Photo: ಮಾಜಿ ಸಂಸದರ ಪುತ್ರಿ ರಚನಾ ಜೊತೆ ದಾಂಪತ್ಯಕ್ಕೆ ಕಾಲಿಟ್ಟ ನಟ ದುಶ್ಯಂತ್
ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್.ಶ್ರೀನಿವಾಸ್ ಅವರ ಪುತ್ರ, ನಟ ದುಷ್ಯಂತ್ ಹಾಗೂ ಮಾಜಿ ಸಂಸದ ಮುದ್ದ ಹನುಮೇಗೌಡರ ಪುತ್ರಿ ರಚನಾ ಇಂದು ಹಸೆಮಣೆಯೇರಿದ್ದಾರೆ.

By ETV Bharat Entertainment Team
Published : February 26, 2026 at 5:07 PM IST
ಕನ್ನಡ ಚಿತ್ರರಂಗದಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಉದಯಪುರದಲ್ಲಿಂದು ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅದ್ಧೂರಿಯಾಗಿ ಹಸೆಮಣೆ ಏರಿದ್ದು, ಬೆಂಗಳೂರಿನಲ್ಲಿ ನಟ ದುಷ್ಯಂತ್ ಅವರು ರಚನಾ ಅವರ ಕೈಹಿಡಿದಿದ್ದಾರೆ.
ಹೌದು, ಕಳೆದ ವರ್ಷ ಗತ ವೈಭವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ದುಷ್ಯಂತ್, ಮಾಜಿ ಸಂಸದ ಮುದ್ದಹನುಮೇಗೌಡರ ಪುತ್ರಿ ರಚನಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಂದು ಬೆಂಗಳೂರಿನ ಅರಮನೆ ಮೈದಾನದ ಚಾಮರ ವಜ್ರದಲ್ಲಿ ನಡೆದ ಅದ್ಧೂರಿ ವಿವಾಹ ಸಮಾರಂಭದಲ್ಲಿ ದುಷ್ಯಂತ್ ರಚನಾ ಜೊತೆ ಸಪ್ತಪದಿ ತುಳಿದಿದ್ದಾರೆ. ಇತ್ತೀಚೆಗೆ ನಿಶ್ಚಿತಾರ್ಥ ಸಮಾರಂಭ ನಡೆದಿತ್ತು.

ಈ ಹೊಸ ಜೋಡಿಗೆ ನಟ ಡಾಲಿ ಧನಂಜಯ್, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‍ಕುಮಾರ್, ರಾಜಕೀಯ ಗಣ್ಯರಾದ ಕೆ.ಜೆ ಜಾರ್ಜ್, ಕೆ.ಎನ್.ರಾಜಣ್ಣ, ಕುಸುಮಾ ಹನುಮಂತರಾಯಪ್ಪ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಶುಭಹಾರೈಸಿ ಆಶೀರ್ವದಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೋ, ವಿಡಿಯೋಗಳು ವೈರಲ್ ಆಗುತ್ತಿದ್ದು, ನವದಂಪತಿ ದುಷ್ಯಂತ್ ರಚನಾಗೆ ಶುಭ ಹಾರೈಕೆಗಳು ಹರಿದುಬರುತ್ತಿವೆ.
ಸಿಂಪಲ್ ಸುನಿ ನಿರ್ದೇಶನದ ʻಗತವೈಭವʼ ಸಿನಿಮಾ ಮೂಲಕ ನಾಯಕ ನಟನಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿರುವ ದುಷ್ಯಂತ್, ತುಮಕೂರು ಜಿಲ್ಲೆಯ ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್.ಶ್ರೀನಿವಾಸ್ ಅವರ ಪುತ್ರ. ಈ ಮದುವೆ ಮೂಲಕ ಎರಡು ಪ್ರಭಾವಿ ರಾಜಕೀಯ ಕುಟುಂಬಗಳು ಸಂಬಂಧ ಬೆಳೆಸುತ್ತಿವೆ. ಮಾರ್ಚ್ 1ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಗತವೈಭವ ಚಿತ್ರದಲ್ಲಿ ನವ ಪ್ರತಿಭೆ ದುಶ್ಯಂತ್ ನಾಯಕನಾಗಿ ಕಾಣಿಸಿಕೊಂಡರೆ, ಚುಟುಚುಟು ಬ್ಯೂಟಿ ಆಶಿಕಾ ರಂಗನಾಥ್ ನಾಯಕಿಯಾಗಿ ನಟಿಸಿದ್ದರು. 2025ರ ನವೆಂಬರ್ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಈ ಚಿತ್ರ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಪುರಾಣದ ಕಥೆಯ ಜೊತೆಗೆ ರೊಮ್ಯಾಂಟಿಕ್ ಲವ್ ಸ್ಟೋರಿಯನ್ನು ಈ ಚಿತ್ರ ಒಳಗೊಂಡಿತ್ತು.
ಇನ್ನೂ ಮೂಲತಃ ಕರ್ನಾಟಕದ ಕೊಡಗಿನವರಾದ ನ್ಯಾಷನಲ್ ಕ್ರಶ್ ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ ಮತ್ತು ಟಾಲಿವುಡ್ ಸೂಪರ್ ಸ್ಟಾರ್ ವಿಜಯ್ ದೇವರಕೊಂಡ ಇಂದು ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ಹಸೆಮಣೆಯೇರಿದ್ದಾರೆ. ಬೆಳಗ್ಗೆ 10.10ಕ್ಕೆ ಕೆಲವೇ ಸಂಖ್ಯೆಯ ಕುಟುಂಬಸ್ಥರು, ಆತ್ಮೀಯರ ಸಮ್ಮುಖದಲ್ಲಿ ಅದ್ಧೂರಿ ಮದುವೆ ಜರುಗಿದ್ದು, ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.
ಇದನ್ನೂ ಓದಿ: 'ದರ್ಶನ್ ಆ ಕೃತ್ಯಕ್ಕೆ ಕೈ ಹಾಕಿಲ್ಲವೆಂಬ ನಂಬಿಕೆಯಿದೆ, ಕಾಲ ಉತ್ತರಿಸಲಿದೆ': 'ಹಯಗ್ರೀವ' ನಟ ಧನ್ವೀರ್ ಗೌಡ ಸಂದರ್ಶನ
ಬೆಳಗ್ಗೆ ವರನ ಕಡೆಯಿಂದ ತೆಲುಗು ಸಂಪ್ರದಾಯಗಳ ಪ್ರಕಾರ ವಿವಾಹ ಜರುಗಿತು. ಸಂಜೆ ವಧುವಿನ ಕುಟುಂಬ ತಮ್ಮ ಕೊಡವ ಸಂಪ್ರದಾಯಗಳ ಪ್ರಕಾರ ಮತ್ತೆ ವಿವಾಹ ಆಚರಣೆಗಳನ್ನು ನಡೆಸುತ್ತಿದೆ ಎಂಬ ಮಾಹಿತಿ ಇದೆ.

ಇದನ್ನೂ ಓದಿ: ರಶ್ಮಿಕಾ ಮದುವೆ ಪ್ರಶ್ನೆಗೆ ರಿಷಬ್ ಶೆಟ್ಟಿ ಪ್ರತಿಕ್ರಿಯೆ ಹೀಗಿತ್ತು!
ಮದುವೆ ಸುದ್ದಿ ಹೊರಬಿದ್ದ ಕೂಡಲೇ ಅಪಾರ ಸಂಖ್ಯೆಯ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿನಂದನಾ ಸಂದೇಶಗಳ ಮಹಾಪೂರವನ್ನೇ ಹರಿಸಿದರು. ಈ ಜೋಡಿಯು ತಮ್ಮ ಮದುವೆ ಸಮಾರಂಭವನ್ನು "ದಿ ವೆಡ್ಡಿಂಗ್ ಆಫ್ ವಿರೋಶ್" ಎಂಬ ಹೆಸರಿನಲ್ಲಿ ನಡೆಸಿದೆ. ಇದು ಅವರ ಅಭಿಮಾನಿ ಬಳಗ ಕೊಟ್ಟಿರುವ ಹೆಸರಾಗಿದೆ.


