'ಪಲ್ಲವಿ ಅನು ಪಲ್ಲವಿ' ಸಿನಿಮಾ ನೆನಪಿಸಿಕೊಂಡ ಬಾಲಿವುಡ್ ನಟ ಅನಿಲ್ ಕಪೂರ್
ಬಾಲಿವುಡ್ ನಟ ಅನಿಲ್ ಕಪೂರ್ ಅವರು 'ಪಲ್ಲವಿ ಅನು ಪಲ್ಲವಿ' ಸಿನಿಮಾ ಕುರಿತು ನೆನಪಿಸಿಕೊಂಡಿದ್ದಾರೆ.

Published : January 8, 2026 at 2:10 PM IST
ಕನ್ನಡದ ಕೆಜಿಎಫ್, ಕಾಂತಾರ, ಸು ಫ್ರಮ್ ಸೋ ಸಿನಿಮಾಗಳು ಕಳೆದ ವರ್ಷ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದು, ಈ ಸಂದರ್ಭದಲ್ಲಿ ಬಾಲಿವುಡ್ನ ಎವರ್ ಗ್ರೀನ್ ಹೀರೋ ಅನಿಲ್ ಕಪೂರ್ ಅವರು ತಾವು ಅಭಿನಯಿಸಿದ ಮೊದಲ ಕನ್ನಡ ಸಿನಿಮಾ 'ಪಲ್ಲವಿ ಅನುಪಲ್ಲವಿ'ಯನ್ನು ನೆನಪಿಸಿಕೊಂಡಿದ್ದಾರೆ.
'ಪಲ್ಲವಿ ಅನು ಪಲ್ಲವಿ' ಜನವರಿ 7, 1983ರಂದು ಬಿಡುಗಡೆಯಾಗಿದ್ದು, ಈ ಸಿನಿಮಾಕ್ಕೆ ಇದೀಗ 43 ವರ್ಷ ಕಳೆದಿವೆ. ಹೀಗಾಗಿ, ಅನಿಲ್ ಕಪೂರ್ ಚಿತ್ರದ ಹಾಡೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಹೆಸರು ಹೇಳಲಿಚ್ಚಿಸದ ಸಿನಿಮಾ ಪತ್ರಕರ್ತರೊಬ್ಬರು ಈ ಕುರಿತು ಮಾತನಾಡಿದ್ದು, "ಬಾಲಿವುಡ್ ಚಿತ್ರರಂಗದಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಅನಿಲ್ ಅವರು ಹೀರೋ ಆಗಿದ್ದು ಪಲ್ಲವಿ ಅನುಪಲ್ಲವಿ ಚಿತ್ರದ ಮೂಲಕ. ಮಣಿರತ್ನಂ ಅವರ ನಿರ್ದೇಶನದ ಮೊದಲ ಸಿನಿಮಾ ಕೂಡಾ ಪಲ್ಲವಿ ಅನುಪಲ್ಲವಿ' ಎಂದು ತಿಳಿಸಿದ್ದಾರೆ.
'ಈ ಸಿನಿಮಾದ ಕಥೆಯನ್ನು ಕಮಲ್ ಹಾಸನ್ ಸೇರಿದಂತೆ ತಮಿಳು ಚಿತ್ರರಂಗದ ಕೆಲ ಸ್ಟಾರ್ ನಟರು ರಿಜೆಕ್ಟ್ ಮಾಡಿದ್ರಂತೆ. 20ಕ್ಕೂ ಹೆಚ್ಚು ಸಿನಿಮಾ ಪ್ರೊಡಕ್ಷನ್ ಹೌಸ್ಗಳಿಂದ ರಿಜೆಕ್ಟ್ ಆಗಿ ಬಂದಿದ್ದ ಕಥೆ ಅದು. ಕೊನೆಗೆ ಆ ಚಿತ್ರ ಕನ್ನಡಕ್ಕೆ ಬಂದು, ಇತಿಹಾಸ ಸೃಷ್ಟಿಸಿ ಅನಿಲ್ ಕಪೂರ್ ಹಾಗೂ ನಿರ್ದೇಶಕ ಮಣಿರತ್ನಂಗೆ ಸ್ಟಾರ್ ಡಮ್ ತಂದು ಕೊಡ್ತು' ಎಂದು ಮಾಹಿತಿ ನೀಡಿದ್ದಾರೆ.
ಅನಿಲ್ ಕಪೂರ್ ಈ ಚಿತ್ರದಲ್ಲಿ ಬರುವ ಓ ಪ್ರೇಮಿ..ಓ ಪ್ರೇಮಿ.. ಹಾಡಿನ ವಿಡಿಯೋ ಶೇರ್ ಮಾಡಿದ್ದಾರೆ. 43 ವರ್ಷಗಳ ಹಿಂದೆ ತಾವು ಕನ್ನಡದಲ್ಲಿ ನಟಿಸಿದ್ದನ್ನು ಹೇಳಿಕೊಂಡಿದ್ದಾರೆ. ಜೊತೆಗೆ, ಈಗಿನ ನಾಯಕರು ಕನ್ನಡ ಚಿತ್ರರಂಗವನ್ನು ಉತ್ತುಂಗಕ್ಕೆ ಬೆಳೆಸುತ್ತಿರುವ ಬಗ್ಗೆಯೂ ಬರೆದಿದ್ದಾರೆ.
43 years ago, I took my first step into the Kannada film industry.
— Anil Kapoor (@AnilKapoor) January 7, 2026
From then to now, it’s incredible to see how Kannada cinema is booming and redefining Indian cinema globally. pic.twitter.com/jfh3Hbzsse
'43 ವರ್ಷಗಳ ಹಿಂದೆ, ನಾನು ಕನ್ನಡ ಚಿತ್ರರಂಗಕ್ಕೆ ನನ್ನ ಮೊದಲ ಹೆಜ್ಜೆ ಇಟ್ಟಿದ್ದೆ. ಅಂದಿನಿಂದ ಇಲ್ಲಿಯವರೆಗೆ, ಕನ್ನಡ ಚಿತ್ರರಂಗವು ಜಾಗತಿಕವಾಗಿ ಭಾರತೀಯ ಸಿನಿಮಾವನ್ನು ಹೊಸ ಹೊಸ ರೀತಿಗಳಲ್ಲಿ ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತಿದೆ. ಇದನ್ನು ನೋಡುವುದೇ ಒಂದು ಅದ್ಭುತ' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅನಿಲ್ ಕಪೂರ್ ಈ ಮಾತು ಹೇಳುವುದಕ್ಕೆ ಕಾರಣ ಯಶ್, ಪ್ರಶಾಂತ್ ನೀಲ್, ರಿಷಬ್ ಶೆಟ್ಟಿ ಮೊದಲಾದವರ ಒಡನಾಟ. ಈ ಅದ್ಭುತ ಚಿತ್ರರಂಗದವರ ಜೊತೆಗಿನ ನನ್ನ ಒಡನಾಟವು ಇಲ್ಲಿಗೇ ಕೊನೆಯಾಗದಿರಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ. ರಿಷಬ್ ಶೆಟ್ಟಿ ಅವರು ಇದೀಗ ಅನಿಲ್ ಕಪೂರ್ ಅವರ ಪ್ರೀತಿಯ ಮಾತುಗಳಿಗೆ ಧನ್ಯವಾದ ಎಂದಿದ್ದಾರೆ.
ಪಲ್ಲವಿ, ಅನುಪಲ್ಲವಿ ಚಿತ್ರ ಆಗಿನ ಕಾಲಕ್ಕೆ ಸಾಧಾರಣ ಯಶಸ್ಸು ಕಂಡಿದ್ದ ಸಿನಿಮಾ. ನಿರ್ಮಾಪಕರಿಗೆ ಒಂದಿಷ್ಟು ಲಾಭವನ್ನೂ ಮಾಡಿಕೊಟ್ಟಿತ್ತು. ನಂತರ ತಮಿಳಿಗೆ ಡಬ್ ಆಗಿ, ಅಲ್ಲಿಯೂ ಯಶಸ್ಸು ಕಂಡಿತ್ತು. ನಿರ್ದೇಶಕ ಮಣಿರತ್ನಂ, ಛಾಯಾಗ್ರಹಣಕ್ಕೆ ಬಾಲು ಮಹೇಂದ್ರ, ಸಂಭಾಷಣೆಗೆ ಆರ್.ಎನ್.ಜಯಗೋಪಾಲ್ ಅವರಿಗೆ ರಾಜ್ಯ ಪ್ರಶಸ್ತಿಯೂ ಸಿಕ್ಕಿತ್ತು.
ಇಳಯರಾಜ ಅವರಿಗೆ ರಾಜ್ಯ ಪ್ರಶಸ್ತಿ ಸಿಗದೇ ಹೋದರೂ, ಇವತ್ತಿಗೂ ಜನಮಾನಸದಲ್ಲಿ ಇಳಯರಾಜರ ಸಂಗೀತ, ಹಾಡು ಎವರ್ ಗ್ರೀನ್ ಆಗಿವೆ. ನಗುವಾ ನಯನ ಮಧುರ ಮೌನ..ನಗು ಎಂದಿದೆ. ಹೃದಯ ರಂಗೋಲಿ.. ಹಾಗೂ ಇದೀಗ ಅನಿಲ್ ಕಪೂರ್ ಹಂಚಿಕೊಂಡಿರುವ ಓ ಪ್ರೇಮಿ. ಓ ಪ್ರೇಮಿ.. ಹಾಡುಗಳು ಇಂದಿಗೂ ಕನ್ನಡ ಚಿತ್ರರಸಿಕರ ಹೃದಯದಲ್ಲಿವೆ.
ಇದನ್ನೂ ಓದಿ: ಟಾಕ್ಸಿಕ್ನಲ್ಲಿ 'ರಾಯ'ನಾದ ಯಶ್: ಟೀಸರ್ ಅಬ್ಬರ ಜೋರು, ಅಭಿಮಾನಿಗಳಿಗೆ ಹಬ್ಬದೂಟ

