'ದುಃಖದೊಂದಿಗೆ ಬದುಕುವುದನ್ನು ಕಲಿಯುತ್ತಿದ್ದೇನೆ, ಬೇರೆ ದಾರಿಯೇ ಇಲ್ಲ': ಕೃಷಿ ತಾಪಂಡ
ಉದ್ಯಮಿ ವೈಶಾಖ್ ಆತ್ಮಹತ್ಯೆ, ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾದ ಟೀಕೆಗಳ ನಂತರ ನಟಿ ಕೃಷಿ ತಾಪಂಡ ಸೋಷಿಯಲ್ ಮೀಡಿಯಾದಲ್ಲಿ ಮತ್ತೊಂದು ಪೋಸ್ಟ್ ಹಂಚಿಕೊಂಡು, ದುಃಖದೊಂದಿಗೆ ಬದುಕುವುದನ್ನು ಕಲಿಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.

By ETV Bharat Entertainment Team
Published : July 6, 2026 at 12:51 PM IST
ಕನ್ನಡ ಹಿರಿತೆರೆ ನಟಿ ಹಾಗೂ ಕಿರುತೆರೆಯ ಬಿಗ್ ಬಾಸ್ ಕಾರ್ಯಕ್ರಮದ ಮಾಜಿ ಸ್ಪರ್ಧಿ ಕೃಷಿ ತಾಪಂಡ ಮನೆಯಲ್ಲಿ ಇತ್ತೀಚೆಗೆ ಉದ್ಯಮಿ ವೈಶಾಖ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಲವು ಅಂತೆಕಂತೆಗಳಿಗೆ ಎಡೆಮಾಡಿಕೊಟ್ಟಿತ್ತು. ಸೋಷಿಯಲ್ ಮೀಡಿಯಾದಲ್ಲಿ ಹಲವು ಅಭಿಪ್ರಾಯಗಳು ವ್ಯಕ್ತಗೊಂಡಿದ್ದವು. ಈ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದ ನಟಿ, 'ಕೈಮುಗಿಯುತ್ತೇನೆ, ಊಹಾಪೋಹಗಳನ್ನು ನಿಲ್ಲಿಸಿ' ಎಂದು ಮನವಿ ಮಾಡಿಕೊಂಡಿದ್ದರು. ಇದೀಗ ಮತ್ತೊಂದು ಪೋಸ್ಟ್ ಹಂಚಿಕೊಂಡು ನೆಟ್ಟಿಗರ ಗಮನ ಸೆಳೆದಿದ್ದಾರೆ.
'ಆಯ್ಕೆ ಮಾಡಿಕೊಂಡಿದ್ದಲ್ಲ, ಬೇರೆ ದಾರಿಯೇ ಇಲ್ಲ': ಸರಣಿ ಫೋಟೋಗಳನ್ನು ಹಂಚಿಕೊಂಡ ನಟಿ ಕೃಷಿ ತಾಪಂಡ, ''ದುಃಖವನ್ನು ಹೊತ್ತುಕೊಂಡು ಬದುಕುವುದಲ್ಲ. ಅದರ ಜೊತೆ ಬದುಕುವುದನ್ನು ಕಲಿಯುತ್ತಿದ್ದೇನೆ. ಆಯ್ಕೆ ಮಾಡಿಕೊಂಡದ್ದರಿಂದಲ್ಲ. ಬೇರೆ ದಾರಿಯೇ ಇಲ್ಲದ ಕಾರಣ'' ಎಂದು ಬರೆದುಕೊಂಡಿದ್ದಾರೆ.
ಅಪೂರ್ಣ: ಸರಣಿ ಫೋಟೋಗಳ ಪೈಕಿ, ಮೊದಲ ಚಿತ್ರದಲ್ಲಿ ಸ್ವತಃ ಕೃಷಿ ತಾಪಂಡ ಸುಮ್ಮನೆ ಕುಳಿತಿರುವುದನ್ನು ನೋಡಬಹುದು. ಫೋಟೋ ಮೇಲೆ 'ಅಪೂರ್ಣ' ಎಂದು ಬರೆಯಲಾಗಿದೆ. ನಂತರದ ಚಿತ್ರಗಳಲ್ಲಿ, ಪ್ರಕೃತಿ, ಪ್ರಾಣ-ಪಕ್ಷಿ, ಪುಸ್ತಕಗಳನ್ನು ಕಾಣಬಹುದು. ಯಾವುದೋ ಆಳ ಆಲೋಚನೆಯಲ್ಲಿರುವ ನಟಿ, ಚೇತರಿಸಿಕೊಳ್ಳುತ್ತಿರುವಂತೆ ಈ ಫೋಟೋಗಳು ಸೂಚಿಸಿವೆ.
ಪೋಸ್ಟ್ಗೆ ಸ್ನೇಹಿತರೂ ಸೇರಿದಂತೆ ಸಾಮಾಜಿಕ ಜಾಲತಾಣ ಬಳಕೆದಾರರು ಪ್ರತಿಕ್ರಿಯಿಸುತ್ತಿದ್ದಾರೆ. ಹೆಚ್ಚಿನವರು 'ಮೋರ್ ಪವರ್ ಟು ಯು', 'ಬಿ ಸ್ಟ್ರಾಂಗ್' ಎಂದು ಕಾಮೆಂಟ್ ಸೆಕ್ಷನ್ನಲ್ಲಿ ಧೈರ್ಯ ತುಂಬಿದ್ದಾರೆ. 'ಕಾಲ ಎಲ್ಲವನ್ನೂ ಗುಣಪಡಿಸುತ್ತದೆ. ನಿಮಗೆ ಹೆಚ್ಚಿನ ಶಕ್ತಿ ಸಿಗಲಿ' ಎಂದು ಅಭಿಮಾನಿಯೋರ್ವರು ತಿಳಿಸಿದ್ದಾರೆ. ಕಾಮೆಂಟ್ ಒಂದರಲ್ಲಿ, 'ನೀವು ನಾನು ನೋಡಿದ ಅತ್ಯಂತ ಬಲಿಷ್ಠ ಮಹಿಳೆ. ಚಿಂತಿಸಬೇಡಿ. ಎಲ್ಲವೂ ಸಹಜ ಸ್ಥಿತಿಗೆ ಬರಲಿದೆ. ತಾಳ್ಮೆಯಿಂದಿರಿ. ದೇವರಲ್ಲಿ ನಂಬಿಕೆ ಇಡಿ ಮತ್ತು ಪ್ರಕ್ರಿಯೆಯನ್ನು ನಂಬಿ' ಎಂದು ಬರೆಯಲಾಗಿದೆ.
ನಟಿಯನ್ನು ಶಕ್ತಿಯುತೆ ಎಂದ ಅಭಿಮಾನಿಯೋರ್ವರು, 'ಬಿ ಸ್ಟ್ರಾಂಗ್ ಗರ್ಲ್. ನೀವು ಸುಂದರ ಜೀವನವನ್ನು ಹೊಂದಿದ್ದೀರಿ. ಯಾವುದಕ್ಕೂ ಚಿಂತಿಸಬೇಡಿ. ದೇವರು ನಿಮಗೆ ಉತ್ತಮ ಆರೋಗ್ಯ, ಸಂತೋಷ ಮತ್ತು ಜೀವನದಲ್ಲಿ ಯಶಸ್ಸು ನೀಡಲಿ ಎಂದು ನಾನು ಬಯಸುತ್ತೇನೆ' ಎಂದು ತಿಳಿಸಿದ್ದಾರೆ. ಇದೇ ರೀತಿಯ ಇನ್ನೊಂದು ಕಾಮೆಂಟ್ನಲ್ಲಿ, ''ನೀವು ಇದೆಲ್ಲವನ್ನೂ ನಿಭಾಯಿಸುವಷ್ಟು ಬಲಶಾಲಿಯಾಗಿದ್ದೀರಿ, ಎಲ್ಲವೂ ಸರಿಯಾಗುತ್ತದೆ, ದೇವರನ್ನು ನಂಬಿ, ನಾವು ನಿಮ್ಮನ್ನು ಪ್ರೀತಿಸುತ್ತೇವೆ'' ಎಂದು ಬರೆಯಲಾಗಿದೆ. 'ಕಾಲವೇ ಎಲ್ಲವನ್ನೂ ಗುಣಪಡಿಸುತ್ತದೆ' ಎಂದು ನೆಟ್ಟಿಗರೋರ್ವರು ತಿಳಿಸಿದ್ದಾರೆ.
ಇದನ್ನೂ ಓದಿ: 'ಕೈಮುಗಿಯುತ್ತೇನೆ, ಊಹಾಪೋಹಗಳನ್ನು ನಿಲ್ಲಿಸಿ': ಮನೆಯಲ್ಲಿ ಉದ್ಯಮಿ ಆತ್ಮಹತ್ಯೆ ಬೆನ್ನಲ್ಲೇ ನಟಿ ಕೃಷಿ ತಾಪಂಡ ಪ್ರತಿಕ್ರಿಯೆ
''ನಾನು ಇಂಥದ್ದನ್ನು ಬರೆಯಬೇಕಾಗುತ್ತದೆ ಎಂದು ಎಂದಿಗೂ ಊಹಿಸಿರಲಿಲ್ಲ'' ಎಂದು ಇತ್ತೀಚೆಗೆ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದ ನಟಿ, ನನ್ನ ಹೃದಯಕ್ಕೆ ಬಹಳ ಹತ್ತಿರವಾಗಿದ್ದ ಒಬ್ಬ ವ್ಯಕ್ತಿಯನ್ನು ನಾನು ಕಳೆದುಕೊಂಡಿದ್ದೇನೆ. ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತೇನೆ ಎಂಬುದು ನನಗೆ ತಿಳಿದಿಲ್ಲ. ಊಹಿಸಲಾಗದ ನಷ್ಟವನ್ನು ನಿಭಾಯಿಸಲು ಪ್ರಯತ್ನಿಸುತ್ತಿರುವಾಗ, ನಿರಂತರ ಊಹಾಪೋಹಗಳು ಮತ್ತು ಯಾರೊಬ್ಬರ ಸಾವನ್ನು ಕಥೆಯನ್ನಾಗಿ ಪರಿವರ್ತಿಸುವ ಪ್ರಯತ್ನಗಳು ನಡೆಯುತ್ತಿವೆ. ಮಾಧ್ಯಮದವರಿಗೆ (ಎಲ್ಲರಿಗೂ ಅಲ್ಲ) ಮತ್ತು ಊಹಾಪೋಹಗಳನ್ನು ಹರಡುತ್ತಿರುವ ಕೆಲವರಿಗೆ... ನಾನು ನನ್ನ ಕೈ ಜೋಡಿಸಿ, ದಯವಿಟ್ಟು ಇದನ್ನು ಇಲ್ಲೇ ನಿಲ್ಲಿಸಲು ವಿನಂತಿಸುತ್ತೇನೆ. ದಯವಿಟ್ಟು ಅವರ ಕುಟುಂಬ, ನನ್ನ ಕುಟುಂಬ ಅಥವಾ ನಮ್ಮ ಸ್ನೇಹಿತರಿಗೆ ತೊಂದರೆ ಕೊಡಬೇಡಿ. ದಯವಿಟ್ಟು ಯಾರೊಬ್ಬರ ಸಾವನ್ನು ಹೆಡ್ ಲೈನ್ ಅಥವಾ ಮನರಂಜನೆಯನ್ನಾಗಿ ಪರಿವರ್ತಿಸಬೇಡಿ ಎಂದು ಕೇಳಿಕೊಂಡಿದ್ದರು.
ಇದನ್ನೂ ಓದಿ: 'Finally'... ಮದುವೆ ಬಳಿಕ ಮೊದಲ ಫೋಟೋ ಸಹಿತ ಮನದಾಳ ಹಂಚಿಕೊಂಡ ಅಮೀರ್ ಖಾನ್ ಪತ್ನಿ ಗೌರಿ
ಘಟನೆ ಸಂಬಂಧ ವೈಶಾಖ್ ತಂದೆ ನೀಡಿದ ದೂರಿನ ಮೇರೆಗೆ ಅಸಹಜ ಸಾವು ಪ್ರಕರಣ ದಾಖಲಿಸಲಾಗಿದೆ ಎಂದು ಈ ಹಿಂದೆ ಪೊಲೀಸರು ತಿಳಿಸಿದ್ದು, ತನಿಖೆ ಮುಂದುವರೆದಿದೆ.

