ETV Bharat / entertainment

ಎರಡೇ ವಾರದಲ್ಲಿ 3 ಸ್ಟಾರ್​ ಸಿನಿಮಾ, ಸ್ಯಾಂಡಲ್​ವುಡ್​ಗೆ ಪ್ಲಸ್ಸೋ ಮೈನಸ್ಸೋ?: ಬಾಕ್ಸ್​ ಆಫೀಸ್​​ ಪೈಪೋಟಿ ಬಗ್ಗೆ ತಜ್ಞರು ಹೇಳಿದ್ದಿಷ್ಟು -Explained

Explainer: ದರ್ಶನ್​​​ ಮುಖ್ಯಭೂಮಿಕೆಯ 'ದಿ ಡೆವಿಲ್'​​​ ಡಿ.11ಕ್ಕೆ ತೆರೆಕಂಡಿದ್ದು, ಡಿ.25ಕ್ಕೆ ಶಿವರಾಜ್​​​ಕುಮಾರ್​, ಉಪೇಂದ್ರ, ರಾಜ್​ ಬಿ ಶೆಟ್ಟಿಯ '45' ಮತ್ತು ಸುದೀಪ್​ ನಟನೆಯ 'ಮಾರ್ಕ್​​​​' ತೆರೆಕಾಣುತ್ತಿದೆ. ಬಾಕ್ಸ್​ ಆಫೀಸ್​​ ಪೈಪೋಟಿ ಬಗ್ಗೆ ತಜ್ಞರು ಪ್ರತಿಕ್ರಿಯಿಸಿದ್ದಾರೆ.

3 star movies in just 2 weeks
ಎರಡೇ ವಾರದಲ್ಲಿ ಮೂರು ಸ್ಟಾರ್​ ಸಿನಿಮಾ - 45, ಡೆವಿಲ್​, ಮಾರ್ಕ್​ (Photo Credit: Film Team, Film Poster)
author img

By ETV Bharat Entertainment Team

Published : December 18, 2025 at 2:11 PM IST

9 Min Read
Choose ETV Bharat

ವಿಶೇಷ ವರದಿ: ರವಿಕುಮಾರ್​ ಎಂ.ಕೆ.

'ಸಿನಿಮಾ' ಎಂಬುದು ಕೇವಲ ಮನರಂಜನೆ ಮಾತ್ರವಲ್ಲದೇ ಪ್ರೇಕ್ಷಕರಿಗೆ ಮಹತ್ವದ ಸಂದೇಶ ಸಾರುವ ಪ್ರಮುಖ ಮಾಧ್ಯಮವಾಗಿ ಗುರುತಿಸಿಕೊಂಡಿದೆ. ಕಂಟೆಂಟ್​, ವಿಭಿನ್ನ ಜಾನರ್​​​ ಜೊತೆಗೆ ಸ್ಟಾರ್​ ಕಾಸ್ಟ್​ ಇಲ್ಲಿ ತನ್ನದೇ ಆದ ಮಹತ್ವ ಹೊಂದಿದೆ. ಸೂಪರ್​​​ ಸ್ಟಾರ್​ಗಳ ಸಿನಿಮಾಗಾಗಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಕಾದು ಕುಳಿತಿರುತ್ತಾರೆ. ಆದರೆ, ಒಂದೇ ಬಾರಿ ದಿಗ್ಗಜ ತಾರೆಯರ ಚಿತ್ರಗಳು ತೆರೆಕಂಡರೆ! ಪರಿಣಾಮ ಹೇಗಿರಬಹುದು? ಯಾವ ಸಿನಿಮಾ ನೋಡಬೇಕೆಂಬ ಗೊಂದಲ ಪ್ರೇಕ್ಷಕರದ್ದಾಗಿದ್ದರೆ, ಹಾಕಿದ ಬಂಡವಾಳ ವಾಪಸ್ ಬರುತ್ತೋ? ಇಲ್ಲವೋ ಎಂಬ ಕಳವಳ ನಿರ್ಮಾಪಕರಿಗೆ ಇರೋದಿಲ್ವೇ?.

ಸೂಪರ್‌ಸ್ಟಾರ್‌ಗಳು ಮುಖ್ಯಭೂಮಿಕೆಯಲ್ಲಿ ನಟಿಸಿರುವ 2-3 ಚಿತ್ರಗಳು ಒಟ್ಟೊಟ್ಟಿಗೆ ಹಬ್ಬದ ಸಂದರ್ಭ ಅಥವಾ ರಜಾ ದಿನಗಳಲ್ಲಿ ಪೈಪೋಟಿಗೆ ಬಿದ್ದಾಗ, ಸಿನಿಮೋದ್ಯಮವು ಕಠಿಣ ಪೈಪೋಟಿಗೆ ಸಾಕ್ಷಿಯಾಗುತ್ತವೆ. ಒಮ್ಮೆಲೆ ಬಹುನಿರೀಕ್ಷಿತ ಚಿತ್ರಗಳು ತೆರೆಕಾಣೋದು ನಿಜವಾಗಿಯೂ ಕನ್ನಡ ಚಿತ್ರರಂಗವನ್ನು ಬೆಳೆಸುತ್ತವೆಯೇ ಅಥವಾ ಪ್ರೇಕ್ಷಕರನ್ನು ವಿಭಜಿಸಿ ಸಾಧಾರಣ ಬಾಕ್ಸ್​​ ಆಫೀಸ್​ ಗಳಿಕೆಗೆ ಸಾಕ್ಷಿಯಾಗುತ್ತವೆಯೇ?. ಮುಂದುವರಿದು, ಪ್ರತೀ ಸಿನಿಮಾಗಳಿಗೆ ಕೆಟ್ಟ ಗಲ್ಲಾಪೆಟ್ಟಿಗೆ ಫಲಿತಾಂಶಗಳನ್ನು ನೀಡುತ್ತವೆಯೇ?. ಕನ್ನಡ ಚಿತ್ರೋದ್ಯಮದ ತಜ್ಞರು ಸ್ಕ್ರೀನ್ ವಾರ್ಸ್, ಫ್ಯಾನ್​​ ವಾರ್ಸ್ ಮತ್ತು ಬಾಕ್ಸ್ ಆಫೀಸ್ ಪೈಪೋಟಿ ಕುರಿತು ಒಳನೋಟಗಳನ್ನು ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.

ಕನ್ನಡ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು (Audio Credit: ETV Bharat)

ಎರಡೇ ವಾರದಲ್ಲಿ 3 ಸ್ಟಾರ್​ ಸಿನಿಮಾ: 2025 ಪೂರ್ಣಗೊಳ್ಳಲು 2 ವಾರವಷ್ಟೇ ಬಾಕಿ. ಕಾಂತಾರ ಚಾಪ್ಟರ್​ 1ರ ಜೊತೆಗೆ ದಿ ಡೆವಿಲ್​, 45 ಮತ್ತು ಮಾರ್ಕ್​​ ಈ ಸಾಲಿನ ಹೈ-ವೋಲ್ಟೇಜ್ ಚಿತ್ರಗಳಾಗಿ ಗುರುತಿಸಿಕೊಂಡಿದ್ದವು. ಚಾಲೆಂಜಿಂಗ್​ ಸ್ಟಾರ್ ದರ್ಶನ್​​​ ಮುಖ್ಯಭೂಮಿಕೆಯ 'ದಿ ಡೆವಿಲ್'​​​ ಡಿ.11ಕ್ಕೆ ಅದ್ಧೂರಿಯಾಗಿ ತೆರೆಕಂಡು ಉತ್ತಮ ಪ್ರದರ್ಶನ ಮುಂದುವರಿಸಿದೆ. ಕೆಲವೇ ದಿನಗಳ ಅಂತರದಲ್ಲಿ, ಡಿ.25ಕ್ಕೆ ಕರುನಾಡ ಚಕ್ರವರ್ತಿ ಶಿವರಾಜ್​​​ಕುಮಾರ್​, ರಿಯಲ್​​ ಸ್ಟಾರ್ ಉಪೇಂದ್ರ, ಭರವಸೆಯ ನಟ ರಾಜ್​ ಬಿ ಶೆಟ್ಟಿ ತೆರೆ ಹಂಚಿಕೊಂಡಿರುವ '45' ಮತ್ತು ಅಭಿನಯ ಚಕ್ರವರ್ತಿ ಸುದೀಪ್​ ನಟನೆಯ 'ಮಾರ್ಕ್' ತೆರೆಕಾಣುತ್ತಿದೆ. ಕನ್ನಡದ ಈ ಬಹುನಿರೀಕ್ಷಿತ ಚಿತ್ರಗಳ ಜೊತೆಗೆ 3-4 ಪರಭಾಷೆಯ ಸಿನಿಮಾಗಳೂ ಬಿಡುಗಡೆ ಆಗುತ್ತಿರುವುದರಿಂದ ಥಿಯೇಟರ್ ಸಮಸ್ಯೆ ಜೊತೆಗೆ ನಿರ್ಮಾಪಕರು ಎಷ್ಟು ಸೇಫ್?. ಈ ಸವಾಲುಗಳ ಬಗ್ಗೆ ನಿರ್ಮಾಪಕ ಹಾಗೂ ಸಿನಿಮಾ ವಿತರಕ ಸುಪ್ರೀತ್, ಕನ್ನಡ ಫಿಲ್ಮ್ ಚೇಂಬರ್ ಅಧ್ಯಕ್ಷ - ವೈಷ್ಣವಿ ಚಿತ್ರಮಂದಿರದ ಮಾಲೀಕ ನರಸಿಂಹಲು, ಸಿನಿಮಾ ಪ್ರದರ್ಶಕರ ವಲಯದ ಅಧ್ಯಕ್ಷ ಕೆ.ವಿ.ಚಂದ್ರಶೇಖರ್ ಈಟಿವಿ ಭಾರತದ ಜೊತೆ ಹಂಚಿಕೊಂಡಿದ್ದಾರೆ.

ಕನ್ನಡ ಫಿಲ್ಮ್ ಚೇಂಬರ್ ಅಧ್ಯಕ್ಷ - ವೈಷ್ಣವಿ ಚಿತ್ರಮಂದಿರದ ಮಾಲೀಕ ನರಸಿಂಹಲು

3 ಬಿಗ್​ ಬಜೆಟ್​ ಚಿತ್ರಗಳು ಒಮ್ಮೆಲೆ ತೆರೆಕಾಣೋದು ಅನ್ನೋ ಮಾತು ಬಂದಾಗ ಅನುಕೂಲವೋ? ಅನಾನುಕೂಲವೋ? ಎಂಬ ಪ್ರಶ್ನೆ ಸಹಜವಾಗಿ ಬಹುತೇಕರಲ್ಲಿ ಬರುತ್ತದೆ. ಕನ್ನಡ ಫಿಲ್ಮ್ ಚೇಂಬರ್ ಅಧ್ಯಕ್ಷರಾಗಿ ಹಾಗೂ ಚಿತ್ರಮಂದಿರವೊಂದರ ಮಾಲೀಕರಾಗಿ ನರಸಿಂಹಲು ಈ ಬಗ್ಗೆ ಮಾತನಾಡಿ, ''ನಾನು ಫಿಲ್ಮ್ ಚೇಂಬರ್ ಅಧ್ಯಕ್ಷ ಆದಾಗ, ಕಳೆದ ವರ್ಷವೇ ಸುದೀಪ್ ಅವರ 'ಮ್ಯಾಕ್ಸ್' ಸಿನಿಮಾ ಮತ್ತು ಶರಣ್ ಅವರ 'ಛೂ ಮಂತರ್' ಸಿನಿಮಾವನ್ನು ಒಟ್ಟಿಗೆ ಬಿಡುಗಡೆಗೊಳಿಸೋದು ಬೇಡ ಎಂದು ತಿಳಿಸಿದ್ದೆ. ಈಗಲೂ ಅದೇ ಸಮಸ್ಯೆ ಆಗುತ್ತಿದೆ. ಒಂದೇ ದಿನ 2 ಬಿಗ್ ಸ್ಟಾರ್ಸ್ ಸಿನಿಮಾಗಳು ಬಂದಾಗ ಯಾರಿಗೂ ಅನುಕೂಲ ಆಗೋದಿಲ್ಲ. ಅದರಲ್ಲೂ, ಮೊದಲಿಗೆ ಥಿಯೇಟರ್ ಸಮಸ್ಯೆ ಎದುರಾಗುತ್ತದೆ. ಯಾರಿಗೂ ಸರಿಯಾದ ಪ್ರಮಾಣದಲ್ಲಿ ಥಿಯೇಟರ್ ಸಿಗೋದಿಲ್ಲ. ಬೇರೆ ಬೇರೆ ಡೇಟ್​​ನಲ್ಲಿ ಚಿತ್ರಗಳು ಬಂದಾಗ, ಯಶಸ್ವಿಯಾಗಿರುವ ಉದಾಹರಣೆಗಳು ನಮ್ಮ ಮುಂದಿವೆ. ನಮ್ಮರಿಗೆ ಆ ಡೇಟ್​ಗೇನೆ (ನಿರ್ದಿಷ್ಟ ದಿನಾಂಕ/ಅವರು ಫಿಕ್ಸ್​ ಮಾಡಿದ ಡೇಟ್) ರಿಲೀಸ್ ಮಾಡಬೇಕೆಂಬ ಹಠ. ಈ ಹಠದಿಂದ ಕಲೆಕ್ಷನ್ ಕಡಿಮೆ ಆಗುತ್ತದೆ. ಅಲ್ಲದೇ ಈ ಸಿನಿಮಾಗಳ ಜೊತೆಗೆ ಬೇರೆ ಭಾಷೆಯ ಸಿನಿಮಾಗಳೂ ತೆರೆಕಾಣುತ್ತಿವೆ.‌ ಇವೆಲ್ಲವನ್ನೂ ನೋಡಿಕೊಂಡು ಸಿನಿಮಾ ರಿಲೀಸ್ ಮಾಡಬೇಕು. ಆದ್ರೆ, ಯಾರೂ ನಮ್ಮ ಮಾತು ಕೇಳೋದಿಲ್ಲ'' ಎಂದು ತಿಳಿಸಿದರು.

ಸಿನಿಮಾ ಪ್ರದರ್ಶಕರ ವಲಯದ ಅಧ್ಯಕ್ಷ ಕೆ.ವಿ.ಚಂದ್ರಶೇಖರ್ (Audio Credit: ETV Bharat)

ಥಿಯೇಟರ್, ಸ್ಕ್ರೀನ್​ ಹೊಂದಿಸುವುದು ಸವಾಲೇ?: ದರ್ಶನ್ ಸಿನಿಮಾ ಈಗಾಗಲೇ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡು, ಪ್ರದರ್ಶನ ಮುಂದುವರಿಸಿದೆ. ಕೆಲವೇ ದಿನಗಳಲ್ಲಿ 45 ಹಾಗೂ ಮಾರ್ಕ್ ಚಿತ್ರಗಳು ಬಿಡುಗಡೆಯಾಗುತ್ತಿವೆ. ಥಿಯೇಟರ್ ಸೆಟಪ್ ಮಾಡೋದು ಒಂದು ಸವಾಲೇ ಸರಿ. ಈ ಬಗ್ಗೆ ಪ್ರತಿಕ್ರಿಯಿಸಿದ ನರಸಿಂಹಲು, ''ಚಿತ್ರಮಂದಿರಗಳನ್ನು ಅಡ್ಜೆಸ್ಟ್ ಮಾಡಬಹುದು. ಆದರೆ, ವರ್ಷ ಪೂರ್ತಿ ಕಷ್ಟಪಟ್ಟು ಸಿನಿಮಾ ಮಾಡಿ, ಸರಿಯಾದ ಸಮಯಕ್ಕೆ ಬಿಡುಗಡೆ ಮಾಡದಿದ್ದಾಗ ನಷ್ಟ ಆಗೋದು ನಿರ್ಮಾಪಕರಿಗೆ. ಕೆಲವರ ಸಿನಿಮಾ ಲೆಕ್ಕಾಚಾರ ಬೇರೆ ಬೇರೆ ತರ ಇದೆ. ಕಂಟೆಂಟ್ ಚೆನ್ನಾಗಿದ್ದಾಗ, ನೀವು ಯಾವಾಗ ಬೇಕಾದರೂ ಸಿನಿಮಾ ರಿಲೀಸ್ ಮಾಡಿ ಯಶಸ್ಸು ಕಾಣಬಹುದು. ಅದಕ್ಕೆ ಸೂಕ್ತ ಸಾಕ್ಷಿ ಕಾಂತಾರ ಚಾಪ್ಟರ್ 1. ಇದು ಯಾವುದೇ ಹಬ್ಬ ಹಾಗೂ ರಜಾ ದಿನ ನೋಡಿ ರಿಲೀಸ್ ಆಗಲಿಲ್ಲ. ಆದರೆ ಸಿನಿಮಾ ಸೂಪರ್ ಹಿಟ್ ಆಗಲಿಲ್ವಾ?'' ಎಂದು ತಿಳಿಸಿದರು.

Real star Uppi's '45' movie look
ರಿಯಲ್​ ಸ್ಟಾರ್ ಉಪ್ಪಿ '45' ಸಿನಿಮಾ ಲುಕ್ (Photo Credit: Film Team)

ಫಿಲ್ಮ್ ಚೇಂಬರ್ ಅಧ್ಯಕ್ಷರು ಇಂತಹ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲವೇ? ಎನ್ನುವ ಪ್ರಶ್ನೆಯೂ ಬಹುತೇಕರಲ್ಲಿ ಬರುತ್ತದೆ. ಈ ಪ್ರಶ್ನೆಗೆ ಪ್ರತಿಕ್ರಿಯಿಸಿ, ''ನಾವು ಈ ಹಿಂದೆಯೇ ಕೆಲ ನಿರ್ಮಾಪಕ ಹಾಗೂ ಸ್ಟಾರ್ಸ್ ಬಳಿ ಮಾತನಾಡಿದ್ದೆವು. ಯಾವುದೇ ಪ್ರಯೋಜನ ಆಗಲಿಲ್ಲ. ಏಕಂದರೆ, ನಾವು ರಜೆ ಹಾಗೂ ಫೆಸ್ಟಿವಲ್ ಇದೆ ಎಂಬ ಕಾರಣಕ್ಕೆ ಸಿನಿಮಾ ಬಿಡುಗಡೆ ಮಾಡುತ್ತೇವೆ ಎಂದು ಅವರು ತಿಳಿಸುತ್ತಾರೆ. ಈಗ ಡಿಸೆಂಬರ್​ನಲ್ಲೂ ಫೆಸ್ಟಿವಲ್ ಹಾಗೂ ಇಯರ್ ಎಂಡ್ ಅಂತಾ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ. ಫಿಲ್ಮ್ ಚೇಂಬರ್​ನಿಂದ ಈ ವಿಚಾರವಾಗಿ ಸಾಕಷ್ಟು ಬಾರಿ ಚರ್ಚೆಗಳು ನಡೆದಿವೆ. ಏಕೆಂದರೆ, ಕೆಲ ನಿರ್ಮಾಪಕರು ಹಾಗೂ ನಿರ್ದೇಶಕರು ಇದೇ ದಿನಾಂಕಕ್ಕೆ ಸಿನಿಮಾ ಬಿಡುಗಡೆ ಮಾಡಬೇಕು ಅಂತಾ ಮಾಡ್ತಾರೆ. ಕೆಲವೊಮ್ಮೆ ಬೇರೆ ಬೇರೆ ಕಮಿಟ್​​ಮೆಂಟ್ಸ್​ ಕಾರಣದಿಂದಾಗಿ ಯಾರೂ ನಮ್ಮ ಮಾತನ್ನು ಕೇಳೋದಿಲ್ಲ'' ಎಂದು ಚಿತ್ರರಂಗದಲ್ಲಿರುವ ಸಮಸ್ಯೆಗಳನ್ನು ಬಹಿರಂಗಪಡಿಸಿದರು.

Sudeep and Mark film Team
ಸುದೀಪ್​ ಮತ್ತು ಮಾರ್ಕ್​​ ಚಿತ್ರತಂಡ (Photo Credit: ETV Bharat)

45 ಹಾಗೂ ಮಾರ್ಕ್ - ಯಾವುದಕ್ಕೆ ಪ್ರಾಶಸ್ತ್ಯ? ನರಸಿಂಹಲು ಅವರು ಕನ್ನಡ ಫಿಲ್ಮ್​​​ ಚೇಂಬರ್​ ಅಧ್ಯಕ್ಷ ಮಾತ್ರವಲ್ಲ, ವೈಷ್ಣವಿ, ವೈಭವಿ ಚಿತ್ರಮಂದಿರದ ಮಾಲೀಕ. ಒಂದೇ ದಿನ ಬಿಡುಗಡೆಯಾಗುತ್ತಿರುವ ಸಿನಿಮಾಗಳಲ್ಲಿ ಥಿಯೇಟರ್ ಮಾಲೀಕರು ಯಾವ ಚಿತ್ರಕ್ಕೆ ಮಹತ್ವ ಕೊಡುತ್ತಾರೆ ಅನ್ನೋದು ಪ್ರೇಕ್ಷಕರ ಪ್ರಶ್ನೆ. ಏಕಂದರೆ, ಈಗ ಚಿತ್ರಮಂದಿರದ ಮಾಲೀಕರಿಗೂ ಇದೊಂದು ಸವಾಲೇ ಎನ್ನಬಹುದು. ಈ ಬಗ್ಗೆ ಪ್ರತಿಕ್ರಿಯಿಸಿ, ''ನಾವು ಎರಡೂ ಸಿನಿಮಾಗಳನ್ನು ಹಾಕುತ್ತೇವೆ. ಎರಡು ಚಿತ್ರಮಂದಿರಗಳಲ್ಲಿ ಶೋಗಳನ್ನು ಹಂಚುತ್ತೇವೆ. ಆದರೆ ಇದರಿಂದ ಕೊನೆಗೆ ನಷ್ಟ ಆಗೋದು ನಿರ್ಮಾಪಕರಿಗೆ'' ಎಂದು ತಿಳಿಸಿದರು.

Shivanna and Ugandan dancers in 45 promotion song
45 ಪ್ರಮೋಶನ್​ ಸಾಂಗ್​ನಲ್ಲಿ ಶಿವಣ್ಣ ಮತ್ತು ಉಗಾಂಡ ಡ್ಯಾನ್ಸರ್ಸ್ (Photo Credit: Film Team)

ನಿರ್ಮಾಪಕ ಮತ್ತು ವಿತರಕ ಸುಪ್ರೀತ್

ಸಿನಿಮಾ ಯಶಸ್ಸು ಬಂಡವಾಳ ಹೂಡಿರುವ ನಿರ್ಮಾಪಕನಿಗೆ ಎಷ್ಟು ಮುಖ್ಯವೋ ವಿತರಕರ ಮೇಲೂ ಪ್ರಭಾವ ಬೀರುತ್ತದೆ. ಈ ಬಗ್ಗೆ ನಿರ್ಮಾಪಕ ಹಾಗೂ ವಿತರಕರಾಗಿರುವ ಸುಪ್ರೀತ್ ಈಟಿವಿ ಭಾರತದ ಜೊತೆ ಮಾತನಾಡಿ, ''ನಾವು ದರ್ಶನ್ ಅಭಿನಯದ ದಿ ಡೆವಿಲ್ ಚಿತ್ರವನ್ನು ರಾಜ್ಯಾದ್ಯಂತ ವಿತರಿಸಿದ್ದೇವೆ. 45 ಸಿನಿಮಾವನ್ನು ಎಂಟೈರ್​ ಕರ್ನಾಟಕಕ್ಕೆ ಡಿಸ್ಟ್ರಿಬ್ಯೂಟ್​ ಮಾಡುತ್ತಿದ್ದೇವೆ. ಆದರೆ, ನಮಗೆ ಚಿತ್ರಮಂದಿರಗಳ ಸಮಸ್ಯೆ ಆಗುತ್ತದೆ. ಡೆವಿಲ್ ಸಿನಿಮಾವನ್ನು 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳಿಸಿದ್ದೇವೆ. ಸಖತ್ ರೆಸ್ಪಾನ್ಸ್ ಇದೆ. ಈ ಚಿತ್ರ ಚೆನ್ನಾಗಿ ಹೋಗ್ತಾ ಇದೆ. ಆದ್ರೆ 25ಕ್ಕೆ 45 ಸಿನಿಮಾ ಬಿಡುಗಡೆಯಾಗುತ್ತಿದೆ. ಆ ಚಿತ್ರಕ್ಕೂ ದೊಡ್ಡ ಮಟ್ಟದ ಕ್ರೇಜ್ ಇರುವುದರಿಂದ ಅದನ್ನೂ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಬೇಕು. ಆಗ ನಮಗೆ ಕಷ್ಟ ಆಗುತ್ತದೆ. ಜೊತೆಗೆ, ಮಾರ್ಕ್ ಸಿನಿಮಾವೂ ಅದೇ ದಿನ ತೆರೆಕಾಣುತ್ತಿರುವುದರಿಂದ, ಥಿಯೇಟರ್ ಸಮಸ್ಯೆ ಆಗುತ್ತದೆ'' ಎಂಬುದನ್ನು ಒಪ್ಪಿಕೊಂಡರು.

Raj B Shetty and Ugandan Dancers in '45' Promotional Song
'45' ಪ್ರಮೋಶನ್​ ಸಾಂಗ್​ನಲ್ಲಿ ರಾಜ್​ ಬಿ ಶೆಟ್ಟಿ ಮತ್ತು ಉಗಾಂಡ ಡ್ಯಾನ್ಸರ್ಸ್ (Photo Credit: Film Team)

'ಅಂತಿಮವಾಗಿ ನಷ್ಟ ಆಗೋದು ನಿರ್ಮಾಪಕರಿಗೆ': ಒಂದೇ ದಿನ 2 ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆ ಆದಾಗ ಯಾರಿಗೆ ಲಾಭ ಯಾರಿಗೆ ನಷ್ಟ ಅನ್ನೋ ವಿಷಯಕ್ಕೆ ಬಂದಾಗ, ''ಅಂತಿಮವಾಗಿ ನಷ್ಟ ಆಗೋದು ನಿರ್ಮಾಪಕರಿಗೆ. ಕೋಟಿ ಕೋಟಿ ಹಣ ಸುರಿದು ಸಿನಿಮಾ ಮಾಡಿರುತ್ತಾರೆ. ಆ ದುಡ್ಡು ವಾಪಸ್ ಬರೋ ಬಗ್ಗೆ ಯೋಚನೆ ಮಾಡಿದಾಗ, ಒಂದು ಕ್ರಿಸ್ಮಸ್​​ ಹಬ್ಬ, ಮತ್ತೊಂದು ಕಡೆ ಇಯರ್ ಎಂಡ್ ಇದೆ. ಈ ಟೈಮಲ್ಲಿ ಸ್ಟಾರ್ ಸಿನಿಮಾಗಳು ಸಹಜವಾಗಿ ಕಲೆಕ್ಷನ್ ಮಾಡುತ್ತವೆ. ಸಿನಿಮಾ ಚೆನ್ನಾಗಿದ್ರೆ ಸಾಕು ಆ ಚಿತ್ರವನ್ನು ಜನರು ಸೂಪರ್ ಹಿಟ್ ಮಾಡಿಸುತ್ತಾರೆ. ಆ ಕಾರಣಕ್ಕೆ ನಿರ್ಮಾಪಕರು ಇಂತಹ ಡೇಟ್​ಗಳಲ್ಲಿ ರಿಲೀಸ್ ಮಾಡ್ತಾರೆ. ಆದ್ರೆ 2-3 ಚಿತ್ರಗಳ ನಡುವೆ ಪೈಪೋಟಿ ಇದ್ದಾಗ ಪ್ರೇಕ್ಷಕರು ಡಿವೈಡ್​ ಆಗೋದೊಂತೂ ಪಕ್ಕಾ. ಒಂದು ವೇಳೆ ಸಿನಿಮಾ ಚೆನ್ನಾಗಿಲ್ಲ ಅನ್ನೋ ರಿಪೋರ್ಟ್ ಬಂತು ಅಂದ್ರೆ ಮುಗಿದೇ ಹೋಯ್ತು. ಅದಕ್ಕೆ ಬಿಗ್ ಸ್ಟಾರ್ ಸಿನಿಮಾಗಳು ಒಂದು ತಿಂಗಳ ಅಂತರದಲ್ಲಿ ಬಿಡುಗಡೆಯಾದ್ರೆ, ನಿರ್ಮಾಪಕ ಸೇಫ್. ಸಿನಿಮಾ ಚೆನ್ನಾಗಿದೆ ಅಂದಾಗ ಆ ಸಿನಿಮಾ ಒಂದು ವಾರ ಅಥವಾ 25 ದಿನ‌ಗಳವರೆಗೆ ಓಡುತ್ತದೆ. ಆಗ ಥಿಯೇಟರ್ ಸಮಸ್ಯೆಯೂ ಆಗೋದಿಲ್ಲ'' ಎಂದು ತಿಳಿಸಿದರು.

'ಪ್ರೇಕ್ಷಕರೇ ಈಗ ವಿಮರ್ಶಕರು': ವಿತರಕರಾಗಿ ಸಿನಿಮಾ ಹಿಟ್ ಅಥವಾ ಫ್ಲಾಪ್ ಅನ್ನೋದು ಹೇಗೆ ಗೊತ್ತಾಗುತ್ತದೆ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ''ಕೆಲ ವರ್ಷಗಳ ಹಿಂದೆ ಸಿನಿಮಾ ನೋಡುವ ಪ್ರೇಕ್ಷಕ ಪತ್ರಿಕೆ ಹಾಗೂ ವಾಹಿನಿಯ ರಿಪೋರ್ಟ್ ನೋಡಿಕೊಂಡು ಚಿತ್ರಮಂದಿರಗಳಿಗೆ ಬರುತ್ತಿದ್ದರು. ಈಗ, ಒಂದು ಸಿನಿಮಾ ಹಿಟ್ ಅಥವಾ ಫ್ಲಾಪ್ ಅನ್ನೋದನ್ನು ಫಸ್ಟ್ ಹಾಫ್ ಹಾಗೂ ಸೆಕೆಂಡ್ ಹಾಫ್ ನೋಡಿ ಡಿಸೈಡ್ ಮಾಡ್ತಾರೆ. ರೀಲ್ಸ್ ಹಾಗೂ ಸೋಷಿಯಲ್ ಮೀಡಿಯಾ ಜಮಾನಾ ಶುರುವಾದಾಗಿನಿಂದ, ಸಿನಿಮಾ ನೋಡಿ ಬಂದ ವೀಕ್ಷಕರೇ ವಿಮರ್ಷಕ ಆಗಿಬಿಡ್ತಾರೆ. 2 ವರ್ಷದ ಚಿತ್ರತಂಡದ ಶ್ರಮ, ನೂರಾರು ತಂತ್ರಜ್ಞರು ಜೊತೆಗೆ ಕೋಟಿ ಕೋಟಿ ಹಣ ಹಾಕಿ ಒಬ್ಬ ನಿರ್ಮಾಪಕ ಸಿನಿಮಾ ಮಾಡಿರುತ್ತಾರೆ. ಆದರೆ ಯಾರೋ ಓರ್ವರು ಸೋಷಿಯಲ್ ಮೀಡಿಯಾದಲ್ಲಿ ಈ ಸಿನಿಮಾ ಚೆನ್ನಾಗಿಲ್ಲ ಅಂತಾ ಹಾಕಿಬಿಡುತ್ತಾರೆ. ಈಗ ಸಿನಿಮಾ ಚೆನ್ನಾಗಿದೆಯಾ ಅಥವಾ ಚೆನ್ನಾಗಿಲ್ಲವೂ ಅನ್ನೋದನ್ನು ಡಿಸೈಡ್ ಮಾಡೋರು ಅವರೇ. 150 ರಿಂದ 1,000 ರೂಪಾಯಿ ಕೊಟ್ಟು ಸಿನಿಮಾ ನೋಡಿ ಬರುವವರು ಆ ಚಿತ್ರದ ಭವಿಷ್ಯ ಹೇಳ್ತಾರೆ''.

ಒಟ್ಟಾರೆ, ''ಬಿಗ್ ಸ್ಟಾರ್ ಸಿನಿಮಾಗಳು ಒಂದೇ ದಿನ ಬಿಡುಗಡೆ ಆದಾಗ ಥಿಯೇಟರ್ ಸಮಸ್ಯೆ ಆಗೋದು ಈ ಮೊದಲಿನಿಂದಲೂ ಇದೆ. ಆದ್ರೆ, ಸಿನಿಮಾದ ಕಥೆ ಚೆನ್ನಾಗಿದ್ರೆ ಪ್ರೇಕ್ಷಕರು ಅದನ್ನು ಗೆಲ್ಲಿಸುತ್ತಾರೆ'' ಅನ್ನೋದು ನಿರ್ಮಾಪಕ ಹಾಗೂ ವಿತರಕ ಸುಪ್ರೀತ್ ಅವರ ಅಭಿಪ್ರಾಯವಾಗಿದೆ.

ಸಿನಿಮಾ ಪ್ರದರ್ಶಕರ ವಲಯದ ಅಧ್ಯಕ್ಷ ಕೆ.ವಿ.ಚಂದ್ರಶೇಖರ್

ಈ ಹಿಂದೆ ಈಟಿವಿ ಭಾರತದೊಂದಿಗೆ ಎಕ್ಸ್​​ಕ್ಸ್ಯೂಸಿವ್​ ಆಗಿ ಮಾತನಾಡಿದ್ದ ಕೆ.ವಿ.ಚಂದ್ರಶೇಖರ್, ಕಾಂತಾರ ಯಶಸ್ಸಿನ ಬಳಿಕ ಐವರು ಸೂಪರ್​ ಸ್ಟಾರ್​ಗಳ 3 ಚಲನಚಿತ್ರಗಳು ಒಂದೇ ತಿಂಗಳ ಕೆಲ ದಿನಗಳ ಅಂತರದಲ್ಲಿ ಬಿಡುಗಡೆ ಆಗೋದು ಸರಿ ಅಲ್ಲ. ಸ್ಟಾರ್ಸ್ ಅಥವಾ ನಿರ್ಮಾಪಕರು ಚರ್ಚೆ ಮಾಡಿ, ಒಂದು ತಿಂಗಳಿಗೆ ಒಬ್ಬ ಸ್ಟಾರ್​ನ ಸಿನಿಮಾ ಬರುವಂತೆ ಮಾಡಿದರೆ ಉತ್ತಮ. ಸಿನಿಮಾಗಳು ಆಗ ಉತ್ತಮ ಪ್ರದರ್ಶನ ಕಾಣುತ್ತವೆ. ಯಾವುದೇ ಸ್ಟಾರ್​ಗಳ ನಡುವೆ ಕಾಂಪಿಟೇಷನ್ ಇರೋದಿಲ್ಲ‌. ಆದರೆ, ಒಂದೇ ತಿಂಗಳಲ್ಲಿ ಐವರು ನಟರುಗಳ ಸಿನಿಮಾಗಳು ಬಂದಾಗ ಸ್ಪರ್ಧೆ ದೊಡ್ಡ ಮಟ್ಟದಲ್ಲೇ ಇರುತ್ತದೆ. ಅಷ್ಟೇ ಅಲ್ಲದೇ ಇದರಿಂದ ಚಿತ್ರಮಂದಿಗಳಿಗೂ ಸಮಸ್ಯೆ. ಮೊದಲು 650 ಚಿತ್ರಮಂದಿಗಳಿದ್ದವು. ಈಗ 400 ಇವೆ. 1 ಚಿತ್ರ 4 ವಾರ ಓಡುತ್ತದೆಯಂದ್ರೆ, 3 ಸಿನಿಮಾ ಬಂದ್ರೂ 4 ವಾರ ಓಡುತ್ತದೆ. ಹೀಗಿದ್ದಾಗ ಮಾತನಾಡಿಕೊಂಡು ಅಂತರವನ್ನಿಟ್ಟುಕೊಂಡು ಸಿನಿಮಾ ರಿಲೀಸ್ ಮಾಡಿದ್ರೆ ಚಿತ್ರರಂಗದ ಬೆಳವಣಿಗೆಗೆ ಒಳ್ಳೆಯದು'' ಎಂದು ಸಲಹೆ ನೀಡಿದ್ದರು.

'ಬರುವವರು ಬರಲಿ, ಅವರವರ ಅನುಕೂಲ' - ಸುದೀಪ್​​:

ಈ ಹಿಂದೆ ಕಿಚ್ಚ ಸುದೀಪ್ ತಮ್ಮ ಸಿನಿಮಾ ಬಗ್ಗೆ ಮಾತನಾಡುತ್ತಾ,​ ನನ್ನ ವೃತ್ತಿಜೀವನದಲ್ಲಿ ಆದಷ್ಟು ಬೇಗ ಪೂರ್ಣಗೊಳಿಸಿದ ಸಿನಿಮಾ ಅಂದ್ರೆ ಅದು 'ಕಾಶಿ ಫ್ರಮ್ ವಿಲೇಜ್'. ಅದಾದ ಬಳಿಕ ಈ ಚಿತ್ರವನ್ನು (ಮಾರ್ಕ್​​) ಶೀಘ್ರವೇ ಪೂರ್ಣಗೊಳಿಸಿ, ರಿಲೀಸ್​ ಮಾಡಲಿದ್ದೇವೆ. ಅನಾವಶ್ಯಕವಾಗಿ ನಾನು ಯಾರಿಗೂ ಸವಾಲು ಹಾಕಲ್ಲ. ಈಗಾಗಲೇ ನಾವು ಪ್ಲ್ಯಾನ್​​​ ಮಾಡಿದ್ದೇವೆ. ಮತ್ತೊಂದೆಡೆ, ನನ್ನ ಹುಡುಗ ಅರ್ಜುನ್‌ ಜನ್ಯ ಜೊತೆಗೆ ಲೆಜೆಂಡರಿ ಕಲಾವಿದರು (ಶಿವರಾಜ್​ಕುಮಾರ್​, ಉಪೇಂದ್ರ, ರಾಜ್​​ ಬಿ ಶೆಟ್ಟಿ) ಇದ್ದಾರೆ. ಡಿಸೆಂಬರ್​ಗೆ ಆಗಲಿಲ್ಲ ಅಂತಾದ್ರೆ ಹೊಸ ವರ್ಷ, ಸಂಕ್ರಾಂತಿ ಹಬ್ಬಕ್ಕೆ ಬಂದೇ ಬರುತ್ತೇವೆ. ಕನ್ನಡ ಚಿತ್ರರಂಗದಲ್ಲಿ ಚಿತ್ರಮಂದಿರಗಳು ಸಾಕಷ್ಟಿವೆ. ಬರುವವರು (ಬೇರೆ ಸಿನಿಮಾಗಳು) ಬರಲಿ, ಅವರವರ ಅನುಕೂಲ ಎಂದು ತಿಳಿಸಿದ್ರು. ಆದಷ್ಟು ಬೇಗ ಸಿನಿಮಾ ಪೂರ್ಣಗೊಳಿಸಿದ್ರೆ ಚಿತ್ರತಂಡದ ಮೇಲಿನ ಆರ್ಥಿಕ ಹೊರೆ ಕಡಿಮೆಯಾಗುತ್ತದೆ. ಹಾಗಾಗಿ, ಚಿತ್ರೀಕರಣವನ್ನು ಬೇಗನೇ ಪೂರ್ಣಗೊಳಿಸುತ್ತಿದ್ದೇವೆ ಎಂದು ತಿಳಿಸಿದ್ದರು.

ದಿ ಡೆವಿಲ್​ ಚಿತ್ರದ ಕುರಿತು: ಶ್ರೀ ಜೈ ಮಾತಾ ಕಂಬೈನ್ಸ್ ಲಾಂಛನದಲ್ಲಿ ಪ್ರಕಾಶ್ ವೀರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿ ನಿರ್ಮಿಸಿದ್ದಾರೆ. ದರ್ಶನ್​​ ತೂಗುದೀಪ ಜೊತೆಗೆ ರಚನಾ ರೈ, ಶರ್ಮಿಳಾ ಮಾಂಡ್ರೆ, ತುಳಸಿ,‌ ಅಚ್ಯುತ್​ ಕುಮಾರ್, ಮಹೇಶ್ ಮಂಜ್ರೇಕರ್, ಶ್ರೀನಿವಾಸ ಪ್ರಭು, ಶೋಭ್ ರಾಜ್, ಹುಲಿ ಕಾರ್ತಿಕ್, ಸೋನಿಯಾ, ಯುವರಾಜ್ ಸೇರಿ ಹಲವರು ತೆರೆಹಂಚಿಕೊಂಡಿದ್ದಾರೆ. ಸುಧಾಕರ್.ಎಸ್.ರಾಜ್ ಕ್ಯಾಮರಾ ಕೈಚಳಕ, ಬಿ.ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಹರೀಶ್ ಕೊಮ್ಮೆ ಸಂಕಲನ, ಮೋಹನ್ ಬಿ.ಕೆರೆ ಕಲಾ ನಿರ್ದೇಶನ, ಕಾಂತರಾಜ್ ಸಂಭಾಷಣೆ , ರಾಮ್ ಲಕ್ಷ್ಮಣ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಡಿಸೆಂಬರ್​ 11ರಂದು ತೆರೆಕಂಡ ಈ ಚಿತ್ರ 7 ದಿನಗಳಲ್ಲಿ 24.50 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ.

ಇದನ್ನೂ ಓದಿ: 'ಡೆವಿಲ್​​​ನಲ್ಲಿ ದರ್ಶನ್ ಧರಿಸಿದ್ದು ಇಂಟರ್​ನ್ಯಾಷನಲ್ ಬ್ರ್ಯಾಂಡ್ಸ್': ಕಾಸ್ಟ್ಯೂಮ್ ಡಿಸೈನರ್ ಚೇತನ್ ರಾ ಸಂದರ್ಶನ

ಮಾರ್ಕ್ ಚಿತ್ರದ ಕುರಿತು​: ವಿಜಯ್ ಕಾರ್ತಿಕೇಯನ್ ನಿರ್ದೇಶನದ ಮಾರ್ಕ್​​ ಚಿತ್ರದ ನಾಯಕನಾಗಿ ಕಿಚ್ಚ ಸುದೀಪ್​​ ಕಾಣಿಸಿಕೊಳ್ಳುತ್ತಿದ್ದಾರೆ. ಅಜಯ್ ಮಾರ್ಕಂಡೆ ಎನ್ನುವ ಪೊಲೀಸ್ ಆಫೀಸರ್ ಪಾತ್ರವನ್ನು ಕಿಚ್ಚ ನಿರ್ವಹಿಸಿದ್ದಾರೆ. ಸತ್ಯ ಜ್ಯೋತಿ ಫಿಲ್ಮ್ ಹಾಗೂ ಕಿಚ್ಚ ಕ್ರಿಯೇಷನ್ ಬ್ಯಾನರ್ ಅಡಿ ನಿರ್ಮಾಣಗೊಂಡ ಈ ಚಿತ್ರದ ತಾರಾಬಳಗದಲ್ಲಿ ದೀಪ್ಷಿಕಾ, ನವೀನ್ ಚಂದ್ರ, ರೋಶಿನಿ ಪ್ರಕಾಶ್, ಗೋಪಾಲ್‌ಕೃಷ್ಣ ದೇಶಪಾಂಡೆ, ಮಹಾಂತೇಶ್ ಹಿರೇಮಠ್, ಡ್ರ್ಯಾಗನ್ ಮಂಜು, ಆರ್ಚನಾ ಕೊಟ್ಟಿಗೆ, ಯೋಗಿ ಬಾಬು, ಶೈನ್ ಟಾಮ್ ಚಾಕೋ ಸೇರಿ ಹಲವರಿದ್ದಾರೆ. ಇದೇ ಡಿಸೆಂಬರ್​ 25, ಮುಂದಿನ ಗುರುವಾರ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಚಿತ್ರ ಅದ್ಧೂರಿಯಾಗಿ ತೆರೆಕಾಣಲಿದೆ.

ಇದನ್ನೂ ಓದಿ: 'ಸುದೀಪ್ ಜೊತೆ ತೆರೆ ಹಂಚಿಕೊಂಡಿರೋದು ಅದೃಷ್ಟ': ಮಾರ್ಕ್​​ ನಟಿ ರೋಶಿನಿ ಪ್ರಕಾಶ್ ಸಂದರ್ಶನ

45 ಚಿತ್ರದ ಕುರಿತು: ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಆ್ಯಕ್ಷನ್​ ಕಟ್​ ಹೇಳಿರುವ ಚೊಚ್ಚಲ ಚಿತ್ರ '45' ನಲ್ಲಿ ಸ್ಯಾಂಡಲ್​ವುಡ್​​ ಸೂಪರ್​​ ಸ್ಟಾರ್ಸ್ ಶಿವರಾಜ್​​ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ರಮೇಶ್ ರೆಡ್ಡಿ ಅವರು ಸೂರಜ್ ಪ್ರೊಡಕ್ಷನ್ ಲಾಂಛನದಡಿ ಬಿಗ್ ಬಜೆಟ್​ನಲ್ಲಿ ನಿರ್ಮಿಸಿರುವ ಈ ಸಿನಿಮಾ ಇದೇ ಡಿಸೆಂಬರ್​ 25, ಮುಂದಿನ ಗುರುವಾರ ಅದ್ಧೂರಿಯಾಗಿ ರಾಜ್ಯಾದ್ಯಂತ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ತೆರೆಕಾಣಲಿದೆ.

ಇದನ್ನೂ ಓದಿ: 'ಡಬಲ್​​ ಪೇಮೆಂಟ್ ಕೊಟ್ರೂ ಸರಿಯಾಗಿ ಕೆಲಸ ಮಾಡಲ್ಲ': 'ಆಜಾದ್ ಭಾರತ್' ನಿರ್ದೇಶಕಿ ರೂಪಾ ಐಯ್ಯರ್ ಎದುರಿಸಿದ ಸವಾಲುಗಳಿವು!