4 ದಿನಗಳಲ್ಲಿ 100 ಕೋಟಿ ದಾಟಿದ್ದ ಅಕ್ಷಯ್ ಕುಮಾರ್ ನಟನೆಯ 'ಭೂತ್ ಬಂಗ್ಲಾ' 5ನೇ ದಿನ ಗಳಿಸಿದ್ದೆಷ್ಟು?
ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಮುಖ್ಯಭೂಮಿಕೆಯ 'ಭೂತ್ ಬಂಗ್ಲಾ' ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ.

By ETV Bharat Entertainment Team
Published : April 22, 2026 at 2:29 PM IST
ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಮುಖ್ಯಭೂಮಿಕೆಯ 'ಭೂತ್ ಬಂಗ್ಲಾ' ಕಳೆದ ಶುಕ್ರವಾರ, ಏಪ್ರಿಲ್ 17ರಂದು ಚಿತ್ರಮಂದಿರಗಳನ್ನು ತಲುಪಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ. ರಣ್ವೀರ್ ಸಿಂಗ್ ನಟನೆಯ ಧುರಂಧರ್ 2 ಕ್ರೇಜ್ ಕುಗ್ಗದ ಕಾರಣ ಈ ಸಿನಿಮಾ ಗಳಿಕೆ ಮೇಲೆ ಆತಂಕವಿತ್ತು. ಆದ್ರೆ ಹಾರರ್ ಕಾಮಿಡಿ ಸಿನಿಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
4 ದಿನಗಳಲ್ಲಿ 100 ಕೋಟಿ ರೂಪಾಯಿಯ ಕ್ಲಬ್‌ಗೆ ಪ್ರವೇಶ: ಹೌದು, ಜಾಗತಿಕವಾಗಿ ಚಿತ್ರ ಈಗಾಗಲೇ ಪ್ರಮುಖ ಮೈಲಿಗಲ್ಲನ್ನು ದಾಟುವಲ್ಲಿ ಯಶಸ್ವಿಯಾಗಿದೆ. ಪೇಯ್ಡ್ ಪ್ರೀಮಿಯರ್ನಿಂದ ಹಿಡಿದು ಮೊದಲ ಸೋಮವಾರದವರೆಗಿನ ಅಂಕಿ-ಅಂಶಗಳೊಂದಿಗೆ, ಚಿತ್ರ ವಿಶ್ವದಾದ್ಯಂತ 100 ಕೋಟಿ ರೂಪಾಯಿಯ ಕ್ಲಬ್ ಪ್ರವೇಶಿಸಿದೆ. 5ನೇ ದಿನದ ಕಲೆಕ್ಷನ್ ಎಷ್ಟಿದೆ ಎಂಬುದರ ಮಾಹಿತಿ ತಿಳಿಯೋಣ..
ಭೂತ್ ಬಂಗ್ಲಾದ ಐದನೇ ದಿನದ ಕಲೆಕ್ಷನ್: ಪ್ರಿಯದರ್ಶನ್ ಆ್ಯಕ್ಷನ್ ಕಟ್ ಹೇಳಿರುವ ಚಿತ್ರ ತನ್ನ 5ನೇ ದಿನದಂದು ಭಾರತದಲ್ಲಿ 9.28 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಈ ಪೈಕಿ ನೆಟ್ ಕಲೆಕ್ಷನ್ 8 ಕೋಟಿ ರೂಪಾಯಿ ಆಗಿದೆ. ಚಿತ್ರ ತನ್ನ ಮೊದಲ ಸೋಮವಾರ (4ನೇ ದಿನ) ಭಾರತದಲ್ಲಿ 7.97 ಕೋಟಿ ರೂಪಾಯಿ (6.75 ಕೋಟಿ ರೂಪಾಯಿ ನೆಟ್ ಕಲೆಕ್ಷನ್) ಗ್ರಾಸ್ ಕಲೆಕ್ಷನ್ ಮಾಡಿತ್ತು. ಈ ಅಂಕಿ-ಅಂಶಗಳಿಗೆ ಹೋಲಿಸಿದರೆ ಚಿತ್ರ ತನ್ನ ಮೊದಲ ಮಂಗಳವಾರ ಗಳಿಕೆಯಲ್ಲಿ ಏರಿಕೆ ಕಂಡಿದೆ. ವಾರದ ದಿನಗಳಲ್ಲಿಯೂ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಈ ವಾರಾಂತ್ಯದ ಹೊತ್ತಿಗೆ 200 ಕೋಟಿ ರೂಪಾಯಿಯ ಕ್ಲಬ್ ಪ್ರವೇಶಿಸಬಹುದು ಎಂದು ಅಂದಾಜಿಸಲಾಗಿದೆ.
ವಿಶ್ವದಾದ್ಯಂತದ ಒಟ್ಟು ಕಲೆಕ್ಷನ್: ವಾಮಿಕಾ ಗಬ್ಬಿ ನಟಿಸಿರುವ ಸಿನಿಮಾ ವಿದೇಶದಿಂದ ಈವರೆಗೆ ಒಟ್ಟು 31.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಜಗತ್ತಿನಾದ್ಯಂತ ಚಿತ್ರ ತನ್ನ 5 ದಿನಗಳಲ್ಲಿ ಒಟ್ಟು 118.12 ಕೋಟಿ ರೂಪಾಯಿಯ ವ್ಯವಹಾರ ನಡೆಸಿದೆ.
- ಒಟ್ಟು ಗ್ಲೋಬಲ್ ಕಲೆಕ್ಷನ್: 118.12 ಕೋಟಿ ರೂಪಾಯಿ
- ಇಂಡಿಯಾ ಗ್ರಾಸ್ ಕಲೆಕ್ಷನ್: 86.62 ಕೋಟಿ ರೂಪಾಯಿ
- ಇಂಡಿಯಾ ನೆಟ್ ಕಲೆಕ್ಷನ್: 72.7 ಕೋಟಿ ರೂಪಾಯಿ
- ಕೇವಲ ವಿದೇಶದ ಕಲೆಕ್ಷನ್: 31.50 ಕೋಟಿ ರೂಪಾಯಿ
- ಈವರೆಗೆ ಪ್ರದರ್ಶನ ಕಂಡ ಶೋಗಳ ಸಂಖ್ಯೆ: 60,639
ಇದನ್ನೂ ಓದಿ: 'ದರ್ಶನ್ ಮತ್ತು ನನ್ನ ಹೆಸರಿನ ದುರ್ಬಳಕೆ': ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ ವಿರುದ್ಧ ದಿನಕರ್ ತೂಗುದೀಪ ಆಕ್ರೋಶ
ಅಕ್ಷಯ್ ಕುಮಾರ್ ಮುಖ್ಯಭೂಮಿಕೆಯ ಚಿತ್ರದಲ್ಲಿ ವಾಮಿಕಾ ಗಬ್ಬಿ, ಟಬು, ಪರೇಶ್ ರಾವಲ್, ರಾಜ್‌ಪಾಲ್ ಯಾದವ್, ಅಸ್ರಾನಿ ಮತ್ತು ಜಿಶು ಸೇನ್‌ಗುಪ್ತಾ ಅಭಿನಯಿಸಿದ್ದಾರೆ. ಕೇಪ್ ಆಫ್ ಗುಡ್ ಫಿಲ್ಮ್ಸ್ ಸಹಯೋಗದೊಂದಿಗೆ ಬಾಲಾಜಿ ಮೋಷನ್ ಪಿಕ್ಚರ್ಸ್ ಅಡಿಯಲ್ಲಿ ಏಕ್ತಾ ಆರ್ ಕಪೂರ್, ಶೋಭಾ ಕಪೂರ್, ಅಕ್ಷಯ್ ಕುಮಾರ್ ನಿರ್ಮಿಸಿದ್ದಾರೆ.
ಇದನ್ನೂ ಓದಿ: 'ಇದು ಆರಂಭವಷ್ಟೇ': ಚಿತ್ರರಂಗದಲ್ಲಿ 20 ವರ್ಷ ಪೂರೈಸಿದ ಗಣೇಶ್ ಅಭಿಮಾನಿಗಳಿಗೆ ಕೊಟ್ಟ ಭರವಸೆಯೇನು?
ಹೇರಾ ಫೇರಿ (2000), ಗರಂ ಮಸಾಲಾ (2005), ಭಾಗಂ ಭಾಗ್ (2006), ಭೂಲ್ ಭುಲೈಯ್ಯಾ (2007), ದೇ ದನಾ ದನ್ (2009) ಮತ್ತು ಖಟ್ಟಾ ಮೀಠಾ (2010) ಸಿನಿಮಾಗಳು ಜನಪ್ರಿಯ ನಟ ಅಕ್ಷಯ್ ಕುಮಾರ್ ಮತ್ತು ಖ್ಯಾತ ನಿರ್ದೇಶಕ ಪ್ರಿಯದರ್ಶನ್ ಕಾಂಬಿನೇಶನ್ನಲ್ಲಿ ಮೂಡಿಬಂದಿದ್ದವು. ಸರಿ-ಸುಮಾರು 15 ವರ್ಷಗಳ ಬಳಿಕ ಈ ನಟ ನಿರ್ದೇಶಕ ಕಾಂಬಿನೇಶನ್ನಲ್ಲಿ ಸಿನಿಮಾ ಮೂಡಿಬಂದಿದ್ದು, ಬಹುತೇಕ ಪ್ರೇಕ್ಷಕರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಆಕಾಶ್ ಕೌಶಿಕ್ ಕಥೆ ಬರೆದಿದ್ದು, ಚಿತ್ರಕಥೆಯನ್ನು ಪ್ರಿಯದರ್ಶನ್, ರೋಹನ್ ಶಂಕರ್, ಅಭಿಲಾಷ್ ನಾಯರ್ ಬರೆದಿದ್ದಾರೆ. ಈ ಚಿತ್ರ ಕಥೆ ಮಂಗಲ್‌ಪುರದಲ್ಲಿ ಒಂದು ಅರಮನೆಯನ್ನು ಆನುವಂಶಿಕವಾಗಿ ಪಡೆಯುವ ಮತ್ತು ಅಲ್ಲಿ ತನ್ನ ಸಹೋದರಿಯ ಮದುವೆಯನ್ನು ಯೋಜಿಸುವ ಅರ್ಜುನ್ ಸುತ್ತ ಸಾಗುತ್ತದೆ. ಅಲೌಕಿಕ ಘಟನೆಗಳು ಮತ್ತು ಹಾಸ್ಯ ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಯಶಸ್ವಿಯಾಗಿದೆ.

