಧ ಕಾನೂನು ಕ್ರಮ ಎದುರಿಸಬೇಕಾದೀತು ಎನ್ನುವ ಎಚ್ಚರಿಕೆಯನ್ನೂ ನಾವು ಈಗಾಗಲೇ ಕೊಟ್ಟಿದ್ದೇವೆ''.

Director Sudhir Attavar
ಕೊರಗಜ್ಜ ನಿರ್ದೇಶಕ ಸುಧೀರ್ ಅತ್ತಾವರ್ (Photo: ETV Bharat)

''ನಾವು ಕಳಸದಲ್ಲಿ ಶೂಟಿಂಗ್ ಮಾಡಿದ ಸಂದರ್ಭ, ದೈವ ನರ್ತಕರೇ ಲಾಂಗು - ಮಚ್ಚು ತಂದು ಬೆದರಿಸಿ, ಶೂಟಿಂಗ್ ನಿಲ್ಲಿಸಿ, ಇಲ್ಲದ ರಗಳೆ ಮಾಡಿ ನಮಗೆ ಲಕ್ಷಾಂತರ ರೂಪಾಯಿ ನಷ್ಟ ಮಾಡಿದ್ದರು. ಈಗ ನಮ್ಮ ಹಾಡನ್ನು ಜನರಿಗೆ ತಲುಪಿಸುವ ರೀಲ್ಸ್ ಮಾಡುವ ಸ್ಪರ್ಧೆಗೂ ಆಕ್ಷೇಪಣೆ ಒಡ್ಡುತ್ತಿದ್ದಾರೆ. ನಮ್ಮ ಸಿನಿಮಾಗೆ ಪ್ರತೀ ಹಂತದಲ್ಲೂ ತೊಂದರೆ ಕೊಡುವುದು, ಆಕ್ಷೇಪಣೆ ಮಾಡುವುದು, ವಿರೋಧಿಸುವುದು ಹೀಗೆ ನಡೆಯುತ್ತಲೇ ಬಂದಿದೆ. ಕೊರಗಜ್ಜ ದೈವದ ಆಶಿರ್ವಾದದಿಂದಲೇ ಇಂತಹ ಹಲವಾರು ಅಗ್ನಿಪರೀಕ್ಷೆಗಳನ್ನು ದಾಟಿ ಈಗ ಸಿನಿಮಾ ಬಿಡುಗಡೆ ಮಾಡುವ ಹಂತಕ್ಕೆ ಬಂದು ತಲುಪಿದ್ದೇವೆ''.

''ತುಳುನಾಡಿನ ಕೆಲ ಭಾಗಗಳಲ್ಲಿ ಕೊರಗಜ್ಜ ಮತ್ತು ಇನ್ನಿತರ ದೈವಗಳ ಕೋಲದ ಸಮಯದಲ್ಲಿ, ದೈವದ ಪಾತ್ರ ಮಾಡುವ ವ್ಯಕ್ತಿಯ ಬಾಯಿಯಿಂದಲೇ ಅವಾಚ್ಯ, ಅಶ್ಲೀಲ ಪದಗಳನ್ನು ಹೇಳಿಸುವ ವಾಡಿಕೆ ಇದೆ. ಸಭ್ಯರ, ಸಣ್ಣ ಮಕ್ಕಳ ಮುಂದೆಯೇ ಕೋಲ ಸೇವೆಯ ಸಮಯದಲ್ಲಿ ಕೇಳಲು ಹೇಸಿಗೆ ಎನಿಸುವ ಅಶ್ಲೀಲ ಪದಗಳನ್ನು ವಾಡಿಕೆ ಅಥವಾ ಪಾರಂಪರಿಕೆ ಎನ್ನುವ ಕಾರಣದಿಂದ ಹೇಳುತ್ತಾ ಬಂದಿದ್ದಾರೆ. ಸಂಸ್ಕೃತಿಯ ನೆಪದಲ್ಲಿ ಕೀಳು ಪದಗಳನ್ನು ಕೋಲಸೇವೆ ವೇಳೆ ದೈವದ ಹೆಸರಿನಲ್ಲಿ ಹೇಳುವುದನ್ನು ನಾಗರಿಕ ಸಮಾಜ ಒಪ್ಪಬೇಕೇ?''.

Koragajja Film Team
'ಕೊರಗಜ್ಜ' ಚಿತ್ರತಂಡ (Photo: ETV Bharat)

ಕೆಲವು ಕಡೆ "ಕೊರಗಜ್ಜ"ನನ್ನು "ನೀಚ ದೈವ" ಎನ್ನುವ ಹೆಸರಿನಿಂದಲೂ ಕೋಲಸೇವೆ ನೀಡುತ್ತಾರೆ. ಅಲ್ಲದೇ ಕೊರಗಜ್ಜನನ್ನು ಕೊರಗರ "ದಿಕ್ಕ" ( ಹೊಲೆಯ) ಎಂಬ ಪದಪ್ರಯೋಗದಿಂದಲೂ ಕೆಲ ದೈವ ನರ್ತಕರು ಆಚರಣೆಯ, ವಾಡಿಕೆಯ ಹೆಸರಲ್ಲಿ ಸಂಭೋದಿಸುತ್ತಾ ನಾಗರಿಕ ಸಮಾಜ ತಲೆ ತಗ್ಗಿಸುವ ರೀತಿಯಲ್ಲಿ ಕೋಲ ಸೇವೆಗಳನ್ನು ನಡೆಸಿಕೊಂಡು ಬಂದಿರುತ್ತಾರೆ. "ಕೊರಗಜ್ಜ" ನೀಚ ದೈವವೂ ಅಲ್ಲ, ಕೀಳು ಜಾತಿಯ ದೈವವೂ ಅಲ್ಲ‌. ಭೂತಕೋಲ ಕಟ್ಟುವ ಜನಾಂಗದವರು ಮೊದಲು ಈ ವಿಚಾರದ ಬಗ್ಗೆ ಗಮನ ಹರಿಸಬೇಕಾಗಿದೆ. ಪರಂಪರೆಯ ಹೆಸರಿನಲ್ಲಿ‌ ದೈವಗಳಿಗೆ ಅವಹೇಳನಕಾರಿ ಅಥವಾ ಆಶ್ಲೀಲ ಪದ ಪ್ರಯೋಗಗಳ ಮುಖೇನ ಕೋಲಸೇವೆಯ ಕೈಂಕರ್ಯ ನಡೆಸುವುದು ಒಳ್ಳೆ ಸಂಸ್ಕೃತಿಯೇ?. ಕೆಲಭಾಗಗಳ ಕೋಲದ ಸಮಯದಲ್ಲಿ ದೈವದ ವೇಷ ಹಾಕಿಕೊಂಡವರು ಜಾತಿಯ ಆಧಾರದಲ್ಲಿ‌ ಗೌರವ ಕೊಡುವಂತಹ ಪರಿಪಾಠವು ನಾಗರಿಕ ಸಮಾಜ ಒಪ್ಪುವಂತಹ ಆಚರಣೆಯೇ?.

ಇದನ್ನೂ ಓದಿ: ಉಪ್ಪಿ ಬಣ್ಣ ಹಚ್ಚಿ 37 ವರ್ಷ: ಡೈರೆಕ್ಷನ್ To ಹೀರೋ; ಅಪಶಕುನಗಳಿಗೆ ಕುಗ್ಗದ ರಿಯಲ್​ ಸ್ಟಾರ್​​ ರಿಯಲ್​ ಸ್ಟೋರಿ

ಇದೆಲ್ಲ ಹಿಂದಿನಿಂದ ನಡೆದುಕೊಂಡು ಬಂದಿರುವ ಆಚರಣೆ ಎಂಬ ಸಮಜಾಯಿಷಿ ನೀಡಬಹುದು. ಸತಿ ಸಹಗಮನ ಪದ್ದತಿ, ವಿಧವೆಗೆ ತಲೆ ಬೋಳಿಸಿ ಒಳಗೆ ಕೂರಿಸುವಂತ ಪದ್ದತಿಗಳು ನಮ್ಮ ಸಮಾಜದಲ್ಲಿ ಇತ್ತು ತಾನೆ? ಅವೆಲ್ಲವನ್ನು ಕಿತ್ತೊಗೆದಾಗಿದೆ. ಹಾಗಿರುವಾಗ ಜಾತಿ ಪದ್ದತಿಯನ್ನು ಯಾಕೆ ಕೋಲದ ಸಮಯದಲ್ಲಿ ಅನುಸರಿಸಬೇಕು? ದೈವದ ಎದುರು ಎಲ್ಲಾ ಜಾತಿಯೂ ಒಂದೇ. ಮೇಲ್ಜಾತಿ ಕೀಳು ಜಾತಿ ಎನ್ನುವುದು ದೈವದ ಪರಿಕಲ್ಪನೆಯಂತೂ ಅಲ್ಲ. ದೈವವು ನಂಬುವ ಎಲ್ಲರಿಗೂ ಸೇರಿರುವ ಶಕ್ತಿ. ನಂಬಿದವರಿಗೆ ಇಂಬುಕೊಡುವ ಶಕ್ತಿ ಅಂತಾ ನಿರ್ದೇಶಕ ಸುಧೀರ್ ಅತ್ತಾವರ್ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಕೊರಗಜ್ಜ ಚಿತ್ರದ ಗುಳಿಗ ಹಾಡಿನಿಂದ ದೈವ ಕ್ರೋಧಗೊಂಡಿರಬಹುದೇ?; ಪ್ರಶ್ನೆಯಿಟ್ಟಾಗ ಬಂದ ಉತ್ತರವೇನು?