ಶೂಟಿಂಗ್ ವೇಳೆ ಭೇಟಿ, ಸ್ನೇಹ, ಪ್ರೀತಿ, ವಿವಾಹ: ವಿಜಯ್ ರಶ್ಮಿಕಾಗೂ ಮೊದಲು ಸೆಟ್‌ನಲ್ಲಿ ಪ್ರೀತಿಸಿ ಮದುವೆಯಾದ ಸೆಲೆಬ್ರಿಟಿಗಳಿವರು
ಈ ತಾರಾಜೋಡಿ ತಮ್ಮ ಮೊದಲ ಚಿತ್ರದ (ಇಬ್ಬರೂ ಒಟ್ಟಿಗೆ ಸ್ಕ್ರೀನ್ ಶೇರ್) ಶೂಟಿಂಗ್ ಸೆಟ್‌ನಲ್ಲಿ ಪ್ರೀತಿ ಕಂಡುಕೊಂಡರು. ದೀರ್ಘಕಾಲ ಡೇಟಿಂಗ್ ನಡೆಸಿದ ನಂತರ ಹಸೆಮಣೆಯೇರಿದರು.

By ETV Bharat Entertainment Team
Published : February 26, 2026 at 1:09 PM IST
ಖ್ಯಾತ ತಾರಾ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಫೀಶಿಯಲ್ ಸೋಷಿಯಲ್ ಮೀಡಿಯಾದಲ್ಲಿ ಬುಧವಾರ ಸಂಜೆ ನಡೆದ ಅರಿಶಿಣ ಶಾಸ್ತ್ರದ ಪೋಸ್ಟ್ಗಳನ್ನು ವಿಜಯ್ ದೇವರಕೊಂಡ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇಂದು ಉದಯಪುರದ ರಾಯಲ್ ಹೋಟೆಲ್‌ನಲ್ಲಿ ಮದುವೆ ಸಂಭ್ರಮ ಸಾಗಿದ್ದು, ಕೇವಲ ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರು ಹಾಜರಿದ್ದಾರೆ.
ವಿಜಯ್ ಮತ್ತು ರಶ್ಮಿಕಾ ಎರಡು ಸಿನಿಮಾಗಳಲ್ಲಿ ತೆರೆಹಂಚಿಕೊಂಡಿದ್ದಾರೆ. 2018ರಿಂದಲೂ ಈ ಜೋಡಿ ಪ್ರೀತಿಯಲ್ಲಿದ್ದು, ಇಂದು ವಿವಾಹ ಸಂಭ್ರಮದಲ್ಲಿದ್ದಾರೆ. ಚಲನಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿ ನಂತರ ಮದುವೆಯಾದ ಅನೇಕ ಜೋಡಿಗಳು ನಮ್ಮ ಕಣ್ಣ ಮುಂದಿವೆ. ಅಂತಹ ಜನಪ್ರಿಯ ತಾರಾಜೋಡಿಗಳ ಮಾಹಿತಿ ಇಲ್ಲಿದೆ.
ಯಶ್ - ರಾಧಿಕಾ ಪಂಡಿತ್: ಕಿರುತೆರೆಯಿಂದ ಹಿರಿತೆರೆಗೆ ಒಟ್ಟಿಗೆ ಹೆಜ್ಜೆ ಹಾಕಿದ ಈ ಮಾದರಿ ದಂಪತಿ ಮೊದಲ ಬಾರಿಗೆ 'ನಂದಗೋಕುಲ' ಧಾರವಾಹಿಯಲ್ಲಿ ಕೆಲಸ ಮಾಡಿದರು. ನಂತರ ಡ್ರಾಮಾ ಮತ್ತು 'ಮೊಗ್ಗಿನ ಮನಸ್ಸು' ಸಿನಿಮಾಗಳಲ್ಲಿ ತೆರೆಹಂಚಿಕೊಂಡರು. ಈ ಜೋಡಿ ನಡುವಿನ ಸ್ನೇಹ ಪ್ರೀತಿಗೆ ತಿರುಗಿ 2016ರಲ್ಲಿ ಗೋವಾದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡರು. 2016ರ ಡಿಸೆಂಬರ್ 9ರಂದು ಬೆಂಗಳೂರಿನ ತಾಜ್ ವೆಸ್ಟ್ ಎಂಡ್ನಲ್ಲಿ ಅದ್ದೂರಿಯಾಗಿ ಸಪ್ತಪದಿ ತುಳಿದರು. ಇಬ್ಬರ ನಡುವಿನ ಪ್ರೀತಿ ಮದುವೆ ಸಂದರ್ಭ ಸಮೀಪಿಸುವವರೆಗೂ ಯಾರಿಗೂ ತಿಳಿದಿರಲಿಲ್ಲ. ಆ ಮಟ್ಟಿಗೆ ಗೌಪ್ಯತೆ ಕಾಪಾಡಿಕೊಂಡಿದ್ದರು. ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.
ದಿಗಂತ್ - ಐಂದ್ರಿತಾ ರೇ: ಇಬ್ಬರೂ 2008ರಲ್ಲಿ ಮನಸಾರೆ ಎಂಬ ಪ್ರೇಮ್ಕಹಾನಿಯಲ್ಲಿ ತೆರೆ ಹಂಚಿಕೊಂಡರು. ಸುಮಾರು 10 ವರ್ಷಗಳ ಡೇಟಿಂಗ್ ಬಳಿಕ 2018ರಲ್ಲಿ ಹಸೆಮಣೆಯೇರಿದರು.
ಡಾರ್ಲಿಂಗ್ ಕೃಷ್ಣ - ಮಿಲನಾ ನಾಗರಾಜ್: 2013ರ ನಮ್ ದುನಿಯಾ ನಮ್ ಸ್ಟೈಲ್ ಸಿನಿಮಾ ಸೆಟ್‌ನಲ್ಲಿ ಪರಿಚಿತರಾದ ಇವರು ಲವ್ ಮಾಕ್ಟೇಲ್ ಸಿನಿಮಾ ಯಶಸ್ಸಿನ ಬಳಿಕ ತಮ್ಮ ಪ್ರೀತಿಯನ್ನು ಬಹಿರಂಗಪಡಿಸಿದರು. ಬಳಿಕ, 2021ರ ಫೆಬ್ರವರಿ 14ರಂದು ಪ್ರೇಮಿಗಳ ದಿನದಂದು ಅದ್ಧೂರಿಯಾಗಿ ಹಸೆಮಣೆ ಏರಿದರು. ದಂಪತಿಗೆ ಪರಿ ಎಂಬ ಮುದ್ದಾದ ಮಗಳಿದ್ದಾಳೆ.
ತರುಣ್ ಸುಧೀರ್ - ಸೋನಾಲ್ ಮೊಂತೆರೋ: ರಾಬರ್ಟ್ ಸಿನಿಮಾ ಖ್ಯಾತಿಯ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಾಲ್ ಮೊಂತೆರೋ 2024ರ ಆಗಸ್ಟ್ನಲ್ಲಿ ಹಸೆಮಣೆಯೇರಿದರು. 'ರಾಬರ್ಟ್' ಸಿನಿಮಾ ಸಂದರ್ಭ ಭೇಟಿಯಾಗಿ, ನಂತರ ಸ್ನೇಹ ಪ್ರೀತಿಗೆ ತಿರುಗಿ ಸದ್ಯ ಮಾದರಿ ದಂಪತಿಯಾಗಿ ಗುರುತಿಸಿಕೊಂಡಿದ್ದಾರೆ.
ರಣ್ವೀರ್ ಸಿಂಗ್ - ದೀಪಿಕಾ ಪಡುಕೋಣೆ: ದೀಪ್ವೀರ್ ಜೋಡಿ ಮೊದಲು 2013ರ ಗೋಲಿಯೋಂ ಕಿ ರಾಸಲೀಲಾ - ರಾಮ್‌ಲೀಲಾ ಚಿತ್ರದ ಸೆಟ್‌ನಲ್ಲಿ ಭೇಟಿಯಾದರು. ಸೆಟ್‌ನಲ್ಲಿ ಆತ್ಮೀಯತೆ ಬೆಳೆಯಿತು. ನಂತರ ಕೆಲ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದರು. ಬಳಿಕ 2018ರ ನವೆಂಬರ್ನಲ್ಲಿ ಇಟಲಿಯಲ್ಲಿ ಅದ್ಧೂರಿಯಾಗಿ ಹಸೆಮಣೆಯೇರಿದರು. ಪ್ರೇಮಪಕ್ಷಿಗಳಿಗೆ ದುವಾ ಎಂಬ ಮಗಳಿದ್ದಾಳೆ.
ಸಿದ್ಧಾರ್ಥ್ ಮಲ್ಹೋತ್ರಾ - ಕಿಯಾರಾ ಅಡ್ವಾಣಿ: ಬಾಲಿವುಡ್ನ ಈ ಮುದ್ದಾದ ಜೋಡಿ 2020ರ ಶೇರ್ಷಾ ಚಿತ್ರದ ಸೆಟ್‌ನಲ್ಲಿ ಭೇಟಿಯಾದರು. 2023ರಲ್ಲಿ ಹಸೆಮಣೆಯೇರಿದ್ದು, ಇತ್ತೀಚೆಗಷ್ಟೇ ಪೋಷಕರಾಗಿ ಭಡ್ತಿ ಪಡೆದಿದ್ದಾರೆ.
ರಣ್ಬೀರ್ ಕಪೂರ್ - ಆಲಿಯಾ ಭಟ್: ರಾಲಿಯಾ ಜೋಡಿ 2017ರಲ್ಲಿ ಬ್ರಹ್ಮಾಸ್ತ್ರ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದರು. ಈ ಸಮಯದಲ್ಲಿ ಪ್ರೀತಿಸತೊಡಗಿದರು. 2022ರಲ್ಲಿ ವಿವಾಹವಾಗಿ, ಅದೇ ವರ್ಷ ಮಗಳನ್ನು ಬರಮಾಡಿಕೊಂಡರು.
ರಿತೇಶ್ ದೇಶ್ಮುಖ್ - ಜೆನಿಲಿಯಾ ಡಿ'ಸೋಜಾ: 2003ರಲ್ಲಿ ತೆರೆಕಂಡ ಮುಝೆ ಮೇರಿ ಕಸಮ್ ಚಿತ್ರದಲ್ಲಿ ಇಬ್ಬರೂ ತೆರೆ ಹಂಚಿಕೊಂಡರು. ಇಬ್ಬರೂ ಒಟ್ಟಿಗೆ ನಟಿಸಿದ ಮತ್ತು ತಮ್ಮ ವೃತ್ತಿಜೀವನದ ಮೊದಲ ಚಿತ್ರವಿದು. ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆದಿದ್ದು, ಅಲ್ಲಿ ಮೊದಲ ಬಾರಿ ಭೇಟಿಯಾದರು. ಸ್ನೇಹ ಪ್ರೀತಿಗೆ ತಿರುಗಿ 2012ರಲ್ಲಿ ವಿವಾಹವಾದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಅಜಯ್ ದೇವ್ಗನ್ - ಕಾಜೋಲ್: ಮೊದಲ ಬಾರಿಗೆ 1995ರಲ್ಲಿ ಒಟ್ಟಿಗೆ ಕೆಲಸ ಮಾಡಿದರು. 1998ರ ಚಲನಚಿತ್ರ ಪ್ಯಾರ್ ತೋ ಹೋನಾ ಹಿ ಥಾ ಮೂಲಕ ಜೋಡಿ ವ್ಯಾಪಕ ಗಮನ ಸೆಳೆಯಿತು. ಅದೇ ವರ್ಷ ಹಸೆಮಣೆಯೇರಿದ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ.
ಅಮಿತಾಭ್ ಬಚ್ಚನ್ ಮತ್ತು ಜಯಾ ಬಚ್ಚನ್: ಈ ದಿಗ್ಗಜ ತಾರೆಯರು ಜಂಜೀರ್ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಪ್ರೀತಿಸಿ ಅದೇ ವರ್ಷ (1973) ವಿವಾಹವಾದರು. ಈ ಜೋಡಿ ಮದುವೆಗೆ ಮೊದಲು ಲಂಡನ್‌ಗೆ ಪ್ರಯಾಣಿಸಲು ಯೋಜಿಸಿದ್ದರು. ಆದರೆ ಬಿಗ್ ಬಿ ಅವರ ತಂದೆ ಅವರಿಗೆ ಮೊದಲು ಮದುವೆಯಾಗಿ ನಂತರ ಬಯಸಿದ ಸ್ಥಳಕ್ಕೆ ಹೋಗುವಂತೆ ಸಲಹೆ ನೀಡಿದರು. ಬಿಗ್ ಬಿ ತನ್ನ ತಂದೆಯ ಸಲಹೆಯನ್ನು ಪಾಲಿಸಿ ಮದುವೆಯಾದರು.
ನಟಿ ಸಮಂತಾ ರುತ್ ಪ್ರಭು - ನಿರ್ದೇಶಕ ರಾಜ್ ನಿಧಿಮೋರು: ದಕ್ಷಿಣ ಚಿತ್ರರಂಗದ ಖ್ಯಾತ ನಟಿ ಸಮಂತಾ ರುತ್ ಪ್ರಭು ಮತ್ತು ನಿರ್ದೇಶಕ ರಾಜ್ ನಿಧಿಮೋರು 2025ರ ಡಿಸೆಂಬರ್ 1ರಂದು ತಮಿಳುನಾಡಿನ ಕೊಯಿಮತ್ತೂರಿನ ಇಶಾ ಯೋಗ ಸೆಂಟರ್ನಲ್ಲಿರುವ ಲಿಂಗ ಭೈರವಿ ದೇವಸ್ಥಾನದಲ್ಲಿ 'ಭೂತ ಶುದ್ಧಿ ವಿವಾಹ' ಪದ್ಧತಿಯಲ್ಲಿ ದಾಂಪತ್ಯ ಜೀವನ ಶುರು ಮಾಡಿದ್ರು. 'ಫ್ಯಾಮಿಲಿ ಮ್ಯಾನ್' ವೆಬ್ ಸರಣಿ ಸಮಯದಲ್ಲಿ ಸಮಂತಾ ಮತ್ತು ರಾಜ್ ಭೇಟಿಯಾಗಿದ್ದರು. ನಂತರ ಕೆಲ ಪ್ರಾಜೆಕ್ಟ್ಗಳಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: 'ಪ್ರೀತಿ, ವಾತ್ಸಲ್ಯದಿಂದ ತುಂಬಿರುವ ಈ ನಿಜ ಜೀವನದ ದೈವಿಕ ಕಥೆಯು ಸಿನಿಮಾವನ್ನು ಮೀರಿಸಲಿದೆ': ವಿರೋಶ್ಗೆ ಪಿಎಂ ಆಶೀರ್ವಾದ
ಇದನ್ನೂ ಓದಿ: 'ಟಾಕ್ಸಿಕ್'ಗೂ ಮುನ್ನ ಯಶ್ ಗಡ್ಡಕ್ಕೆ ಕತ್ತರಿ ಹಾಕಿಸಿದ ಸಿನಿಮಾ ಯಾವುದು? ಕೆಜಿಎಫ್ 2 ಹಿನ್ನೆಲೆ ಸ್ಥಗಿತ!

