ಬಿಗ್ ಬಾಸ್ ಶೋಗೆ ಕ್ರೆಡಿಬಿಲಿಟಿ ಇದೆ, ಗಲಾಟೆ ಮಾಡಿದರೆ TRP ಬರುತ್ತೆ ಎಂಬುದು ಸುಳ್ಳು: ಸುದೀಪ್
ಸತತ 12 ಸೀಸನ್‌ಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಾ, ಹಲವು ದಾಖಲೆಗಳನ್ನು ನಿರ್ಮಿಸಿರುವ ‘ಬಿಗ್ ಬಾಸ್ ಕನ್ನಡ’ ಇದೀಗ 13ನೇ ಸೀಸನ್‌ಗೆ ಕಾಲಿಡುತ್ತಿದೆ.

By ETV Bharat Entertainment Team
Published : August 31, 2026 at 10:34 AM IST
ಕನ್ನಡ ಜನಪ್ರಿಯ ರಿಯಾಲಿಟಿಗಳಲ್ಲಿ ಒಂದಾದ ಬಿಗ್ ಬಾಸ್ ಕನ್ನಡ 13ನೇ ಆವೃತ್ತಿ ಶುರುವಾಗುವುದಕ್ಕೆ ಕೆಲವೇ ದಿನಗಳು ಬಾಕಿ ಇವೆ. ಈ ಬಾರಿ ಸ್ಪರ್ಧಿಗಳನ್ನು ಆಯ್ಕೆ ಮಾಡಲು ಸಾಮಾನ್ಯ ಜನರಿಗಾಗಿ 'ಅಗ್ನಿಪರೀಕ್ಷೆ' ಎಂಬ ಟಾಸ್ಕ್ ನಡೆಯುತ್ತಿದೆ. ಮನರಂಜನಾ ವಾಹಿನಿ ಕಲರ್ಸ್ ಕನ್ನಡದಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ. ಭಾನುವಾರ ಬಿಗ್ ಬಾಸ್ ಶೋ ತಂಡ ಮಾಧ್ಯಮಗೋಷ್ಟಿಯಲ್ಲಿ ಸಾಕಷ್ಟು ಮಾಹಿತಿಯನ್ನು ಹಂಚಿಕೊಂಡಿದೆ.
ಬಿಗ್ ಬಾಸ್ ಎಲ್ಲರ ಮನಗೆದ್ದು ಜನಪ್ರಿಯತೆ ಗಳಿಸಲು ನಟ ಕಿಚ್ಚ ಸುದೀಪ್ ಕೂಡ ಪ್ರಮುಖ ಕಾರಣ. ಅವರ ವಿಶಿಷ್ಟ ನಿರೂಪಣಾ ಶೈಲಿ, ಧ್ವನಿ, ಹಾಗೂ ಸ್ಪರ್ಧಿಗಳೊಂದಿಗೆ ಅವರು ನಡೆಸುವ ಸಂಭಾಷಣೆಯು ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಮತ್ತೊಂದು ವಿಶೇಷವೆಂದರೆ, ಬಿಗ್ ಬಾಸ್ ಪ್ರಾರಂಭವಾದಾಗಿನಿಂದಲೂ ಕಾರ್ಯಕ್ರಮದ ನಿರೂಪಣಾ ಹೊಣೆಯನ್ನು ಕಿಚ್ಚ ಸುದೀಪ್ ಅವರು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಬರುತ್ತಿದ್ದಾರೆ.
13ನೇ ಸೀಸನ್ನಲ್ಲಿ ‘Flight’ ಎಂಬ ವಿಭಿನ್ನ ಹಾಗೂ ರೋಚಕ ಥೀಮ್‌ನೊಂದಿಗೆ ಹೊಸ ಪ್ರಯತ್ನಕ್ಕೆ ಮುಂದಾಗಲಾಗಿದೆ. ಸೆಲೆಬ್ರಿಟಿ ಸ್ಪರ್ಧಿಗಳ ಜೊತೆಗೆ ಸಾಮಾನ್ಯ ಜನರನ್ನೂ ಒಂದೇ ವೇದಿಕೆಗೆ ಕರೆತರುವ ಮೂಲಕ, ಪ್ರತಿಯೊಬ್ಬ ಸ್ಪರ್ಧಿಯೂ ತನ್ನದೇ ಆದ ಕಥೆಯನ್ನು ಹೊಂದಿರುವ ಹಾಗೂ ಪ್ರತಿಯೊಂದು ಕ್ಷಣವೂ ಆಟದ ದಿಕ್ಕನ್ನೇ ಬದಲಾಯಿಸಬಹುದಾದಂತಹ ಸೀಸನ್ ಇದಾಗಿದೆ. ಹೊಸ ಮುಖಗಳು, ಹೊಸ ಕಥೆಗಳು, ಹೊಸ ಸವಾಲುಗಳು ಮತ್ತು ಅನಿರೀಕ್ಷಿತ ತಿರುವುಗಳೊಂದಿಗೆ ಬಿಗ್ ಬಾಸ್ ಕನ್ನಡ ಸೀಸನ್ 13 ಪ್ರೇಕ್ಷಕರಿಗೆ ಊಹಿಸಲೂ ಸಾಧ್ಯವಾಗದ ಪ್ರಯಾಣವನ್ನು ನೀಡಲಿದೆ. ಕ್ಯಾಂಡಿಡ್ ಮಾತುಕತೆಗಳು, ಅನಿರೀಕ್ಷಿತ ಕ್ಷಣಗಳು, ಬದಲಾಗುವ ಸಂಬಂಧಗಳು, ಭರಪೂರ ಡ್ರಾಮಾ ಸಿಗಲಿದೆ. ಬಿಗ್ ಬಾಸ್ ಮನೆಯ ರೋಚಕ ಕ್ಷಣಗಳನ್ನು ಯಾವಾಗ ಬೇಕಾದರೂ, ಎಲ್ಲಿಂದ ಬೇಕಾದರೂ 24x7 ಜಿಯೋ ಹಾಟ್ ಸ್ಟಾರ್ನಲ್ಲಿ ನೋಡಬಹುದು ಎಂದು ಬಿಗ್ ಬಾಸ್ ಶೋ ತಂಡ ಹೇಳಿದೆ.

ದಕ್ಷಿಣ ಕ್ಲಸ್ಟರ್‌ನ ಎಂಟರ್‌ಟೈನ್‌ಮೆಂಟ್ ಬಿಸಿನೆಸ್ ಮುಖ್ಯಸ್ಥ ಕೃಷ್ಣನ್ ಕುಟ್ಟಿ ಮಾತನಾಡಿ, ''ಕರ್ನಾಟಕದಲ್ಲಿ ಬಿಗ್ ಬಾಸ್ ಕೇವಲ ಒಂದು ಟಿವಿ ಕಾರ್ಯಕ್ರಮವಾಗಿ ಉಳಿದಿಲ್ಲ. ಪ್ರತಿ ಸೀಸನ್‌ಗೂ ಪ್ರೇಕ್ಷಕರು ಇದನ್ನು ತಮ್ಮ ಚರ್ಚೆಯ ಒಂದು ಭಾಗವನ್ನಾಗಿ ಮಾಡಿಕೊಂಡಿದ್ದಾರೆ. ಇಂತಹ ಸಂಬಂಧವನ್ನು ಪ್ರೇಕ್ಷಕರೊಂದಿಗೆ ಬೆಳೆಸಿಕೊಳ್ಳುವ ಮನರಂಜನಾ ಫ್ರಾಂಚೈಸಿಗಳು ಬಹಳ ವಿರಳ. ಈ ಪಯಣದ ಹೃದಯಭಾಗದಲ್ಲಿ ಕಿಚ್ಚ ಸುದೀಪ್ ಇದ್ದಾರೆ. ಕಳೆದ 12 ವರ್ಷಗಳಲ್ಲಿ ಅವರು ಈ ಕಾರ್ಯಕ್ರಮವನ್ನು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ರೂಪಿಸಿದ್ದಾರೆ. ಜನರನ್ನು ಅರ್ಥಮಾಡಿಕೊಳ್ಳುವ ಅವರ ಸಹಜ ಸಾಮರ್ಥ್ಯ, ಪ್ರೇಕ್ಷಕರು ಏನು ಯೋಚಿಸುತ್ತಿದ್ದಾರೆ ಎಂಬುದನ್ನು ನಿಖರವಾಗಿ ಹೇಳುವ ಗುಣ ಹಾಗೂ ವೀಕ್ಷಕರೊಂದಿಗೆ ಅವರು ನಿರ್ಮಿಸಿರುವ ಆತ್ಮೀಯ ಸಂಬಂಧ, ಇವೆಲ್ಲವೂ ಮರುಕಳಿಸಲು ಕಷ್ಟವಾದಂಥದ್ದು. ಮತ್ತೊಂದು ಸೀಸನ್‌ಗೆ ಅವರೇ ಕಾರ್ಯಕ್ರಮವನ್ನು ಮುನ್ನಡೆಸುತ್ತಿರುವುದಕ್ಕೆ ನಾವು ಅತ್ಯಂತ ಸಂತೋಷಪಡುತ್ತೇವೆ. ಬಿಗ್ ಬಾಸ್ ಯಶಸ್ವಿಯಾಗಲು ನಿಜವಾದ ಕಾರಣ ಜನರು. ಬಿಗ್ ಬಾಸ್ 13ನೇ ಸೀಸನ್ ಅನ್ನು ಕರ್ನಾಟಕದಾದ್ಯಂತದ ಪ್ರೇಕ್ಷಕರಿಗೆ ಮರೆಯಲಾಗದ ಅನುಭವವನ್ನಾಗಿ ರೂಪಿಸಲು ನಾವು ಉತ್ಸುಕರಾಗಿದ್ದೇವೆ'' ಎಂದಿದ್ದಾರೆ.
ಬಳಿಕ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ನಟ ಸುದೀಪ್, ''ಒಬ್ಬ ವೈಲೆಂಟ್ ಸ್ಪರ್ಧಿ ನಿಯಮಗಳನ್ನು ಮೀರಿ ವರ್ತಿಸಿದರೆ ಕೂಡಲೇ ಬಿಗ್ ಬಾಸ್ ಮನೆಯಿಂದ ಹೊರ ಹಾಕಲಾಗುತ್ತದೆ. ಅವರಿಂದ ಟಿಆರ್ಪಿ ಬರುತ್ತೆ ಎಂಬುದು ಸುಳ್ಳು. ಯಾಕೆಂದರೆ ಬಿಗ್ ಬಾಸ್ ಶೋಗೆ ಒಂದು ಕ್ರೆಡಿಬಿಲಿಟಿ ಇದೆ'' ಎಂದರು.
ನಟ ದರ್ಶನ್ ಸಿನಿಮಾದ ಹಾಡುಗಳನ್ನು ಯಾಕೆ ಬಿಗ್ ಬಾಸ್ ಮನೆಯಲ್ಲಿ ಹಾಕುವುದಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುದೀಪ್, ''ಚಿತ್ರರಂಗದಲ್ಲಿರುವ ಎಲ್ಲಾ ನಟರ ಹಾಡುಗಳನ್ನು ಹಾಕುತ್ತಾರೆ. ನೀವು ಅವರೊಬ್ಬರ ಬಗ್ಗೆ ಯಾಕೆ ಮಾತನಾಡುತ್ತೀರಾ? ಬೇರೆ ನಟರ ಬಗ್ಗೆ ಯಾಕೆ ಮಾತನಾಡುವುದಿಲ್ಲ?'' ಅಂತಾ ಮರುಪ್ರಶ್ನಿಸಿದರು.
ಕಾರ್ಯಕ್ರಮವನ್ನು ನಟ ಕಿಚ್ಚ ಸುದೀಪ್, ಬಿಗ್ ಶೋ ನಿರ್ದೇಶನ ಮಾಡುವ ಪ್ರಕಾಶ್ ದೀಪಕ್ ಧರ್, ಗ್ರೂಪ್ ಸಂಸ್ಥಾಪಕ ಹಾಗೂ ಸಿಇಒ, ಬನಿಜಯ್ ಏಷ್ಯಾ ಮತ್ತು ಎಂಡೆಮೋಲ್ ಶೈನ್ ಇಂಡಿಯಾ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 13’ ಗ್ರ್ಯಾಂಡ್ ಪ್ರೀಮಿಯರ್ ಕಲರ್ಸ್ ಕನ್ನಡದಲ್ಲಿ ಸೆಪ್ಟಂಬರ್ 6ರಂದು ಸಂಜೆ 7:00 ಗಂಟೆಗೆ ಶುರುವಾಗಲಿದೆ.
ಇದನ್ನೂ ಓದಿ: ಖಾಕಿ ಖದರ್ನಲ್ಲಿ ಕರುನಾಡ ಚಕ್ರವರ್ತಿಯ ಮಿಂಚು: ಪವನ್ ಒಡೆಯರ್ - ಕೆವಿಎನ್ ಕಾಂಬಿನೇಷನ್‌ನಲ್ಲಿ ಸದ್ದು ಮಾಡುತ್ತಿದೆ 'ಬೇಲ್'

