ETV Bharat / entertainment

Explainer: ಅತಿಯಾದ ಪ್ರಮೋಶನ್​​ನಿಂದ ಕುಗ್ಗುತ್ತಿದೆಯಾ ಪ್ರೇಕ್ಷಕರ ಕುತೂಹಲ? ಸಿನಿಮಾ ಯಶಸ್ಸಿನ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ?

ಸಿನಿಮಾ ಬಿಡುಗಡೆಗೂ ಮುನ್ನ ಅತಿಯಾದ ಪ್ರಮೋಶನಲ್ ಕಂಟೆಂಟ್ಸ್ ರಿಲೀಸ್​​​ ಯಶಸ್ಸಿನ ಮೇಲೆ, ಚಲನಚಿತ್ರೋದ್ಯಮದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಸಿನಿಪಂಡಿತರು ಈಟಿವಿ ಭಾರತ ವರದಿಗಾರ ರವಿಕುಮಾರ್​.ಎಂ.ಕೆ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

M.G.Ramamurthy, K.M.Chaitanya, Kantha Kannalli
ಎಂ.ಜಿ ರಾಮಮೂರ್ತಿ, ಕೆ.ಎಂ ಚೈತನ್ಯ, ಕಾಂತ ಕನ್ನಳ್ಳಿ (Photo Source: ETV Bharat)
author img

By ETV Bharat Entertainment Team

Published : July 9, 2026 at 4:12 PM IST

10 Min Read
Choose ETV Bharat

ಪ್ರೇಕ್ಷಕರಿಗೆ ಮನೋರಂಜನೆ ಜೊತೆಗೆ ಸಂದೇಶ ರವಾನಿಸುವ, ಜಾಗೃತಿ ಮೂಡಿಸುವ ಪ್ರಮುಖ ಮಾಧ್ಯಮವಾಗಿ ಗುರುತಿಸಿಕೊಂಡಿರುವ ಸಿನಿಮಾ ಅಥವಾ ಚಿತ್ರರಂಗ ವರ್ಷಗಳಲ್ಲಿ ಸಾಕಷ್ಟು ವಿಕಸನಗೊಂಡಿದೆ. 80, 90ರ ದಶಕದಲ್ಲಿ ನೇರವಾಗಿ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ವೀಕ್ಷಿಸುವ ಸಂಪ್ರದಾಯವಿತ್ತು. ಕಲಾವಿದರನ್ನು ಬಿಟ್ಟು ಜನರಿಗೆ ಹೆಚ್ಚೇನು ಮಾಹಿತಿ ಲಭ್ಯವಾಗುತ್ತಿರಲಿಲ್ಲ. 'ಸಿನಿಮಾಗಳ ಗೌಪ್ಯತೆ' ದೊಡ್ಡ ಮಟ್ಟದಲ್ಲಿತ್ತು. ಸ್ಟುಡಿಯೋಗಳಲ್ಲಿಯೇ ಹೆಚ್ಚಿನ ಚಿತ್ರೀಕರಣ ನಡೆಯುತ್ತಿತ್ತು. ಹಾಗಾಗಿ, ಸಿನಿಪ್ರಿಯರಲ್ಲೂ ಆ ಕುತೂಹಲ ಸಹಜವಾಗಿ ಹೆಚ್ಚಿತ್ತು. ಆದ್ರೆ, ಸದ್ಯದ ಪರಿಸ್ಥಿತಿಯೇ ಬೇರೆ. ಸಂಪೂರ್ಣ ವಿಭಿನ್ನ ಅಂತಲೇ ಹೇಳಬಹುದು. ಸಿನಿಮಾವೊಂದು ಥಿಯೇಟರ್​ಗೆ ಎಂಟ್ರಿ ಕೊಡುವ ಮೊದಲು ಸಾಕಷ್ಟು ವಿಷಯಗಳು ಆಡಿಯನ್ಸ್​ ಅನ್ನು ತಲುಪಿ ಬಿಡುತ್ತವೆ. ಹಾಗಾಗಿ, ಸಿನಿಮಾ ಬಗ್ಗೆ ಬಹುತೇಕ ತಿಳಿದುಕೊಳ್ಳುವ ನೆಟ್ಟಿಗರು ಮೊದಲೇ ವಿಮರ್ಶೆ ಕೊಡಲು ಪ್ರಾರಂಭಿಸುತ್ತಾರೆ. ಇದು ಸಿನಿಮಾ ಮೇಲೆ ಪರಿಣಾಮ ಬೀರುತ್ತದೆಯೇ? ಎಂಬ ಪ್ರಶ್ನೆಯನ್ನು ವಿಶೇಷವಾಗಿ ಕೇಳಬೇಕಾಗಿಲ್ಲ.

ಹೌದು, ಕನ್ನಡ ಚಿತ್ರರಂಗದಲ್ಲಿ ಅತಿಯಾದ ಸಿನಿಮಾ ಪ್ರಚಾರ ಅಥವಾ ಹೆಚ್ಚಿನ ಪ್ರಮೋಶನಲ್ ಕಂಟೆಂಟ್ಸ್​​ ಅನಾವರಣ ಕೆಲವೊಮ್ಮೆ ಚಿತ್ರ ನಿರೀಕ್ಷಿತ ಮಟ್ಟ ತಲುಪದಿರಲು ಕಾರಣವಾಗಬಹುದು. ಇದರಿಂದ ಚಿತ್ರ ಯಶಸ್ಸು ಕಂಡಿರುವ ಉದಾಹರಣೆಗಳೂ ನಮ್ಮ ಮುಂದಿವೆ. ಪ್ರಚಾರಕ್ಕೆ ಅಪಾರ ಹಣ ಸುರಿದರೂ, ಕಥೆಯಲ್ಲಿ ಹೊಸತನವಿಲ್ಲದಿದ್ದರೆ ಅಥವಾ ಪ್ರೀ-ರಿಲೀಸ್​​ ಕಂಟೆಂಟ್ ವೀಕ್ಷಕರ ನಿರೀಕ್ಷೆ ತಲುಪದಿದ್ದರೆ, ಪ್ರಮೋಶನ್​ 'ಹೊಳೆಯಲ್ಲಿ ಹುಣಸೆಹಣ್ಣು ತೊಳದಂತೆ'. ಈ ವಿಷಯಕ್ಕೆ ಸಂಬಂಧಿಸಿದಂತೆ ಕನ್ನಡ ಚಿತ್ರರಂಗದ ನಿರ್ಮಾಪಕರ ಸಂಘದ ಅಧ್ಯಕ್ಷ ಎಂ.ಜಿ.ರಾಮಮೂರ್ತಿ, ಆ ದಿನಗಳು ಸಿನಿಮಾ ಖ್ಯಾತಿಯ ನಿರ್ದೇಶಕ ಕೆ.ಎಂ.ಚೈತನ್ಯ ಹಾಗೂ ಇರುವುದೆಲ್ಲವ ಬಿಟ್ಟು, ರಿಲೀಸ್​ಗೆ ರೆಡಿಯಾಗಿರುವ ಲೈಫ್ ಟುಡೇ ಸಿನಿಮಾ ನಿರ್ದೇಶಕ ಕಾಂತ ಕನ್ನಳ್ಳಿ ಈಟಿವಿ ಭಾರತದೊಂದಿಗೆ ತಮ್ಮ ದೃಷ್ಟಿಕೋನ ಹಂಚಿಕೊಂಡಿದ್ದಾರೆ. ಅತಿಯಾದ ಸಿನಿಮಾ ಪ್ರಚಾರ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಮೇಲೆ ಬೆಳಕು ಚೆಲ್ಲಿದ್ದಾರೆ.

ನಿರ್ದೇಶಕ ಕಾಂತ ಕನ್ನಳ್ಳಿ ಹೇಳೋದೇನು?

ಇರುವುದೆಲ್ಲವ ಬಿಟ್ಟು, ರಿಲೀಸ್ ರೆಡಿಯಾಗಿರುವ ಲೈಫ್ ಟುಡೇ ಸಿನಿಮಾದ ನಿರ್ದೇಶಕ ಕಾಂತ ಕನ್ನಳ್ಳಿ ಮಾತನಾಡಿ, ''ಪ್ರೇಕ್ಷಕ ಯಾವುದೇ ಸ್ಟಾರ್, ಡೈರೆಕ್ಟರ್ ಅಂತಾ ನೋಡದೇ ಸಿನಿಮಾ ವೀಕ್ಷಿಸಿರುವ ಸಾಕಷ್ಟು ಉದಾಹರಣೆಗಳಿವೆ. ಅದಕ್ಕೆ ಕಂಟೆಂಟ್​​​ ಬಹಳ ಮುಖ್ಯ'' ಎಂದು ತಿಳಿಸಿದ್ದಾರೆ.

ನಿರ್ದೇಶಕ ಕಾಂತ ಕನ್ನಳ್ಳಿ (Audio Source: ETV Bharat)

''ಒಂದು ಸಿನಿಮಾದಲ್ಲಿ 80 ರಿಂದ 85 ಸೀನ್​​​ಗಳಿರುತ್ತವೆ. ನಿರ್ದೇಶಕ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಸೀನ್​​​ಗಳನ್ನು ಬರೆಯುತ್ತಾರೆ. ಅಷ್ಟನ್ನೂ ವಾಹ್ ಎಂದು ಹೇಳುವಂತೆ ಬರೆಯೋದಕ್ಕೆ ಆಗೋದಿಲ್ಲ. ಪ್ರೇಕ್ಷಕರನ್ನ ಹಿಡಿದಿಟ್ಟುಕೊಳ್ಳಲು ಕಂಟೆಂಟ್ ಮುಖ್ಯ. ಹಾರರ್, ಲವ್, ರೊಮ್ಯಾಂಟಿಕ್, ಕಾಮಿಡಿ ಯಾವುದೇ ಜಾನರ್​​ ಇರಲಿ ಪ್ರೇಕ್ಷಕರನ್ನು ಮುಂದೆ ಕೊಂಡೊಯ್ಯಲು ಕೆಲವೊಂದು ಸೀನ್​​ಗಳು ಕಾರಣವಾಗುತ್ತದೆ'' ಎಂದು ಸೀನ್ಸ್​​ ಪ್ರಾಮುಖ್ಯತೆ ಮತ್ತು ಅದನ್ನು ಪ್ರಮೋಶನ್​ ಸಮಯ ತೋರಿಸುವ ಮಹತ್ವವನ್ನು ಒತ್ತಿ ಹೇಳಿದರು.

ರೀಲ್ಸ್ ಯುಗದಲ್ಲಿ ಎಲ್ಲರೂ ಮನೋರಂಜನೆ ಕೊಡುತ್ತಿದ್ದಾರೆ. ಹಾಗಾಗಿ ಸಿನಿಮಾ ಮೇಲೆ ಜವಾಬ್ದಾರಿ ಹೆಚ್ಚಿದೆ. ಹಾಗಾಗಿ ಕಂಟೆಂಟ್​ನತ್ತ ಗಮನ ಹರಿಸಬೇಕೆಂದು ಕಾಂತ ಕನ್ನಳ್ಳಿ ಹೈಲೆಟ್​ ಮಾಡಿದ್ರು. ''ಸದ್ಯದ ಪರಿಸ್ಥಿತಿಯಲ್ಲಿ ಮೊಬೈಲ್, ಅನ್​​​ಲಿಮಿಟೆಡ್ ಇಂಟರ್​ನೆಟ್ ಇದ್ದಾಗ ಕಂಟೆಂಟ್ ಕ್ರಿಯೇಟ್ ಮಾಡೋದಕ್ಕೆ ಸಿನಿಮಾದವರೇ ಆಗಬೇಕಿಲ್ಲ.‌ ಒಬ್ಬ ಸಾಮಾನ್ಯ ವ್ಯಕ್ತಿ ಎಲ್ಲೋ ಹಳ್ಳಿಯಲ್ಲಿ ಕುಳಿತು ಹೊಲದಲ್ಲಿ ಕೆಲಸ ಮಾಡಿಕೊಂಡು ಕಂಟೆಂಟ್ ಕ್ರಿಯೇಟ್ ಮಾಡ್ತಾನೆ. ಅವನಿಗೆ ಇನ್​​ಸ್ಟಾಗ್ರಾಂನಲ್ಲಿ ಹತ್ತು ಸಾವಿರ ಜನ ಫಾಲೋವರ್ಸ್ ಇದ್ದರೆ ಅವನಿಗೆ ಅವನೇ ಹೀರೋ. ಹತ್ತು ಸಾವಿರ ಜನಕ್ಕೆ ಅವನು ಆ ಕಂಟೆಂಟ್ ಅನ್ನು ಫ್ರೀಯಾಗಿ ಕೊಡುತ್ತಾನೆ. ನಾವು ಸಿನಿಮಾದವರು ಅವನಿಗಿಂತ ಬೆಸ್ಟ್ ಕಂಟೆಂಟ್ ಕೋಡಬೇಕು'' ಎಂದು ತಿಳಿಸಿದರು.

ಮುಂದುವರಿಸಿ, ನಮ್ಮ ಸಿನಿಮಾ ನೋಡಬೇಕು ಎಂದರೆ ಅದು ದಿ ಬೆಸ್ಟ್ ಆಗಿರಬೇಕು ಎಂದು ತಿಳಿಸಿದರು. ''ಹಣ ಕೊಟ್ಟು ಎರಡೂವರೆ ತಾಸು ಸಿನಿಮಾ ನೋಡಲು ಪ್ರೇಕ್ಷಕರು ಬರ್ತಾರೆ ಅಂದಾಗ, ಆ ಕಂಟೆಂಟ್ ಕ್ರಿಯೇಟರ್​ಗಿಂತ ಹೊಸತು, ವಾಹ್ ಅನಿಸುವ ಸಿನಿಮಾ ಮಾಡಬೇಕು‌. ಇಂದಿನ ಪ್ರೇಕ್ಷಕರು ಯಾವ ಸ್ಟಾರ್? ಯಾವ ಡೈರೆಕ್ಟರ್? ಅಂತಾ ನೋಡಿ ಥಿಯೇಟರ್​ಗೆ ಬರುತ್ತಿಲ್ಲ. ಕಂಟೆಂಟ್ ಜೊತೆಗೆ ಎಂಟರ್ಟೈನ್ಮೆಂಟ್ ಇದೆಯಾ? ಅನ್ನೋದರೆಡೆಗೆ ಮಾತ್ರ ಪ್ರೇಕ್ಷಕರು ಗಮನಿಸುತ್ತಾರೆ. ನಮ್ಮ‌ ಕನ್ನಡ ಚಿತ್ರರಂಗದಲ್ಲಿ ಅಂತಹ ಸಾಕಷ್ಟು ಉದಾಹರಣೆಗಳಿವೆ. ಅದು ಬೆಳವಣಿಗೆ'' ಎಂದು ತಿಳಿಸಿದರು.

Director Kanta Kannalli's statement
ನಿರ್ದೇಶಕ ಕಾಂತ ಕನ್ನಳ್ಳಿ ಹೇಳಿಕೆ (Photo Source: ETV Bharat)

ಸದ್ಯದ ಪರಿಸ್ಥಿತಿಯಲ್ಲಿ ಸಿನಿಮಾ ತನ್ನ ಮುಹೂರ್ತದಿಂದ ಹಿಡಿದು ಪ್ರೀ - ರಿಲೀಸ್​ ಈವೆಂಟ್​​ವರೆಗೂ ಕಾರ್ಯಕ್ರಮ ಮಾಡಿ ಚಿತ್ರತಂಡ ಫೋಟೋ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದೆ. ಅಕ್ಷಯ್​ ಕುಮಾರ್ ಅವರ 'ವೆಲ್ಕಮ್ ಟು ದಿ ಜಂಗಲ್' ತನ್ನ ಈವೆಂಟ್​ಗೆ ಕೋಟಿಗಟ್ಟಲೆ ಖರ್ಚು ಮಾಡಿದ್ದು ನಿಮಗೆ ತಿಳಿದೇ ಇದೆ. ಹೀಗೆ ಬಜೆಟ್​ ಹೆಚ್ಚಾದರೆ ಕಲೆಕ್ಷನ್​ ಕೂಡಾ ದೊಡ್ಡ ಮಟ್ಟದಲ್ಲಿ ಬರಬೇಕು. ಆಗ ಮಾತ್ರ ಸಿನಿಮಾ ಸಕ್ಸಸ್ ಎನ್ನಬಹುದು. ಅದರಂತೆ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಕರೆತರಲು ಗ್ಲಿಂಪ್ಸ್, ಟೀಸರ್ ಹೀಗೆ ಅತಿಯಾದ ಪ್ರಮೋಶನಲ್​ ಕಂಟೆಂಟ್​ನ ಅವಶ್ಯಕತೆ ಇದೆಯಾ? ಎಂಬ ಪ್ರಶ್ನೆಗೆ ಉತ್ತರಿಸಿದ ನಿರ್ದೇಶಕ ಕಾಂತ ಕನ್ನಳ್ಳಿ, ''ಆಡಿಯನ್ಸ್ ಈಗ ಏನು ನಿರೀಕ್ಷಿಸುತ್ತಾರೆ ಅನ್ನೋ ಪ್ರಶ್ನೆ ನಮ್ಮಲ್ಲೂ ಇದೆ. ಒಂದು ಸಿನಿಮಾದ ಪೂಜೆ ಯಾವಾಗ ಆಗುತ್ತದೆ? ಯಾವಾಗ ಶೂಟಿಂಗ್ ಆಗುತ್ತದೆ? ಯಾವಾಗ ರಿಲೀಸ್ ಆಗುತ್ತದೆ? ಎಂಬ ಕುತೂಹಲ ಪ್ರೇಕ್ಷಕರಿಗೂ ಇದೆ. ಈ ವರ್ಷ ಮುಹೂರ್ತ ಮಾಡಿದ್ದೇವೆ ಎಂದರೆ ಕಥೆ, ನಿರ್ಮಾಪಕ, ನಿರ್ದೇಶಕ, ಪೋಸ್ಟ್ ಪ್ರೊಡಕ್ಷನ್ ಅಂತಾ ಅದಕ್ಕೊಂದಿಷ್ಟು ಸಮಯ ಹಿಡಿದಿರುತ್ತದೆ. ಕಥೆ ಬರೆದು ಸಿನಿಮಾ ಬಿಡುಗಡೆ ಆಗೋವರೆಗೆ... ನೋಡುಗರಿಗೆ ಹಳೇ ವಿಷಯ ಅನಿಸಬಹುದು. ಅಲ್ಲದೇ ಸದ್ಯ ಒಟಿಟಿಯಲ್ಲಿ ಕಂಟೆಂಟ್ ಇರುವ ಹತ್ತಾರು ಸಿನಿಮಾಗಳು ಸಿಗಬೇಕಾದರೆ, ಆ ಎಲ್ಲ ಸಿನಿಮಾಗಳಿಗಿಂತ ನಮ್ಮ ಚಿತ್ರದಲ್ಲಿ ಒಂದೊಳ್ಳೆ ಕಂಟೆಂಟ್ ಇದೆ ಅಂತಾ ತೋರಿಸಲು ಟೀಸರ್, ಗ್ಲಿಂಪ್ಸ್, ಟ್ರೇಲರ್​​ಗಳನ್ನು ಬಿಡಬೇಕಾಗುತ್ತದೆ'' ಎಂದು ತಿಳಿಸಿದರು.

ಈ ಹಿಂದೆ ಡಾ.ರಾಜ್​ಕುಮಾರ್​, ವಿಷ್ಣುವರ್ಧನ್​​, ಅಂಬರೀಶ್, ಶಂಕರ್​ನಾಗ್​ ಸಿನಿಮಾಗಳೆಂದ ಕೂಡಲೇ ಅಭಿಮಾನಿಗಳು ಹಿಂದೆ ಮುಂದೆ ನೋಡದೇ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ವೀಕ್ಷಿಸುತ್ತಿದ್ದರು. ಸ್ಟಾರ್​ಡಮ್​ಗೆ ದೊಡ್ಡ ಮಟ್ಟದ ವ್ಯಾಲ್ಯೂ ಇತ್ತು. ಅಭಿಮಾನಕ್ಕೊಂದು ವಿಶೇಷ ಅರ್ಥ ಇತ್ತು. ಸದ್ಯ ಪರಿಸ್ಥಿತಿ ಹಾಗಿಲ್ಲ. ಈ ಬಗ್ಗೆ ಮಾತನಾಡಿದ ನಿರ್ದೇಶಕರು, ''ಹೌದು, ಸಿನಿಮಾ ನೋಡುವ ಪ್ರೇಕ್ಷಕರಿಗೆ ಇಂದು ತುಂಬಾನೇ ಚಾಯ್ಸ್ ಇದೆ. ಹಿಂದೆ ಹಾಗಿರಲಿಲ್ಲ. ನಾನು ಕೆಲಸದಲ್ಲಿದ್ದರೂ, ಆ ಕೆಲಸವನ್ನು ಬಿಟ್ಟು ಫಸ್ಟ್ ಡೇ ಫಸ್ಟ್ ಶೋ ನೋಡಿರುವ ಅನುಭವಗಳಿವೆ. ಆ ಕಾಲದಲ್ಲಿ ಮಾಧ್ಯಮ ಅಂತಾ ಇದ್ದದ್ದು ಒಂದು ಟಿವಿ ಮತ್ತೊಂದು ಪತ್ರಿಕೆ. ಅದರಲ್ಲಿ ಸಿನಿಮಾ ಬಗ್ಗೆ ಮಾಹಿತಿ ಸಿಗುತ್ತಿದ್ದದ್ದು ಒಂದು ಶುಕ್ರವಾರ ಅಥವಾ ಎಂಟರ್ಟೈನ್ಮೆಂಟ್ ಚಾನಲ್​ಗಳಲ್ಲಿ ಹಾಡು, ಟ್ರೇಲರ್​ ನೋಡಿ ಆ ಸಿನಿಮಾಗೆ ಹೋಗಬೇಕು ಅಂತಾ ಫಿಕ್ಸ್ ಆಗ್ತಾ ಇದ್ವಿ. ಈಗ ಒಂದು ಪೋಸ್ಟರ್ ಕೂಡಾ ಮ್ಯಾಟರ್ ಆಗುತ್ತದೆ'' ಎಂದರು.

''ಓಡುತ್ತಿರುವ ದುನಿಯಾದಲ್ಲಿ ನಮ್ಮ ಪ್ರಾಡಕ್ಟ್ ಬಗ್ಗೆ ಜನ ಮಾತನಾಡಬೇಕು ಎಂದರೆ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಬೇಕು. ಈ ಪ್ರಯತ್ನಗಳನ್ನು ಮಾಡಿದ್ರೂ ಕೂಡಾ ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಕರೆತರಲು ಆಗುತ್ತಿಲ್ಲ ಎಂಬ ನೋವಿದೆ. ಮತ್ತೊಂದು ಕಡೆ ಕಂಟೆಂಟ್ ಸಿನಿಮಾಗಳಿಗೆ ಸರಿಯಾದ ಥಿಯೇಟರ್ಸ್​​​ ಸಿಗುತ್ತಿಲ್ಲ ಅನ್ನೋ ನೋವೂ ಇದೆ. ಫಸ್ಟ್ ಡೇ ಸಿನಿಮಾ ನೋಡುವ ಪ್ರೇಕ್ಷಕರಿಗೆ ಇಷ್ಟ ಆಗುವಂತಹ ಕಥೆಯನ್ನು ನಾವು ಮಾಡಿದಾಗ ಆ ಸಿನಿಮಾ ಸಕ್ಸಸ್ ಕಾಣುತ್ತದೆ'' ಎಂದು ತಿಳಿಸಿದರು.

ಸದ್ಯ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರ ಸಿನಿಮಾಗಳು ಇಲ್ಲ, ಚಿತ್ರಮಂದಿರಗಳಿಗೆ ಜನರು ಬರುತ್ತಿಲ್ಲ, ಟಿವಿ ರೈಟ್ಸ್‌, ಡಿಜಿಟಲ್ ರೈಟ್ಸ್ ಹೋಗ್ತಾ ಇಲ್ಲ ಎಂಬ ಪರಿಸ್ಥಿತಿಯಲ್ಲಿ ನಿಮ್ಮಂಥ ಪ್ರತಿಭಾನ್ವಿತ ನಿರ್ದೇಶಕರ ಪರಿಸ್ಥಿತಿ ಏನು? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ''ಬಹಳ ಶೋಚನೀಯವಾಗಿದೆ ಎಂಬುದನ್ನು ಬಹಳ ನೋವಿನಿಂದ ಹೇಳುತ್ತಿದ್ದೇನೆ'' ಎಂದರು. ಎಲ್ಲಿ ಈ ಸಮಸ್ಯೆಗೆ ಮುಲಾಮ್ ಹಚ್ಚಬೇಕು ಗೊತ್ತಿಲ್ಲ. ಏನು ಮಾಡಬೇಕು ಗೊತ್ತಿಲ್ಲ. ಹಳೇ ಶೈಲಿಯ ಸಿನಿಮಾಗಳನ್ನು ಮಾಡುವ ಅಂದಿನ ನಿರ್ದೇಶಕರು ನಮ್ಮಲ್ಲಿ ಇದ್ದಾರೆ. ಇವತ್ತಿನ ಟ್ರೆಂಡ್​ಗೆ ತಕ್ಕಂತ ಸಿನಿಮಾಗಳನ್ನು ಮಾಡುವ ನಿರ್ದೇಶಕರು ನಮ್ಮಲ್ಲಿ ಇದ್ದಾರೆ. ಇಡೀ ವಾತಾವರಣ ಸರಿಯಾಗಬೇಕೆಂದರೆ ನಿರ್ಮಾಪಕನಿಗೆ ಆ ಸಿನಿಮಾ ಬಗ್ಗೆ ಬೇಸಿಕ್ ತಿಳಿವಳಿಕೆ ಇರಬೇಕು. ಏಕಂದರೆ ಎಷ್ಟೋ ಜನ ನಿರ್ಮಾಪಕರು ಇವತ್ತಿಗೂ ನನ್ನ ಹತ್ತಿರ ಹೇಳ್ತಾರೆ ಆ ನಟ ಕಾಲ್ ಶೀಟ್ ಸಿಕ್ಕರೆ ಸಿನಿಮಾ ಮಾಡುತ್ತೇನೆ ಎಂದು. 25 ಕೋಟಿ ರೂಪಾಯಿ ಹಣ ಹಾಕಿ ಸಿನಿಮಾ ಮಾಡುತ್ತೇನೆ ಎಂದರೆ, ಆ ನಿರ್ಮಾಪಕರಿಗೆ ಹಾಕಿದ ಬಂಡವಾಳ ವಾಪಸ್ ಬರುತ್ತೆ ಅಂತಾ ಹೇಳೋದಕ್ಕೆ ಆಗೋದಿಲ್ಲ. ಒಟ್ಟಾರೆ ಸಿನಿಮಾ ಇಂಡಸ್ಟ್ರಿಯನ್ನು ದೂರೋದು ಸರಿಯಲ್ಲ. ಈ ಸಮಸ್ಯೆಗೆ ಪರಿಹಾರ ಅಂದ್ರೆ ಇಡೀ ಚಿತ್ರರಂಗದವರು‌ ಒಟ್ಟಾಗಿ ಸೇರಿ ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳಬೇಕು'' ಅಂತಾರೆ ಕಾಂತ ಕನ್ನಳ್ಳಿ.

ನಿರ್ದೇಶಕ ಕೆ.ಎಂ ಚೈತನ್ಯ ಹೇಳೋದೇನು?

ನಿರ್ದೇಶಕ ಕೆ.ಎಂ ಚೈತನ್ಯ (Video Source: ETV Bharat)

2025ರಲ್ಲಿ ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸು ಕಂಡ ಸಿನಿಮಾ 'ಸು ಫ್ರಂ ಸೋ'. ಇಲ್ಲಿ ವರ್ಕ್​​ ಆಗಿದ್ದು - ಕಂಟೆಂಟ್​ ಮತ್ತು ಪ್ರೇಕ್ಷಕರ ಬಾಯ್ಮಾತಿನ ಪ್ರಚಾರ. ಚಿತ್ರತಂಡ ಅದ್ಧೂರಿ ಪ್ರಚಾರ ಕೈಗೊಳ್ಳದೇ, ತಮ್ಮ ಕಂಟೆಂಟ್​ ಮೇಲೆ ನಂಬಿಕೆ ಇರಿಸಿ ಸಿನಿಮಾವನ್ನು ಪ್ರೇಕ್ಷಕರ ಮಡಿಲಿಗೆ ಹಾಕಿತು. ನಂತರದ್ದು ದಾಖಲೆ. ಅದರಂತೆ, ಇಂದಿನ ರೀಲ್ಸ್ ಯುಗದಲ್ಲಿ ಅತಿಯಾದ ಸಿನಿಮಾ ಪ್ರಚಾರ ನೋಡುಗರ ಕುತೂಹಲ ಕಡಿಮೆ ಮಾಡುತ್ತಿದೆಯೇ? ಎಂಬ ಪ್ರಶ್ನೆಗೆ ಆ ದಿನಗಳು, ಆಟಗಾರ, ಅಮ್ಮ ಐ ಲವ್ ಯೂ ಸಿನಿಮಾಗಳ ಖ್ಯಾತಿಯ ನಿರ್ದೇಶಕ ಕೆ.ಎಂ ಚೈತನ್ಯ 'ಹೌದು' ಎಂದು ಉತ್ತರಿಸಿದ್ದಾರೆ. ಜೊತೆಗೆ 'ಹೇಗೆ' ಎಂಬುದನ್ನೂ ವಿವರಿಸಿದ್ದಾರೆ.

''ನಿಮ್ಮ ಮಾತು ನಿಜ. ನಾನು ಆ ದಿನಗಳು ಸಿನಿಮಾ ಮಾಡುವಾಗ ಇಷ್ಟೊಂದು ಮಲ್ಟಿಪ್ಲೆಕ್ಸ್ ಇರಲಿಲ್ಲ. ಸೋಷಿಯಲ್ ಮೀಡಿಯಾ ಇರಲಿಲ್ಲ. 18 ವರ್ಷಗಳ ಬಳಿಕ ಎಷ್ಟೊಂದು ಮಾಲ್​​ಗಳಾಗಿವೆ. ಮಲ್ಟಿಪ್ಲೆಕ್ಸ್ ಸ್ಕ್ರೀನ್​​ಗಳು ಬಂದಿವೆ. ಎಷ್ಟು ಸೋಷಿಯಲ್ ಮೀಡಿಯಾಗಳು ಪ್ರಚಾರಕ್ಕೆ ಇವೆ. ಸ್ಟಾರ್​ ನಟರನ್ನು ಕೇವಲ ತೆರೆ ಮೇಲೆ ನೋಡುವ ಕಾಲ ಇತ್ತು. ಹಾಗೇ ಸಿನಿಮಾ ಶೂಟಿಂಗ್ ಹೇಗೆ ಆಗುತ್ತದೆ? ಯಾವ ಟೆಕ್ನಾಲಜಿ ಬಳಸುತ್ತಾರೆ? ಎಂಬುದರ ಬಗ್ಗೆ ಒಂದು ಮಿಸ್ಟರಿ, ಒಂದು ಸೀಕ್ರೆಟ್ ಇತ್ತು‌. ಈಗ ಅತಿಯಾದ ಪ್ರಚಾರದಿಂದ ಸಿನಿಮಾದ ಸೀಕ್ರೆಟ್ಸ್ ಅನ್ನೋದು ಇಲ್ಲ. ಕುತೂಹಲ ಕಡಿಮೆಯಾಗುತ್ತಿದೆ. ಹಾಗಾಗಿ ಸಿನಿಮಾ ನೋಡುವವರ ಸಂಖ್ಯೆ ಕಡಿಮೆಯಾಗಿದೆ'' ಎಂದು ತಿಳಿಸಿದರು.

Director K.M.Chaitanya
ನಿರ್ದೇಶಕ ಕೆ.ಎಂ.ಚೈತನ್ಯ ಹೇಳಿಕೆ (Photo Source: ETV Bharat)

''ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುತ್ತಿಲ್ಲ ಎನ್ನುವ ಮಾತುಗಳು ಕಳೆದ ಕೆಲ ವರ್ಷಗಳಿಂದ ಕೇಳಿ ಬರುತ್ತಲೇ ಇದೆ. ಅಂಥ ಹೊತ್ತಲ್ಲಿ ಕೆಜಿಎಫ್​, ಕಾಂತಾರದಂತಹ ಸಿನಿಮಾಗಳು ಥಿಯೇಟರ್ ಮಾಲೀಕರ ಕೈ ಹಿಡಿದವು. ಏಕೆ ಹೀಗಾಗುತ್ತಿದೆ ಎಂಬ ಪ್ರಶ್ನೆಗೆ ಬರಹಗಾರ, ನಿರ್ದೇಶಕರಾಗಿ ಪ್ರತಿಕ್ರಿಯಿಸಿದ ಚೈತನ್ಯ, ಈ ಸಮಸ್ಯೆ ಕೇವಲ ಚಿತ್ರರಂಗದ್ದಲ್ಲ. ಇಡೀ ಸಮಾಜದಲ್ಲಿದೆ. ಜನ ಮನೆಯಲ್ಲಿ ಪರಸ್ಪರ ಮಾತನಾಡೋದನ್ನು ಬಿಟ್ಟು ಮೊಬೈಲ್​ಗೆ ಕನೆಕ್ಟ್ ಆಗಿದ್ದಾರೆ. ಇವತ್ತಿನ ಪೀಳಿಗೆಗೆ ಸಿನಿಮಾ ನೋಡುವ ಬದಲು 30 ಸೆಕೆಂಡ್ ವಿಡಿಯೋ ನೋಡದ್ರಲ್ಲಿ ಹೆಚ್ಚು ಖುಷಿ ಸಿಗುತ್ತಿದೆ. ಅದಕ್ಕೆ ಪರಿಹಾರ ಕಂಡುಕೊಳ್ಳದೇ ಚಿತ್ರಮಂದಿರಗಳಿಗೆ ಜನ ಬರುತ್ತಿಲ್ಲ ಅನ್ನೋದು ತಪ್ಪು. ಎಲ್ಲರೂ ಮೊಬೈಲ್ ಬಿಟ್ಟರೆ ರಂಗಭೂಮಿ ಹಾಗೂ ಸಿನಿಮಾಗಳನ್ನು ನೋಡಲು ಜನ ಬರ್ತಾರೆ'' ಅಂತಾರೆ ನಿರ್ದೇಶಕ ಕೆ.ಎಂ.ಚೈತನ್ಯ.

Director K.M.Chaitanya
ನಿರ್ದೇಶಕ ಕೆ.ಎಂ.ಚೈತನ್ಯ ಹೇಳಿಕೆ (Photo Source: ETV Bharat)

ನಿರ್ಮಾಪಕ ಸಂಘದ ಅಧ್ಯಕ್ಷ ಎಂ.ಜಿ ರಾಮಮೂರ್ತಿ ಅಭಿಪ್ರಾಯ ಹೀಗಿದೆ

ಪ್ರಸ್ತುತ ದಿನಗಳಲ್ಲಿ 'ಗೌಪ್ಯತೆ' ಇಲ್ಲ‌ ಎಂದು ಕನ್ನಡ ನಿರ್ಮಾಪಕರ ಸಂಘದ ಅಧ್ಯಕ್ಷ ಎಂ.ಜಿ.ರಾಮಮೂರ್ತಿ ತಿಳಿಸಿದ್ದಾರೆ.

ನಮ್ಮ ಕಾಲದಲ್ಲಿ ಒಂದು ಸಿನಿಮಾಗೆ ಎಷ್ಟು ಖರ್ಚಾಗುತ್ತದೆ? ಥಿಯೇಟರ್​ನಿಂದ ಎಷ್ಟು ಕಲೆಕ್ಷನ್ ಆಗಬಹುದು? ಎಂಬುದನ್ನು ಲೆಕ್ಕಹಾಕಿ, ನಮಗೆ ಲಾಭ ಆಗುವ ರೀತಿಯಲ್ಲಿ ಸಿನಿಮಾ ಮಾಡುತ್ತಿದ್ದೆವು. ಆದ್ರೆ ಈಗ ಹಾಗಿಲ್ಲ. ಸ್ಟಾರ್ ಸಿನಿಮಾ ಥಿಯೇಟರ್ ಕಲೆಕ್ಷನ್, ಆಡಿಯೋ ರೈಟ್ಸ್ ಅಂತಾ 19 ಕೋಟಿ ಕಲೆಕ್ಷನ್ ಆಗಿರುತ್ತೆ. ಆದರೆ, ಸಿನಿಮಾದ ಬಜೆಟ್ 30 ಕೋಟಿ ಆದ್ರೆ ನಿಮಗೆ ಲಾಭ ಎಲ್ಲಿಂದ ಬರುತ್ತದೆ? ಎಂದು ಪ್ರಶ್ನಿಸಿದರು.

ಕನ್ನಡ ನಿರ್ಮಾಪಕ ಸಂಘದ ಅಧ್ಯಕ್ಷ ಎಂ.ಜಿ ರಾಮಮೂರ್ತಿ (Video Source: ETV Bharat)

ಅತಿಯಾದ ಪ್ರಮೋಶನ್​​ಗೆ ಆಗುವ ಖರ್ಚುವೆಚ್ಚಗಳನ್ನು ಇಲ್ಲಿ ಉಲ್ಲೇಖಿಸಿದರು. ''ಮೊದಲೆಲ್ಲಾ ಒಂದು ಸಿನಿಮಾ ಪ್ರಚಾರ ಅಂದಾಗ ಒಂದು ಅಥವಾ ಎರಡು ಪ್ರೆಸ್​ಮೀಟ್ ಮಾಡುತ್ತಿದ್ದರು. ಈಗ ಪೋಸ್ಟರ್, ಟೀಸರ್, ಸಾಂಗ್ಸ್, ಟ್ರೇಲರ್​​ ರಿಲೀಸ್ ಅಂತಾ ಹತ್ತಾರು ಕಾರ್ಯಕ್ರಮಗಳನ್ನು ಮಾಡ್ತಾರೆ. ಹೀಗೆ ಹತ್ತಾರು ಕಾರ್ಯಕ್ರಮಗಳನ್ನು ಮಾಡುತ್ತಾ ಬಜೆಟ್​ ಜೊತೆ ಸಮಯವೂ ಹೆಚ್ಚುತ್ತದೆ. ಅಷ್ಟರಲ್ಲಿ ಆ ಸಿನಿಮಾ ನೋಡುವ ಆಸಕ್ತಿ ಹೋಗಿರುತ್ತದೆ'' ಎಂದು ತಿಳಿಸಿದರು.

''ಈ ಹಿಂದೆ ರಾಜ್​ಕುಮಾರ್, ಶಂಕರ್​ನಾಗ್, ವಿಷ್ಣುವರ್ಧನ್ ಸಿನಿಮಾಗಳನ್ನು ಸ್ಟುಡಿಯೋದಲ್ಲೇ ಚಿತ್ರೀಕರಿಸಿ ಆಮೇಲೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದರು. ಆಗ ಜನ ಥಿಯೇಟರ್​ಗೆ ಬರುತ್ತಿದ್ದರು. ಈಗ ಒಟಿಟಿ ಮೂಲಕ ಮನೆಯಲ್ಲೇ ಸಿನಿಮಾ ನೋಡುವ ಕಾಲ ಬಂದಿದೆ'' ಎಂದು ಹೇಳುವ ಮೂಲಕ ಪ್ರೇಕ್ಷಕರಿಗೆ ಆಯ್ಕೆಗಳು ಹೆಚ್ಚಿವೆ ಎಂದು ತಿಳಿಸಿದರು.

Producer M.G.Ramamurthy
ನಿರ್ಮಾಪಕ ಎಂ.ಜಿ.ರಾಮಮೂರ್ತಿ ಹೇಳಿಕೆ (Photo Source: ETV Bharat)

''ಇದರ ಜೊತೆಗೆ ನಮ್ಮ ದೊಡ್ಡ ದೊಡ್ಡ ಸ್ಟಾರ್​ಗಳೆಲ್ಲಾ ಈಗ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿರುವುದೂ ಒಂದು ಕಾರಣ. ಈ ಹಿಂದೆಲ್ಲಾ ಒಬ್ಬ ನಟ ಸಿನಿಮಾ ರಿಲೀಸ್ ಅಥವಾ ಯಾವುದು ಪಬ್ಲಿಕ್ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದ್ರೀಗ ಟಿವಿಯಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾಗಿ, ಏಕೆ ಚಿತ್ರಮಂದಿರಗಳಿಗೆ ಹೋಗಬೇಕು ಎಂಬ ಭಾವನೆ ಮೂಡಿದೆ. ಜೊತೆಗೆ ಒಬ್ಬ ಸ್ಟಾರ್ ನಟನ ಸಿನಿಮಾ ಎರಡು ಅಥವಾ ಮೂರು ವಾರಗಳಲ್ಲಿ ಒಟಿಟಿಗೆ ಬಂದಾಗ ಸಹಜವಾಗಿ ಆ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ನೋಡುವವರ ಸಂಖ್ಯೆ ಕಡಿಮೆ ಆಗುತ್ತದೆ ಅನ್ನೋದು ನನ್ನ ಅಭಿಪ್ರಾಯ'' ಎಂದರು.

ಸದ್ಯದ ಪರಿಸ್ಥಿತಿ ಕುರಿತು ಕಲಾವಿದರು, ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞನರ ಜೊತೆ ಏನಾದರು ಚರ್ಚೆ ನಡೆಸುವ ಆಲೋಚನೆ ಇದೆಯಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಹೌದು. ಒಳ್ಳೆ ಸಿನಿಮಾಗಳು ಬಂದ್ರೂ ವೀಕ್ಷಕರ ಸಂಖ್ಯೆಯೇಕೆ ಕಡಿಮೆ? ಚಿತ್ರಮಂದಿರಗಳಿಗೆ ಹೇಗೆ ಪ್ರೇಕ್ಷಕರನ್ನು ಕರೆಸೋದು? ಎಂಬುದರ ಬಗ್ಗೆ ನಿರ್ಮಾಪಕರ ಸಂಘದಲ್ಲಿ ಒಂದು ಸಭೆ ಮಾಡಲಿದ್ದೇವೆ ಎಂದು ಭರವಸೆ ನೀಡಿದ್ರು.

ಸಿನಿಮಾ ಬಗ್ಗೆ ತಿಳಿವಳಿಕೆ ಇಲ್ಲದ ಸಾಕಷ್ಟು ನಿರ್ಮಾಪಕರು ಚಿತ್ರರಂಗಕ್ಕೆ ಬರುತ್ತಿದ್ದಾರೆ. ಅಂತಹವರಿಗೆ ನಿರ್ಮಾಪಕರ ಸಂಘ ಏನು ಯೋಜನೆ ಹಾಕಿಕೊಂಡಿದೆ? ಎಂಬ ಪ್ರಶ್ನೆಗೆ ಉತ್ತರಿಸಿ, ನನ್ನ ಸಮಯದಲ್ಲಿ ಕನ್ನಡ ಫಿಲ್ಮ್ ಚೇಂಬರ್​​ನಲ್ಲಿ ಹೊಸ ನಿರ್ಮಾಪಕರಿಗೆ ಸಿನಿಮಾ ಬಗ್ಗೆ ತಿಳಿಸಲು ಒಂದು ಕಮಿಟಿ ಮಾಡಿದ್ದೆ. ಆಗ ಹೊಸ ನಿರ್ಮಾಪಕರಿಗೆ ಈ ಸಿನಿಮಾ ಬಜೆಟ್ ಎಷ್ಟು? ಈ ಹೀರೋಗೆ ಎಷ್ಟು ಸಂಭಾವನೆ? ಚಿತ್ರೀಕರಣ ಮಾಡೋದಕ್ಕೆ ಎಷ್ಟು ಖರ್ಚಾಗುತ್ತದೆ? ಹೆಚ್ಚು ಹಣ ಹಾಕಿ ಸಿನಿಮಾ ಮಾಡಿದ್ರೆ ನಷ್ಟ ಆಗುತ್ತೆ ಎಂಬುದನ್ನು ಹೇಳಿಕೊಡುತ್ತಿದ್ದೇವೆ. ಆಗ ಈ ಮಾತು ಕೇಳಿದ ಅದೆಷ್ಟೋ ನಿರ್ಮಾಪಕರು ಅರ್ಧಕ್ಕೆ ನಿಲ್ಲಿಸಿ ಹೋಗಿದ್ದಾರೆ‌. ಆ ಕಾರಣಕ್ಕೆ ಈಗ ನಿರ್ದೇಶಕರು ಆ ಹೊಸ ನಿರ್ಮಾಪಕರನ್ನು ಫಿಲ್ಮ್ ಚೇಂಬರ್​ಗೆ ಕರೆದುಕೊಂಡು ಬರುತ್ತಿಲ್ಲ. ಸೀದಾ ಸಿನಿಮಾ ಸ್ಟಾರ್ಟ್ ಮಾಡಿರುತ್ತಾರೆ. ಬಿಡುಗಡೆ ಬಳಿಕ ನಷ್ಟಕ್ಕೆ ಒಳಗಾಗುತ್ತಾರೆ ಅಂತಾರೆ ಎಂ.ಜಿ.ರಾಮಮೂರ್ತಿ.

Producer M.G.Ramamurthy
ನಿರ್ಮಾಪಕ ಎಂ.ಜಿ.ರಾಮಮೂರ್ತಿ ಹೇಳಿಕೆ (Photo Source: ETV Bharat)

ಸದ್ಯ ಹೊಸ ನಿರ್ಮಾಪಕರು ದೊಡ್ಡ ಬಜೆಟ್ ಹಾಕಿ ಸಿನಿಮಾ ಮಾಡಿ ನಂತರ ನಷ್ಟ ಮಾಡಿಕೊಳ್ಳುತ್ತಾರೆ. ಅಂತಹವರಿಗೆ ನಿಮ್ಮ ಸಲಹೆ ಏನು? ಎಂಬ ಪ್ರಶ್ನೆಗೆ ಉತ್ತರಿಸಿದ ನಿರ್ಮಾಪಕರು, ಒಂದು ಆ್ಯಪಲ್ ಫೋನ್ 16 ಸಾವಿರ ರೂಪಾಯಿ ಇದೆ ಅಂದುಕೊಳ್ಳೋಣ. ಇದಕ್ಕಿಂತ ಸ್ವಲ್ಪ ಚೆನ್ನಾಗಿ ಬೇಕು ಅಂದಾಗ 18 ಸಾವಿರ ಕೊಟ್ಟು ತೆಗೆದುಕೊಳ್ಳುತ್ತೇವೆ. ಆದರೆ ಅದನ್ನು 25 ಸಾವಿರ ರೂಪಾಯಿ ಎಂದರೆ ಯಾರೂ ತೆಗೆದುಕೊಳ್ಳೋದಿಲ್ಲ. ಹಾಗೇ ಸಿನಿಮಾ ಕೂಡಾ. ಒಬ್ಬ ಸ್ಟಾರ್ ನಟನ ಸಿನಿಮಾ ಅಂದ್ರೆ ಸರಿಸುಮಾರು 20 ಕೋಟಿ ರೂಪಾಯಿ ಹಾಕಿ ಸಿನಿಮಾ ಮಾಡಬೇಕು. ಅದನ್ನು ಬಿಟ್ಟು ನಾನು 50‌ ಕೋಟಿ ರೂಪಾಯಿ ಹಾಕಿ ಸಿನಿಮಾ‌ ಮಾಡಿದೆ ಅಂದ್ರೆ ಹೇಗೆ? ಅಲ್ಲಿ ನಷ್ಟನೇ ಆಗೋದು. ಇದ್ರ ಜೊತೆಗೆ ಟಿವಿ ರೈಟ್ಸ್ ಕೂಡಾ ಮೊದಲಿನ ತರ ಇಲ್ಲ. ಆ ಸಿನಿಮಾದ ಕಂಟೆಂಟ್, ಥಿಯೇಟರ್ ಕಲೆಕ್ಷನ್​ ನೋಡಿ ಟಿವಿಯವ್ರು ಸಿನಿಮಾ ಖರೀದಿಸುತ್ತಿದ್ದಾರೆ. ಹೀಗಿರಬೇಕಾದ್ರೆ ಹೆಚ್ಚು ಬಂಡವಾಳ ಹಾಕಿ ಏಕೆ ನಷ್ಟ ಮಾಡಿಕೊಳ್ಳಬೇಕು? ಪ್ರೀ ಪ್ರಮೋಶನಲ್​ ಅಂತಾ ಏಕೆ ಹೆಚ್ಚಿನ ಬಂಡವಾಳ ಹೂಡಬೇಕು ಅಂತಾರೆ ನಿರ್ಮಾಪಕರ ಸಂಘದ ಅಧ್ಯಕ್ಷ ಎಂ.ಜಿ.ರಾಮಮೂರ್ತಿ.

ಫಿಲ್ಮ್​​ಮೇಕರ್​ ಸುಂದರ್​​ ರಾಜ್​​ ಹೇಳಿದ್ದೇನು?

ಇತ್ತೀಚೆಗಷ್ಟೇ ಈಟಿವಿ ಭಾರತದೊಂದಿಗಿನ ಸಂದರ್ಶನದಲ್ಲಿ ಭಾಗಿಯಾಗಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನಿರ್ಮಾಪಕರ ವಲಯದ ಉಪಾಧ್ಯಕ್ಷ ಸುಂದರ್​​​ ರಾಜ್, ''ಮೊದಲೆಲ್ಲಾ ಸಿನಿಮಾ ಅಂದ್ರೆ ಒಂದು ಸಸ್ಪೆನ್ಸ್ ಇತ್ತು. ಈಗ ಸಿನಿಮಾ ಮೇಕಿಂಗ್ ವಿಡಿಯೋ ರಿವೀಲ್​, ಪ್ರಮೋಶನಲ್​ ಅಂತೆಲ್ಲಾ ಸಿನಿಮಾದ ರಹಸ್ಯ ಗೊತ್ತಾಗುತ್ತಿರುವುದರಿಂದ ಮೊದಲಿದ್ದ ಸಿನಿಮಾ ವೀಕ್ಷಿಸುವ ಆಸಕ್ತಿ, ಸಿನಿಮಾ ಮೇಲಿನ ವ್ಯಾಮೋಹ ಈಗ ಉಳಿದುಕೊಂಡಿಲ್ಲ'' ಎಂದು ತಿಳಿಸಿದ್ದರು.

Producer Sundar Raj's statement
ನಿರ್ಮಾಪಕ ಸುಂದರ್ ರಾಜ್ ಹೇಳಿಕೆ (Photo: ETV Bharat)

ಇವುಗಳನ್ನೂ ಓದಿ:

Explainer: ಕನ್ನಡ ಚಿತ್ರರಂಗದಲ್ಲಿ ಮಹಿಳಾ ನಿರ್ದೇಶಕಿಯರ ಸಂಖ್ಯೆಯೇಕೆ ಕಡಿಮೆ? ಕಾರಣ ಕೊಟ್ರು ಸಿನಿಗಣ್ಯರು

Explainer: ಕನ್ನಡದಲ್ಲಿ ವರ್ಷಕ್ಕೆ 250+ ಸಿನಿಮಾಗಳು ತೆರೆಕಂಡ್ರೂ ಯಶಸ್ಸು ಕಾಣೋದು ಕೆಲವೇ ಏಕೆ? ಸಿನಿಪಂಡಿತರ ಮಾತು

ಎರಡೇ ವಾರದಲ್ಲಿ 3 ಸ್ಟಾರ್​ ಸಿನಿಮಾ, ಸ್ಯಾಂಡಲ್​ವುಡ್​ಗೆ ಪ್ಲಸ್ಸೋ ಮೈನಸ್ಸೋ?: ಬಾಕ್ಸ್​ ಆಫೀಸ್​​ ಪೈಪೋಟಿ ಬಗ್ಗೆ ತಜ್ಞರು ಹೇಳಿದ್ದಿಷ್ಟು -Explained