'ದರ್ಶನ್ ಆ ಕೃತ್ಯಕ್ಕೆ ಕೈ ಹಾಕಿಲ್ಲವೆಂಬ ನಂಬಿಕೆಯಿದೆ, ಕಾಲ ಉತ್ತರಿಸಲಿದೆ': 'ಹಯಗ್ರೀವ' ನಟ ಧನ್ವೀರ್ ಗೌಡ ಸಂದರ್ಶನ
ನಟ ಧನ್ವೀರ್ ಗೌಡ ಹಾಗೂ ನಟಿ ಸಂಜನಾ ಆನಂದ್ ತೆರೆಹಂಚಿಕೊಂಡಿರುವ 'ಹಯಗ್ರೀವ' ಸಿನಿಮಾ ನಾಳೆ ಚಿತ್ರಮಂದಿರ ಪ್ರವೇಶಿಸಲಿದೆ.

By ETV Bharat Entertainment Team
Published : February 26, 2026 at 4:34 PM IST
ವರದಿ: ರವಿಕುಮಾರ್ ಎಂ.ಕೆ.
ಬಜಾರ್, ಕೈವ, ವಾಮನ ಹಾಗೂ ಬೈ ಟು ಲವ್ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಟನಾಗಿ ಗುರುತಿಸಿಕೊಂಡಿರುವ ಧನ್ವೀರ್ ಗೌಡ ಮುಖ್ಯಭೂಮಿಕೆಯ 'ಹಯಗ್ರೀವ' ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಚಿತ್ರಗಳಿಂದ ಚಿತ್ರಗಳಿಗೆ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ಎದುರುಗೊಳ್ಳುವ ಧನ್ವೀರ್ ಗೌಡ ಇದೇ ಮೊದಲ ಬಾರಿಗೆ ಖಾಕಿ ತೊಟ್ಟಿದ್ದಾರೆ. ನಾಳೆ ರಾಜ್ಯಾದ್ಯಂತ ಬಿಡುಗಡೆ ಆಗಲಿರುವ ಈ ಚಿತ್ರದಲ್ಲಿ ಸಂಜನಾ ಆನಂದ್ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಹಯಗ್ರೀವ ಯಾವ ಜಾನರ್ ಸಿನಿಮಾ? ಪೊಲೀಸ್ ಪಾತ್ರಕ್ಕೆ ಸಿದ್ಧತೆ ಹೇಗಿತ್ತು? ಡ್ರೀಮ್ ರೋಲ್ ಯಾವುದು? ಮುಂದಿನ ಚಿತ್ರಗಳ್ಯಾವುವು? ಸೇರಿದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗಿನ ಬಾಂಧವ್ಯದ ಕುರಿತು ಈಟಿವಿ ಭಾರತದೊಂದಿಗಿನ ಸಂದರ್ಶನದಲ್ಲಿ ನಟ ಧನ್ವೀರ್ ಗೌಡ ಹಂಚಿಕೊಂಡರು.
ಪ್ರಶ್ನೆ: ಹಯಗ್ರೀವ ಸಿನಿಮಾ ಕಥೆಯನ್ನು ಯಾವಾಗ ಫೈನಲ್ ಮಾಡಿದ್ದು? ಖಾಕಿ ಡ್ರೆಸ್ ತೊಟ್ಟಾಗ ಅನುಭವ ಹೇಗಿತ್ತು?
''ವಾಮನ ಸಿನಿಮಾದ ಕೊನೆ ಹಂತದ ಶೂಟಿಂಗ್ ಸಮಯ ಹೊಸ ನಿರ್ದೇಶಕ ರಘು ಅವರಿಂದ ಒನ್ ಲೈನ್ ಸ್ಟೋರಿ ಕೇಳಿದ್ದೆ. ವಿಭಿನ್ನ ಎನಿಸಿತು. ಮಂಜು ಸರ್ ನಿರ್ಮಾಣಕ್ಕೆ ಮುಂದಾದ್ರು. ಸಂಪೂರ್ಣ ಕಥೆ ಕೇಳು ಎಂದು ನನಗೆ ಸಲಹೆ ಕೊಟ್ರು. ನಂತರ ನಿರ್ದೇಶಕರು ಈ ಕಥೆ ಮೇಲೆ ಮೂರು ತಿಂಗಳು ವರ್ಕ್ ಮಾಡಿದ್ರು. ಎಲ್ಲಾ ಆದ ಬಳಿಕ ಡೈರೆಕ್ಟರ್ ಈ ಕಥೆ ಹೇಳಬೇಕೆಂದು ಎರಡು ಗಂಟೆ ಸಮಯ ಕೇಳಿದ್ರು. ಏಕೆ ಎಂದು ಪ್ರಶ್ನಿಸಿದ್ದಕ್ಕೆ, ಸೀನ್ ಟು ಸೀನ್ ಹೇಳಬೇಕು. ಆಗಲೇ ಕಥೆ ಅರ್ಥ ಆಗೋದು ಎಂದು ತಿಳಿಸಿದ್ರು. ಸರಿ ಆಯ್ತು ಅಂತಾ ಮುಂದಾದೆ. ಆದ್ರೆ ಪೊಲೀಸ್ ಪಾತ್ರ ಅಂದಾಗ, ಸದ್ಯಕ್ಕೆ ಬೇಡ, ಐದಾರು ಸಿನಿಮಾ ಆಗಲಿ ಎಂದುಕೊಂಡೆ. ಆದ್ರೆ ಕಥೆ ಕೇಳಿ, ಆಮೇಲೆ ನಿಮಗೆ ಗೊತ್ತಾಗುತ್ತದೆ ಎಂದು ಮನವೋಲಿಸಿದ್ರು. ಕಥೆ ಕೇಳಿದ ನಂತರ ವಿಭಿನ್ನ ಸಿನಿಮಾ ಎನಿಸಿತು. ಕಥೆ, ನಿರೂಪಣೆ ಎಲ್ಲವನ್ನೂ ವಿಭಿನ್ನವಾಗಿ ಮಾಡಿಕೊಂಡಿದ್ರು. ನನಗೆ ಬಹಳ ಖುಷಿಯಾಯ್ತು. ಮಾಡೋಣ ಅಂತಾ ಅಂದುಕೊಂಡೆ. ನನ್ನ ಪಾತ್ರದಲ್ಲಿ ಎರಡು ಶೇಡ್ ಇದೆ. ಹಾಗೇ, ಹಯಗ್ರೀವ ಅಂತಾ ಟೈಟಲ್ ಇಟ್ಟ ಮೇಲೆ ಅದಕ್ಕೆ ಸರಿಯಾದ ಗೌರವ ಕೊಡಬೇಕು. ಪುರಾತನ ಕಥೆಯ ಒಂದು ಎಳೆ ತೆಗೆದುಕೊಂಡು ಸದ್ಯದ ಸಮಾಜ ಹೇಗಿದೆ ಎಂಬುದನ್ನು ನಾವು ಈ ಚಿತ್ರದಲ್ಲಿ ತೋರಿಸಲು ಸಜ್ಜಾಗಿದ್ದೇವೆ'' ಎಂದು ಸಿನಿಮಾ ಆರಂಭದ ಬಗ್ಗೆ ತಿಳಿಸಿದರು.
ಪ್ರಶ್ನೆ: ಪೊಲೀಸ್ ಪಾತ್ರಕ್ಕೆ ಏನಾದರೂ ಸಿದ್ಧತೆ ಮಾಡಿಕೊಂಡ್ರಾ ಹೇಗೆ?
''ಸಿನಿಮಾದ ಮೊದಲ ಇಂಟ್ರುಡಕ್ಷನ್ ಫೈಟ್ ಸೀನ್ಗಾಗಿ ಸಿಕ್ಸ್ಪ್ಯಾಕ್ ಮಾಡಬೇಕೆಂದು ತಿಳಿಸಿದ್ರು. ಹಾಗಾಗಿ, ಮೂರ್ನಾಲ್ಕು ತಿಂಗಳು ವರ್ಕ್ ಔಟ್ ಮಾಡಿ, ಬಾಡಿ ಬಿಲ್ಡ್ ಮಾಡಿದ ನಂತರ ಚಿತ್ರೀಕರಣ ಆರಂಭಿಸಿದೆವು. ಸಾಹಸ ನಿರ್ದೇಶಕ ಅರ್ಜುನ್ ಮಾಸ್ಟರ್ ತುಂಬಾ ಚೆನ್ನಾಗಿ ಸಾಹಸ ಸಂಯೋಜನೆ ಮಾಡಿದ್ದಾರೆ'' ಎಂದರು.
ಪ್ರಶ್ನೆ: ಈ ಪಾತ್ರಕ್ಕೆ ನಿಮ್ಮ ತೂಕದಲ್ಲಿ ಎಷ್ಟು ಕೆಜಿ ಏರಿಳಿತ ಮಾಡಿಕೊಂಡ್ರಿ?
''ನಾನು ಮೊದಲಿನಿಂದಲೂ ವರ್ಕ್ ಔಟ್ ಮಾಡುತ್ತಿದ್ದೇನೆ. ಹಾಗಾಗಿ, ಬಾಡಿ ಬಿಲ್ಡ್ ಮಾಡೋದು ಹಾಗೇ ಸಣ್ಣ ಆಗೋದು ನನಗೆ ಕಷ್ಟ ಎನಿಸಲಿಲ್ಲ'' ಎಂದು ತಿಳಿಸಿದ್ರು.
ಪ್ರಶ್ನೆ: ಕನ್ನಡ ಚಿತ್ರರಂಗದಲ್ಲಿ ಸದ್ಯ ಭರವಸೆಯ ನಟನಾಗಿ ಗುರುತಿಸಿಕೊಂಡಿದ್ದೀರ. ಒಳ್ಳೆ ಕಥೆಗಾರರಿಗೆ ಅಥವಾ ಕಂಟೆಂಟ್ಗೆ ಸದ್ಯದ ಪರಿಸ್ಥಿತಿಯಲ್ಲಿ ಚಿತ್ರರಂಗ ಹೆಚ್ಚು ಒತ್ತು ಕೊಡುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಹೇಳೋದಾದ್ರೆ?
''ಒಬ್ಬ ಹೀರೋ ಲವ್, ರೌಡಿಸಂ, ಆ್ಯಕ್ಷನ್ ಸಿನಿಮಾಗನ್ನು ಮಾಡಿ ಸಕ್ಸಸ್ ಆದ್ರೆ, ಅವರಿಗೆ ಅದೇ ರೀತಿಯ ಕಥೆಗಳು ಬರುತ್ತವೆ. ಆದ್ರೆ ನಾನು ಹಾಗಿಲ್ಲ. ವಿಭಿನ್ನ ಬಗೆಯ ಕಥೆಗಳನ್ನು ನಿರೀಕ್ಷೆ ಮಾಡುತ್ತೇನೆ. ಚಿತ್ರದಿಂದ ಚಿತ್ರಕ್ಕೆ ನನ್ನ ಪಾತ್ರಗಳು ವಿಭಿನ್ನವಾಗಿದೆ. ಈಗ ಒಟಿಟಿ ಜಮಾನ. ಎಲ್ಲರ ಕೈಯಲ್ಲಿ ಮೊಬೈಲ್ ಇರೋದ್ರಿಂದ ಎಲ್ಲಾ ಭಾಷೆಯ ಸಿನಿಮಾಗಳನ್ನು ನೋಡುವಾಗ ನಾವು ಹೊಸದಾಗಿ ಕಂಟೆಂಟ್ ಕೊಡಬೇಕು. ಆಗ ಮಾತ್ರ ಪ್ರೇಕ್ಷಕರು ರಿಸೀವ್ ಮಾಡ್ತಾರೆ. ಇಲ್ಲಾ ಅಂದ್ರೆ ಇದು ಆ ಸಿನಿಮಾದ ಕಾಪಿ ಅಂತಾರೆ. ಹಾಗಾಗಿ, ಹೊಸತನದ ಕಡೆ ಹೆಚ್ಚಿನ ಗಮನ ಹರಿಸಬೇಕು'' ಎಂದು ತಿಳಿಸಿದ್ರು.
ಪ್ರಶ್ನೆ: ಭರವಸೆಯ ನಟನಾಗಿ ಗುರುತಿಸಿಕೊಂಡಿರುವ ನಿಮ್ಮ ಕನಸಿನ ಪಾತ್ರ ಯಾವುದು?
''ನಾನು ಮೊದಲಿನಿಂದಲೂ ನಾಟಕಗಳನ್ನು ಮಾಡುತ್ತಾ ಬಂದವನು. ಹಾಗಾಗಿ, ಪೌರಾಣಿಕ ಪಾತ್ರ ನಿರ್ವಹಿಸಬೇಕೆನ್ನುವ ಕನಸಿದೆ. ಜೊತೆಗೆ ಎಲ್ಲಾ ರೀತಿಯ ಪಾತ್ರಗಳನ್ನು ಮಾಡಬೇಕೆನ್ನುವ ಆಸೆ ಇದೆ'' ಎಂದು ಹಂಚಿಕೊಂಡರು.

ಪ್ರಶ್ನೆ: ದರ್ಶನ್ ನಿಮ್ಮ ಸಿನಿಮಾಗಳಿಗೆ ಸದಾ ಬೆಂಬಲ ಕೊಡುತ್ತಿದ್ರು. ಈಗವರ ಸಪೋರ್ಟ್ ಇಲ್ಲ. ಏನಂತೀರಾ?
''ಹೌದು, ಅವರು ನನ್ನ ಎಲ್ಲಾ ಸಿನಿಮಾಗಳಿಗೆ ಸಪೋರ್ಟ್ ಮಾಡಿದ್ದಾರೆ. ಆದ್ರೆ ಕಾರಣಾಂತರಗಳಿಂದ ಅವರ ಅನುಪಸ್ಥಿತಿಯಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ದರ್ಶನ್ ಅಣ್ಣ ಹೇಳಿದ ಮೇಲೆ ವಿಜಯಲಕ್ಷ್ಮಿ ಅಕ್ಕ ಬಂದು ನಮ್ಮ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿಕೊಟ್ರು. ಅದಕ್ಕೆ ನಾನು ಚಿರಋಣಿ'' ಎಂದು ಧನ್ಯವಾದ ಅರ್ಪಿಸಿದ್ರು.
ಪ್ರಶ್ನೆ: ದರ್ಶನ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವ ಕಾಮೆಂಟ್ಸ್ ಬಗ್ಗೆ ನಿಮ್ಮ ರಿಯಾಕ್ಷನ್ ಏನು?
''ಅಂಥವರ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ಮೇಲೊಬ್ಬ ಇದ್ದಾನೆ. ಎಲ್ಲದಕ್ಕೂ ಕಾಲ ಉತ್ತರ ಕೊಡಲಿದೆ. ತಾಳ್ಮೆಯಿಂದ ಕಾಯಬೇಕು. ಉತ್ತರ ಸಿಕ್ಕಿದಾಗ ಈಗ ಮಾತನಾಡುವವರು ಎಲ್ಲಿರ್ತಾರೆ ಅನ್ನೋದನ್ನು ನೋಡೋಣ'' ಎಂದು ತಿಳಿಸಿದ್ರು.

ಪ್ರಶ್ನೆ: ಮುಂದಿನ ಸಿನಿಮಾಗಳ್ಯಾವುವು?
''ಕಥೆಗಳನ್ನು ಕೇಳುತ್ತಿದ್ದೇನೆ. ಹಯಗ್ರೀವ ಮುಗಿದ ಮೇಲೆ ಹಾಗೇ ಸ್ವಲ್ಪ ಒತ್ತಡ ಕಡಿಮೆ ಆದ ಮೇಲೆ ಮುಂದಿನ ಸಿನಿಮಾ ಕೈಗೆತ್ತಿಕೊಳ್ಳುತ್ತೇನೆ'' ಎಂದು ತಿಳಿಸಿದರು.
ಪ್ರಶ್ನೆ: ದರ್ಶನ್ ಅವರನ್ನು ಬಹಳ ಹತ್ತಿರದಿಂದ ನೋಡಿದ್ದೀರ. ಸದ್ಯದ ಪ್ರಕರಣ ಹೊರತುಪಡಿಸಿ ಅವರ ಬಗ್ಗೆ ಹೇಳೋದಾದ್ರೆ?
''ಸದ್ಯಕ್ಕೆ ವಿವಾದಗಳು ಹಾಗೂ ಆರೋಪಗಳು ಏನೇ ಇದ್ರೂ, ಇಂದಿಗೂ ಏಕೆ ಅಭಿಮಾನಿಗಳು ಅವರನ್ನು ಇಷ್ಟ ಪಡ್ತಾರೆ ಅಂದ್ರೆ ಅವರಲ್ಲಿರುವ ಒಂದು ಒಳ್ಳೆ ಗುಣದಿಂದ. ಅವರು ತಪ್ಪು ಮಾಡಿಲ್ಲ ಎಂಬ ನಂಬಿಕೆ ಇದೆ. ಒಳ್ಳೆ ಟೈಮ್ಗೋಸ್ಕರ ಕಾಯುತ್ತಿದ್ದೀವಿ ಅಷ್ಟೇ'' ಎಂದು ತಿಳಿಸಿದರು.
ಪ್ರಶ್ನೆ: ನೀವು ಸುದೀಪ್ ಅವರ ಜೊತೆ ಸಿನಿಮಾ ಮಾಡಬೇಕು ಎಂಬ ಹೇಳಿಕೆ ಕೊಟ್ಟಿದ್ದೀರ?
''ಅವರು ತುಂಬಾ ಸೀನಿಯರ್. ಹೇಗೆ ಸಾಧ್ಯ? ನಾನು ಆ ರೀತಿಯ ಸ್ಟೇಟ್ಮೆಂಟ್ ಕೊಟ್ಟಿಲ್ಲ'' ಅಂತಾ ಧನ್ವೀರ್ ಗೌಡ ಸ್ಪಷ್ಟನೆ ನೀಡಿದರು.

ರಘುಕುಮಾರ್ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾವನ್ನು ನಿರ್ಮಾಪಕ ಸಮೃದ್ಧಿ ಮಂಜುನಾಥ್ ಕೆವಿಸಿ ಪ್ರೊಡಕ್ಷನ್ಸ್ ಬ್ಯಾನರ್ನಡಿ ನಿರ್ಮಿಸಿದ್ದಾರೆ. ಧನ್ವೀರ್, ಸಂಜನಾ ಜೊತೆ ಚಿತ್ರದಲ್ಲಿ ರಂಗಾಯಣ ರಘು, ತಾರಾ, ಸಾಧು ಕೋಕಿಲ, ರವಿಶಂಕರ್ ಸೇರಿ ಕೆಲವರು ನಟಿಸಿದ್ದಾರೆ. ಕಾರ್ತಿಕ್ ಕ್ಯಾಮರಾ ವರ್ಕ್, ಜೂಡಾ ಸ್ಯಾಂಡಿ ಸಂಗೀತ ಸಂಯೋಜನೆ ಹಾಗೂ ಉಮೇಶ್ ಅವರ ಸಂಕಲನವಿದೆ. ಶೈಲೇಶ್ ರಾಜ್ ಹಾಗೂ ಚೇತನ್ ಸಿದ್ ಸಂಭಾಷಣೆ ಬರೆದಿದ್ದು, ರಘುಕುಮಾರ್ ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಶುಕ್ರವಾರ ಸಿನಿಮಾ ಬಿಡುಗಡೆ ಆಗಲಿದೆ.
ಇದನ್ನೂ ಓದಿ: 'ಟಾಕ್ಸಿಕ್'ಗೂ ಮುನ್ನ ಯಶ್ ಗಡ್ಡಕ್ಕೆ ಕತ್ತರಿ ಹಾಕಿಸಿದ ಸಿನಿಮಾ ಯಾವುದು? ಕೆಜಿಎಫ್ 2 ಹಿನ್ನೆಲೆ ಸ್ಥಗಿತ!

