ಪಿ.ಸಮುದ್ರಖನಿ ನಿರ್ದೇಶನದ 'ಸ್ಕೂಲ್ ಬಸ್'ನಲ್ಲಿ ಸುದೀಪ್: ಜನ್ಮದಿನಕ್ಕೆ ಫಸ್ಟ್ ಲುಕ್ ಗ್ಲಿಂಪ್ಸ್ ರಿಲೀಸ್
ಪಿ.ಸಮುದ್ರಖನಿ ನಿರ್ದೇಶನದ 'ಸ್ಕೂಲ್ ಬಸ್' ಚಿತ್ರದ ವಿಶೇಷ ಪಾತ್ರದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದು, ಅವರ ಒಂದು ನೋಟವೀಗ ಪ್ರೇಕ್ಷಕರಿಗೆ ಲಭ್ಯವಾಗಿದೆ.

By ETV Bharat Entertainment Team
Published : September 2, 2026 at 12:38 PM IST
ತಮ್ಮ ಅಮೋಘ ಅಭಿನಯದ ಮೂಲಕ ಕನ್ನಡ ಚಿತ್ರರಂಗದಲ್ಲಿ ಅಭಿನಯ ಚಕ್ರವರ್ತಿ ಎಂದೇ ಗುರುತಿಸಿಕೊಂಡಿರುವ ಸುದೀಪ್ ಅವರಿಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. 53ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಬಹುಬೇಡಿಕೆ ತಾರೆಗೆ ಕುಟುಂಬ ಸದಸ್ಯರು, ಚಿತ್ರರಂಗದವರೂ ಸೇರಿದಂತೆ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ನಟ ಕಾಣಿಸಿಕೊಳ್ಳಲಿರುವ ಮುಂಬರುವ ಚಿತ್ರತಂಡಗಳೂ ಟೈಟಲ್, ಪೋಸ್ಟರ್, ಗ್ಲಿಂಪ್ಸ್ ಅನಾವರಣಗೊಳಿಸುವ ಮೂಲಕ ಫ್ಯಾನ್ಸ್ಗೆ ಬರ್ತ್ಡೇ ಟ್ರೀಟ್ ಕೊಡುತ್ತಿದೆ.
ಅದರಂತೆ, 'ಸ್ಕೂಲ್ ಬಸ್' ಸಿನಿಮಾದಲ್ಲಿ ಸುದೀಪ್ ಕಾಣಿಸಿಕೊಳ್ಳಲಿದ್ದು, ಚಿತ್ರತಂಡ ಗ್ಲಿಂಪ್ಸ್ ಅನಾವರಣಗೊಳಿಸಿದೆ. ಖ್ಯಾತ ತಮಿಳು ಫಿಲ್ಮ್ ಮೇಕರ್ ಪಿ.ಸಮುದ್ರಖನಿ ಅವರ ಮುಂಬರುವ ಸ್ಕೂಲ್ ಬಸ್ ಚಿತ್ರದಲ್ಲಿ ಪ್ರಮುಖ ಪಾತ್ರವೊಂದಕ್ಕೆ ಕಿಚ್ಚ ಜೀವ ತುಂಬುತಿದ್ದು, ಚಿತ್ರತಂಡ ಕಳೆದ ಮಧ್ಯರಾತ್ರಿ ಅವರ ಫಸ್ಟ್ ಲುಕ್ ಪೋಸ್ಟರ್, ಗ್ಲಿಂಪ್ಸ್ ಬಿಡುಗಡೆ ಮಾಡುವ ಮೂಲಕ ಈ ಮಹತ್ವದ ಪ್ರಾಜೆಕ್ಟ್‌ನಲ್ಲಿ ಕನ್ನಡ ನಟ ಇರುವುದನ್ನು ಅಧಿಕೃತವಾಗಿ ಪ್ರಕಟಿಸಿದೆ. ಖ್ಯಾತ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅರ್ಪಿಸುತ್ತಿರುವ ಈ ಚಿತ್ರ ಈಗಾಗಲೇ ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದೆ.
ಶಾಲಾ ಬಸ್ ಚಾಲಕನೊಬ್ಬನ ಸುತ್ತ ಸಾಗುವ ಕಥೆ: ನಾಡೋಡಿಗಲ್, ಅಪ್ಪ ಮತ್ತು ವಿನೋದಯ ಸಿತಂ ಸೇರಿದಂತೆ ಮುಂತಾದ ಸದಭಿರುಚಿಯ ಚಿತ್ರಗಳ ಮೂಲಕ ಜನಪ್ರಿಯರಾಗಿರುವ ಪಿ.ಸಮುದ್ರಖನಿ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವುದರ ಜೊತೆಗೆ ಪ್ರಮುಖ ಪಾತ್ರದಲ್ಲೂ ಅಭಿನಯಿಸುತ್ತಿದ್ದಾರೆ. 22 ಮಕ್ಕಳ ಜವಾಬ್ದಾರಿ ಹೊತ್ತ ಶಾಲಾ ಬಸ್ ಚಾಲಕನೊಬ್ಬನ ಸುತ್ತ ಈ ಕಥೆ ಸಾಗಲಿದ್ದು, ಮಕ್ಕಳ ಭಾವನೆಗಳು, ಪೋಷಕರ ಕಳಕಳಿ ಹಾಗೂ ಶಿಕ್ಷಕರ ಬದುಕಿನ ವಿವಿಧ ಮಗ್ಗುಲುಗಳ ಮೇಲೆ ಸಿನಿಮಾ ಬೆಳಕು ಚೆಲ್ಲಲಿದೆ.
ಈ ಹಿಂದೆ ತಮಿಳಿನಲ್ಲಿ ಪುಲಿ ಮತ್ತು ಮುಡಿಂಜ ಇವನ ಪುಡಿ (ಕನ್ನಡದಲ್ಲಿ ಕೋಟಿಗೊಬ್ಬ 2) ಸೇರಿದಂತೆ ಹಲವು ಚಿತ್ರಗಳ ಮೂಲಕ ಗುರುತಿಸಿಕೊಂಡಿದ್ದ ಸುದೀಪ್, ಸ್ಕೂಲ್ ಬಸ್ ಪ್ರಾಜೆಕ್ಟ್ ಒಪ್ಪಿಕೊಳ್ಳಲು ಅದರ ಆಕರ್ಷಕ ಕಥಾವಸ್ತುವೇ ಪ್ರಮುಖ ಕಾರಣ ಎನ್ನಲಾಗಿದೆ. ನಿರ್ದೇಶಕ ಸಮುದ್ರಖನಿ ಹೇಳಿದ ವಿಶಿಷ್ಟ ಕಥೆ ಹಾಗೂ ಗ್ಲಿಂಪ್ಸ್ ವೀಕ್ಷಿಸಿದ ಕೂಡಲೇ ಸುದೀಪ್ ಈ ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಲೆನಿನ್ ಕ್ರಿಯೇಷನ್ಸ್ ಬ್ಯಾನರ್ ಅಡಿ ಡಾ.ಪಿ.ಲೆನಿನ್ ಮುತ್ತುರಾಜ್ ಮತ್ತು ಡಾ.ಎ.ಟಿ.ಆಶಾ ಲೆನಿನ್ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಸ್ಯಾಮ್ ಸಿ.ಎಸ್ ಸಂಗೀತ ಸಂಯೋಜಿಸುತ್ತಿದ್ದು, ಎನ್.ಕೆ.ಏಕಾಂಬರಂ ಛಾಯಾಗ್ರಹಣ, ಎ.ಎಲ್.ರಮೇಶ್ ಅವರ ಸಂಕಲನವಿರಲಿದೆ. ಜಾಕಿ ಕಲಾ ನಿರ್ದೇಶನ ಹಾಗೂ ಸಿಲ್ವಾ ಮತ್ತು ದಿನೇಶ್ ಸುಬ್ಬರಾಯನ್ ಸಾಹಸ ನಿರ್ದೇಶನ ಒದಗಿಸಿದ್ದಾರೆ. ಯುನಿವರ್ಸಲ್ ಕಥಾಹಂದರ ಹೊಂದಿರುವ ಸ್ಕೂಲ್ ಬಸ್ ಚಿತ್ರವನ್ನು ಕನ್ನಡ, ತಮಿಳು, ತೆಲುಗು, ಹಿಂದಿ, ಇಂಗ್ಲಿಷ್ ಮಾತ್ರವಲ್ಲದೇ ಚೈನೀಸ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಭಾಷೆಗಳಲ್ಲಿ ವಿಶ್ವದಾದ್ಯಂತ ತೆರೆಗೆ ತರಲು ಸಿದ್ಧತೆಗಳು ನಡೆಯುತ್ತಿವೆ.
ಇದನ್ನೂ ಓದಿ: ಸುದೀಪ್ ಜನ್ಮದಿನ: 'ಬಿಲ್ಲ ರಂಗ ಬಾಷಾ ಪೋಸ್ಟರ್ ಅನ್ನು ಬಿಗ್ ಸ್ಕ್ರೀನ್ನಲ್ಲಿ ಜೀವಂತವಾಗಿ ನೋಡಲು ಕಾತರ'
ಕಿಚ್ಚನ ಕೈಯಲ್ಲಿ ಎರಡ್ಮೂರು ಬಿಗ್ ಪ್ರಾಜೆಕ್ಟ್ಗಳಿದ್ದು, ಹುಟ್ಟುಹಬ್ಬ ಹಿನ್ನೆಲೆ, 'ಬಿಲ್ಲ ರಂಗ ಬಾಷಾ' ಪೋಸ್ಟರ್ ಅನಾವರಣಗೊಂಡಿದೆ. ಸುದೀಪ್ ಮುಖ್ಯಭೂಮಿಕೆಯ ವಿಕ್ರಾಂತ್ ರೋಣ ಸಿನಿಮಾ ನಿರ್ದೇಶಿಸಿದ್ದ ಅನೂಪ್ ಭಂಡಾರಿ ಅವರೇ ಈ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳುತ್ತಿದ್ದು, 2027ರ ಮಾರ್ಚ್ ಒಳಗೆ ಟೀಸರ್ ಅನಾವರಣಗೊಳ್ಳಲಿದೆ., 2027ರ ಜುಲೈ-ಸೆಪ್ಟಂಬರ್ ನಡುವೆ ಟ್ರೇಲರ್ ಮತ್ತು ಹಾಡುಗಳು ಹೊರ ಬರಲಿವೆ. 2027ರ ವರ್ಷಾಂತ್ಯದಲ್ಲಿ ಸಿನಿಮಾ ತೆರೆಕಾಣಲಿದೆ. ಕೆ.ನಿರಂಜನ್ ರೆಡ್ಡಿ ಹಾಗೂ ಚೈತನ್ಯ ರೆಡ್ಡಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಒಟ್ಟಾರೆ, ಮುಂಬರುವ ಚಿತ್ರಗಳ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.

ಇದನ್ನೂ ಓದಿ: 'ಶಿವಣ್ಣ ಕೂರ್ಮಾವತಾರ್ ಒಪ್ಪಿಕೊಂಡಿದ್ದೊಂದು ದೈವಸಂಕಲ್ಪ, ನಮ್ಮ ಕುಟುಂಬಕ್ಕೆ ಬದುಕು ನೀಡಿದ್ದೇ ಕರ್ನಾಟಕ': ಸಾಯಿಕುಮಾರ್


