ETV Bharat / entertainment

'Finally'... ಮದುವೆ ಬಳಿಕ ಮೊದಲ ಫೋಟೋ ಸಹಿತ ಮನದಾಳ ಹಂಚಿಕೊಂಡ ಅಮೀರ್ ಖಾನ್ ಪತ್ನಿ ಗೌರಿ

ಎರಡನೇ ಮದುವೆಯಾದ ಗೌರಿ ಸ್ಪ್ರಾಟ್ ಆತ್ಮೀಯ​​​ ಸಮಾರಂಭದ ಮೊದಲ ಫೋಟೋ ಹಂಚಿಕೊಂಡಿದ್ದಾರೆ.

Aamir Khan Marries Longtime Partner Gauri Spratt
ಅಮೀರ್​ ಖಾನ್​ ಗೌರಿ ಸ್ಪ್ರಾಟ್ ಮದುವೆ (ANI)
author img

By ETV Bharat Entertainment Team

Published : July 6, 2026 at 11:40 AM IST

2 Min Read
Choose ETV Bharat

ಬಾಲಿವುಡ್​ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಖ್ಯಾತಿಯ ನಟ-ನಿರ್ಮಾಪಕ ಅಮೀರ್ ಖಾನ್ ಭಾನುವಾರ ಬೆಂಗಳೂರು ಮೂಲದ ತಮ್ಮ ದೀರ್ಘಕಾಲದ ಗೆಳತಿ ಗೌರಿ ಸ್ಪ್ರಾಟ್ ಅವರೊಂದಿಗೆ ದಾಂಪತ್ಯ ಜೀವನ ಆರಂಭಿಸಿದ್ದಾರೆ. ಮುಂಬೈನ ತಮ್ಮ ನಿವಾಸದಲ್ಲಿ ನಡೆದ ಆತ್ಮೀಯ ಸಮಾರಂಭದಲ್ಲಿ ವಿವಾಹವಾದರು. ಕಾರ್ಯಕ್ರಮದಲ್ಲಿ ನಿಕಟ ಕುಟುಂಬ ಸದಸ್ಯರು ಮತ್ತು ಆಪ್ತ ಸಿನಿ ಸ್ನೇಹಿತರಷ್ಟೇ ಭಾಗವಹಿಸಿದ್ದರು. ಇದೀಗ ತಮ್ಮ ವಿಶೇಷ ದಿನದ ಮೊದಲ ಫೋಟೋ ಹಂಚಿಕೊಂಡಿದ್ದಾರೆ ಗೌರಿ ಸ್ಪ್ರಾಟ್.

ಸಮಾರಂಭದ ಬಳಿಕ ನವದಂಪತಿಯಿಂದ ಬಂದ ಮೊದಲ ಫೋಟೋ ಇದಾಗಿದೆ. ಮ್ಯಾರೇಜ್​ ರಿಜಿಸ್ಟರ್ ಡಾಕ್ಯೂಮೆಂಟ್ಸ್​ಗೆ ಸಹಿ ಮಾಡಿ, ಗೆದ್ದೆ ಎಂಬರ್ಥದಲ್ಲಿ ಸನ್ನೆ ಮಾಡಿರುವ ಕ್ಷಣ ಇದಾಗಿದೆ. ಸದಾ ಸರಳವಾಗಿ ಕಾಣಿಸಿಕೊಳ್ಳುವ ಗೌರಿ, ಈ ಫೋಟೋದಲ್ಲಿ ಬಳಹ ಖುಷಿಯಿಂದ, ಹೃದಯತುಂಬಿ ನಗು ಬೀರಿ ಕಾಣಿಸಿಕೊಂಡಿದ್ದಾರೆ. ಪೋಸ್ಟ್​​ಗೆ ಹಾರ್ಟ್ ಎಮೋಜಿಯೊಂದಿಗೆ 'ಫೈನಲಿ' ಎಂದು ಬರೆದುಕೊಂಡಿದ್ದಾರೆ.

ಫೋಟೋಗೆ ಅಭಿಮಾನಿಗಳು ಪ್ರೀತಿಯ ಧಾರೆಯೆರೆದಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಸಖತ್ ವೈರಲ್​ ಆಗಿದೆ. ಸಾಮಾಜಿಕ ಜಾಲತಾಣ ಬಳಕೆದಾರರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮುಂಬೈ ನಗರದಲ್ಲಿ ಧಾರಾಕಾರ ಮಳೆಯ ನಡುವೆಯೂ, ವಿವಾಹದ ಸಿದ್ಧತೆಗಳು ಯೋಜಿಸಿದಂತೆ ನಡೆದವು. ಲಗಾನ್ ನಿರ್ಮಾಪಕ ಅಶುತೋಷ್ ಗೋವಾರಿಕರ್, ರಾಜಕಾರಣಿ ರಾಜ್ ಠಾಕ್ರೆ ಮತ್ತು ಗೀತೆರಚನೆಕಾರ ಪ್ರಸೂನ್ ಜೋಶಿ, ಹಾಸ್ಯನಟ ವೀರ್ ದಾಸ್, ಕ್ರಿಕೆಟಿಗ ಇರ್ಫಾನ್ ಪಠಾಣ್, ಉದ್ಯಮಿ ಮುಖೇಶ್ ಅಂಬಾನಿ ಸೇರಿದಂತೆ ಉದ್ಯಮದ ಆಪ್ತರು ವಿವಾಹದಲ್ಲಿ ಉಪಸ್ಥಿತರಿದ್ದರು.

ಗೌರಿ ಮತ್ತು ನಟನ ತಂಡ ಹಂಚಿಕೊಂಡಿರುವ ಫೋಟೋವನ್ನು ನೋಡಿದರೆ, ಸಮಾರಂಭವು ನಟನ ನಿವಾಸದಲ್ಲಿ ಸರಳವಾಗಿ ನಡೆದಿರುವಂತೆ ತೋರಿದೆ. ಫೋಟೋಗಳಲ್ಲಿ ಕುಟುಂಬಸ್ಥರ ನಡುವೆ ಕುಳಿತ ಪ್ರೇಮಪಕ್ಷಿಗಳು ವಿವಾಹ ದಾಖಲೆ ಪತ್ರಕ್ಕೆ ಸಹಿ ಹಾಕುತ್ತಿರುವುದನ್ನು ಕಾಣಬಹುದು. ದಂಪತಿ ನಡುವೆ ಗೌರಿ ಸ್ಪ್ರಾಟ್​ ಪುತ್ರ ಕುಳಿತಿದ್ದರೆ, ಅಮೀರ್​ ಪುತ್ರ ಅಜಾದ್ ನಟನ ಪಕ್ಕದಲ್ಲಿ ಕುಳಿತಿದ್ದರು. ಹಿಂಬದಿ ಹಿರಿಯ ಮಕ್ಕಳಾದ ಜುನೈದ್​, ಈರಾ ಇದ್ದರು.

ಜೂನ್​ 4ರ ಸಂಜೆ ಮುಂಬೈನಲ್ಲಿ 'ಪ್ರೀತಮ್ ಆ್ಯಂಡ್ ಪೆಡ್ರೊ' ಚಿತ್ರದ ಪ್ರದರ್ಶನದ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅಮೀರ್ ಖಾನ್, ನಾನು ಜುಲೈ 5ರಂದು ವಿವಾಹ ಆಗುತ್ತಿದ್ದೇನೆ. ಅದು ತುಂಬಾ ಚಿಕ್ಕದಾದ, ಆತ್ಮೀಯ ಸಮಾರಂಭ. ನಾವದನ್ನು ನಮ್ಮ ಮನೆಯಲ್ಲಿ ಎರಡೂ ಕುಟುಂಬಗಳೊಂದಿಗೆ ಆಯೋಜಿಸುತ್ತಿದ್ದೇವೆ. ಇದು ನಮಗೆ ಬಹಳ ವಿಶೇಷ ದಿನ. ನಾವು ಎಲ್ಲರ ಪ್ರಾರ್ಥನೆ ಮತ್ತು ಆಶೀರ್ವಾದವನ್ನು ಬಯಸುತ್ತೇವೆ ಎಂದು ತಿಳಿಸಿದ್ದರು.

ಇದನ್ನೂ ಓದಿ: ಅಮೀರ್​ ನಟನೆಯ ಎರಡೇ ಸಿನಿಮಾ ನೋಡಿರುವ ಗೌರಿ : ಪರಸ್ಪರ ಹಿಡಿಸಿದ ಗುಣ ಇದು

ಇದು ಅಮೀರ್ ಖಾನ್​ ಅವರ ಮೂರನೇ ವಿವಾಹವಾಗಿದೆ. ಈ ಹಿಂದೆ 1986ರಿಂದ 2002ರವರೆಗೆ ಚಲನಚಿತ್ರ ನಿರ್ಮಾಪಕಿ ರೀನಾ ದತ್ತಾ ಅವರೊಂದಿಗೆ ದಾಂಪತ್ಯ ಜೀವನ ನಡೆಸಿದ್ದಾರೆ. ವಿಚ್ಛೇದಿತ ದಂಪತಿಗೆ ಜುನೈದ್ ಖಾನ್ ಮತ್ತು ಇರಾ ಖಾನ್ ಎಂಬಿಬ್ಬರು ಮಕ್ಕಳಿದ್ದಾರೆ. 2005ರಲ್ಲಿ, ನಟ ಚಲನಚಿತ್ರ ನಿರ್ದೇಶಕಿ-ನಿರ್ಮಾಪಕಿ ಕಿರಣ್ ರಾವ್ ಅವರನ್ನು ವಿವಾಹವಾದರು. ನಂತರ ಪರಸ್ಪರ ಒಪ್ಪಿಗೆ ಮೇರೆಗೆ 2021ರಲ್ಲಿ ಬೇರ್ಪಟ್ಟರು. ಮಗ ಆಜಾದ್​ಗೆ ಸಹ-ಪೋಷಕರಾಗಿ ಮುಂದುವರೆದಿದ್ದಾರೆ.

ಇದನ್ನೂ ಓದಿ: ಯಾರೀ ಗೌರಿ?, 18 ತಿಂಗಳಿನಿಂದ ಬೆಂಗಳೂರಿನ ಚೆಲುವೆಯೊಂದಿಗೆ ಅಮೀರ್​ ಖಾನ್​​ ಡೇಟಿಂಗ್​​; ಇಲ್ಲಿದೆ ಸಂಪೂರ್ಣ ಮಾಹಿತಿ

ಅತಿ ಹೆಚ್ಚು ಕಲೆಕ್ಷನ್​ ಮಾಡಿರುವ ಭಾರತದ ನಂಬರ್ ಒನ್​ ಸಿನಿಮಾ ಲಗಾನ್​ನಲ್ಲಿ ನಟಿಸಿರುವ ಅಮೀರ್​ ಖಾನ್ 2025ರಲ್ಲಿ ತಮ್ಮ 60ನೇ ಹುಟ್ಟುಹಬ್ಬದ ಮುನ್ನಾದಿನದಂದು ಗೆಳತಿ ಗೌರಿ ಸ್ಪ್ರಾಟ್ ಅವರನ್ನು ಮಾಧ್ಯಮಗಳಿಗೆ ಪರಿಚಯಿಸಿದ್ದರು. ಆ ಸಮಯದಲ್ಲಿ ಅವರು ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಸಂಬಂಧದಲ್ಲಿದ್ದೇವೆ ಎಂಬುದನ್ನು ಬಹಿರಂಗಪಡಿಸಿದರು. ಬೆಂಗಳೂರಿನ ಬ್ಯೂಟಿ ಮತ್ತು ವೆಲ್​ನೆಸ್​​ ಸೆಕ್ಟರ್​ನ ವೃತ್ತಿಪರರಾಗಿರುವ ಸ್ಪ್ರಾಟ್ ಅವರಿಗೆ ಇದು ಎರಡನೇ ಮದುವೆ. ಈಗಾಗಲೇ ಓರ್ವ ಮಗನಿದ್ದಾನೆ.