ತರುಣ್ ಸುಧೀರ್ ಖರೀದಿಸಿದ ಐಷಾರಾಮಿ ಮನೆಯ ಬೆಲೆ ಎಷ್ಟು? ಆಪ್ತರ ಮಾಹಿತಿ ಇಲ್ಲಿದೆ
ದರ್ಶನ್ ಮುಖ್ಯಭೂಮಿಕೆಯ ಕಾಟೇರ ಸಿನಿಮಾ ಖ್ಯಾತಿಯ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಾಲ್ ಮೊಂತೆರೋ 2024ರ ಆಗಸ್ಟ್ನಲ್ಲಿ ದಾಂಪತ್ಯ ಜೀವನ ಆರಂಭಿಸಿದರು. ಇದೀಗ ಐಷಾರಾಮಿ ನಿವಾಸ ಖರೀದಿಸಿ ಗಮನ ಸೆಳೆದಿದ್ದಾರೆ

By ETV Bharat Entertainment Team
Published : January 3, 2026 at 10:43 AM IST
ತರುಣ್ ಸುಧೀರ್. ನಿರ್ದೇಶನ, ನಟನೆ, ನಿರ್ಮಾಣ ಜೊತೆಗೆ ರಿಯಾಲಿಟಿ ಶೋಗಳಲ್ಲಿ ಬ್ಯುಸಿಯಾಗಿರುವ ಕನ್ನಡದ ಪ್ರತಿಭೆ. 2023ರ ಕೊನೆಗೆ ತೆರೆಕಂಡು ಸೂಪರ್ ಹಿಟ್ ಆದ ದರ್ಶನ್ ಮುಖ್ಯಭೂಮಿಕೆಯ 'ಕಾಟೇರ' ಸಿನಿಮಾವನ್ನು ನಿರ್ದೇಶಿಸಿ, ಕಳೆದ ವರ್ಷ 'ಏಳುಮಲೆ' ಅನ್ನೋ ಸೂಪರ್ ಹಿಟ್ ಸಿನಿಮಾವನ್ನು ನಿರ್ಮಾಣ ಮಾಡಿರುವ ತರುಣ್ ಸುಧೀರ್ ಸದ್ಯ ತಮ್ಮ ಹೊಸ ನಿವಾಸದ ಸಲುವಾಗಿ ಸುದ್ದಿಯಲ್ಲಿದ್ದಾರೆ.
2024ರ ಆಗಸ್ಟ್ನಲ್ಲಿ ಜನಪ್ರಿಯ ನಟಿ ಸೋನಾಲ್ ಮೊಂತೆರೋ ಅವರನ್ನು ಮದುವೆಯಾಗಿ ನವ ಪಯಣ ಶುರು ಮಾಡಿದ ತರುಣ್, 2026ರನ್ನು ಬಹಳ ವಿಶೇಷವಾಗಿ ಬರಮಾಡಿಕೊಂಡಿದ್ದಾರೆ. ಹೌದು, ಈ ಹೊಸ ವರ್ಷವನ್ನು ಚಂದನವನದ ಜನಪ್ರಿಯ ತಾರಾ ದಂಪತಿ ತಮ್ಮ ಹೊಸ ನಿವಾಸದಲ್ಲಿ ಆಚರಿಸಿದ್ದಾರೆ.
ಇತ್ತೀಚೆಗೆ ಬಹು ಕೋಟಿ ಮೌಲ್ಯದ ಅಪಾರ್ಟ್‌ಮೆಂಟನ್ನು ಖರೀದಿಸಿದ್ದಾರೆ. ಕಳೆದ ದಿನ ಗೃಹಪ್ರವೇಶದ ಸುಂದರ ವಿಡಿಯೋವವನ್ನು ತಮ್ಮ ಅಫೀಶಿಯಲ್ ಸೋಷಿಯಲ್ ಮೀಡಿಯಾ ಅಕೌಂಟ್ಗಳಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್ ಶೇರ್ ಮಾಡಿದ ದಂಪತಿ, ''ಕನಸು ತುಂಬಿದ ಮನಸ್ಸಿನೊಂದಿಗೆ ನಮ್ಮ ಹೊಸ ಮನೆಯಲ್ಲಿ ಈ ವರ್ಷವನ್ನು ಬರಮಾಡಿಕೊಳ್ಳುತ್ತಿದ್ದೇವೆ. ನಿಮ್ಮೆಲ್ಲರ ಹಾರೈಕೆ ನಮ್ಮ ಮೇಲಿರಲಿ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು!'' ಎಂದು ಬರೆದುಕೊಂಡಿದ್ದಾರೆ.

ಈ ಗೃಹಪ್ರವೇಶದಲ್ಲಿ ತರುಣ್ ಹಾಗೂ ಸೋನಾಲ್ ಕುಟುಂಬಸ್ಥರು, ಕನ್ನಡ ಚಿತ್ರರಂಗದ ಹಲವು ಗಣ್ಯರು ಭಾಗವಹಿಸಿದ್ದರು. ನಟ ಶರಣ್ ಹಾಗೂ ಶೃತಿ ಕೂಡಾ ಕುಟುಂಬ ಸಮೇತ ಆಗಮಿಸಿ ಶುಭ ಹಾರೈಸಿದ್ದಾರೆ. ಈ ಐಷಾರಾಮಿ ಅಪಾರ್ಟ್‌ಮೆಂಟ್ ಮೌಲ್ಯ ಎಷ್ಟು? ಅನ್ನೋ ಪ್ರಶ್ನೆ ಸೋಷಿಯಲ್ ಮೀಡಿಯಾದಲ್ಲಿ ಎದ್ದಿದೆ.
ತರುಣ್ ಸುಧೀರ್ ಆಪ್ತರು ಹೇಳಿದ್ದೇನು?
ನಿರ್ದೇಶಕ ತರುಣ್ ಸುಧೀರ್ ಆಪ್ತರೊಬ್ಬರು ಹೇಳುವಂತೆ, ಯಶವಂತಪುರ ಸಮೀಪದ ಪ್ರತಿಷ್ಠಿತ ಅಪಾರ್ಟ್‌ಮೆಂಟ್ ಇದಾಗಿದೆ. 4 ಬೆಡ್ ರೂಮ್ಸ್ ಒಳಗೊಂಡಿರುವ ಈ ಅಪಾರ್ಟ್‌ಮೆಂಟ್ ಬರೋಬ್ಬರಿ 6 ಕೋಟಿ ರೂಪಾಯಿ ಮೌಲ್ಯದ್ದು. ತರುಣ್ ಸುಧೀರ್, ಪತ್ನಿ ಸೋನಾಲ್ ಆಸೆಯಂತೆ ಅಡುಗೆ ಮನೆ, ಹಾಲ್, ಬೆಡ್ ರೂಮ್ ಸೇರಿದಂತೆ ವಿಶೇಷವಾಗಿ ಇಂಟೀರಿಯರ್ ಡಿಸೈನ್ ಮಾಡಿಸಿದ್ದಾರೆ. ಹಾಲ್ನಲ್ಲಿ ಸುಧೀರ್ ಅವರ ದೊಡ್ಡ ಬ್ಲ್ಯಾಕ್ ಅಂಡ್ ವೈಟ್ ಭಾವಚಿತ್ರವನ್ನು ಹಾಕಲಾಗಿದೆ. ಈ ಮನೆ ಬಹಳ ಐಷಾರಾಮಿಯಿಂದ ಕೂಡಿದೆ. ಈ ಹೊಸ ಅಪಾರ್ಟ್‌ಮೆಂಟ್ ಪೂಜೆ 2 ತಿಂಗಳ ಹಿಂದೆಯೇ ನಡೆದಿದ್ದು, ತರುಣ್ ಸುಧೀರ್ ಪತ್ನಿ ಹೊಸ ವರ್ಷದಂದು ವಿಡಿಯೋ ಹಂಚಿಕೊಂಡಿದ್ದಾರೆ. ಆದ್ರೆ, ಕೆಲಸ ಸೋಷಿಯಲ್ ಮೀಡಿಯಾದಲ್ಲಿ ಹೊಸ ವರ್ಷಕ್ಕೆ ಗೃಹ ಪ್ರವೇಶ ಮಾಡಲಾಗಿದೆ ಅಂತಾ ಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಲಡಾಕ್ನಲ್ಲಿ 'ಧುರಂಧರ್' ತೆರಿಗೆ ಮುಕ್ತ: ರಣ್ವೀರ್ ಸಿನಿಮಾದ ಕೆಲ ಪದಗಳು Mute
ಬಾಲ ನಟನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ತರುಣ್ ಸುಧೀರ್, ಕೆಲ ಸಿನಿಮಾಗಳಲ್ಲಿ ಸಹ ನಟನಾಗಿ ಅಭಿನಯಿಸಿದ್ದಾರೆ. ರಾಂಬೋ, ವಿಕ್ಟರಿ, ಅಧ್ಯಕ್ಷ, ಗಜಕೇಸರಿ, ರನ್ನ, ಟೈಗರ್, ರಾಂಬೋ 2 ಸಿನಿಮಾಗಳಲ್ಲಿ ರೈಟರ್ ಆಗಿ ಕೆಲಸ ಮಾಡಿದ್ದಾರೆ. ಆ ಬಳಿಕ ತರುಣ್ ಸುಧೀರ್, ಚೌಕ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ. ಇತ್ತೀಚೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ರಾಬರ್ಟ್, ಕಾಟೇರದಂತಹ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡುವ ಮೂಲಕ ಭರವಸೆಯ ಡೈರೆಕ್ಟರ್ ಎಂದು ಹೆಸರು ಸಂಪಾದಿಸಿದ್ದಾರೆ.

ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ನಲ್ಲಿ ಸೋನಾಲ್ ನಟಿಸಿದ್ದಾರೆ. ಆ ಸಮಯದಲ್ಲಿ ತರುಣ್ ಹಾಗೂ ಸೋನಾಲ್ ನಡುವೆ ಗೆಳೆತನವಾಗಿ, ನಂತರ ಈ ಸ್ನೇಹ ಪ್ರೀತಿಗೆ ತಿರುಗಿ 2023ರ ಕೊನೆಯಲ್ಲಿ ಹಿಂದು ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ವೈವಾಹಿಕ ಜೀವನ ಆರಂಭಿಸಿದ್ದಾರೆ.
ಇದನ್ನೂ ಓದಿ: ರಾಮ್ ಚರಣ್, ಶಿವಣ್ಣನ 'ಪೆದ್ದಿ' ಚಿತ್ರದ 2ನೇ ಹಾಡಿನಲ್ಲಿ 500 ಡ್ಯಾನ್ಸರ್ಸ್
ಕಾಟೇರ ಸಿನಿಮಾ ದೊಡ್ಡ ಮಟ್ಟದ ಸಕ್ಸಸ್ ಬೆನ್ನಲ್ಲೇ ತರುಣ್ ಸುಧೀರ್ ಖಾಸಗಿ ವಾಹಿನಿಯ ರಿಯಾಲಿಟಿ ಶೋನ ತೀರ್ಪುಗಾರರಾಗಿ ಕೆಲಸ ಆರಂಭಿಸಿದರು. ಅಲ್ಲಿಂದ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಿತು. ಈ ಹೊತ್ತಲ್ಲೇ ಏಳುಮಲೆ ಸಿನಿಮಾ ನಿರ್ಮಾಣ ಮಾಡಿ ಸಕ್ಸಸ್ಫುಲ್ ಪ್ರೊಡ್ಯೂಸರ್ ಆಗಿಯೂ ಗುರುತಿಸಿಕೊಂಡಿದ್ದಾರೆ. ಇವರ ಮುಂದಿನ ಸಿನಿಮಾಗಳ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.

