Explainer: ಕನ್ನಡದಲ್ಲಿ ವರ್ಷಕ್ಕೆ 250+ ಸಿನಿಮಾಗಳು ತೆರೆಕಂಡ್ರೂ ಯಶಸ್ಸು ಕಾಣೋದು ಕೆಲವೇ ಏಕೆ? ಸಿನಿಪಂಡಿತರ ಮಾತು
Explainer: ಕನ್ನಡದಲ್ಲಿ ವರ್ಷಕ್ಕೆ 250ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಯಾದರೂ ಸದ್ದು ಮಾಡೋದು ಸರಿಸುಮಾರು 10 ಚಿತ್ರಗಳು. ಇದು ಏಕೆ ಎಂಬುದರ ಬಗ್ಗೆ ಈಟಿವಿ ಭಾರತ ವರದಿಗಾರ ಎಂ.ಕೆ.ರವಿಕುಮಾರ್ ಜೊತೆ ಸಿನಿಪಂಡಿತರು ತಮ್ಮ ದೃಷ್ಟಿಕೋನ ಹಂಚಿಕೊಂಡಿದ್ದಾರೆ.

By ETV Bharat Entertainment Team
Published : April 14, 2026 at 12:01 PM IST
ಕನ್ನಡ ಚಿತ್ರರಂಗವು ಆತ್ಮವಿಶ್ವಾಸ ಮತ್ತು ನಿರಂತರ ಆವೇಗದೊಂದಿಗೆ 2025ಕ್ಕೆ ಕಾಲಿಟ್ಟಿತು. ಬಹುತೇಕ ಪ್ರತೀ ಶುಕ್ರವಾರ ಸಿನಿಮಾಗಳು ಚಿತ್ರಮಂದಿರ ತಲುಪಿದವು. ವರ್ಷದ ಅಂತ್ಯದ ವೇಳೆಗೆ ಉದ್ಯಮ ಪ್ರಮಾಣದಲ್ಲಿ ಐತಿಹಾಸಿಕವಾದದ್ದನ್ನು ಸಾಧಿಸಿತ್ತು. ಆದ್ರೆ, ಫಲಿತಾಂಶ ಏನಾಯ್ತು? ಎಲ್ಲವೂ ವಿಜಯವಾದವೇ? 255 ಚಲನಚಿತ್ರಗಳು ಬಿಡುಗಡೆಯಾದವು. ಈ ಪೈಕಿ 248 ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ್ರೆ, 7 ನೇರವಾಗಿ ಡಿಜಿಟಲ್ ಪ್ರವೇಶ ಪಡೆದುಕೊಂಡಿತು.
ಕನ್ನಡ ಚಿತ್ರರಂಗ ತನ್ನ 91 ವರ್ಷಗಳ ಪ್ರಯಾಣದಲ್ಲಿ 6,000ಕ್ಕೂ ಹೆಚ್ಚು ಚಿತ್ರಗಳ ಮೈಲಿಗಲ್ಲನ್ನು ಸದ್ದಿಲ್ಲದೇ ದಾಟಿಸಿತು. ಆದ್ರೆ ವಾಸ್ತವ ಏನು? ವರ್ಷಕ್ಕೆ ಹತ್ತಕ್ಕಿಂತ ಕಡಿಮೆ ಚಲನಚಿತ್ರಗಳು ನಿರ್ಮಾಪಕರ ಹೂಡಿಕೆಗಳನ್ನು ರಕ್ಷಿಸಿದವು, ಲಾಭ ತಂದುಕೊಟ್ಟವು. ಉಳಿದವು?. ಕೆಲವಂತೂ ವೆಚ್ಚವನ್ನು ಮರುಪಡೆಯಲು ವಿಫಲವಾದವು. ಪ್ರೇಕ್ಷಕರ ನಿರೀಕ್ಷೆಗಳು ಮತ್ತು ಇಂಡಸ್ಟ್ರಿಯಲ್ಲಿನ ನಿರ್ಮಾಣದ ನಡುವಿನ ಸಂಪೂರ್ಣ ಸಂಪರ್ಕ ಕಡಿತದಿಂದ ಈ ಹಿನ್ನಡೆ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
2025ರ ಚಂದನವನ:
- ಅಂದಾಜು ಸಿನಿಮಾ ಬಿಡುಗಡೆ: 255.
- ಚಿತ್ರಮಂದಿರಗಳಲ್ಲಿ ತೆರೆಕಂಡ ಚಲನಚಿತ್ರಗಳ ಸಂಖ್ಯೆ: 248.
- ನೇರ ಒಟಿಟಿ ಎಂಟ್ರಿ: 7.
2025ರ ಅತ್ಯಂತ ಯಶಸ್ವಿ ಚಿತ್ರ
ಕಾಂತಾರಾ ಚಾಪ್ಟರ್ 1
ಒಟ್ಟು ಗ್ಲೋಬಲ್ ಕಲೆಕ್ಷನ್: 852.36 ಕೋಟಿ ರೂಪಾಯಿ.
ಇಂಡಿಯಾ ಗ್ರಾಸ್ ಕಲೆಕ್ಷನ್: 741.36 ಕೋಟಿ ರೂಪಾಯಿ.
ಇಂಡಿಯಾ ನೆಟ್ ಕಲೆಕ್ಷನ್: 622.48 ಕೋಟಿ ರೂಪಾಯಿ.
ಕೇವಲ ವಿದೇಶದ ಕಲೆಕ್ಷನ್: 111.00 ಕೋಟಿ ರೂಪಾಯಿ.
(ಡಾಟಾ ಮೂಲ: ಸಿನಿಮಾ ಇಂಡಸ್ಟ್ರಿ ಟ್ಯಾಕರ್ ಸ್ಯಾಕ್ನಿಲ್ಕ್).
100 glorious days of #KantaraChapter1 ❤️🔥
— Hombale Films (@hombalefilms) January 10, 2026
A divine cinematic journey rooted in our sacred traditions and timeless culture.
Thank you to audiences worldwide for the endless love and support.
This journey is special because of you. 🙏#100DaysOfKantaraChapter1 ▶️… pic.twitter.com/eFlIKqrgf7
ಇಂದು ಕೆಲವೇ ಕೆಲ ಸಿನಿಮಾಗಳು ನಿಜವಾಗಿಯೂ ಪ್ರೇಕ್ಷಕರನ್ನು ಸಂಪರ್ಕಿಸುತ್ತಿವೆ, ಏಕೆ?
ಅಷ್ಟಕ್ಕೂ ಸಿನಿಮಾಗಳು ಸೋಲೋಕೆ ಅಥವಾ ಹಿನ್ನೆಡೆ ಕಾಣೋಕೆ ಅಥವಾ ನಿರೀಕ್ಷಿತ ಮಟ್ಟದಲ್ಲಿ ಸದ್ದು ಮಾಡದಿರೋಕ್ಕೆ ಶುರುವಾಗಿದ್ದು ಯಾವಾಗ? ಎಂದು ನೋಡಿದರೆ ಕಥೆಯನ್ನು ಪಕ್ಕಕ್ಕಿಟ್ಟು ಅದ್ಧೂರಿತನಕ್ಕೆ ಜೋತುಬಿದ್ದಾಗ ಎನ್ನಬಹುದು. ಇದರಿಂದ ನಿಜವಾಗಿಯೂ ಆಗಿದ್ದೇನಂದ್ರೆ ಕೆಲ ಹೀರೋಗಳು ಕಲಾವಿದರಾಗುವ ಬದಲು ಸ್ಟಾರ್ ನಟರಾದರು. ಅರ್ಥಪೂರ್ಣ ಪಾತ್ರವನ್ನು ರೂಪಿಸಬೇಕಾದ ನಿರ್ದೇಶಕರು ಹೀರೋಗೆ ಬಿಲ್ಡಪ್ ಕೊಡೋ ಡೈಲಾಗ್, ಸೀನ್ಸ್ ಬರೆಯೋಕೆ ಕುಳಿತರು. ಕಥೆ ಸೈಡಿಗೆ ಹೋಯ್ತು. ಮೇಕಿಂಗ್ ಹೈಲೆಟ್ ಆಯ್ತು. ಜೊತೆಗೆ ದಶಕಗಳ ಕಾಲ ಕಥೆಯ ಹುಡುಕಾಟ ಬಿಟ್ಟು, ರೀಮೇಕ್ ಬೆನ್ನು ಹತ್ತಿ, ಕಥೆಗಾರರನ್ನೂ ಸೈಡಿಗೆ ತಳ್ಳಿದ್ರು ಅನ್ನೋದು ಹೆಚ್ಚಿನ ಸಂಖ್ಯೆಯ ಸಿನಿಪ್ರಿಯರ ಅಭಿಪ್ರಾಯ. ಹೆಸರೇಳಲಿಚ್ಛಿಸದ ಸಿನಿಗಣ್ಯರ ಅಭಿಪ್ರಾಯವೂ ಬಹುತೇಕ ಇದೇ ರೀತಿ ಇದೆ. ಪ್ರಸ್ತುತ ವರ್ಷಕ್ಕೆ ಕನ್ನಡದಲ್ಲಿ ಸುಮಾರು 250ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಆದ್ರೆ ಸಕ್ಸಸ್ ಮಾತ್ರ ಕಡಿಮೆ. ಚಿತ್ರರಂಗ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಈ ಬಗ್ಗೆ ಖ್ಯಾತ ನಟ-ನಿರ್ದೇಶಕ-ನಿರ್ಮಾಪಕ ಡಾರ್ಲಿಂಗ್ ಕೃಷ್ಣ, ಹಿರಿಯ ನಟ ಸುಂದರ್ ರಾಜ್ ಹಾಗೂ ಸಿನಿಮಾ ಪ್ರದರ್ಶಕರ ವಲಯದ ಅಧ್ಯಕ್ಷ ಕೆ.ವಿ.ಚಂದ್ರಶೇಖರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಅದಕ್ಕೂ ಮೊದಲು, ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 2025ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಟಾಪ್ 10 ಕನ್ನಡ ಚಲನಚಿತ್ರಗಳನ್ನು ನೋಡೋಣ ಬನ್ನಿ:
1. ಕಾಂತಾರ ಚಾಪ್ಟರ್ 1 - 852.36 ಕೋಟಿ ರೂಪಾಯಿ.
2. ಸು ಫ್ರಮ್ ಸೋ - 123.94 ಕೋಟಿ ರೂಪಾಯಿ.
3. ದಿ ಡೆವಿಲ್ - 34.68 ಕೋಟಿ ರೂಪಾಯಿ.
4. ಮಾರ್ಕ್ - 31.87 ಕೋಟಿ ರೂಪಾಯಿ.
5. 45 - 15.87 ಕೋಟಿ ರೂಪಾಯಿ.
6. ಎಕ್ಕ - 11.42 ಕೋಟಿ ರೂಪಾಯಿ.
7. ಮಾದೇವ - 7.79 ಕೋಟಿ ರೂಪಾಯಿ.
8. ಛೂ ಮಂತರ್ - 6.57 ಕೋಟಿ ರೂಪಾಯಿ.
9. ಬ್ರ್ಯಾಟ್ - 5.93 ಕೋಟಿ ರೂಪಾಯಿ.
10. ಯುದ್ಧಕಾಂಡ ಅಧ್ಯಾಯ 2 - 5.51 ಕೋಟಿ ರೂಪಾಯಿ.
ಹಿರಿಯ ನಟ, ನಿರ್ಮಾಪಕ ವಲಯದ ಉಪಾಧ್ಯಕ್ಷ ಸುಂದರ್ ರಾಜ್ ಹೇಳೋದೇನು?
'ವಿಕಸನ': ಎವಲ್ಯೂಷನ್ ಪ್ರಮುಖ ಕಾರಣ. ಬದುಕು, ವ್ಯಾಪಾರ ಅಥವಾ ವಸ್ತು... ಯಾವುದೇ ಇರಲಿ ಮನುಷ್ಯ ಸುಲಭ ಅನಿಸಿದ್ದನ್ನು ಮೊದಲಿನಿಂದಲೂ ಮಾಡಿಕೊಂಡು ಬಂದಿದ್ದಾರೆ. ಉದಾಹರಣೆಗೆ, ಶಿಲಾಯುಗ. ಕಲ್ಲೇ ಪ್ರಧಾನವಾಗಿತ್ತು. ಬರುಬರುತ್ತಾ ಅದು ತಾಳೆಗರಿಗೆ ಶಿಫ್ಟ್ ಆಯ್ತು. ಆಮೇಲೆ ಪೇಪರ್ ನಂತು. ಹೀಗೆ ನಂತರ ಸಿನಿಮಾ ಆಯಿತು. ಮೊದಲು ಮೂಕಿ ಚಿತ್ರ ಮೂಡಿಬಂತು. ಫೋಟೋಗ್ರಫಿ ಬಂತು. ಫೋಟೋ ಹಾಕುತ್ತಾ ಹಾಕುತ್ತಾ ಮೂವಿಂಗ್ ಮಾಡಿದ. ಅದು ಟಾಕಿ ಆಯಿತು. ಟಾಕಿ ಇದ್ದದ್ದು ಬ್ಲ್ಯಾಕ್ ಆ್ಯಂಡ್ ವೈಟ್ ಆಯಿತು. ಆದಾದ ಬಳಿಕ ಕಲರ್ ಸಿನಿಮಾ ಮಾಡಿದ. ಫೈನಲಿ, ಅದ್ಯಾವಾಗ ಹೈ-ಲೆವೆಲ್ ಟೆಕ್ನಾಲಜಿ ಬಂತೋ ಅಂದ್ರೆ ಮೊಬೈಲ್, ಲ್ಯಾಪ್ಟಾಪ್ನಲ್ಲಿಯೇ ಎಲ್ಲವೂ ಲಭ್ಯವಾಯಿತು ಅಲ್ಲಿಯೇ ಎಲ್ಲವನ್ನೂ ನೋಡುವಾಗೆ ಆಯಿತು.
ಮನೆಯಲ್ಲಿಯೇ ಕುಳಿತು ವೀಕ್ಷಿಸುವ ಟ್ರೆಂಡ್ ಹೆಚ್ಚಳ: ಒಂದು ಕಾಲದಲ್ಲಿ ಒಂದು ಟೆಲಿಫೋನ್ ಮನೆಗೆ ಬಂದ್ರೆ ಅವನು ಹಣವಂತ ಅಂತಾ ಕರೆಯೋರು. ಹಾಗೇ, ಆಗಿನ ಕಾಲದಲ್ಲಿ ದೀಪಗಳ ಮೂಲಕ ನಾಟಕಗಳನ್ನು ಮಾಡುತ್ತಿದ್ದರು. ಈಗ ಇವೆಲ್ಲವೂ ಬದಲಾಗಿದೆ. ಬದಲಾವಣೆಯಿಂದ ಚಿತ್ರರಂಗದ ಬದಲಾಗುತ್ತಿದೆ. ಸಿನಿಮಾ ವಿಚಾರದಲ್ಲಿ 35 ಎಮ್ಎಮ್ನಿಂದ ಹಿಡಿದು 75ಎಮ್ಎಮ್ವರೆಗೆ ಬಂದಿದೆ. ಹಾಗಿದ್ದ ಸಿನಿಮಾ ಯಾವಾಗ ಟಿವಿ ಹಾಗೂ ಮೊಬೈಲ್ಗೆ ಬಂತೋ ಆಗ ಎಲ್ಲಾ ಮನೆಗಳು ಹೋಂ ಥಿಯೇಟರ್ ಆಯಿತು. ಹೀಗಿದ್ದಾಗ ಪ್ರೇಕ್ಷಕ ಏಕೆ ಹೊರಗಡೆ ಹೋಗಬೇಕು? ತನಗೆ ಇಷ್ಟವಾದ ಸಿನಿಮಾವನ್ನು ಮನೆಯಲ್ಲಿಯೇ ಕುಳಿತು ವೀಕ್ಷಿಸುತ್ತೇನೆ ಅಂತಾನೆ. ಪ್ರಸ್ತುತ ಈ ಟ್ರೆಂಡ್ ಹೆಚ್ಚಾಗಿದೆ ಅಂತಾರೆ ಅನುಭವಿ ತಾರೆ ಸುಂದರ್ ರಾಜ್.
ನಾನು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಬಂದಾಗ ಚಿತ್ರರಂಗಕ್ಕೆ ನಲವತ್ತು ವರ್ಷ ಆಗಿತ್ತು. ಅದು ಬ್ಲ್ಯಾಕ್ ಅಂಡ್ ವೈಟ್ ಕಾಲ. ಆ ಕಾಲದಲ್ಲಿ ಹಿಂದಿ, ತೆಲುಗು, ತಮಿಳು ಸಿನಿಮಾಗಳು ಕಲರ್ನಲ್ಲಿ ಬರುತ್ತಿದ್ದವು. ಆದ್ರೆ ಕನ್ನಡದಲ್ಲಿ ಮಾತ್ರ ಅಲ್ಲೊಂದು ಇಲ್ಲೊಂದು ಅಂತಾ ಕಲರ್ ಸಿನಿಮಾಗಳು ಬರುತ್ತಿತ್ತು. ಅಲ್ಲದೇ ಕನ್ನಡ ಚಿತ್ರರಂಗ ಮದ್ರಾಸ್ನಲಿತ್ತು. ನಮ್ಮ ಕನ್ನಡ ಸಿನಿಮಾ ಮಾಡುವವರು ನಾಟಕದ ಹಿನ್ನೆಲೆಯಿಂದ ಬಂದವರು. ಗುಬ್ಬಿ ವೀರಣ್ಣ, ಸುಬ್ಬಯ್ಯ ನಾಯ್ಡು ಅಂತವರು. ಇನ್ನೂ, ಬ್ರಿಟಿಷ್ ಕಾಲದಲ್ಲಿ ಕಂಟೋನ್ಮೆಂಟ್ ಜಾಗದಲ್ಲಿ ಹೆಚ್ಚಾಗಿ ಇಂಗ್ಲಿಷ್ ಸಿನಿಮಾಗಳು ಪ್ರದರ್ಶನ ಆಗುತ್ತಿತ್ತು. ಹೀಗೆ ಸಿನಿಮಾ ಪರಿಚಯ ಆಗಲು, ಪ್ರತಿಯೊಬ್ಬರು ನೋಡಲು ಸಮಯ ಹಿಡಿದಿದೆ ಅಂತಾ ಚಿತ್ರರಂಗದ ಹಿನ್ನೆಲೆ ಬಗ್ಗೆ ನಟ-ಫಿಲ್ಮ್ ಚೇಂಬರ್ನ ನಿರ್ಮಾಪಕ ವಲಯದ ಉಪಾಧ್ಯಕ್ಷ ಸುಂದರ್ ರಾಜ್ ವಿವರಿಸಿದರು.
ಚಿತ್ರಮಂದಿರಗಳಲ್ಲಿ ಸಿನಿಮಾ ನೋಡುವವರ ಸಂಖ್ಯೆ ಕಡಿಮೆ ಆಗಿದ್ದೇಗೆ?: ಯಾವಾಗ ರೀಲ್ಸ್ ಯುಗ ಶುರುವಾಯಿತೋ ಅಲ್ಲಿಂದ ಸಿನಿಮಾ ನೋಡುವ ಪ್ರೇಕ್ಷಕರ ಸಂಖ್ಯೆಯೂ ಕಡಿಮೆ ಆಗುತ್ತಾ ಹೋಯಿತು. ಆ ಕಾಲದಲ್ಲಿ ಎವಿಆರ್, ಪ್ರಸಾದ್ ಸ್ಟುಡಿಯೋ, ಜೆಮಿನಿ ಸ್ಟುಡಿಯೋಗಳಿದ್ದವು. ಆದ್ರೆ ಹಣ ಇದ್ದವರು ಸಿನಿಮಾ ಮಾಡುತ್ತಾ ಹೋದರು. ಸರ್ವರಿಗೂ ಸೂಕ್ತ ಅವಕಾಶ ಸಿಗಲಿಲ್ಲ. ಅಲ್ಲದೇ ಮೊದಲೆಲ್ಲಾ ಸಿನಿಮಾ ಅಂದ್ರೆ ಒಂದು ಸಸ್ಪೆನ್ಸ್ ಇತ್ತು. ಈಗ ಮೇಕಿಂಗ್ ವಿಡಿಯೋ ರಿವೀಲ್, ಪ್ರಮೋಶನಲ್ ಅಂತೆಲ್ಲಾ ಸಿನಿಮಾದ ರಹಸ್ಯ ಗೊತ್ತಾಗುತ್ತಿರುವುದರಿಂದ ಮೊದಲಿದ್ದ ಸಿನಿಮಾ ವೀಕ್ಷಿಸುವ ಆಸಕ್ತಿ, ಸಿನಿಮಾ ಮೇಲಿನ ವ್ಯಾಮೋಹ ಈಗ ಉಳಿದುಕೊಂಡಿಲ್ಲ. ಹೇಗೆ ಸೈಕಲ್ ಯುಗದಿಂದ ಈಗ ಎಲೆಕ್ಟ್ರಾನಿಕ್ ಬಸ್, ಕಾರು ಅಂತೆಲ್ಲಾ ಎವಲ್ಯೂಷನ್ ಆಗಿದೆಯೋ ಚಿತ್ರರಂಗದಲ್ಲೂ ದೊಡ್ಡ ಮಟ್ಟದ ಎವಲ್ಯೂಷನ್ ಆಗಿದ್ದು, ಪ್ರೇಕ್ಷಕರಿಗೆ ಸಾಕಷ್ಟು ಆಯ್ಕೆಗಳಿವೆ. ಹಾಗಾಗಿ, ಪ್ರತೀ ಸಿನಿಮಾಗೂ ಒಂದೇ ಮಟ್ಟದ ಪ್ರೇಕ್ಷಕರ ಸಂಖ್ಯೆ ಇರೋದಿಲ್ಲ ಅಂತಾ ತಿಳಿಸಿದ್ರು.
ಬರಹಗಾರರ ಸಂಖ್ಯೆ ಕಡಿಮೆ: ಹಿಂದಿನ ಕಾಲದಲ್ಲಿ ಚಿ.ಉದಯ್ ಶಂಕರ್, ಪುಟ್ಟಣ್ಣ ಕಣಗಾಲ್, ಕುಣಿಗಲ್ ನಾಗಭೂಷಣ್, ಆರ್.ಎನ್.ಜಯಗೋಪಾಲ್ ಅವರು ಚಿತ್ರಕಥೆ ಬರೆಯುತ್ತಿದ್ದರು. ಈಗ ಅಂಥವರ ಸಂಖ್ಯೆ ಕಡಿಮೆ ಆಗಿದೆ ಎಂಬುದನ್ನೂ ಬಹಿರಂಗಪಡಿಸಿದ್ರು.
ಇನ್ನೂ, ಇಂಡಸ್ಟ್ರಿಯಲ್ಲಿ ಯಾರೂ ಮಾತು ಕೇಳುವ ಪರಿಸ್ಥಿತಿಯಲ್ಲಿ ಇಲ್ಲ. ಈಗ ದುಡ್ಡು ಇದ್ದವರು ಸಿನಿಮಾ ಮಾಡೋದ್ರಿಂದ ಎಲ್ಲಾ ನಿಯಮಗಳನ್ನು ಅಚ್ಚುಕಟ್ಟಾಗಿ ಅನುಸರಿಸುತ್ತಿಲ್ಲ. ಹಾಗಾಗಿ, ವರ್ಷಕ್ಕೆ ಅಷ್ಟು ಸಿನಿಮಾಗಳು ನಿರ್ಮಾಣ ಆಗುತ್ತಿವೆ. ನಮ್ಮ ಕನ್ನಡ ಚಿತ್ರರಂಗ ಮಾತ್ರವಲ್ಲ, ಎಲ್ಲಾ ಚಿತ್ರರಂಗದ ಪರಿಸ್ಥಿತಿ ಹೀಗೆ ಇದೆ ಎಂಬುದನ್ನು ಒಪ್ಪಿಕೊಂಡರು.
ಲವ್ ಮಾಕ್ಟೇಲ್ ಖ್ಯಾತಿಯ ನಟ-ನಿರ್ದೇಶಕ-ನಿರ್ಮಾಪಕ ಡಾರ್ಲಿಂಗ್ ಕೃಷ್ಣ ಹೇಳೋದೇನು?
ಸದ್ಯ ಲವ್ ಮಾಕ್ಟೇಲ್ 3 ಸಿನಿಮಾದ ಸಕ್ಸಸ್ ಸಂಭ್ರಮದಲ್ಲಿರುವ ಸ್ಯಾಂಡಲ್ವುಡ್ನ ಖ್ಯಾತ ನಟ ಡಾರ್ಲಿಂಗ್ ಕೃಷ್ಣ ಮಾತನಾಡಿ, ಅಪ್ಪು ಸರ್ ಕಂಟೆಂಟ್ ಜೊತೆಗೆ ಆ್ಯಕ್ಷನ್ ಸಿನಿಮಾಗಳನ್ನು ಮಾಡುತ್ತಿದ್ರು. ಮಾಸ್ ಹಿಟ್ ಆಗುವ ಜೊತೆಗೆ ಬ್ಯುಸಿನೆಸ್ ದೃಷ್ಟಿಯಿಂದಲೂ ಯಶಸ್ಸು ಕಾಣುತ್ತಿತ್ತು. ಹಾಗೇ ನೋಡುವುದಾದರೆ ಬಾಲಿವುಡ್ನ ಹಮ್ ಆಪ್ಕೆ ಹೈ ಕೌನ್, ತ್ರಿ ಇಡಿಯಟ್ಸ್, ದಂಗಲ್ ಹೀಗೆ ದೊಡ್ಡ ಮಟ್ಟದಲ್ಲಿ ಚಿತ್ರಗಳು ಹಿಟ್ ಆಗಿವೆ. ಕಂಟೆಂಟ್ ಜೊತೆಗೆ ಕಮರ್ಷಿಯಲಿ ಹಿಟ್ ಎನ್ನಬಹುದು ಎಂದು ತಿಳಿಸಿದರು.
'ಪ್ರತೀ ವಿಭಾಗದಲ್ಲಿ ಎಚ್ಚರ ವಹಿಸಿ ಸಿನಿಮಾ ಮಾಡಬೇಕು': ಕನ್ನಡದಲ್ಲಿ ವರ್ಷಕ್ಕೆ 250ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆ ಆದ್ರೂ ಸಕ್ಸಸ್ ರೇಟ್ ಕಡಿಮೆ ಇದೆ, ನಿಮ್ಮ ಪ್ರಕಾರ ಕಾರಣ ಏನಿರಬಹುದು? ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿ, ''ಒಂದು ಸಿನಿಮಾಗೆ ಬೇಕಾದ ಕಂಟೆಂಟ್, ಸ್ಕ್ರೀನ್ ಪ್ಲೇ ಹೀಗೆ ಚಿತ್ರದ ಪ್ರತಿಯೊಂದು ಭಾಗದಲ್ಲಿ ಎಚ್ಚರ ವಹಿಸಿ ಸಿನಿಮಾ ಮಾಡಿದಾಗ ಖಂಡಿತವಾಗಿ ಪ್ರೇಕ್ಷಕರು ಕೈ ಹಿಡಿಯುತ್ತಾರೆ. ಅದು ಯಾವುದೇ ಸಮಯ ಆದ್ರೂ, ಯಾರದ್ದೇ ಸಿನಿಮಾ ಆದ್ರೂ ಪರವಾಗಿಲ್ಲ. ಕಂಟೆಂಟ್ ಚೆನ್ನಾಗಿ ಇರಬೇಕು'' ಅಂತಾರೆ ಲವ್ ಮಾಕ್ಟೇಲ್ ಸಾರಥಿ.
'ಆಡಿಯನ್ಸ್ ಬಹಳ ಚ್ಯೂಸಿ': ಮೊದಲು ಒಂದು ಅವರೇಜ್ ಸಿನಿಮಾ ಒಂದು ಮಟ್ಟಿಗೆ ಓಡುತ್ತಿತ್ತು. ಆದ್ರೆ ಇಂದು ಪರಿಸ್ಥಿತಿ ಹಾಗಿಲ್ಲ. ಆಡಿಯನ್ಸ್ ಬಹಳ ಚ್ಯೂಸಿ ಆಗಿದ್ದಾರೆ. ಗುಡ್ ಫಿಲ್ಮ್ ನಾಟ್ ವರ್ಕ್. ವೆರಿ ಗುಡ್ ಫಿಲ್ಮ್ ವರ್ಕ್ ಆಗುತ್ತೆ ಅಂತಾರೆ ಕೃಷ್ಣ.

'ಎಂಟರ್ಟೈನ್ಮೆಂಟ್ ಅನ್ನೋದು ಎಲ್ಲಾ ಕಡೆಗಳಲ್ಲಿಯೂ ಸಿಗುತ್ತದೆ': ಮೊದಲು ಎಂಟರ್ಟೈನ್ಮೆಂಟ್ ಅಂದ್ರೆ ಸಿನಿಮಾ ಒಂದೇ ಇತ್ತು. ಆಗ ಸಿನಿಮಾ ಚೆನ್ನಾಗಿರಲಿ, ಚೆನ್ನಾಗಿಲ್ಲ ಅಂದ್ರೂ ಒಂದು ಬಾರಿ ಹೋಗಿ ನೋಡೋರು. ಆದ್ರೀಗ ಎಂಟರ್ಟೈನ್ಮೆಂಟ್ ಅನ್ನೋದು ಎಲ್ಲಾ ಕಡೆಗಳಲ್ಲಿಯೂ ಸಿಗುತ್ತದೆ. ಜೊತೆಗೆ, ಒಂದು ಸಿನಿಮಾ ಚೆನ್ನಾಗಿದೆ ಅಂದ್ರೆ ಉತ್ತಮ ಕಲೆಕ್ಷನ್ ಆಗುತ್ತಿತ್ತು. ಈಗ ಚೆನ್ನಾಗಿರುವ ಸಿನಿಮಾವನ್ನೇ ಓಕೆ ಒಕೆ ಅಂತಾರೆ. ಓಕೆ ಓಕೆ ಸಿನಿಮಾ ಹಾಗೂ ಚೆನ್ನಾಗಿದೆ ಎನ್ನುವ ಸಿನಿಮಾಗಳು ಈಗ ಕಲೆಕ್ಷನ್ ಮಾಡೋದಿಲ್ಲ. ಅದಕ್ಕೆ ತುಂಬಾ ಚೆನ್ನಾಗಿರಬೇಕು ಅಥವಾ ಅದ್ಭುತವಾಗಿರಬೇಕು ಅಂತಾರೆ ಡಾರ್ಲಿಂಗ್ ಕೃಷ್ಣ.
ಸಿನಿಮಾ ಪ್ರದರ್ಶಕರ ವಲಯದ ಅಧ್ಯಕ್ಷ ಕೆ.ವಿ.ಚಂದ್ರಶೇಖರ್ ಹೇಳೋದೇನು?
ಸ್ಯಾಂಡಲ್ವುಡ್ ಸಿನಿಮಾ ಸಕ್ಸಸ್ ಹಾಗೂ ಫೈಲ್ಯೂರ್ ಬಗ್ಗೆ ಸಿನಿಮಾ ಪ್ರದರ್ಶಕರ ವಲಯದ ಅಧ್ಯಕ್ಷ ಕೆ.ವಿ.ಚಂದ್ರಶೇಖರ್ ಮಾತನಾಡಿ, ಸಿನಿಮಾ ಸೋಲು ಗೆಲುವು ಮೊದಲಿನಿಂದಲೂ ಇದೆ. ಈಗಾಗಲೇ ನೋಡಿರುವ ಕಥೆ ಹಾಗೂ ಸೀನ್ಗಳು ಬಂದ್ರೆ ಅಥವಾ ಒಂದೇ ತರ ಇದ್ರೆ ಅದನ್ನು ಪ್ರೇಕ್ಷಕರು ಒಪ್ಪಿಕೊಳ್ಳೋದಿಲ್ಲ. ಆ ಕಾಲದಲ್ಲಿ ಒಂದು ಸಿನಿಮಾದ ಕಥೆಯನ್ನು ಅಳೆದು ತೂಗಿ ಮಾಡುತ್ತಿದ್ರು. ಆದ್ರೆ ಪ್ರಸ್ತುತ ಒಂದು ಹಿನ್ನೆಲೆ ಇರುವ ಕಥೆಯನ್ನು ಸರಿಯಾಗಿ ರಿಸರ್ಚ್ ಮಾಡದೇ, ಪರಿಪೂರ್ಣವಾಗಿ ಹೇಳದೇ ಇದ್ದಾಗ ಸಿನಿಮಾ ಸೋಲಿಗೆ ಕಾರಣವಾಗುತ್ತದೆ ಎಂದು ತಿಳಿಸಿದರು.
'ಸ್ಟಾರ್ ನಟ ಎನಿಸಿಕೊಂಡವರು 3-4 ವರ್ಷಕ್ಕೆ 1 ಸಿನಿಮಾ ಮಾಡ್ತಾರೆ': ಮತ್ತೊಂದು ಕಾರಣ - ಸ್ಟಾರ್ ನಟರು ಸಿನಿಮಾ ಮಾಡದೇ ಇದ್ದಾಗ ಹೊಸಬರು ಹಾಗೂ ಉದ್ಯಮದ ಮೇಲೆ ಪ್ರಭಾವ ಬೀರುತ್ತದೆ. ಅಣ್ಣಾವ್ರು, ವಿಷ್ಣು ಸರ್ ಕಾಲದಲ್ಲಿ ವರ್ಷಕ್ಕೆ ಒಂದು ಅಥವಾ ಎರಡು ಸಿನಿಮಾಗಳು ಬಿಡುಗಡೆ ಆಗುತ್ತಿದ್ದವು. ಆಗ ಪ್ರೇಕ್ಷಕರು ಚಿತ್ರಮಂದಿರಗಳಲ್ಲಿ ಮುಗಿಬಿದ್ದು ಸಿನಿಮಾ ನೋಡ್ತಾ ಇದ್ರು. ಆದ್ರೆ ಸದ್ಯ ಸ್ಟಾರ್ ನಟರು ಅನ್ನಿಸಿಕೊಂಡಿರುವವರು 3-4 ವರ್ಷಕ್ಕೆ ಒಂದು ಸಿನಿಮಾ ಮಾಡಿದಾಗ ಅವರ ಅಭಿಮಾನಿಗಳೇ ಸಿನಿಮಾ ನೋಡುವ ಆಸಕ್ತಿಯನ್ನು ಕಳೆದುಕೊಳ್ಳುತ್ತಾನೆ. ಸದ್ಯದ ಚಿತ್ರರಂಗದ ಪರಿಸ್ಥಿತಿಗೆ ಅದೂ ಒಂದು ಕಾರಣ ಅಂತಾರೆ ಕೆ.ವಿ.ಚಂದ್ರಶೇಖರ್.
ಪ್ರೇಕ್ಷಕರು ಬದಲಾಗಿದ್ದಾರೆ, ಆದ್ರೆ ಚಿತ್ರರಂಗ ಬದಲಾಗಿಲ್ವೇ?: ''ಈ ಮಾತು ಒಂದರ್ಥದಲ್ಲಿ ಸರಿ ಇರಬಹುದು. ಆದ್ರೆ ಪ್ರೇಕ್ಷಕರು ಯಾವತ್ತಿಗೂ ಬದಲಾಗಿಲ್ಲ. ಈ ಹಿಂದೆ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡುತ್ತಿದ್ರು, ಇವತ್ತಿಗೂ ವೀಕ್ಷಿಸುತ್ತಾ ಚಿತ್ರರಂಗವನ್ನು ಬೆಂಬಲಿಸುತ್ತಿದ್ದಾರೆ. ಆದರೆ 2 ಕಾರಣಗಳನ್ನು ಬಯಸುತ್ತಾರೆ. ಒಂದು ಚಿತ್ರದ ಕಂಟೆಂಟ್ ಇಷ್ಟ ಆಗಬೇಕು, ಮತ್ತೊಂದು ಆ ನಟನ ಸಿನಿಮಾ ಬರಬೇಕು ಅನ್ನೋದು. ಆದ್ರೆ ಸ್ಟಾರ್ ನಟರ ಸಿನಿಮಾಗಳು ಬರುತ್ತಿಲ್ಲ ಅನ್ನೋದು ಉದ್ಯಮದ ತಪ್ಪೇ ಹೊರತು ಪ್ರೇಕ್ಷಕರದ್ದಲ್ಲ. ಪ್ರೇಕ್ಷಕರು ಒಳ್ಳೆ ಕಂಟೆಂಟ್ಗಳನ್ನು ನಿರೀಕ್ಷಿಸುತ್ತಿದ್ದಾರೆ. ಅದ್ರೆ ಉದ್ಯಮದವರು ಒಳ್ಳೆ ಕಂಟೆಂಟ್ ಕೊಡೋದ್ರಲ್ಲಿ ಹಿಂದೆ ಬಿದ್ದಿದ್ದಾರೆ'' ಎಂಬುದನ್ನು ಕೆ.ವಿ.ಚಂದ್ರಶೇಖರ್ ಬಹಿರಂಗಪಡಿಸಿದರು.
'100 ಕೋಟಿ ರೂ. ಬಜೆಟ್ನಲ್ಲಿ ನಿರ್ಮಾಣ ಮಾಡುತ್ತಾರೆ, ನಿರ್ಮಾಪಕರದ್ದೇ ತಪ್ಪು': ನೀವು ಮಾಜಿ ಫಿಲ್ಮ್ ಚೇಂಬರ್ ಅಧ್ಯಕ್ಷರಾಗಿ ಸದ್ಯದ ಕನ್ನಡ ಚಿತ್ರರಂಗದ ಪರಿಸ್ಥಿತಿ ಹೇಗಿದೆ ಅನಿಸುತ್ತದೆ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸದ್ಯದ ಮಟ್ಟಿಗೆ ಕನ್ನಡ ಚಿತ್ರರಂಗ ಚೆನ್ನಾಗಿದೆ. ನಮ್ಮ ಕರ್ನಾಟಕದಲ್ಲಿ ಎಷ್ಟು ಚಿತ್ರಮಂದಿರಗಳು ಇವೆ. ಆ ಎಲ್ಲಾ ಚಿತ್ರಮಂದಿರಗಳಲ್ಲಿ ಒಂದು ಸಿನಿಮಾ ಎಷ್ಟು ಶೋ ಹೊಂದಿರುತ್ತದೆ? ಎಷ್ಟು ಪ್ರೇಕ್ಷಕರು ಸಿನಿಮಾ ನೋಡ್ತಾರೆ? ಅನ್ನೋ ಅಂಕಿ-ಅಂಶ ಎಲ್ಲರಿಗೂ ಗೊತ್ತೇ ಇದೆ. ಶೇ.80ರಷ್ಟು ಕಲೆಕ್ಷನ್ ಆದಾಗ ಆ ಸಿನಿಮಾ ನಿರ್ಮಾಪಕನಿಗೆ ಲಾಭಾನೆ. ಆದ್ರೆ ಈಗ ಏನಾಗಿದೆ ಅಂದ್ರೆ - ಒಬ್ಬ ಸ್ಟಾರ್ ನಟನ ಸಿನಿಮಾ ಅಂದಾಗ 100 ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಾಣ ಮಾಡುತ್ತಾರೆ. ಅದು ನಿರ್ಮಾಪಕ ಹಾಗೂ ಚಿತ್ರತಂಡದ ತಪ್ಪು. ಏಕೆಂದರೆ ಕರ್ನಾಟಕದಲ್ಲಿ ಒಬ್ಬ ಸ್ಟಾರ್ ನಟರ ಸಿನಿಮಾ ಸೂಪರ್ ಹಿಟ್ ಅಂದಾಗ ಒಂದು ವಾರಕ್ಕೆ 35 ರಿಂದ 50 ಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತವೆ. ಹೀಗಿರಬೇಕಾದ್ರೆ ನಿರ್ಮಾಪಕರು 30 ಕೋಟಿ ಅಥವಾ 35 ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಾಣ ಮಾಡಬೇಕು. ಅದನ್ನು ಬಿಟ್ಟು ಅತಿ ಹೆಚ್ಚು ದುಡ್ಡು ಹಾಕಿದ್ರೆ ಅದು ನಿರ್ಮಾಪಕನದ್ದೇ ತಪ್ಪು ಅಂತಾರೆ ಕೆ.ವಿ.ಚಂದ್ರಶೇಖರ್.
ನಟ ರಾಜೇಶ್ ಧ್ರುವ ಹೇಳೋದೇನು?
ಇತ್ತಿಚೆಗಷ್ಟೇ ಈಟಿವಿ ಭಾರತದೊಂದಿಗಿನ ಸಂದರ್ಶನದಲ್ಲಿ ಭಾಗಿಯಾಗಿದ್ದ ನಟ ರಾಜೇಶ್ ಧ್ರುವ ಪ್ರಕಾರ, ಕಂಟೆಂಟ್ ಸಿನಿಮಾಗಳು ಹೆಚ್ಚಾಗಿ ಬರುತ್ತಿಲ್ಲ. ಪ್ರೇಕ್ಷಕರು ಇಷ್ಟಪಡುವ ಸಿನಿಮಾಗಳನ್ನು ಮಾಡಲಾಗುತ್ತಿಲ್ಲ. ಪ್ರೇಕ್ಷಕರ ನಾಡಿಮಿಡಿತ ಅರ್ಥ ಮಾಡಿಕೊಳ್ಳದೇ ವ್ಯಾಪಾರ ದೃಷ್ಟಿಯಿಂದ ಹೆಚ್ಚಿನವರು ಸಿನಿಮಾಗಳನ್ನು ಮಾಡುತ್ತಿದ್ದಾರೆ. ನಾನು ಚಿಕ್ಕವನಾಗಿ ಈ ಮಾತು ಹೇಳುವುದು ಎಷ್ಟು ಸರಿ ಎಂಬುದು ನನಗೆ ಗೊತ್ತಿಲ್ಲ. ಆದ್ರೆ ಓರ್ವ ಪ್ರೇಕ್ಷಕನಾಗಿ ಹೇಳುವ ಅಧಿಕಾರವಿದೆ. ಆ ನಿಟ್ಟಿನಲ್ಲಿ ನಟರು, ನಿರ್ದೇಶಕರು, ನಿರ್ಮಾಣ ಸಂಸ್ಥೆಗಳು ಜನರ ನಾಡಿಮಿಡಿತ ಅರ್ಥಮಾಡಿಕೊಂಡು ಅವರಿಗೆ ಇಷ್ಟ ಆಗುವ ರೀತಿಯ ಸಿನಿಮಾ ಮಾಡಿದ್ರೆ ಚಿತ್ರರಂಗ ಬೆಳವಣಿಗೆ ಕಾಣುತ್ತದೆ. ಫ್ರೆಶ್ ಸ್ಟೋರಿ (ಪೀಟರ್ ಸಿನಿಮಾ) ಮೂಲಕ ಸಂದೇಶ ನೀಡುವ ಪ್ರಯತ್ನ ಮಾಡಿದ್ದೇವೆ. ಈ ರೀತಿಯ ಕಂಟೆಂಟ್ ಸಿನಿಮಾ ಈಗ ಚಿತ್ರರಂಗಕ್ಕೆ ಬೇಕಾಗಿತ್ತು. ಒಂದು ಚಿತ್ರ ಯಶಸ್ವಿಯಾದರೆ ನನ್ನಂತಹ ಅದೆಷ್ಟೋ ಕಲಾವಿದರು ಬೆಳೆಯುತ್ತಾರೆ ಎಂದು ತಿಳಿಸಿದ್ದರು. ಕೋರಿಯೋಗ್ರಾಫರ್ ಆಗಿ ಚಿತ್ರರಂಗ ಪ್ರವೇಶಿಸಿದ ನಟ ರಾಜೇಶ್ ಧ್ರುವ ಕಿರುತೆರೆಯಲ್ಲಿ ಪ್ರಖ್ಯಾತಿ ಪಡೆದು ಈಗ ಹಿರಿತೆರೆಯಲ್ಲೂ ಗುರುತಿಸಿಕೊಂಡಿದ್ದು, ಕಂಟೆಂಟ್ ಮುಖ್ಯ ಅನ್ನೋದನ್ನು ಒತ್ತಿ ಹೇಳಿದ್ದಾರೆ.

ಹೆಚ್ಚು ಸಿನಿಮಾಗಳು ಪ್ರೇಕ್ಷಕರನ್ನು ತಲುಪದಿರಲು ಕಾರಣವೇನು?
- 255 ಸಿನಿಮಾಗಳು ಬಿಡುಗಡೆ ಆದ್ರೂ, ಅನೇಕ ಚಲನಚಿತ್ರಗಳು ಆತುರ ಮಾಡಿವೆ ಮತ್ತು ಕಥೆ/ಮೇಕಿಂಗ್ನಲ್ಲಿ ಅಭಿವೃದ್ಧಿಯಿಲ್ಲದಿರುವಂತೆ ಭಾಸವಾಯಿತು.
- ಚಲನಚಿತ್ರ ನಿರ್ಮಾಪಕರು ಇನ್ನೂ ಹೆಚ್ಚಾಗಿ ಹಳೆಯ ಸೂತ್ರಗಳನ್ನು ಅವಲಂಬಿಸಿದ್ದಾರೆ. ಆದ್ರೆ ಪ್ರೇಕ್ಷಕರು ಸ್ವಂತಿಕೆ ಮತ್ತು ಸಿನಿಮೀಯ ಕರಕುಶಲತೆಯನ್ನು ಬಯಸುತ್ತಿದ್ದಾರೆ. ಹೆಚ್ಚು ಚ್ಯೂಸಿ ಆಗಿದ್ದಾರೆ
- ವೀಕ್ಷಕರು ಕನ್ನಡ ಸಿನಿಮಾಗಳನ್ನು ಕೊರಿಯನ್ ಥ್ರಿಲ್ಲರ್‌ಗಳು, ಹಾಲಿವುಡ್ ಬ್ಲಾಕ್‌ಬಸ್ಟರ್‌ಗಳು ಮತ್ತು ಭಾರತದ ಬಹುಭಾಷೆಗಳ ಸಿನಿಮಾಗಳೊಂದಿಗೆ ಹೋಲಿಸುತ್ತಾರೆ. ಆಗ ಸಹಜವಾಗಿ ಬೇಡಿಕೆ, ನಿರೀಕ್ಷೆಗಳು ಹೆಚ್ಚಾಗುತ್ತವೆ.
2025ರ ಪಾಠಗಳು:
- 'ಕಾಂತಾರ: ಎ ಲೆಜೆಂಡ್ - ಅಧ್ಯಾಯ 1', 'ಸು ಫ್ರಮ್ ಸೋ'ನಂತಹ ಚಿತ್ರಗಳು ತನ್ನ ಕಥೆಯಿಂದಲೇ ಗೆದ್ದವು. ನಮ್ಮ ಮಣ್ಣಲ್ಲಿ ಬೇರೂರಿರುವ ಕಥೆಯು ಪ್ರತಿಧ್ವನಿಸುತ್ತದೆ ಎಂಬುದನ್ನು ಸಾಬೀತುಪಡಿಸಿದವು. ಕಂಟೆಂಟ್ ಸಿನಿಮಾಗಳನ್ನು ಪ್ರೇಕ್ಷಕರು ಕೈಬಿಡೋದಿಲ್ಲ ಎಂಬುದನ್ನು ಸಾಬೀತುಪಡಿಸಿದವು.
- ಕಥೆ ಮತ್ತು ಪ್ರಸ್ತುತಪಡಿಸುವ ಶೈಲಿ ಹೊಸತನದಿಂದ ಕೂಡಿದ್ದರೆ ಸಿನಿಮಾ ಗೆಲ್ಲುತ್ತದೆ ಎಂಬುದನ್ನು ಹಲವು ಚಿತ್ರಗಳು ಸಾಬೀತುಪಡಿಸಿದವು.
- ಸಣ್ಣ ಸಿನಿಮಾಗಳು ವಾಣಿಜ್ಯಿಕವಾಗಿ ಯಶಸ್ವಿಯಾಗದಿದ್ದರೂ ಪ್ರಶಂಸೆಯನ್ನು ಗಳಿಸಿದವು.
- ಪ್ರೇಕ್ಷಕನೇ ಕಿಂಗ್ ಎಂಬುದನ್ನು 'ಸು ಫ್ರಮ್ ಸೋ' ಸಾಬೀತುಪಡಿಸಿತು.
- ಸೂಪರ್ ಸ್ಟಾರ್ಗಳ ಸಿನಿಮಾಗಳು ಬೇಕೆ ಬೇಕು ಎಂಬುದನ್ನು ಪ್ರೇಕ್ಷಕರು ಮತ್ತೊಮ್ಮೆ ಕೂಗಿ ಹೇಳಿದರು. ಅದರಂತೆ ಬಂದ ಮಾರ್ಕ್, 45, ದಿ ಡೆವಿಲ್ ಕೂಡಾ ಸೂಪರ್ ಹಿಟ್ ಆಯಿತು.
ಇವುಗಳನ್ನೂ ಓದಿ:

