'ನಾನು ಶಿವಭಕ್ತ, ಪಿನಾಕ ಕೂಡಾ ಶಿವನ ಕುರಿತಾದ ಕಥೆ': ಗೋಲ್ಡನ್ ಸ್ಟಾರ್ ಗಣೇಶ್
ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಮುಂಬರುವ 'ಪಿನಾಕ' ಚಿತ್ರದ ಕುರಿತು ಮಾತನಾಡಿದ್ದಾರೆ.

By ETV Bharat Entertainment Team
Published : July 7, 2026 at 11:02 AM IST
ಕನ್ನಡದ ಬಹುತೇಕ ಸ್ಟಾರ್ ನಟರಿಗೆ ಕೋರಿಯೋಗ್ರಾಫಿ ಮಾಡಿರುವ ಧನಂಜಯ್ ಅವರೀಗ ಗೋಲ್ಡನ್ ಸ್ಟಾರ್ ಗಣೇಶ್ ಮುಖ್ಯಭೂಮಿಕೆಯ ಸಿನಿಮಾ ನಿರ್ದೇಶಿಸುತ್ತಿರುವುದು ನಿಮಗೆ ತಿಳಿದಿರುವ ವಿಚಾರ. ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಗೆ ಸಜ್ಜಾಗಿರುವ 'ಪಿನಾಕ' ಶೀರ್ಷಿಕೆಯ ಚಿತ್ರದ ಟೀಸರ್ ಇತ್ತೀಚೆಗೆ ಅನಾವರಣಗೊಂಡಿದೆ. ಟೀಸರ್ ಸಿನಿಮಾ ನೋಡಬೇಕೆನ್ನುವ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.
ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಸಾವಿರಾರು ಮಕ್ಕಳೊಂದಿಗೆ ಗಣೇಶ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಟೀಸರ್ ಬಿಡುಗಡೆಯಾದ ಕ್ಷಣದಿಂದಲೇ ಮೆಚ್ಚುಗೆಯ ಮಹಾಪೂರ ಹರಿದುಬರುತ್ತಿದ್ದು, ಗಣೇಶ್ ಅವರ ಹೊಸ ಲುಕ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಟೀಸರ್ ಅನಾವರಣದ ನಂತರ ಚಿತ್ರತಂಡದ ಸದಸ್ಯರು ತಮ್ಮ ಅನುಭವ ಹಂಚಿಕೊಂಡರು.

ನಿರ್ದೇಶಕ ಧನಂಜಯ್ ಮಾತನಾಡಿ, ''ನಾನು ಹಲವು ವರ್ಷಗಳಿಂದ ನೃತ್ಯ ನಿರ್ದೇಶಕನಾಗಿ ಚಿತ್ರರಂಗದಲ್ಲಿದ್ದೇನೆ. ಈ ಸಿನಿಮಾ ಮೂಲಕ ನಿರ್ದೇಶಕನಾಗಿ ಹೊಸಪಯಣ ಪ್ರಾರಂಭಿಸುತ್ತಿದ್ದೇನೆ. ಅವಕಾಶ ನೀಡಿದ ನಿರ್ಮಾಪಕರಿಗೆ ಹಾಗೂ ಗಣೇಶ್ ಅವರಿಗೆ ಧನ್ಯವಾದಗಳು'' ಎಂದು ತಿಳಿಸಿದರು.

ಮಾತು ಮುಂದುವರಿಸಿ, ''ನಾನು ಈವರೆಗೂ ಪಿನಾಕ ಚಿತ್ರದ ಕರಿತು ಹೆಚ್ಚು ಮಾತನಾಡಿರಲಿಲ್ಲ. ಏಕೆಂದರೆ ನಾನು ಮಾತನಾಡುವುದು ಬೇಡ, ನನ್ನ ಕೆಲಸ ಮಾತನಾಡಲಿ ಎಂದುಕೊಂಡಿದ್ದೆ. ಈಗ ಟೀಸರ್ಗೆ ಸಿಗುತ್ತಿರುವ ಪ್ರತಿಕ್ರಿಯೆ ನೋಡಿ ಮನತುಂಬಿಬಂದಿದೆ. ಟೀಸರ್ನಲ್ಲಿ ಚಿತ್ರದ ಕುರಿತು ಹೆಚ್ಚು ಹೇಳಿಲ್ಲ. ಕೇವಲ ಶೇ.30ರಷ್ಟು ಹೇಳಿದ್ದೇವೆ. ಸಿನಿಮಾದಲ್ಲಿ ಇನ್ನೂ ಬಹಳಷ್ಟಿದೆ. ಅಧ್ಯಾತ್ಮಿಕತೆಗೆ ಹೆಚ್ಚು ಒತ್ತು ಕೊಡಲಾಗಿದೆ. ಮುಂಬರುವ ಟ್ರೇಲರ್ನಲ್ಲಿ ಚಿತ್ರದ ಕುರಿತು ಇನ್ನಷ್ಟು ತಿಳಿಸುತ್ತೇನೆ'' ಎಂದು ಭರವಸೆ ನೀಡಿದರು.

ನಾಯಕ ನಟ ಗಣೇಶ್ ಮಾತನಾಡಿ, ''ಮುಂಗಾರು ಮಳೆಯಿಂದ ನಾಯಕನಾಗಿ ಶುರುವಾದ ನನ್ನ ಸಿನಿ ಜರ್ನಿ ಈ ಹಂತ ತಲುಪಲು ದೇವರ, ತಂದೆ-ತಾಯಿ ಹಾಗೂ ಅಭಿಮಾನಿಗಳ ಆಶೀರ್ವಾದವೇ ಕಾರಣ. ನನ್ನ ಮಕ್ಕಳು ಕಾರ್ತಿಕೇಯ 2 ಚಿತ್ರ ನೋಡಿದಾಗ, ನೀವು ಈ ರೀತಿಯ ಚಿತ್ರದಲ್ಲಿ ಅಭಿನಯಿಸಬೇಕೆಂದು ಹೇಳುತ್ತಿದ್ದರು. ನಾನು ಶಿವ ಭಕ್ತ. ಪಿನಾಕ ಸಹ ಶಿವನ ಕುರಿತಾದ ಚಿತ್ರ. ಇಂತಹ ಚಿತ್ರದಲ್ಲಿ ನಟಿಸಿರುವುದಕ್ಕೆ ಖುಷಿಯಾಗಿದೆ'' ಎಂದು ಸಂತಸ ಹಂಚಿಕೊಂಡರು.

ಮುಂದುವರೆದು, ''ಈ ಚಿತ್ರದ ಕುರಿತು ನಿರ್ಮಾಪಕರು ನನ್ನ ಬಳಿ ಮಾತನಾಡಿದಾಗ ಈ ಕಥೆ ಬಹಳ ಬಜೆಟ್ ಕೇಳುತ್ತದೆ. ನಿಮಗೆ ಹೊರೆಯಾಗಬಾರದು ಎಂದು ಹೇಳಿದ್ದೆ. ಅದಕ್ಕವರು ಇಲ್ಲ, ಕಥೆ ಕೇಳುವ ಬಜೆಟ್ ಹಾಕಲು ನಾವು ಸಿದ್ದರಿದ್ದೇವೆ ಎಂದು ಹೇಳಿದರು. ಈ ಚಿತ್ರದ ಚಿತ್ರೀಕರಣದಲ್ಲಿ ಸಾವಿರಾರು ಜನರು ಭಾಗಿಯಾಗುತ್ತಿದ್ದರು. ಕ್ಲೈಮ್ಯಾಕ್ಸ್ ಅಂತೂ ನಾನು ಈವರೆಗೂ ಯಾವ ಚಿತ್ರದಲ್ಲೂ ನೋಡಿರದ ಕ್ಲೈಮ್ಯಾಕ್ಸ್ ಎನ್ನಬಹುದು. 12 ನಿಮಿಷಗಳ ಕ್ಲೈಮ್ಯಾಕ್ಸ್ಗೆ 22 ದಿನಗಳ ಚಿತ್ರೀಕರಣ ಮಾಡಿದ್ದೇವೆ. ಪಿನಾಕ, ಚಾರುಕೇಶ ರಾಜನ ಕಥೆ. ಈ ಚಿತ್ರ ಚೆನ್ನಾಗಿ ಮೂಡಿಬರಲು ತಂಡದ ಸಹಕಾರವೇ ಕಾರಣ. ಚಿತ್ರದಲ್ಲಿ ನಟಿಸಿರುವ ಶ್ರೀನಿವಾಸಮೂರ್ತಿ, ರಂಗಾಯಣ ರಘು, ಸಾಧುಕೋಕಿಲ ಅವರಂತಹ ಹಿರಿಯ ಕಲಾವಿದರಿಂದ ಸಾಕಷ್ಟು ಕಲಿತಿದ್ದೇನೆ. ಅಕ್ಟೋಬರ್ 2ರಂದು ತೆರೆಗೆ ಬರುತ್ತಿರುವ ಈ ಚಿತ್ರ ನೋಡುಗರಿಗೆ ಮನೋರಂಜನೆಯ ರಸದೌತಣ ಉಣಬಡಿಸಲಿದೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಿರ್ಮಾಣದ ಮೇಲ್ವಿಚಾರಣೆ ಹೊತ್ತಿರುವ ವಿಜಯ ರಾಜೇಶ್ ಮಾತನಾಡಿ, ''ಗಣೇಶ್ ಜೊತೆಗೆ ಸಿನಿಮಾ ಮಾಡಬೇಕು ಎಂಬುದು ನನ್ನ ಹಾಗೂ ನನ್ನ ಸಹೋದರನ (ವಿಶ್ವಪ್ರಸಾದ್) ಆಸೆಯಾಗಿತ್ತು. ನಮ್ಮ ಸಂಸ್ಥೆಯ ಕಾರ್ತಿಕೇಯ 2 ಚಿತ್ರದ ಬಗ್ಗೆ ಗಣೇಶ್ ಅವರು ತುಂಬಾ ಮೆಚ್ಚುಗೆಯ ಮಾತುಗಳನ್ನಾಡಿದರು. ಅವರ ಮಗ ವಿಹಾನ್ಗೂ ಆ ಚಿತ್ರ ಬಹಳ ಇಷ್ಟವಂತೆ. ಹಾಗಾಗಿ ನಾವು ಸಹ ಪೌರಾಣಿಕ ಹಿನ್ನೆಲೆಯಿರುವ ಹಾಗೂ ಶಿವನ ಕುರಿತಾದ ಕಥಾಹಂದರವಿರುವ ಈ ಕಥೆಯನ್ನು ಆಯ್ಕೆ ಮಾಡಿಕೊಂಡೆವು. ಚಿತ್ರತಂಡದ ಸದಸ್ಯರ ಶ್ರಮದಿಂದ ಪಿನಾಕ ಚಿತ್ರ ತುಂಬಾ ಅದ್ಭುತವಾಗಿ ಮೂಡಿಬಂದಿದೆ. ಜನರಿಗೂ ಈ ಚಿತ್ರ ಮೆಚ್ಚುಗೆಯಾಗುವ ಭರವಸೆ ಇದೆ'' ಎಂದರು.
ವಿಜಯ ರಾಜೇಶ್ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ ಕೂಡಾ. ಇನ್ನೂ, ಸಹನಿರ್ಮಾಪಕಿ ಕೃತಿ ಪ್ರಸಾದ್ ಮಾತನಾಡಿ, ಉತ್ತಮ ಚಿತ್ರ ಮೂಡಿಬಂದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: 25 ವರ್ಷ, 2 ಮೈಲಿಗಲ್ಲುಗಳು: 'ಈ 2 ಮರೆಯಲಾದ ರತ್ನಗಳನ್ನು ಕೊಟ್ಟ ಪ್ರತಿಯೊಬ್ಬರಿಗೂ ಧನ್ಯವಾದ' - ಸುದೀಪ್
ಹಿರಿಯ ಕಲಾವಿದರಾದ ರಂಗಾಯಣ ರಘು ಹಾಗೂ ಸಾಧುಕೋಕಿಲ ಇದೇ ವೇಳೆ ಚಿತ್ರೀಕರಣದ ಅನುಭವ ಹಂಚಿಕೊಂಡರು. ನಾಯಕಿ ಅರ್ಚನಾ ಅಯ್ಯರ್ ಮಾತನಾಡಿ, ಒಂದೊಳ್ಳೆ ಚಿತ್ರದಲ್ಲಿ ನಟಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ನಟರಾದ ರೋಬೊ ಗಣೇಶ್ ಹಾಗೂ ರವೀಂದ್ರನಾಥ್ , ಸಂಗೀತ ನಿರ್ದೇಶಕ ಗೌರಾ ಹರಿ ಸಹ ಉಪಸ್ಥಿತರಿದ್ದರು.
ಇದನ್ನೂ ಓದಿ: 'ದುಃಖದೊಂದಿಗೆ ಬದುಕುವುದನ್ನು ಕಲಿಯುತ್ತಿದ್ದೇನೆ, ಬೇರೆ ದಾರಿಯೇ ಇಲ್ಲ': ಕೃಷಿ ತಾಪಂಡ
ಭಾರತೀಯ ಚಿತ್ರರಂಗಕ್ಕೆ ಸದಭಿರುಚಿಯ ಚಿತ್ರಗಳನ್ನು ನೀಡುತ್ತಾ ಬಂದಿರುವ ಪೀಪಲ್ ಮೀಡಿಯಾ ಫ್ಯಾಕ್ಟರಿ ಲಾಂಛನದಲ್ಲಿ ವಿಶ್ವಪ್ರಸಾದ್ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಅಕ್ಟೋಬರ್ 2ಕ್ಕೆ ಈ ಸಿನಿಮಾ ತೆರೆಕಾಣುತ್ತಿದೆ.

