ಸಲ್ಮಾನ್ ಖಾನ್ ತಂದೆ ಸಲೀಮ್ ಆರೋಗ್ಯ ಹೇಗಿದೆ?; ಅಮೀರ್ ಖಾನ್ ಕೊಟ್ರು ಅಪ್ಡೇಟ್!
ಹಿರಿಯ ಚಿತ್ರಕಥೆಗಾರ ಸಲೀಮ್ ಖಾನ್ ಇದೇ ಫೆಬ್ರವರಿ 17ರಂದು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿ, ಐಸಿಯುನಲ್ಲಿ ಚಿಕಿತ್ಸೆ ಪಡೆದಿದ್ದರು.

By ETV Bharat Entertainment Team
Published : February 26, 2026 at 11:08 AM IST
ಮುಂಬೈ (ಮಹಾರಾಷ್ಟ್ರ): ಭಾರತೀಯ ಚಿತ್ರರಂಗದ ಹಿರಿಯ ಚಿತ್ರಕಥೆಗಾರ ಸಲೀಮ್ ಖಾನ್ ಅವರು ಅನಾರೋಗ್ಯ ಹಿನ್ನೆಲೆ, ಫೆಬ್ರವರಿ 17ರಂದು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಸೂಪರ್ ಸ್ಟಾರ್ ಸಲ್ಮಾನ್ ಖಾನ್ ತಂದೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಬಂದಾಗಿನಿಂದಲೂ ಅಪಾರ ಸಂಖ್ಯೆಯ ಅಭಿಮಾನಿಗಳು ಮತ್ತು ಹಿತೈಷಿಗಳು ಅವರ ಆರೋಗ್ಯದ ಬಗ್ಗೆ ಅಧಿಕೃತ ಮಾಹಿತಿ ನಿರೀಕ್ಷಿಸಿದ್ದರು. ಇದೀಗ, ಮಿಸ್ಟರ್ ಪರ್ಫೆಕ್ಷನಿಸ್ಟ್ ಖ್ಯಾತಿಯ ಅಮೀರ್ ಖಾನ್ ಅಪ್ಡೇಟ್ಸ್ ಹಂಚಿಕೊಂಡಿದ್ದಾರೆ. ಸಲೀಮ್ ಖಾನ್ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಶೀಘ್ರದಲ್ಲೇ ಮನೆಗೆ ಮರಳುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ. ಇದನ್ನು ಕೇಳಿದ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಬುಧವಾರ ನಡೆದ ಕಾರ್ಯಕ್ರಮವೊಂದರಲ್ಲಿ ಬ್ಲಾಕ್ಬಸ್ಟರ್ ಲಗಾನ್ ನಟ ಮಾಧ್ಯಮಗಳೊಂದಿಗೆ ಮಾತನಾಡಿ, ಸಲೀಮ್ ಖಾನ್ ಅವರನ್ನು ಭೇಟಿ ಮಾಡಲು ಹೋಗಿದ್ದೆ. ಆದ್ರೆ ಅವರು ಐಸಿಯುನಲ್ಲಿರುವ ಕಾರಣ ಅವರನ್ನು ನೇರವಾಗಿ ನೋಡಲು ಸಾಧ್ಯವಾಗಲಿಲ್ಲ. ಅದಾಗ್ಯೂ, ಕುಟುಂಬದೊಂದಿಗೆ ಸಮಯ ಕಳೆದೆ. ಖಾನ್ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಕುಟುಂಬ ಸದಸ್ಯರು ಹಂಚಿಕೊಂಡರೆಂದು ತಿಳಿಸಿದರು.
''ನಾನು ಸಲೀಮ್ ಸಾಹಬ್ ಅವರನ್ನು ಭೇಟಿ ಮಾಡಲು ಹೋಗಿದ್ದೆ. ಅವರು ಶೀಘ್ರ ಗುಣಮುಖರಾಗಲಿ ಎಂದು ನಾವೆಲ್ಲರೂ ಪ್ರಾರ್ಥಿಸುತ್ತಿದ್ದೇವೆ. ಅವರು ಐಸಿಯುನಲ್ಲಿದ್ದ ಕಾರಣ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಲು ಸಾಧ್ಯವಾಗಲಿಲ್ಲ. ನಾನು ಅವರ ಕುಟುಂಬಸ್ಥರೊಂದಿಗೆ ಕುಳಿತೆ'' - ನಟ ಅಮೀರ್ ಖಾನ್.
ಮಾತು ಮುಂದುವರಿಸಿದ ಸಿತಾರೆ ಜಮೀನ್ ಪರ್ ನಟ, ''ಅಲ್ವಿರಾ ಜಿ ಪ್ರತಿದಿನ ಅವರ ಆರೋಗ್ಯ ಸುಧಾರಿಸುತ್ತಿದೆ ಎಂದು ನನಗೆ ಹೇಳುತ್ತಿದ್ದಾರೆ. ಅವರು ಬೇಗ ಮನೆಗೆ ಮರಳಲಿ ಮತ್ತು ಅವರ ಆರೋಗ್ಯ ಸಂಪೂರ್ಣವಾಗಿ ಚೇತರಿಸಿಕೊಳ್ಳಲಿ ಎಂದು ನಾವೆಲ್ಲರೂ ಪ್ರಾರ್ಥಿಸುತ್ತಿದ್ದೇವೆ'' ಎಂದು ತಿಳಿಸಿದರು.
ಕಳೆದ ವರ್ಷಾಂತ್ಯ 90ನೇ ಹುಟ್ಟುಹಬ್ಬ ಆಚರಿಸಿಕೊಂಡ ಸಲೀಮ್ ಖಾನ್ ಅವರನ್ನು ಫೆಬ್ರವರಿ 17ರಂದು ಆಸ್ಪತ್ರೆಗೆ ದಾಖಲಿಸಲಾಯಿತು. ಸಣ್ಣ ಪ್ರಮಾಣದ ಮೆದುಳಿನ ರಕ್ತಸ್ರಾವದ ಹಿನ್ನೆಲೆ, ಚಿಕಿತ್ಸೆ ಕೊಡಲಾಯಿತು. ಅವರ ಸ್ಥಿತಿ ಸ್ಥಿರವಾಗಿದೆ ಮತ್ತು ಅವರನ್ನು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇರಿಸಲಾಗಿದೆ ಎಂದು ವೈದ್ಯರು ಈ ಹಿಂದೆ ತಿಳಿಸಿದ್ದರು. ಯಾವುದೇ ಶಸ್ತ್ರಚಿಕಿತ್ಸೆ ನಡೆಸಲಾಗಿಲ್ಲ ಎಂದು ಅಂದು ಡಾ.ಜಲೀಲ್ ಪಾರ್ಕರ್ ಸ್ಪಷ್ಟಪಡಿಸಿದ್ದರು.
ಇದನ್ನೂ ಓದಿ: ಸಂಜಯ್ ಲೀಲಾ ಬನ್ಸಾಲಿಗೆ ಹೃದಯಾಘಾತ? ಖ್ಯಾತ ನಿರ್ದೇಶಕರ ತಂಡ ಹಂಚಿಕೊಂಡ ಮಾಹಿತಿ ಇಲ್ಲಿದೆ
"ಯಾವುದೇ ಶಸ್ತ್ರಚಿಕಿತ್ಸೆ ಮಾಡಿಲ್ಲ. ಇದು ನಾರ್ಮಲ್ ಚಿಕಿತ್ಸಾ ವಿಧಾನವಾಗಿತ್ತು. ಅವರಿಗೆ ಮೆದುಳಿನಲ್ಲಿ ಅಲ್ಪಪ್ರಮಾಣದಲ್ಲಿ ರಕ್ತಸ್ರಾವವಾಗಿತ್ತು. ಯಾವುದೇ ಶಸ್ತ್ರಚಿಕಿತ್ಸೆಯ ಅಗತ್ಯವಿರಲಿಲ್ಲ" ಎಂದು ಅವರು ಮಾಹಿತಿ ನೀಡಿದ್ದರು.
ಜಾವೇದ್ ಅಖ್ತರ್, ಸಂಜಯ್ ದತ್, ಶಿಲ್ಪಾ ಶೆಟ್ಟಿ, ರಾಹುಲ್ ರಾಯ್, ಸಂಗೀತಾ ಬಿಜಲಾನಿ ಮತ್ತು ಅಮೃತಾ ಅರೋರಾ ಸೇರಿದಂತೆ ಚಲನಚಿತ್ರೋದ್ಯಮದ ಹಲವರು ಇತ್ತೀಚೆಗೆ ಸಲೀಮ್ ಖಾನ್ ಅವರನ್ನು ಭೇಟಿ ಮಾಡಲು ಆಸ್ಪತ್ರೆಗೆ ಭೇಟಿ ನೀಡಿದ್ದರು.
ಇದನ್ನೂ ಓದಿ: Throwback: ಸಲ್ಮಾನ್ ಖಾನ್ ಏಕೆ ಮದುವೆಯಾಗಲಿಲ್ಲ?; ತಂದೆ ಸಲೀಮ್ ಹೇಳಿದ್ದೇನು ಗೊತ್ತಾ?
ಆಸ್ಪತ್ರೆಗೆ ದಾಖಲಾದ ಸಂದರ್ಭ ವೈದ್ಯಕೀಯ ತಂಡ ಒದಗಿಸಿದ ಮಾಹಿತಿ ಪ್ರಕಾರ, ಸಲೀಂ ಖಾನ್ ಅವರನ್ನು ಅವರ ಫ್ಯಾಮಿಲಿ ಫಿಸಿಶಿಯನ್ ಡಾ.ಸಂದೀಪ್ ಚೋಪ್ರಾ ಆಸ್ಪತ್ರೆಗೆ ಕರೆತಂದರು. ಎಮರ್ಜೆನ್ಸಿ ವಾರ್ಡ್ ತಲುಪಿದಾಗ ರಕ್ತದೊತ್ತಡ ಹೆಚ್ಚಾಗಿತ್ತು. ವೈದ್ಯರು ತಕ್ಷಣ ಎಮರ್ಜೆನ್ಸಿ ರೂಮ್ನಲ್ಲಿ ಚಿಕಿತ್ಸೆ ಆರಂಭಿಸಿದರು. ರಕ್ತದೊತ್ತಡ ನಿಯಂತ್ರಿಸಲು ಔಷಧ ನೀಡಿದರು. ನಂತರ ಹೆಚ್ಚಿನ ಪರೀಕ್ಷೆ ನಡೆಸಿ, ಸೂಕ್ತ ಚಿಕಿತ್ಸೆ ಕೊಡಲಾಯಿತು.

