'ಟಾಕ್ಸಿಕ್' ಬಿಡುಗಡೆ ಮುಂದೂಡಿಕೆ ಆಗುತ್ತಿದ್ದಂತೆ 'ಲವ್ ಮಾಕ್ಟೇಲ್ 3'ಗೆ ಖುಲಾಯಿಸಿತು ಅದೃಷ್ಟ!
ಯಶ್ ಅಭಿನಯದ ಟಾಕ್ಸಿಕ್ ರಿಲೀಸ್ ಡೇಟ್ ಮುಂದೆ ಹೋಗುತ್ತಲೇ, ಡಾರ್ಲಿಂಗ್ ಕೃಷ್ಣ ಅವರ ಲವ್ ಮಾಕ್ಟೇಲ್ 3 ಸಿನಿಮಾಗೆ ಅದೃಷ್ಟ ಖುಲಾಯಿಸಿದೆ.

Published : March 4, 2026 at 3:53 PM IST
ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗುತ್ತಲೇ, ಆ ದಿನದಂದು 'ಲವ್ ಮಾಕ್ಟೇಲ್ 3' ಸಿನಿಮಾ ಬಿಡುಗಡೆಗೊಳಿಸಲು ನಟ ಡಾರ್ಲಿಂಗ್ ಕೃಷ್ಣ ಸಜ್ಜಾಗಿದ್ದಾರೆ.
ಹೌದು, ಯುಗಾದಿಯ ರಜೆ, ಅದರ ಬೆನ್ನಲ್ಲೇ ಶುರುವಾಗುವ ವೀಕೆಂಡ್ ಸೇರಿದಂತೆ ಮಾರ್ಚ್ 19 ಎಲ್ಲ ರೀತಿಯಿಂದಲೂ ಸಕಾರಾತ್ಮಕವಾದ ಮುಹೂರ್ತವಾಗಿದೆ. ಆದರೆ ಅಂದು ಟಾಕ್ಸಿಕ್ ಬಿಡುಗಡೆ ಆಗದಿದ್ದರೂ, ಅದೇ ದಿನ ಲವ್ ಮಾಕ್ಟೇಲ್ ಚಿತ್ರ ರಿಲೀಸ್ ಮಾಡಲು ಕೆವಿಎನ್ ಸಂಸ್ಥೆ ತೀರ್ಮಾನಿಸಿದೆ.

ಲವ್ ಮಾಕ್ಟೇಲ್ 3 ಸಿನಿಮಾವನ್ನು ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ, ಅಭಿನಯಿಸಿದ್ದಾರೆ. ಟಾಕ್ಸಿಕ್ ಬಿಡುಗಡೆ ದಿನಾಂಕ ಮುಂದೆ ಹೋಗುತ್ತಲೇ ಲವ್ ಮಾಕ್ಟೇಲ್ 3 ಪಾಲಿಗೆ ಅದೃಷ್ಟ ಖುಲಾಯಿಸಿಕೊಂಡಿದೆ. ಇದಕ್ಕೂ ಮುನ್ನ ಚಿತ್ರವು ಏಪ್ರಿಲ್ 10ರಂದು ಬಿಡುಗಡೆಗೆ ಸಜ್ಜಾಗಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ, ಯುಗಾದಿ ರಜೆಯಂದೇ ಲವ್ ಮಾಕ್ಟೇಲ್ 3 ಪ್ರೇಕ್ಷಕರ ಮುಂದೆ ಬರಲಿದೆ.
ಈ ದಿನದಂದೇ ಸಿನಿಮಾ ಬಿಡುಗಡೆಗೊಳಿಸಲು ಅನೇಕರು ಉತ್ಸುಕರಾಗಿದ್ದರು. ಯಾಕೆಂದರೆ, ಆ ಹೊತ್ತಿನಲ್ಲಿ ಯುಗಾದಿ, ರಂಜಾನ್ ಹಬ್ಬಗಳಿಗೆ ಸಾಲು ಸಾಲು ರಜೆಗಳಿವೆ. ಅಂತಹ ಪ್ರಶಸ್ತವಾದ ಬಿಡುಗಡೆ ಮುಹೂರ್ತವೀಗ ಲವ್ ಮಾಕ್ಟೇಲ್ 3 ಚಿತ್ರಕ್ಕೆ ತನ್ನಿಂದ ತಾನೇ ಒಲಿದು ಬಂದಿದೆ.
ಕ್ರಿಸ್‌ಮಿ ಬ್ಯಾನರ್ನಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ರಚೆಲ್ ಡೇವಿಡ್, ಅಭಿಲಾಶ್ ದಳಪತಿ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.
ಟಾಕ್ಸಿಕ್ ವಿಳಂಬಕ್ಕೆ ಕಾರಣವೇನು? ಟಾಕ್ಸಿಕ್ ನಿರ್ಮಾಪಕರು ಚಿತ್ರದ ಬಿಡುಗಡೆ ಮುಂದೂಡಲಾಗಿದೆ ಎಂದು ಇಂದು ಅಧಿಕೃತವಾಗಿ ಘೋಷಿಸಿದ್ದಾರೆ. ಮಾರ್ಚ್ 19ರಂದು ಬಿಡುಗಡೆಯಾಗಬೇಕಿದ್ದ ಸಿನಿಮಾ ಇದೀಗ ಜೂನ್ ತಿಂಗಳಲ್ಲಿ ವಿಶ್ವದಾದ್ಯಂತ ತೆರೆ ಕಾಣಲಿದೆ.
"ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಚಿತ್ರವನ್ನು ನಾವು ಜಾಗತಿಕ ಪ್ರೇಕ್ಷಕರಿಗಾಗಿ ಸಿನಿಮಾ ನಿರ್ಮಿಸುವ ಆಶಯದೊಂದಿಗೆ ರೂಪಿಸಿದ್ದೇವೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರೀಕರಿಸಲಾದ ಈ ಸಿನಿಮಾ, ದೇಶ, ವಿದೇಶದ ಪ್ರೇಕ್ಷಕರನ್ನು ತಲುಪುವ ದೃಢ ವಿಶ್ವಾಸದೊಂದಿಗೆ ಸಿದ್ಧವಾಗಿದೆ. ಹಲವು ವರ್ಷಗಳ ಶ್ರಮದ ನಂತರ ನಮ್ಮ ಚಿತ್ರವನ್ನು ಮಾರ್ಚ್ 19ರಂದು ನಿಮ್ಮ ಮುಂದೆ ತರಲು ನಾವು ಉತ್ಸುಕರಾಗಿದ್ದೆವು. ಆದರೆ, ಪ್ರಸ್ತುತ ಜಗತ್ತಿನಲ್ಲಿ (ವಿಶೇಷವಾಗಿ ಮಧ್ಯಪ್ರಾಚ್ಯದಲ್ಲಿ) ಉಂಟಾಗಿರುವ ಅನಿಶ್ಚಿತತೆ ಚಿತ್ರವನ್ನು ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರಿಗೆ ತಲುಪಿಸುವ ನಮ್ಮ ಗುರಿಯ ಮೇಲೆ ಪರಿಣಾಮ ಬೀರಿದೆ. ಆದ್ದರಿಂದ, ನಮ್ಮ ಪಾಲುದಾರರ ಮತ್ತು ಪ್ರೇಕ್ಷಕರ ಹಿತದೃಷ್ಟಿಯಿಂದ, ಚಿತ್ರದ ಬಿಡುಗಡೆಯ ದಿನಾಂಕವನ್ನು ಮರು ನಿಗದಿಪಡಿಸುವ ಕಠಿಣ ಹಾಗೂ ಎಚ್ಚರಿಕೆಯ ನಿರ್ಧಾರ ತೆಗೆದುಕೊಂಡಿದ್ದೇವೆ. ನಿಮ್ಮ ತಿಳುವಳಿಕೆ ಮತ್ತು ತಾಳ್ಮೆಗೆ ನಾವು ಧನ್ಯವಾದ ಅರ್ಪಿಸುತ್ತೇವೆ. ನಿಮ್ಮ ಪ್ರೀತಿ ಮತ್ತು ಬೆಂಬಲ ಹೀಗೆಯೇ ಇರಲಿ ಎಂದು ಆಶಿಸುತ್ತೇವೆ'' ಎಂದು ಚಿತ್ರತಂಡ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದೆ.
ಇದನ್ನೂ ಓದಿ: ಕನ್ನಡ ಸಿನಿಮಾಗಳ ಬಗ್ಗೆ OTTಗಳಿಗಿರುವ ತಾತ್ಸಾರ ಬದಲಾಗಬೇಕು: ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್

