ETV Bharat / entertainment

'ದರ್ಶನ್ ಮತ್ತು ನನ್ನ ಹೆಸರಿನ ದುರ್ಬಳಕೆ': ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ ವಿರುದ್ಧ ದಿನಕರ್​ ತೂಗುದೀಪ ಆಕ್ರೋಶ

''ಅನೇಕರಿಗೆ ಸುಳ್ಳು ಹೇಳಿ ಹಣ ಪಡೆದು ವಂಚಿಸಿ ಪರಾರಿಯಾದವ ಈಗ ದಿಢೀರ್​ ಪ್ರತ್ಯಕ್ಷವಾಗಿ ಪತ್ರಿಕಾಗೋಷ್ಠಿ ನಡೆಸಿದ್ದಾನೆ'' ಎಂದು ದಿನಕರ್ ತೂಗುದೀಪ ಅವರು ದರ್ಶನ್ ಮಾಜಿ ಮ್ಯಾನೇಜರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Dinakar Thoogudeepa slams against Darshan Thoogudeepa's former manager Mallikarjun
ದರ್ಶನ್ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ (Photo: ETV Bharat)
author img

By ETV Bharat Entertainment Team

Published : April 22, 2026 at 1:15 PM IST

3 Min Read
Choose ETV Bharat

ನಟ ದರ್ಶನ್‌ ತೂಗುದೀಪ ಅವರ ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಅವರು 8 ಕೋಟಿ ರೂಪಾಯಿ ಸಾಲದಲ್ಲಿ ಸಿಲುಕಿ ಕಾಣೆಯಾಗಿದ್ದರು. ಏಪ್ರಿಲ್​ 16ರಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿರುವ ಮಲ್ಲಿಕಾರ್ಜುನ್‌, ದರ್ಶನ್ ಅವರಿಂದ ದೂರವಾಗಿದ್ದೇಕೆ?, 8 ಕೋಟಿ ರೂಪಾಯಿ ಸಾಲ ಮಾಡಲು ಕಾರಣವೇನು?, 7 ವರ್ಷ ಅಜ್ಞಾತವಾಸದಲ್ಲಿದ್ದವರು ಈಗ ಏಕಾಏಕಿ ಸುದ್ದಿಗೋಷ್ಠಿ ನಡೆಸಿದ್ದೇಕೆ? ಎಂಬುದನ್ನು ವಿವರವಾಗಿ ಮಾಧ್ಯಮದ‌ೆದುರು ಹಂಚಿಕೊಂಡಿದ್ದರು.

ಒಂದು ವಾರದ ಹಿಂದೆ ಪತ್ರಿಕಾಗೋಷ್ಠಿ ಕರೆದು, ಎಂಟು ಕೋಟಿ ರೂಪಾಯಿ ಸಾಲ ಮಾಡಿಕೊಂಡು ಏನೆಲ್ಲಾ ಸಮಸ್ಯೆ ಎದುರಿಸಿದೆ ಎಂಬ ಬಗ್ಗೆ ಬಹಳ‌ ಭಾವುಕರಾಗಿ ಮಾತನಾಡಿದ್ದರು. ದರ್ಶನ್ ಅವರು ನನ್ನ ಅಣ್ಣನಂತೆ. ತೂಗುದೀಪ ಪ್ರೊಡಕ್ಷನ್ ನನ್ನ ದೇವರ ಮನೆ. ದಿನಕರ್ ತೂಗುದೀಪ ಅವರನ್ನು ಮರೆಯಲು ಆಗೋಲ್ಲ ಎಂದೆಲ್ಲಾ ಹೇಳಿದ್ದರು. ಮಲ್ಲಿಕಾರ್ಜುನ್‌ ಈ ಪತ್ರಿಕಾಗೋಷ್ಠಿ ಕರೆದ ಕೆಲವೇ ದಿನಗಳಲ್ಲಿ ದರ್ಶನ್ ಸಹೋದರ ದಿನಕರ್‌ ತೂಗುದೀಪ ಅವರು ಮಲ್ಲಿಕಾರ್ಜುನ್ ವಿರುದ್ಧ ಸೋಷಿಯಲ್​ ಮೀಡಿಯಾ ಪೋಸ್ಟ್​ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

ದಿನಕರ್‌ ತೂಗುದೀಪ ಸೋಷಿಯಲ್​ ಮೀಡಿಯಾ ಪೋಸ್ಟ್​ನಲ್ಲೇನಿದೆ?: ''ಮಲ್ಲಿಕಾರ್ಜುನ್ ಗದಗ ಅಲಿಯಾಸ್ ಮಲ್ಲು 8 ವರ್ಷಗಳ ಹಿಂದೆ ನಮಗೂ ಹಣಕಾಸಿನಲ್ಲಿ ಮೋಸ ಮಾಡಿ ನನ್ನ ಹೆಸರು ಮತ್ತು ದರ್ಶನ್ ಅವರ ಹೆಸರು ಮತ್ತು ನಮ್ಮ ತೂಗುದೀಪ ಸಂಸ್ಥೆಯ ಹೆಸರನ್ನು ದುರ್ಬಳಕೆ ಮಾಡಿ, ನಮ್ಮ ಪರಿಚಯದವರ, ಸ್ನೇಹಿತರ ಹಾಗೂ ನಮ್ಮ ಸಂಪರ್ಕದಲ್ಲಿದ್ದ ಅನೇಕರ ಬಳಿ ಸುಳ್ಳು ಹೇಳಿ ಹಣ ಪಡೆದು ವಂಚಿಸಿ ಪರಾರಿಯಾಗಿದ್ದವ ಈಗ ದಿಢೀರ್ ಪ್ರತ್ಯಕ್ಷನಾಗಿ 16-04-2026ರಂದು ಪತ್ರಿಕಾಗೋಷ್ಠಿ ನಡೆಸಿದ್ದಾನೆ. ಅದರಲ್ಲಿ ಜನರನ್ನು ನಂಬಿಸಲು ತನಗೆ ಬೇಕಾದಂತೆ ಹೇಳಿಕೆ ಕೊಟ್ಟಿದ್ದಾನೆ. ತನಗೆ ಏನೇನೆಲ್ಲಾ ಆಯಿತು ಎಂದು ಹೇಳುತ್ತಿರುವ ಈತ ತನ್ನಿಂದ ಯಾರಿಗೆಲ್ಲ ಏನು ಅನಾಹುತವಾಯಿತು ಎಂದು ಹೇಳಿಲ್ಲ. ಈತ ಮಹಾ ಮೋಸಗಾರ. ಆ ಪತ್ರಿಕಾಗೋಷ್ಠಿಯಲ್ಲಿ ತನ್ನ ಲಾಭಕ್ಕೆ ತಕ್ಕಂತೆ ಪದೇ ಪದೆ ನಮ್ಮ ತೂಗುದೀಪ ಸಂಸ್ಥೆಯ ಹೆಸರು, ದರ್ಶನ್ ಅವರ ಹೆಸರು ಮತ್ತು ನನ್ನ ಹೆಸರನ್ನು ದುರ್ಬಳಕೆ ಮಾಡಿದ್ದಾನೆ.''

''ನಮ್ಮ ನಂಬಿಕೆಗೆ ದ್ರೋಹ ಮಾಡಿರುವ ಮೋಸಗಾರ ಇವನು. ಮೋಸ ಮಾಡುವ ಮುನ್ನ ಈತ ಬಳಸುವ ದಾಳವೇ ಸಿಂಪತಿ. ಅದನ್ನು ಪಡೆಯಲು ಈತ ಹೇಳುವುದೇ ಕಟ್ಟು ಕಥೆಗಳು. ಇವನನ್ನು ಯಾರೂ ನಂಬಬೇಡಿ. ನಾನಾಗಲಿ, ನಮ್ಮ ತೂಗುದೀಪ ಸಂಸ್ಥೆ, ದರ್ಶನ್ ಅವರಾಗಲೀ ಯಾರೂ ಈತನನ್ನು ಸೇರಿಸುವುದಿಲ್ಲ. ಈ ನಂಬಿಕೆ ದ್ರೋಹಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಈತ ಎಲ್ಲಾದರೂ ನಮ್ಮಗಳ ಒಡನಾಟದ ಬಗ್ಗೆ ಹೇಳಿಕೊಂಡು ಲಾಭ ಮಾಡಲು ಬಂದರೆ ಯಾಮಾರಬೇಡಿ. ದರ್ಶನ್ ಅವರ ಹೆಸರು ಬಳಸಿ ದುಡ್ಡು ಮಾಡುವ ಇನ್ನೊಂದು ಹುನ್ನಾರವಷ್ಟೇ. ದಯವಿಟ್ಟು ಯಾರೂ ಇವನ ಮಾತನ್ನು ನಂಬಿ ಮೋಸ ಹೋಗಬೇಡಿ. ಇಂತಿ ನಿಮ್ಮ ದಿನಕರ್ ತೂಗುದೀಪ'' ಎಂದು ಬರೆದುಕೊಂಡಿದ್ದಾರೆ.

"ನಮ್ಮ ಸಂಸ್ಥೆಗೆ ಅಪ್ಪನ ಹೆಸರಿಟ್ಟಿದ್ದೇವೆ. ಅದಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕಿತ್ತು. ಆದರೆ ಅವನು ನಮಗೆ, ನಮ್ಮ ಹತ್ತಿರದವರಿಗೆ, ಒಳಗಿನವರಿಗೆ ಮೋಸ ಮಾಡಿಬಿಟ್ಟ'' ಎಂದು ಹೇಳಿಕೊಂಡಿರುವ ದಿನಕರ್‌, ''ಆತನನ್ನು ಯಾರೂ ನಂಬಬೇಡಿ. ಹತ್ತಿರ ಸೇರಿಸಬೇಡಿ. ಅವನು ನಂಬಿಕೆಗೆ ಅರ್ಹ ಅಲ್ಲ'' ಎಂದಿದ್ದಾರೆ.

ಇದನ್ನೂ ಓದಿ: '8 ಕೋಟಿ ಸಾಲ‌, ದರ್ಶನ್​ಗೆ ಮುಖ ತೋರಿಸಲಾಗದೇ ಊರು ಬಿಟ್ಟೆ': ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್

"ಈಗ ಸೆಲೆಬ್ರಿಟಿ ಮ್ಯಾನೇಜ್‌ಮೆಂಟ್ ಕಂಪನಿ ಶುರು ಮಾಡ್ತೀನಿ ಅಂತಿದ್ದಾನೆ. ಅದು ಬೇರೆ ಇನ್ನೇನೂ ಅಲ್ಲ. ಯಾವುದಾದರೂ ಉದ್ಘಾಟನೆ ಇದ್ದರೆ, ಅದಕ್ಕೆ ಸೆಲೆಬ್ರಿಟಿಗಳನ್ನು ಕಳಿಸೋದು. ಅದನ್ನವನು ಈ ಮೊದಲೂ ಮಾಡ್ತಿದ್ದ. ನಮ್ಮ ಹೆಸರು ಬಳಸಿ ಅವನು ದುಡ್ಡು ಮಾಡುತ್ತಿದ್ದದ್ದೇ ಹಾಗೆ. ಊರು ಬಿಟ್ಟು ಹೋದ ಮೇಲೆ ಹೊಸಪೇಟೆಯಲ್ಲಿದ್ದಾನೆ ಅಂತಾ ಗೊತ್ತಾಯ್ತು. ನಾನು ಹಾಗೂ ಚಿಂತನ್ ಹುಡುಕಿಕೊಂಡು ಹೋಗಿ ಕೊನೆಗೆ ನಾವೇ ಮರುಕ ಪಟ್ಟು ಹಣ ಕೊಟ್ಟು ಬಂದಿದ್ದೆವು. ನನ್ನ ಮಗುವಿಗೂ, ಆತನ ಮಗುವಿಗೂ ಕೇವಲ 17 ದಿನ ವ್ಯತ್ಯಾಸ ಅಷ್ಟೇ. ಅವನ ಹತ್ತಿರ ದುಡ್ಡು ಕೇಳೋಕೆ ಹೋಗಿದ್ದವರು ನಾವೇ ಸಹಾಯ ಮಾಡಿ ಬಂದಿದ್ದೆವು. ಅದನ್ನು ಬಿಟ್ಟರೆ ನಮಗೂ ಅವನಿಗೂ ಯಾವ ಸಂಬಂಧವೂ ಇಲ್ಲ" ಎಂದು ದಿನಕರ್ ತಿಳಿಸಿದ್ದಾರೆ.

ಇದನ್ನೂ ಓದಿ: 'ಮತ್ತೆ ಮದುವೆ ಆಗೋದು ನಿಜ, ಸದ್ಯಕ್ಕಿಲ್ಲ, ಆಗೋ ಸಮಯಕ್ಕೆ ಎಲ್ಲರಿಗೂ ತಿಳಿಸುತ್ತೇನೆ': ಚಂದನ್ ಶೆಟ್ಟಿ ಸಂದರ್ಶನ