ಕೆಜಿಎಫ್ 2 ದಾಖಲೆ ಪುಡಿಗಟ್ಟಿದ ಧುರಂಧರ್: ಯಶ್ ಟಾಕ್ಸಿಕ್ಗೆ ಟಕ್ಕರ್ ಕೊಡಲು ಸಜ್ಜಾದ ಧುರಂಧರ್ 2
ರಣ್ವೀರ್ ಸಿಂಗ್ ನಟನೆಯ 'ಧುರಂಧರ್ 2' ಮತ್ತು ಯಶ್ ಮುಖ್ಯಭೂಮಿಕೆಯ 'ಟಾಕ್ಸಿಕ್' ಒಂದೇ ದಿನ ಬಾಕ್ಸ್ ಆಫೀಸ್‌ನಲ್ಲಿ ಮುಖಾಮುಖಿಯಾಗಲಿವೆ.

By ETV Bharat Entertainment Team
Published : January 5, 2026 at 3:49 PM IST
ಧುರಂಧರ್. 2025ರ ನಂಬರ್ ಒನ್, ಬ್ಲಾಕ್ಬಸ್ಟರ್ ಸಿನಿಮಾ. ಬಾಲಿವುಡ್ ಸೂಪರ್ ಸ್ಟಾರ್ ರಣ್ವೀರ್ ಸಿಂಗ್ ಮುಖ್ಯಭೂಮಿಕೆಯ 'ಧುರಂಧರ್' ಚಿತ್ರವು ತನ್ನ 5ನೇ ಭಾನುವಾರದಂದು ಮತ್ತೊಮ್ಮೆ ಬಾಕ್ಸ್ ಆಫೀಸ್‌ನಲ್ಲಿ ಸಂಚಲನ ಸೃಷ್ಟಿಸಿದೆ. ತೆರೆಕಂಡು ತಿಂಗಳಾದರೂ ಗಲ್ಲಾಪೆಟ್ಟಿಗೆಯಲ್ಲಿ ಎರಡಂಕಿ ಗಳಿಕೆಯೊಂದಿಗೆ ಸದ್ದು ಮಾಡುತ್ತಲೇ ಇದೆ.
ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಲಿಸ್ಟ್ನ 5ನೇ ಸ್ಥಾನದಲ್ಲಿ ಧುರಂಧರ್: ಕಳೆದ ಶುಕ್ರವಾರ, 'ಧುರಂಧರ್' ಚಿತ್ರದ ಗಳಿಕೆ ತನ್ನ ಹಿಂದಿನ ದಿನಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ (8.75 ಕೋಟಿ ರೂ.) ಎನ್ನುವಂತಿತ್ತು. ಆದರೆ ಭಾನುವಾರದ ಗಳಿಕೆ ಗಮನಾರ್ಹ ಏರಿಕೆ ಕಂಡುಬಂದಿದ್ದು, ಅನೇಕ ದಾಖಲೆಗಳನ್ನು ಪುಡಿಗಟ್ಟಿದೆ. 'ಧುರಂಧರ್' ಈಗ ಭಾರತೀಯ ಚಿತ್ರರಂಗದಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ 5ನೇ ಚಿತ್ರವಾಗಿದೆ. ಈ ಮೊದಲು ಐದನೇ ಸ್ಥಾನದಲ್ಲಿದ್ದ ಸ್ಯಾಂಡಲ್ವುಡ್ ಸೂಪರ್ ಸ್ಟಾರ್ ಯಶ್ ಅವರ 'ಕೆಜಿಎಫ್ 2' ಅನ್ನು ಹಿಂದಿಕ್ಕಿ ಪಟ್ಟಿಯಲ್ಲಿ ಐದನೇ ಸ್ಥಾನವನ್ನು ಪಡೆದುಕೊಂಡಿದೆ. ಆರ್‌ಆರ್‌ಆರ್, ಪುಷ್ಪ 2, ಬಾಹುಬಲಿ 2 ಮತ್ತು ದಂಗಲ್ ಚಿತ್ರಗಳ ನಂತರದ ಸ್ಥಾನವನ್ನು ಈ ಬಹುತಾರಾಗಣದ ಸಿನಿಮಾ ಪಡೆದುಕೊಂಡಿದೆ. ಇನ್ನೂ, ಧುರಂಧರ್ ತನ್ನ 31ನೇ ದಿನದಂದು ಭಾರತದಲ್ಲಿ ಎಷ್ಟು ಕಲೆಕ್ಷನ್ ಮಾಡಿದೆ ಎಂಬುದನ್ನು ನೋಡೋದಾದ್ರೆ.....!
31ನೇ ದಿನದ ವ್ಯವಹಾರ: ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, 2025ರ ಬ್ಲಾಕ್ಬಸ್ಟರ್ ಚಿತ್ರ ಧುರಂಧರ್ ತನ್ನ 31ನೇ ದಿನದಂದು ಭಾರತದಲ್ಲಿ 12.75 ಕೋಟಿ ರೂಪಾಯಿ ಗಳಿಸಿದೆ. 31ನೇ ದಿನದ ಸಂಗ್ರಹದೊಂದಿಗೆ, ಚಿತ್ರ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು 820 ಕೋಟಿ ರೂಪಾಯಿ ಮೀರಿದೆ. ಧುರಂಧರ್ ತನ್ನ ಮೊದಲ ವಾರದಲ್ಲಿ 218 ಕೋಟಿ ರೂ., 2ನೇ ವಾರದಲ್ಲಿ 261.5 ಕೋಟಿ ರೂ., 3ನೇ ವಾರದಲ್ಲಿ 189.3 ಕೋಟಿ ರೂ. ಮತ್ತು 4ನೇ ವಾರದಲ್ಲಿ 115.70 ಕೋಟಿ ರೂಪಾಯಿಯ ವ್ಯವಹಾರ ನಡೆಸಿತ್ತು.
ಕೆಜಿಎಫ್ 2 ರೆಕಾರ್ಡ್ ಬ್ರೇಕ್: 29ನೇ ದಿನದ ಗಳಿಕೆಯೊಂದಿಗೆ, ಧುರಂಧರ್, ಶಾರುಖ್ ಖಾನ್ ವೃತ್ತಿಜೀವನದಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾದ ಜವಾನ್ನನ್ನು ಮೀರಿಸಿದೆ. 2023ರಲ್ಲಿ ಬಿಡುಗಡೆಯಾದ ಜವಾನ್ ವಿಶ್ವಾದ್ಯಂತ 1,148.32 ಕೋಟಿ ರೂಪಾಯಿ ಗಳಿಸಿದೆ. ಧುರಂಧರ್ 29 ದಿನಗಳಲ್ಲಿ ವಿಶ್ವಾದ್ಯಂತ 1,164.05 ಕೋಟಿ ರೂ. ಸಂಪಾದಿಸಿ ಪ್ರದರ್ಶನ ಮುಂದುವರಿಸಿದೆ. ಧುರಂಧರ್ ಈಗ ವಿಶ್ವಾದ್ಯಂತದ ಗಳಿಕೆಯಲ್ಲಿ ಯಶ್ ಅಭಿನಯದ ಬ್ಲಾಕ್ಬಸ್ಟರ್ ಕೆಜಿಎಫ್ 2 (1,215 ಕೋಟಿ ರೂ.)ಅನ್ನೂ ಮೀರಿಸಿದೆ. ಧುರಂಧರ್ ವಿಶ್ವಾದ್ಯಂತ 1,240 ಕೋಟಿ ರೂ. ಗಳಿಸಿದೆ. ದೇಶೀಯ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಕೆಜಿಎಫ್ 2ರ (859 ಕೋಟಿ ರೂ.) ದಾಖಲೆಯನ್ನು ಮುರಿಯುವ ಹಾದಿಯಲ್ಲಿದೆ.
ಬಾಕ್ಸ್ ಆಫೀಸ್‌ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತೀಯ ಸಿನಿಮಾಗಳು
| ಸ್ಥಾನ | ಸಿನಿಮಾ | ಕಲೆಕ್ಷನ್ | ಸಿನಿಮಾ ತೆರೆಕಂಡ ವರ್ಷ |
| 1. | ದಂಗಲ್ | 2,200 | 2016 |
| 2. | ಬಾಹುಬಲಿ 2: ಕನ್ಕ್ಲೂಷನ್ | 1,810.60 | 2017 |
| 3. | ಪುಷ್ಪ 2: ದಿ ರೂಲ್ | 1,800 | 2024 |
| 4. | ಆರ್‌ಆರ್‌ಆರ್ | 1,387 | 2022 |
| 5. | ಧುರಂಧರ್ | 1217 | 2025 |
| 6. | ಕೆಜಿಎಫ್ ಚಾಪ್ಟರ್ 2 | 1,215 | 2022 |
| 7. | ಜವಾನ್ | 1,148.32 | 2023 |
| 8. | ಪಠಾಣ್ | 1,050.30 | 2023 |
| 9. | ಕಲ್ಕಿ 2898 ಎಡಿ | 1,100 | 2024 |
| 10. | ಅನಿಮಲ್ | 917.82 | 2023 |
ಇದನ್ನೂ ಓದಿ: 'ಅಮಲು ಹಾಡಿಗೆ ಕುಡುಕ ಸ್ಪೂರ್ತಿ, ಎಷ್ಟೇ ಕುಡಿದರೂ ನಾನು ಕುಡಿದು ಮಾತನಾಡುತ್ತಿಲ್ಲ ಎನ್ನುತ್ತಿದ್ದ'
ಧುರಂಧರ್ ಚಿತ್ರವು ಯಶ್ ಮುಖ್ಯಭೂಮಿಕೆಯ ಬ್ಲಾಕ್ಬಸ್ಟರ್ ಕೆಜಿಎಫ್ 2 ಚಿತ್ರವನ್ನು ಮೀರಿಸಿದೆ. ಶೀಘ್ರದಲ್ಲೇ ಬಾಲಿವುಡ್ ಸೂಪರ್ ಸ್ಟಾರ್ ರಣ್ವೀರ್ ಸಿಂಗ್ ಮತ್ತು ಸ್ಯಾಂಡಲ್ವುಡ್ ಸೂಪರ್ ಸ್ಟಾರ್ ಯಶ್ ನಡುವೆ ಭರ್ಜರಿ ಬಾಕ್ಸ್ ಆಫೀಸ್ ಪೈಪೋಟಿ ನಡೆಯಲಿದೆ. ಏಕೆಂದರೆ ಯಶ್ ಸಾರಥ್ಯದ ಬಹುನಿರೀಕ್ಷಿತ ಟಾಕ್ಸಿಕ್ ಮತ್ತು 2025ರ ಬ್ಲಾಕ್ಬಸ್ಟರ್ ಚಿತ್ರದ ಮುಂದುವರಿದ ಭಾಗ ಧುರಂಧರ್ 2 ಒಂದೇ ದಿನ ಅಂದರೆ ಮಾರ್ಚ್ 19, 2026ರಲ್ಲಿ ಅದ್ದೂರಿಯಾಗಿ ವಿಶ್ವಾದ್ಯಂತ ಬಿಡುಗಡೆ ಆಗಲಿದೆ.
ಇದನ್ನೂ ಓದಿ: ರಿಷಬ್ ಶೆಟ್ಟಿ ಭಾರತೀಯ ಚಿತ್ರರಂಗದಲ್ಲೇ ಈ ಅಪರೂಪದ ಸಾಧನೆಗೈದ ಏಕೈಕ ನಟ
ಆದಿತ್ಯ ಧರ್ ನಿರ್ದೇಶನದ ಧುರಂಧರ್ ಚಿತ್ರದಲ್ಲಿ ರಣ್ವೀರ್ ಸಿಂಗ್, ಅಕ್ಷಯ್ ಖನ್ನಾ, ಸಂಜಯ್ ದತ್, ಅರ್ಜುನ್ ರಾಂಪಾಲ್ ಸೇರಿ ಹಲವರು ಕಾಣಿಸಿಕೊಂಡಿದ್ದಾರೆ. ಸಿನಿಮಾ ಡಿಸೆಂಬರ್ 5ರಂದು ಗ್ರ್ಯಾಂಡ್ ರಿಲೀಸ್ ಆಗಿ ಈಗಲೂ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದೆ.

