ETV Bharat / entertainment

ದುನಿಯಾ ವಿಜಯ್ ನಟನೆಯ 'ಭೀಮಾ ತೀರದಲ್ಲಿ' ಸಿನಿಮಾ ಡಿಜಿಟಲ್ ತಂತ್ರಜ್ಞಾನದೊಂದಿಗೆ ಮರು ಬಿಡುಗಡೆ

ದುನಿಯಾ ವಿಜಯ್ ಅಭಿನಯದ 'ಭೀಮಾ ತೀರದಲ್ಲಿ' ಸಿನಿಮಾ ಡಿಜಿಟಲ್ ತಂತ್ರಜ್ಞಾನದೊಂದಿಗೆ ಪುನಃ ತೆರೆಯ ಮೇಲೆ ಬರುತ್ತಿದ್ದು, ಚಿತ್ರದ ಬಗ್ಗೆ ನಿರ್ಮಾಪಕ ಅಣಜಿ ನಾಗರಾಜ್ ಹಾಗೂ ನಿರ್ದೇಶಕ ಓಂ ಪ್ರಕಾಶ್ ರಾವ್ ಇಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Bheema Teeradalli Re release
ಚಿತ್ರದ ಪೋಸ್ಟರ್​ (ETV Bharat)
author img

By ETV Bharat Entertainment Team

Published : March 3, 2026 at 7:09 PM IST

2 Min Read
Choose ETV Bharat

14 ವರ್ಷಗಳ ಹಿಂದೆ ಬಿಡುಗಡೆ ಆಗಿ ಯಶಸ್ಸು ಕಂಡಿದ್ದ 'ಭೀಮಾ ತೀರದಲ್ಲಿ' ಸಿನಿಮಾ ಡಿಜಿಟಲ್ ತಂತ್ರಜ್ಞಾನದೊಂದಿಗೆ ಈಗ ಮತ್ತೆ ಬಿಡುಗಡೆ ಆಗುತ್ತಿದೆ. ವೀರ ಫಿಲಂಸ್ ಮೂಲಕ ಅಣಜಿ ನಾಗರಾಜ್ ನಿರ್ಮಾಣದ, ದುನಿಯಾ ವಿಜಯ್ ಅಭಿನಯದ, ನಿರ್ದೇಶಕ ಓಂ ಪ್ರಕಾಶ್ ರಾವ್ ನಿರ್ದೇಶನದ 'ಭೀಮಾ ತೀರದಲ್ಲಿ' ಸಿನಿಮಾ ಡಿಜಿಟಲ್ ರೂಪದಲ್ಲಿ ಇದೇ ಮಾರ್ಚ್ 6ರಂದು ತೆರೆಯ ಮೇಲೆ ಬರಲಿದೆ. ಡಿಜಿಟಲ್ ತಂತ್ರಜ್ಞಾನದೊಂದಿಗೆ ಪುನಃ ತೆರೆಗೆ ಬರುತ್ತಿರುವ ಚಿತ್ರದ ಕುರಿತು ನಿರ್ಮಾಪಕ ಅಣಜಿ ನಾಗರಾಜ್ ಹಾಗೂ ನಿರ್ದೇಶಕ ಓಂ ಪ್ರಕಾಶ್ ರಾವ್ ಇಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಮೊದಲಿಗೆ ಮಾತನಾಡಿದ ನಿರ್ದೇಶಕ ಓಂ ಪ್ರಕಾಶ್‌ರಾವ್, ಅಣಜಿ ನಾಗರಾಜ್ ಅವರ ಜೊತೆ ತುಂಬಾ ಸಿನಿಮಾ ಮಾಡಿದ್ದೇನೆ. ಅದರಲ್ಲಿ 'ಭೀಮಾ ತೀರದಲ್ಲಿ' ಚಿತ್ರ ಕೂಡ ಒಂದು. ಆಗ ತುಂಬಾ ಸದ್ದು ಮಾಡಿದಲ್ಲದೇ ಯಶಸ್ವಿ ಪ್ರದರ್ಶನ ಕಂಡಿತ್ತು. ಆ ಚಿತ್ರದ ಹಿಂದಿರುವ ಕಥೆಗಳು ತುಂಬಾ ಇವೆ. ನಡೆಯಲು ಸಾಧ್ಯವಾಗದ ನಟ ಲೋಕನಾಥ್ ಅವರು ಆಗ ಅಟ್ಟ ಹತ್ತಿ ಅಭಿನಯಿಸಿದ್ದರು. ಸಿನಿಮಾಗೆ ನಿರ್ಮಾಪಕ ನಾಗರಾಜ್ ತುಂಬಾ ಕಷ್ಟಪಟ್ಟಿದ್ದರು. ಚಿತ್ರ ಯಶಸ್ವಿಯೂ ಆಗಿತ್ತು. ಇದೀಗ ನೆಗೆಟಿವ್‌ನಲ್ಲಿದ್ದ ಚಿತ್ರವನ್ನು ಸ್ವಲ್ಪ ಟ್ರಿಮ್ ಮಾಡಿ ಡಿಜಿಟಲ್ ರೂಪಕ್ಕೆ ತಂದು ರಿಲೀಸ್ ಮಾಡಲಾಗುತ್ತಿದೆ. ಕನ್ನಡ ಅಲ್ಲದೆ ತೆಲುಗು, ತಮಿಳು ಸೇರಿ ಬೇರೆ ಭಾಷೆಗಳಿಗೂ ಡಬ್ ಮಾಡಿಸಿ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ನಾನೇ ಯೂಟ್ಯೂಬ್‌ನಲ್ಲಿ ಐದಾರು ಸಲ ಈ ಚಿತ್ರವನ್ನು ನೋಡಿದ್ದೇನೆ. ಆಗ ಡೈಲಾಗ್, ಮೇಕಿಂಗ್‌ನಲ್ಲಿ ತುಂಬಾ ಕೆಲಸ ಮಾಡಿದ್ದೆವು ಎಂದರು.

Bheema Teeradalli Re release
ನಿರ್ಮಾಪಕ ಅಣಜಿ ನಾಗರಾಜ್ ಹಾಗೂ ನಿರ್ದೇಶಕ ಓಂ ಪ್ರಕಾಶ್ ರಾವ್ (ETV Bharat)

ನಂತರ ನಿರ್ಮಾಪಕ ಅಣಜಿ ನಾಗರಾಜ್ ಮಾತನಾಡಿ, ಮಾರ್ಚ್ 6ಕ್ಕೆ 'ಭೀಮಾ ತೀರದಲ್ಲಿ' ರಿಲೀಸ್‌ ಆಗುತ್ತಿದೆ. ನಾನು ತುಂಬಾ ಇಷ್ಟಪಟ್ಟು ಮಾಡಿದ ಚಿತ್ರವಿದು. ಈಗ ಎಡಿಟ್ ಮಾಡಿ ಹೊಸ ರೂಪದಲ್ಲಿ ರಿಲೀಸ್ ಮಾಡುತ್ತಿದ್ದೇವೆ. ಡಿಜಿಟಲ್‌ಗೂ ರೀಲ್‌ಗೂ ತುಂಬಾ ವ್ಯತ್ಯಾಸವಿದೆ. ರೀಲ್ ಕ್ವಾಲಿಟಿ ಡಿಜಿಟಲ್‌ನಲ್ಲಿ ಮಾಡಲು ಸಾಧ್ಯವಿಲ್ಲ. ನೆಗೆಟಿವ್‌ನಲ್ಲಿ ನಮ್ಮ ಚಿತ್ರವೇ ಕೊನೆಯದಾಗಿತ್ತು. 14 ವರ್ಷಗಳಾದರೂ ನೋಡುವಾಗ ಈಗಷ್ಟೇ ಮಾಡಿದ ಚಿತ್ರ ಅನಿಸುತ್ತದೆ. ಆಗ ಐದಾರು ಕೋಟಿಯಲ್ಲಿ ಸಿನಿಮಾ ನಿರ್ಮಾಣವಾಗಿತ್ತು. ಈಗದು 50-60 ಕೋಟಿ ಬಜೆಟ್‌ನ ಸಿನಿಮಾವಿದು ಎಂದರು.

Bheema Teeradalli Re release
ಚಿತ್ರ ತಂಡದೊಂದಿದೆ ನಿರ್ಮಾಪಕ ಅಣಜಿ ನಾಗರಾಜ್ ಹಾಗೂ ನಿರ್ದೇಶಕ ಓಂ ಪ್ರಕಾಶ್ ರಾವ್ (ETV Bharat)

ನನ್ನ ಸ್ನೇಹಿತ ವೆಂಕಟೇಶ್ ಜೊತೆ ಇತರರು ಸೇರಿ ತೆಲುಗಿನಲ್ಲಿ ಕಡಪ ಅಂತಾ ಟೈಟಲ್ ಇಟ್ಟುಕೊಂಡು ಈ ಚಿತ್ರವನ್ನು 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡುತ್ತಿದ್ದಾರೆ. ಈ ವಾರ ಕನ್ನಡ ಮತ್ತು ತೆಲುಗಿನಲ್ಲಿ, 2 ವಾರ ಬಿಟ್ಟು ಬೇರೆ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ನಾಯಕ ವಿಜಯ್ ಕೂಡ ಈ ಸಿನಿಮಾಗೆ ನನ್ನ ಸಪೋರ್ಟ್ ಕೊಡ್ತಿ‌ನಿ ಅಂತಾ ಹೇಳಿದ್ದಾರೆ ಎಂದು ನಿರ್ಮಾಪಕ ಅಣಜಿ ನಾಗರಾಜ್ ಹೇಳಿದರು.

Bheema Teeradalli Re release
ಚಿತ್ರದ ಪೋಸ್ಟರ್​ (ETV Bharat)

ಇದನ್ನೂ ಓದಿ: ಯುವ ನಟನಿಗೆ ಕಿಚ್ಚ ಸಾಥ್: ನಾನು ಸುದೀಪ್ ಅಭಿಮಾನಿ ಎಂದ 'ಯಾರೇ ನೀನು ಚೆಲುವೆ' ನಾಯಕಿ