ETV Bharat / entertainment

ಆಸ್ಕರ್ ಅಂಗಳದಲ್ಲಿ ಕನ್ನಡ ಚಿತ್ರಗಳು: ರಾಷ್ಟ್ರಪ್ರಶಸ್ತಿ ಬಳಿಕ ಹೊಂಬಾಳೆ ಫಿಲ್ಮ್ಸ್​​ನ ಮತ್ತೊಂದು ಮೈಲಿಗಲ್ಲು

ಆಸ್ಕರ್ ಅಂಗಳದಲ್ಲಿ ಹೊಂಬಾಳೆ ಫಿಲ್ಮ್ಸ್‌ನ 'ಕಾಂತಾರ ಚಾಪ್ಟರ್ 1' ಮತ್ತು 'ಮಹಾವತಾರ ನರಸಿಂಹ' ಚಿತ್ರಗಳು ಸ್ಪರ್ಧೆಗಿಳಿದಿವೆ.

Kannada films in Prestigious Oscar race
ಆಸ್ಕರ್ ಅಂಗಳದಲ್ಲಿ ಕನ್ನಡ ಚಿತ್ರಗಳು (Photo: Film Poster)
author img

By ETV Bharat Entertainment Team

Published : January 9, 2026 at 12:43 PM IST

3 Min Read
Choose ETV Bharat

ಭಾರತೀಯ ಚಿತ್ರರಂಗದ ಹೆಮ್ಮೆಯ ನಿರ್ಮಾಣ ಸಂಸ್ಥೆ 'ಹೊಂಬಾಳೆ ಫಿಲ್ಮ್ಸ್' ಜಾಗತಿಕ ವೇದಿಕೆಯಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. 2025ರ ಸಾಲಿನ ಜಾಗತಿಕ ಬ್ಲಾಕ್​​ಬಸ್ಟರ್ ಹಿಟ್ ಚಿತ್ರಗಳಾದ 'ಕಾಂತಾರ: ಚಾಪ್ಟರ್ 1' ಮತ್ತು 'ಮಹಾವತಾರ ನರಸಿಂಹ', ವಿಶ್ವದ ಅತ್ಯುನ್ನತ ಚಲನಚಿತ್ರ ಪ್ರಶಸ್ತಿಯಾದ ಆಸ್ಕರ್‌ನಲ್ಲಿ ಸ್ಪರ್ಧೆಗಿಳಿದಿವೆ.

ಭಾರತದ ಪೌರಾಣಿಕ ಅನಿಮೇಟೆಡ್ ಸಿನಿಮಾ 'ಮಹಾವತಾರ ನರಸಿಂಹ' ಅತ್ಯುತ್ತಮ ಅನಿಮೇಟೆಡ್ ಚಲನಚಿತ್ರ ವಿಭಾಗದಲ್ಲಿ ಮತ್ತು 'ಕಾಂತಾರ: ಎ ಲೆಜೆಂಡ್ - ಅಧ್ಯಾಯ 1' ಅತ್ಯುತ್ತಮ ಚಿತ್ರ ಸ್ಪರ್ಧೆಗೆ (Best Picture contending race) ಪ್ರವೇಶ ಪಡೆದುಕೊಂಡಿದ್ದು, ಆಸ್ಕರ್​​ 2026ರ ಫೈನಲ್​​ ನಾಮಿನೇಷನ್ಸ್​​ ಜನವರಿ 22ರಂದು ಪ್ರಕಟಗೊಳ್ಳಲಿದೆ.

ಹೊಂಬಾಳೆ ಫಿಲ್ಮ್ಸ್‌ ಕಥೆಗಳ ಶಕ್ತಿ ಪ್ರದರ್ಶನ: ಈ ಎರಡೂ ಚಿತ್ರಗಳು ಆಸ್ಕರ್‌ನ ಅತ್ಯಂತ ಪ್ರತಿಷ್ಠಿತ ವಿಭಾಗಗಳಲ್ಲಿ ಪ್ರಶಸ್ತಿಗೆ ಸ್ಪರ್ಧಿಸಲು ಅರ್ಹತೆ ಪಡೆದಿವೆ. ಇದು ಕನ್ನಡ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್‌ ಕಥೆಗಳ ಶಕ್ತಿ ಮತ್ತು ಜಾಗತಿಕ ಗುಣಮಟ್ಟಕ್ಕೆ ಸಂದ ಗೌರವವಾಗಿದೆ.

ಭಾರತೀಯ ಅನಿಮೇಷನ್ ಲೋಕದ ಕ್ರಾಂತಿ: 'ಮಹಾವತಾರ ನರಸಿಂಹ' ಚಿತ್ರ 'ಅತ್ಯುತ್ತಮ ಅನಿಮೇಟೆಡ್ ಫೀಚರ್ ಫಿಲ್ಮ್' ವಿಭಾಗದಲ್ಲಿ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಿದೆ. ಆ ಮೂಲಕ ಈ ವಿಭಾಗದಲ್ಲಿ ಆಯ್ಕೆಯಾದ ಭಾರತದ ಮೊದಲ ಅನಿಮೇಷನ್ ಚಿತ್ರ ಎಂಬ ಇತಿಹಾಸ ಬರೆದಿದೆ.

ಹೊಂಬಾಳೆ ಫಿಲ್ಮ್ಸ್‌ ಸಾಧನೆ: ಈ ವರ್ಷ ಆಸ್ಕರ್‌ನ ಸಾಮಾನ್ಯ ಪಟ್ಟಿಯಲ್ಲಿರುವ ಭಾರತದ ಕೇವಲ 4 ಚಿತ್ರಗಳ ಪೈಕಿ 2 ಚಿತ್ರಗಳು ಹೊಂಬಾಳೆ ಸಂಸ್ಥೆಯದ್ದಾಗಿರುವುದು ಗಮನಾರ್ಹವಾಗಿದೆ.

ಆಸ್ಕರ್​​ ರೇಸ್​ನಲ್ಲಿರುವ ಭಾರತೀಯ ಚಿತ್ರಗಳು: ಇಂಟರ್​ನ್ಯಾಷನಲ್​​ ಫೀಚರ್​ ಫಿಲ್ಮ್​​ ಕ್ಯಾಟಗರಿಯಲ್ಲಿ ಪ್ರಪಂಚದಾದ್ಯಂತದ 15 ಸಿನಿಮಾಗಳು ಅಂತಿಮ ಸುತ್ತಿನ ಮತದಾನಕ್ಕೆ ಆಯ್ಕೆಯಾಗಿವೆ. ಈ ಲಿಸ್ಟ್​ನಲ್ಲಿ, ಭಾರತದ 'ಹೋಮ್‌ಬೌಂಡ್' ಚಿತ್ರವಿದೆ. ಅತ್ಯುತ್ತಮ ಚಿತ್ರ ಸ್ಪರ್ಧೆಗೆ ಪ್ರವೇಶ ಪಡೆದ 201 ಅರ್ಹ ಚಲನಚಿತ್ರಗಳ ಪೈಕಿ 'ಕಾಂತಾರ: ಎ ಲೆಜೆಂಡ್ - ಅಧ್ಯಾಯ 1'ರ ಜೊತೆಗೆ ಅನುಪಮ್ ಖೇರ್ ಅವರ 'ತನ್ವಿ: ದಿ ಗ್ರೇಟ್' ಚಿತ್ರವೂ ಇದೆ.

ಹೊಂಬಾಳೆ ಫಿಲ್ಮ್ಸ್‌ಗಿದು ಹೆಮ್ಮೆಯ ಕ್ಷಣ: ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ: ಚಾಪ್ಟರ್ 1' ತನ್ನ ಸಾಂಸ್ಕೃತಿಕ ವಿಚಾರಗಳ ಮೂಲಕ ಜಗತ್ತನ್ನು ಸೆಳೆದಿದ್ದರೆ, ಅಶ್ವಿನ್ ಕುಮಾರ್ ನಿರ್ದೇಶನದ 'ಮಹಾವತಾರ ನರಸಿಂಹ' ತನ್ನ ದೃಶ್ಯ ವೈಭವದ ಮೂಲಕ ಅನಿಮೇಷನ್​ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದೆ. ಈ ಎರಡೂ ಚಿತ್ರಗಳು ಈಗ ಆಸ್ಕರ್‌ನ ಪ್ರಮುಖ ವಿಭಾಗಗಳಲ್ಲಿ ಸ್ಪರ್ಧೆಗೆ ಇಳಿಯಲಿವೆ. ಭಾರತೀಯ ಕಥೆಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟದೊಂದಿಗೆ ಕೊಂಡೊಯ್ಯುತ್ತಿರುವ ವಿಜಯ್ ಕಿರಗಂದೂರು ನೇತೃತ್ವದ ಹೊಂಬಾಳೆ ಫಿಲ್ಮ್ಸ್‌ಗಿದು ಅತ್ಯಂತ ಹೆಮ್ಮೆಯ ಕ್ಷಣವಾಗಿದೆ.

ಇದನ್ನೂ ಓದಿ: Interview: ಆಟೋ ಡ್ರೈವರ್ ಆಗಿದ್ದ ರವಿವರ್ಮ ಇಂದು ಪ್ಯಾನ್ ಇಂಡಿಯಾ ಸಾಹಸ ನಿರ್ದೇಶಕ

ಹೊಂಬಾಳೆ ಫಿಲ್ಮ್ಸ್ ಪ್ರೊಡಕ್ಷನ್​​ ಹೌಸ್​ ಅನ್ನು 2012ರಲ್ಲಿ ಬೆಂಗಳೂರು ಮೂಲದ ವಿಜಯ್ ಕಿರಗಂದೂರ್ ಹಾಗೂ ಚಲುವೆ ಗೌಡ ಸ್ಥಾಪಿಸಿದರು. ಸಂಸ್ಥೆಯ ಮೊದಲ ಸಿನಿಮಾ 2014ರಲ್ಲಿ ಮೂಡಿಬಂತು. ಪುನೀತ್ ರಾಜ್‌ಕುಮಾರ್ ಮುಖ್ಯಭೂಮಿಕೆಯ ನಿನ್ನಿಂದಲೆ ಚಿತ್ರದಿಂದ ನಿರ್ಮಾಣ ಪಯಣ ಪ್ರಾರಂಭವಾಗಿ, ಮಾಸ್ಟರ್​ಪೀಸ್, ರಾಜಕುಮಾರ, ಕೆಜಿಎಫ್​ ಚಾಪ್ಟರ್ 1, ಯುವರತ್ನ, ಕೆಜಿಎಫ್​ ಚಾಪ್ಟರ್ 2, ಕಾಂತಾರ, ರಾಘವೇಂದ್ರ ಸ್ಟೋರ್ಸ್, ಧೂಮಂ, ಸಲಾರ್ ಪಾರ್ಟ್ಸ್ 1, ರಘು ತಾತ, ಯುವ, ಬಘೀರ, ಕಾಂತಾರ ಚಾಪ್ಟರ್ 1 ಚಿತ್ರಗಳನ್ನು ಈವರೆಗೆ ನಿರ್ಮಾಣ ಮಾಡಿದೆ. ಬಹುತೇಕ ಎಲ್ಲವೂ ಸೂಪರ್ ಹಿಟ್, ಬ್ಲಾಕ್​​ಬಸ್ಟರ್ ಆಗಿ ಹೊರಹೊಮ್ಮಿದೆ. ಸದ್ಯ ಸಂಸ್ಥೆಯ 2 ಸಿನಿಮಾಗಳು ಆಸ್ಕರ್​​ ಅಂಗಳದಲ್ಲಿರೋದು, ಕನ್ನಡ ಚಿತ್ರರರಂಗದ ಕೀರ್ತಿಯನ್ನು ಹೆಚ್ಚಿಸಿದೆ.

ಇದನ್ನೂ ಓದಿ: ಉಪ್ಪಿ ಬಣ್ಣ ಹಚ್ಚಿ 37 ವರ್ಷ: ಡೈರೆಕ್ಷನ್ To ಹೀರೋ; ಅಪಶಕುನಗಳಿಗೆ ಕುಗ್ಗದ ರಿಯಲ್​ ಸ್ಟಾರ್​​ ರಿಯಲ್​ ಸ್ಟೋರಿ

2022ರಲ್ಲಿ ಮೂಡಿಬಂದ ಹೊಂಬಾಳೆ ಫಿಲ್ಮ್ಸ್​ನ 'ಕಾಂತಾರ' 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ 'ಅತ್ಯುತ್ತಮ ಮನರಂಜನಾ ಸಿನಿಮಾ'ವೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ನಟ, ನಿರ್ದೇಶಕ, ಬರಹಗಾರ ರಿಷಬ್​ ಶೆಟ್ಟಿ 'ಅತ್ಯುತ್ತಮ ನಟ' ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಅದೇ ವರ್ಷ ಹೊಂಬಾಳೆ ಫಿಲ್ಮ್ಸ್​ನ ಕೆಜಿಎಫ್​ 2 ಸಿನಿಮಾ ಅತ್ಯುತ್ತಮ ಆ್ಯಕ್ಷನ್ ಡೈರೆಕ್ಷನ್ ಅವಾರ್ಡ್​​ ಅನ್ನೂ ಪಡೆದುಕೊಂಡಿತ್ತು. ಸಾಹಸ ನಿರ್ದೇಶಕರಾದ ಅನ್ಬುಮಣಿ ಎಂಎಂ ಮತ್ತು ಅರಿವುಮಣಿ ಪ್ರಶಸ್ತಿ ಸ್ವೀಕರಿಸಿದ್ದರು. ಇದೀಗ ಹೊಂಬಾಳೆ ಫಿಲ್ಮ್ಸ್​ನ 2 ಚಿತ್ರಗಳು ಆಸ್ಕರ್​ ಅಂಗಳದಲ್ಲಿದ್ದು, ಫೈನಲ್​​ ನಾಮಿನೇಷನ್ಸ್​​​ಗಾಗಿ ಕನ್ನಡಿಗರು ಎದುರು ನೋಡುತ್ತಿದ್ದಾರೆ.