ETV Bharat / entertainment

'KD' ಹೌಸ್​ಫುಲ್​ ಪ್ರದರ್ಶನ: ಮೊದಲ ದಿನ ಕಲೆಕ್ಷನ್​ ಎಷ್ಟಾಗಬಹುದು? ಸಿನಿಪಂಡಿತರ ಮಾಹಿತಿ ಇಲ್ಲಿದೆ

'ಕೆಡಿ: ದಿ ಡೆವಿಲ್​' ಸಿನಿಮಾವಿಂದು ರಾಜ್ಯಾದ್ಯಂತ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ.

'KD: The Devil'
ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ 'ಕೆಡಿ: ದಿ ಡೆವಿಲ್'​ (Photo: ETV Bharat)
author img

By ETV Bharat Entertainment Team

Published : April 30, 2026 at 4:29 PM IST

2 Min Read
Choose ETV Bharat

ಕನ್ನಡ ಚಿತ್ರರಂಗದ ಬಹುಬೇಡಿಕೆ ತಾರೆ ಧ್ರುವ ಸರ್ಜಾ ಮುಖ್ಯಭೂಮಿಕೆಯಲ್ಲಿರುವ 'ಕೆಡಿ: ದಿ ಡೆವಿಲ್​' ಸಿನಿಮಾವಿಂದು ರಾಜ್ಯಾದ್ಯಂತ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಜೋಗಿ ಪ್ರೇಮ್ ನಿರ್ದೇಶನದ ಸಿನಿಮಾ ರಾಜ್ಯಾದ್ಯಂತ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಉಳಿದಂತೆ, ದೇಶಾದ್ಯಂತ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಚಿತ್ರಮಂದಿರ ಪ್ರವೇಶಿಸಿದ್ದು, ಸಂಭ್ರಮಾಚರಣೆ ಜೋರಾಗಿದೆ.

ಕೆವಿಎನ್​ ಪ್ರೊಡಕ್ಷನ್ಸ್ ಅದ್ದೂರಿಯಾಗಿ ನಿರ್ಮಿಸಿರುವ ಈ ಸಿನಿಮಾದಲ್ಲಿ ಭಾರತೀಯ ಚಿತ್ರರಂಗದ ಘಟಾನುಘಟಿಗಳು ಬಣ್ಣ ಹಚ್ಚಿದ್ದಾರೆ. ಹೌದು, ಕನ್ನಡ ಚಿತ್ರರಂಗದ ಪ್ರತಿಭಾನ್ವಿತರಾದ ಸುದೀಪ್​, ರವಿಚಂದ್ರನ್, ರಮೇಶ್ ಅರವಿಂದ್, ರೀಷ್ಮಾ ನಾಣಯ್ಯ ಅಲ್ಲದೇ ಬಾಲಿವುಡ್​ ಸೂಪರ್ ಸ್ಟಾರ್​ಗಳಾದ ಸಂಜಯ್ ದತ್, ಶಿಲ್ಪಾ ಶೆಟ್ಟಿ ಕೂಡಾ ಚಿತ್ರದ ತಾರಾಗಣದಲ್ಲಿದ್ದಾರೆ. ಸಿನಿಮಾ ತನ್ನ ಮೊದಲ ದಿನ ಬಹುತೇಕ ಸಕಾರಾತ್ಮಕ ಪ್ರತಿಕ್ರಿಯೆಯನ್ನೇ ಸ್ವೀಕರಿಸಿದೆ.

ಮೊದಲ ದಿನ ಕಲೆಕ್ಷನ್​​ ಎಷ್ಟಾಗಬಹುದು?

ಸಿನಿಮಾ ವಾರದ ದಿನದಲ್ಲೇ ಬಹುತೇಕ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಹಾಗಾಗಿ, ಚಿತ್ರದ ಗಳಿಕೆ ಮೇಲೆ ಎಲ್ಲರ ಗಮನವಿದ್ದು, ಅಂತಿಮ ಅಂಕಿ-ಅಂಶ ನಾಳೆ ಬೆಳಗ್ಗೆ ಹೊರಬೀಳಲಿದೆ. ವಾರಾಂತ್ಯ ಇನ್ನೂ ಹೆಚ್ಚಿನ ಗಳಿಕೆ ಮಾಡುವ ನಿರೀಕ್ಷೆಯಿದೆ. ಸದ್ಯದ ಟ್ರೆಂಡ್​​ ಗಮನಿಸೋದಾದ್ರೆ, ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್​ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಚಿತ್ರ ತನ್ನ ಮೊದಲ ದಿನಕ್ಕೆ ಈವರೆಗೆ (4 ಗಂಟೆ ಹೊತ್ತಿಗೆ) 1.30 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಈ ಪೈಕಿ 1.10 ಕೋಟಿ ರೂಪಾಯಿ ನೆಟ್​ ಕಲೆಕ್ಷನ್​ ಮಾಡಿದೆ. ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ ಭಾರತದಾದ್ಯಂತ 450ಕ್ಕೂ ಹೆಚ್ಚಿನ ಶೋಗಳು ಪ್ರದರ್ಶನ ಕಂಡಿವೆ.

ಇದು ಈವರೆಗಿನ ಮಾಹಿತಿ ಆಗಿದ್ದು, ಸಂಜೆ ಮತ್ತು ರಾತ್ರಿಯ ಶೋಗಳ ಮೂಲಕ ಇನ್ನೂ ಹೆಚ್ಚಿನ ಕಲೆಕ್ಷನ್​​ ಮಾಡುವ ಸಾಧ್ಯತೆ ಇದೆ. ಹಾಗಾಗಿ, ನಾಳೆ ಮುಂಜಾನೆವರೆಗೂ ಕಾಯಬೇಕಿದೆ.

ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಧ್ರುವ ಸರ್ಜಾ ಮತ್ತು ತಂಡಕ್ಕೆ ಶುಭ ಕೋರಿದ್ದಾರೆ. ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟರ್ ಹಂಚಿಕೊಂಡ ಅವರು 'ಕೆಡಿ - ದಿ ಡೆವಿಲ್ ಚಿತ್ರಕ್ಕೆ ಶುಭಹಾರೈಕೆಗಳು' ಎಂದು ಬರೆದುಕೊಂಡಿದ್ದಾರೆ.

ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಿದ ನಾಯಕ ನಟ ಧ್ರುವ ಸರ್ಜಾ ಮಾತನಾಡಿ, ''ಈ ಸಂದರ್ಭ ನಾನು ನನ್ನ ಅಣ್ಣನನ್ನು ಮಿಸ್ ಮಾಡಿಕೊಳ್ಳುತ್ತೀನಿ. ಅವರಿದ್ದಿದ್ರೆ ಈಗ ಬಹಳ ಖುಷಿ ಪಡುತ್ತಿದ್ದರು. ಅವರ ಸ್ಥಾನದಲ್ಲೀಗ ಬಹಳಷ್ಟು ಜನ ಹಿರಿಯರಿದ್ದೀರ. ಎಲ್ಲರೂ ನಿಮ್ಮ ತಮ್ಮನಿಗೆ ಆಶೀರ್ವಾದ ಮಾಡಿ ಅಂತಾ ಕೋರುತ್ತೇನೆ'' ಎಂದು ಹೇಳಿ ಭಾವುಕರಾದರು.

''ಸಿನಿಮಾ ವೀಕ್ಷಿಸಿ. ಖಂಡಿತವಾಗಿಯೂ ನಮ್ಮ ಪರಿಶ್ರಮ ಕಾಣುತ್ತದೆ. ಇಡೀ ಚಿತ್ರತಂಡಕ್ಕೆ ಧನ್ಯವಾದ ಅರ್ಪಿಸಲು ಇಷ್ಟ ಪಡುತ್ತೀನಿ. ಎಲ್ಲರೂ ಸಿನಿಮಾ ವೀಕ್ಷಿಸಿ, ನಮ್ಮನ್ನು ಬೆಂಬಲಿಸಿ'' ಎಂದು ಕೇಳಿಕೊಂಡರು.

ಇದನ್ನೂ ಓದಿ: 'KD': ಸ್ಯಾಂಡಲ್​ವುಡ್​ಗೆ ಮತ್ತೊಂದು ಗೆಲುವು: ಪಾರ್ಟ್​ 2ನಲ್ಲಿ ಸುದೀಪ್​? ಪ್ರೇಕ್ಷಕರ ವಿಮರ್ಷೆಗಳಿಲ್ಲಿವೆ

''ಎಲ್ಲದಕ್ಕಿನ ಹೆಚ್ಚಾಗಿ ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸುತ್ತೇನೆ. ಸಿನಿಮಾ ಪ್ರದರ್ಶನವಿಂದು ಕೊಂಚ ತಡವಾಯಿತು. ಕುಟುಂಬ ಸಮೇತ ಆಗಮಿಸಿದ್ದ ಪ್ರೇಕ್ಷಕರು, ನಮ್ಮ ಹುಡುಗ ತಾನೇ. ಇಷ್ಟೇ ವರ್ಷ ಕಾದಿದ್ದೀವಿ. ಇನ್ನೊಂದು ಗಂಟೆ ಅಲ್ವೇ, ಕಾಯೋಣ ಅಂತಾ ಹೇಳಿ ನನಗೆ ಮನಸಾರೆ ಆಶೀರ್ವಾದ ಮಾಡಿದ್ದಾರೆ. ಕನ್ನಡ ಕಲಾಭಿಮಾನಿಗಳಿಗೆ ಧನ್ಯವಾಗಳು'' ಎಂದು ತಿಳಿಸಿದರು.

ಇದನ್ನೂ ಓದಿ: Video: 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'KD' ರಿಲೀಸ್, ​​ಪಾರ್ಟ್ 2 ಸುಳಿವು ಕೊಟ್ಟ ಪ್ರೇಮ್; ಸಂಭ್ರಮಾಚರಣೆ ಜೋರು

ಇನ್ನೂ, ಸಿನಿಮಾಗೆ ಎದುರಾದ ಸವಾಲುಗಳ ಬಗ್ಗೆ ಮಾಧ್ಯಮದವರಿಂದ ಪ್ರಶ್ನೆಗಳು ಎದುರಾದವು. ಆ ವೇಳೆ ನಾಯಕ ನಟ ಧ್ರುವ ಸರ್ಜಾ ಹಾಗೂ ನಿರ್ದೇಶಕ ಪ್ರೇಮ್ ಒಬ್ಬರನ್ನೊಬ್ಬರು ತಬ್ಬಿ ಧೈರ್ಯ ತುಂಬಿದರು. ಸಿನಿಮಾಗೆ ಬಹುತೇಕ ಉತ್ತಮ ಪ್ರತಿಕ್ರಿಯೆಗಳೇ ವ್ಯಕ್ತವಾಗಿದ್ದು, ಚಿತ್ರತಂಡ ಬಹಳ ಖುಷಿಯಲ್ಲಿದೆ.​​​​