ಮತ್ತೆ ಪ್ರೀತಿ ಹೊತ್ತು ಬರಲು ಸಜ್ಜಾದ ಡಾರ್ಲಿಂಗ್ ಕೃಷ್ಣ: 'ಲವ್ ಮಾಕ್ಟೇಲ್ 3'ರ ಕಥೆಯೇನು?
ಇತ್ತೀಚೆಗೆ 'ಲವ್ ಮಾಕ್ಟೇಲ್ 3'ರ ಬಿಡುಗಡೆ ದಿನಾಂಕ ಘೋಷಣೆಯಾಗಿದ್ದು, ಕಥಾಹಂದರದ ಬಗೆಗಿನ ಕುತೂಹಲ ದುಪ್ಪಟ್ಟಾಗಿದೆ.

By ETV Bharat Entertainment Team
Published : January 5, 2026 at 11:53 AM IST
'ಲವ್ ಮಾಕ್ಟೇಲ್'. ಸ್ಯಾಂಡಲ್ವುಡ್ನ ಎವರ್ ಗ್ರೀನ್ ಸೂಪರ್ ಹಿಟ್ ಸಿನಿಮಾ. ಪ್ರೀತಿ ಅಂದ್ರೇನು ಎಂಬುದನ್ನು ತಿಳಿಸಿಕೊಟ್ಟ ಚಿತ್ರ. 'ಲವ್ ಮಾಕ್ಟೇಲ್ 1' ಹಾಗೂ 'ಲವ್ ಮಾಕ್ಟೇಲ್ 2' ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದ ಖ್ಯಾತ ನಟ ಡಾರ್ಲಿಂಗ್ ಕೃಷ್ಣ ಅವರೀಗ 3ನೇ ಭಾಗವನ್ನು ಪ್ರೇಕ್ಷಕರೆದುರು ತರಲು ಸಜ್ಜಾಗಿದ್ದಾರೆ. ಸಿನಿಪ್ರಿಯರೂ ಕೂಡಾ ಅಷ್ಟೇ ಉತ್ಸುಕರಾಗಿದ್ದಾರೆ.
2 ಭಾಗಗಳ ಭರ್ಜರಿ ಯಶಸ್ಸಿನ ನಂತರ 'ಲವ್ ಮಾಕ್ಟೇಲ್ 3'ಕ್ಕೆ ಚಾಲನೆ ನೀಡಿದ್ದ ಡಾರ್ಲಿಂಗ್ ಕೃಷ್ಣ, ಇತ್ತೀಚೆಗಷ್ಟೇ ಮೋಷನ್ ಪೋಸ್ಟರ್ ಲಾಂಚ್ ಮಾಡಿದ್ದರು. ಈ ಮೂಲಕ ಮೂರನೇ ಆವೃತ್ತಿ ನವಿರಾದ ಕುತೂಹಲವೊಂದನ್ನು ಹುಟ್ಟಿಸಿತ್ತು. ಹೊಸ ವರ್ಷದ ಉಡುಗೊರೆ ಎಂಬಂತೆ 'ಲವ್ ಮಾಕ್ಟೇಲ್ 3'ರ ಬಿಡುಗಡೆ ದಿನಾಂಕವನ್ನು ಡಾಲಿಂಗ್ ಕೃಷ್ಣ ಘೋಷಿಸಿದ್ದಾರೆ.
ಡಾರ್ಲಿಂಗ್ ಕೃಷ್ಣ ಕನ್ನಡ ಚಿತ್ರರಂಗದ ಬೇಡಿಕೆಯ, ಭರವಸೆಯ ಪ್ರತಿಭಾನ್ವಿತ ನಟ. 'ಲವ್ ಮಾಕ್ಟೇಲ್', ಅವರಿಗೆ ಓರ್ವ ಅತ್ಯುತ್ತಮ ನಟನಾಗಿ ಮಾತ್ರವಲ್ಲದೇ ಉತ್ತಮ ನಿರ್ದೇಶಕ ಎಂಬ ಹೆಸರನ್ನೂ ತಂದುಕೊಟ್ಟಿದೆ. ಈಗ ಮೂರನೇ ಭಾಗ ತೆರೆಗಪ್ಪಳಿಸಲು ಸಜ್ಜಾಗಿದೆ. ಏಪ್ರಿಲ್ 10ರಂದು 'ಲವ್ ಮಾಕ್ಟೇಲ್ 3' ಚಿತ್ರಮಂದಿರ ಪ್ರವೇಶಿಸಲಿದೆ.
ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶಿಸಿಡಿದ್ದ ಲವ್ ಮಾಕ್ಟೇಲ್ ಮೊದಲ ಭಾಗ 2020ರ ಜನವರಿ 31ರಂದು ತೆರೆಕಂಡಿತ್ತು. ನವಿರು ಪ್ರೇಮದ ಸೂಕ್ಷ್ಮ ಕಥನದ ಮೂಲಕ ಗೆದ್ದ ನಂತರ, ಲವ್ ಮಾಕ್ಟೇಲ್ 2 ಚಿತ್ರವನ್ನು ಕೃಷ್ಣ ಪ್ರೇಕ್ಷಕರೆದುರಿಟ್ಟರು. 20221 ಫೆಬ್ರವರಿ 11ರಂದು ತೆರೆಕಂಡ 2ನೇ ಭಾಗವೂ ಪ್ರೇಕ್ಷಕರನ್ನು ತಲುಪಿ ಯಶ ಕಂಡಿತ್ತು.
ಇದೀಗ ತೆರೆಗಾಣಲು ಸಜ್ಜಾಗಿರುವ ಲವ್ ಮಾಕ್ಟೇಲ್ 3 ಈ ಹಿಂದಿನ 2 ಆವೃತ್ತಿಗಳಿಗಿಂತಲೂ ಭಿನ್ನವಾಗಿರಲಿದೆ ಎಂಬ ವಿಚಾರವನ್ನಷ್ಟೇ ಕೃಷ್ಣ ಹಂಚಿಕೊಂಡಿದ್ದಾರೆ. ಕಥೆ, ನಿರೂಪಣೆ ಸೇರಿದಂತೆ ಎಲ್ಲದರಲ್ಲಿಯೂ ಲವ್ ಮಾಕ್ಟೇಲ್ 3 ಹೊಸ ಅನುಭೂತಿ ಕೊಡಲಿದೆ ಎಂಬ ಭರವಸೆ ಕೃಷ್ಣ ಅವರದ್ದು. ಚಿತ್ರದ ಪೋಸ್ಟರ್ ಕೂಡಾ ಬಹಳ ಆಕರ್ಷಕವಾಗಿದೆ. ಆ ಪ್ರಕಾರ, ಪತಿ ಪತ್ನಿ ಮಾತ್ರವಲ್ಲದೇ ತಂದೆ ಮಗಳ ಸುಂದರ ಬಾಂಧವ್ಯ ಇಲ್ಲಿರುವ ನಿರೀಕ್ಷೆಯಿದೆ.
ಭಾಗ 1 ಮತ್ತು 2ರ ಮೇಲಿನ ಅದ್ಭುತ ಪ್ರೀತಿಗೆ ಧನ್ಯವಾದಗಳು. ಭಾಗ 3 ಒಂದು ಸವಾಲಿನ ಪ್ರಯಾಣವಾಗಿತ್ತು. ಆದರೆ ಸ್ಕ್ರಿಪ್ಟ್ ಪರಿಪೂರ್ಣವೆಂದು ಭಾವಿಸಿದ ನಂತರವೇ ನಾವು ಚಿತ್ರೀಕರಣ ಪ್ರಾರಂಭಿಸಿದೆವು. ನಾವು ನಮ್ಮ ಸಂಪೂರ್ಣ ಹೃದಯ ಮತ್ತು ಆತ್ಮದೊಂದಿಗೆ ಈ ಚಿತ್ರದಲ್ಲಿ ತೊಡಗಿಸಿಕೊಂಡಿದ್ದೇವೆ, ನಿಮಗಾಗಿಯೇ. ಸಜ್ಜಾಗಿ, ನಾವು ಈ ಮೋಷನ್ ಪೋಸ್ಟರ್ ಅನ್ನು ಹಂಚಿಕೊಳ್ಳಲು ತುಂಬಾ ಉತ್ಸುಕರಾಗಿದ್ದೇವೆ ಮತ್ತು ಭಾವನಾತ್ಮಕವಾಗಿದ್ದೇವೆ. ನೀವಿದನ್ನು ನಿಜವಾಗಿಯೂ ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ - ನಟ, ನಿರ್ದೇಶಕ ಡಾರ್ಲಿಂಗ್ ಕೃಷ್ಣ
ಇದನ್ನೂ ಓದಿ: ಡಾಲಿ ಧನಂಜಯ್ ಮುಂದಿನ ಸಿನಿಮಾ 'ಹೆಗ್ಗಣ ಮುದ್ದು': ಅರುಣ್ ಸಾಗರ್ ಪುತ್ರಿ ಅದಿತಿ ನಾಯಕಿ
ಅಂದ ಹಾಗೆ, ಈ ಚಿತ್ರವನ್ನು ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಕ್ರಿಸ್‌ಮಿ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ನಕುಲ್ ಅಭಯಂಕರ್ ಸಂಗೀತ ನಿರ್ದೇಶನ, ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ ಮತ್ತು ಸಂಕಲನ ಈ ಚಿತ್ರಕ್ಕಿದೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ರಚೆಲ್ ಡೇವಿಡ್, ಅಭಿಲಾಶ್ ದಳಪತಿ ಸೇರಿದಂತೆ ಮೊದಲಾದವರು ತಾರಾಗಣದಲ್ಲಿದ್ದಾರೆ.
ಇದನ್ನೂ ಓದಿ: ರಿಷಬ್ ಶೆಟ್ಟಿ ಭಾರತೀಯ ಚಿತ್ರರಂಗದಲ್ಲೇ ಈ ಅಪರೂಪದ ಸಾಧನೆಗೈದ ಏಕೈಕ ನಟ
ಚಿತ್ರೀಕರಣ ಸೇರಿದಂತೆ ತನ್ನೆಲ್ಲಾ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡಿರುವ ಚಿತ್ರ, ಬೇಸಿಗೆ ರಜೆಯನ್ನು ಗಮನದಲ್ಲಿಟ್ಟುಕೊಂಡು ಏಪ್ರಿಲ್ 10ರಂದು ಪ್ರೇಕ್ಷಕರೆದುರು ಬರಲಿದೆ. ಬಿಡುಗಡೆ ದಿನಾಂಕ ಘೊಷಣೆಯ ಸೋಷಿಯಲ್ ಮೀಡಿಯಾ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಸಿನಿಪ್ರಿಯರು ವೈಟಿಂಗ್, ಲವ್ಲಿ ಎಂದೆಲ್ಲಾ ತಿಳಿಸಿದ್ದಾರೆ.

