ETV Bharat / entertainment

ಉಪ್ಪಿ ಬಣ್ಣ ಹಚ್ಚಿ 37 ವರ್ಷ: ಡೈರೆಕ್ಷನ್ To ಹೀರೋ; ಅಪಶಕುನಗಳಿಗೆ ಕುಗ್ಗದ ರಿಯಲ್​ ಸ್ಟಾರ್​​ ರಿಯಲ್​ ಸ್ಟೋರಿ

1989ರಲ್ಲಿ ಕಾಶೀನಾಥ್ ಅವರ 'ಅನಂತನ ಅವಾಂತರ' ಸಿನಿಮಾದ ಪಾತ್ರವೊಂದನ್ನು ಉಪೇಂದ್ರ ನಿರ್ವಹಿಸಿದ್ದರು. ಈ ಪಾತ್ರಕ್ಕೆ ಬಣ್ಣ ಹಚ್ಚಿ 37 ವರ್ಷಗಳಾಗಿದ್ದು, ರಿಯಲ್​ ಸ್ಟಾರ್​ನ ಮುಂದಿನ ಸಿನಿಮಾಗಳಿಗಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

Real Star Upendra
ರಿಯಲ್​ ಸ್ಟಾರ್​ ಉಪೇಂದ್ರ (Photo: Film Team)
author img

By ETV Bharat Entertainment Team

Published : January 6, 2026 at 2:37 PM IST

3 Min Read
Choose ETV Bharat

ಉಪೇಂದ್ರ. ಕನ್ನಡ ಚಿತ್ರರಂಗಕ್ಕೆ ವಿಭಿನ್ನ ಸಿನಿಮಾಗಳನ್ನು ಕೊಟ್ಟಿರುವ ಏಕೈಕ ನಟ. ಪ್ರೇಕ್ಷಕರ ತಲೆಗೆ ಕೆಲಸ ಕೊಡುವಂತಹ ಕಥೆಗಳೊಂದಿಗೆ ನಿರ್ದೇಶಕನಾಗಿ ಮತ್ತು ನಟನಾಗಿ ಇಡೀ ಭಾರತೀಯ ಚಿತ್ರರಂಗದಲ್ಲೇ ತಮ್ಮ ಪ್ರತಿಭೆ ಸಾಬೀತುಪಡಿಸಿದ್ದಾರೆ. ಕಾಶೀನಾಥ್ ಅವರ ಗರಡಿಯಲ್ಲಿ ಪಳಗಿದ ಉಪೇಂದ್ರ 1992ರಲ್ಲಿ 'ತರ್ಲೆ ನನ್ಮಗ' ಎಂಬ ಚಿತ್ರದ ಮೂಲಕ ನಿರ್ದೇಶಕರಾಗಿ ವೃತ್ತಿಜೀವನ ಆರಂಭಿಸಿದರಾದರೂ, ಅದಕ್ಕೂ ಮುನ್ನ 1989ರ ಜನವರಿ 5ರಂದು ತೆರೆಕಂಡ ಕಾಶೀನಾಥ್ ಅವರ 'ಅನಂತನ ಅವಾಂತರ' ಸಿನಿಮಾದ ಕಾಮದೇವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಣ್ಣ ಹಚ್ಚಿ 37 ವರ್ಷಗಳಾಗಿದ್ದು, ಬುದ್ಧಿವಂತ ನಟನ ಸಿನಿಮಾ ಸಾಧನೆಗಳ ಮೆಲುಕು ಹಾಕಲಾಗುತ್ತಿದೆ.

ತೆರೆ ಹಿಂದೆ ತಮ್ಮ ಶ್ರಮ ಹಾಕುತ್ತಿದ್ದ ಉಪ್ಪಿ, 1992ರ ತರ್ಲೆ ನನ್ಮಗ ಸಿನಿಮಾಗೂ ಮುನ್ನ ಕೆಲ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಾಶೀನಾಥ್ ಅವರ 'ಅನಂತನ ಅವಾಂತರ' ಸಿನಿಮಾದ ಕಾಮದೇವನ ಪಾತ್ರದ ಬಳಿಕ 1991ರ ಅಜಗಜಾಂತರ ಚಿತ್ರದಲ್ಲೂ ಸಣ್ಣ ಪಾತ್ರವೊಂದನ್ನು ನಿರ್ವಹಿಸಿದ್ದರು.

Real Star Upendra
'45' ಟೀಸರ್​​ನಲ್ಲಿ ಉಪ್ಪಿ (Photo: Screen-grab from 45 movie teaser)

ಉಪೇಂದ್ರ ಓರ್ವ ರೈಟರ್​​ ಆಗಿ ಚಿತ್ರರಂಗ ಪ್ರವೇಶಿಸಿದ್ರೂ, ನಂತರ ವಿವಿಧ ವಿಭಾಗಗಳಲ್ಲಿ ತಮ್ಮ ಪ್ರತಿಭೆ ಸಾಬೀತುಪಡಿಸಿದ್ದಾರೆ. ಸ್ಯಾಂಡಲ್​ವುಡ್​ನ ದಿ ಮೋಸ್ಟ್ ಕ್ರಿಯೇಟಿವ್ ಡೈರೆಕ್ಟರ್ ಕಾಶೀನಾಥ್ ಅವರ ಗರಡಿಯಲ್ಲಿ ಪಳಗಿದ ಇವರು ಗುರುವನ್ನೇ ಮೀರಿಸಿದರೆಂಬ ಖ್ಯಾತಿಯನ್ನೂ ಗಳಿಸಿದ್ದಾರೆ. ಈ ಮಾತನ್ನು ಸ್ವತಃ ಕಾಶೀನಾಥ್ ಕೂಡಾ ಒಪ್ಪಿಕೊಂಡಿದ್ದರು. ಕಾಶೀನಾಥ್ ನಿರ್ದೇಶನದ ಕೆಲ ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ ಅನುಭವ ಪಡೆದುಕೊಂಡ ಉಪ್ಪಿ 1992ರಲ್ಲಿ ತರ್ಲೆ ನನ್ಮಗ ಎಂಬ ಚಿತ್ರದ ಮೂಲಕ ನಿರ್ದೇಶಕರಾಗಿ ಹೊರಹೊಮ್ಮಿದ್ರು. ಅದಕ್ಕೂ ಮುನ್ನ ಕಾಣಿಸಿಕೊಂಡ ಪಾತ್ರಗಳ ಪೈಕಿ, ಮೊದಲ ಬಾರಿಗೆ ಬಣ್ಣ ಹಚ್ಚಿದ್ದು 1989ರ ಜನವರಿ 5ರ 'ಅನಂತನ ಅವಾಂತರ' ಸಿನಿಮಾದ ಕಾಮದೇವನ ಪಾತ್ರಕ್ಕಾಗಿ.

ಆಪ್ತರು ಹೇಳೋದೇನು?: ರಿಯಲ್​ ಸ್ಟಾರ್​ ಉಪೇಂದ್ರ ಅವರ ಆಪ್ತರೊಬ್ಬರು ಈ ಹಿಂದೆ ಈಟಿವಿ ಭಾರತದ ಜೊತೆ ಒಂದಿಷ್ಟು ವಿಚಾರಗಳನ್ನು ಹಂಚಿಕೊಂಡಿದ್ದರು.

ಬೆಂಗಳೂರಿನ ಎಪಿಎಸ್ ಕಾಲೇಜ್​ನಲ್ಲಿ ವಿದ್ಯಾಭ್ಯಾಸ ಪಡೆಯುವ ಸಂದರ್ಭ ಉಪೇಂದ್ರ ನಾಟಕ ಹಾಗೂ ಸಿನಿಮಾ ಡೈಲಾಗ್ಸ್​ ಬರೆಯುತ್ತಿದ್ದರು. ಆರಂಭದ ದಿನಗಳಲ್ಲಿ ಕಾಶೀನಾಥ್ ಅವರ ಸಿನಿಮಾಗಳನ್ನೇ ಹೆಚ್ಚಾಗಿ ನೋಡುತ್ತಿದ್ರು. ನಂತರ, ಕಾಶೀನಾಥ್ ಅವರ ಬಳಿ ಸಿನಿಮಾಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆಯೋದಕ್ಕೆ ಸೇರಿಕೊಂಡ್ರು. ತೆರೆ ಹಿಂದಿನ ಕೆಲಸಗಳ ಜೊತೆಗೆ ಕಾಶೀನಾಥ್ ಅಭಿನಯದ ಅನಂತನ ಅವಾಂತರ ಹಾಗೂ ಲವ್ ಮಾಡಿ ನೋಡು ಚಿತ್ರಗಳಲ್ಲಿ ಸಣ್ಣ ಪಾತ್ರಗಳನ್ನು ನಿರ್ವಹಿಸುತ್ತಾರೆ. ಹೀಗೆ ಕಾಶೀನಾಥ್ ಗರಡಿಯಲ್ಲಿ ಪಳಗಿದ ಉಪೇಂದ್ರ, ಜಗ್ಗೇಶ್ ಅಭಿನಯದ ತರ್ಲೆ ನನ್ಮಗ ಚಿತ್ರದ ಮೂಲಕ ಸ್ವತಂತ್ರ್ಯ ನಿರ್ದೇಶಕರಾಗಿ ಹೊರಹೊಮ್ಮುತ್ತಾರೆ. ಚೊಚ್ಚಲ ಚಿತ್ರದಲ್ಲೇ ಭರವಸೆ ಮೂಡಿಸಿದ ಉಪೇಂದ್ರ ನಂತರದ ದಿನಗಳಲ್ಲಿ ಅನೇಕ ಹಿಟ್​ ಚಿತ್ರಗಳನ್ನು ಮನರಂಜನಾ ಕ್ಷೇತ್ರಕ್ಕೆ ನೀಡಿದ್ದಾರೆ ಎಂದು ತಿಳಿಸಿದರು.

Upendra in 45 movie song
45 ಸಿನಿಮಾ ಸಾಂಗ್​ನಲ್ಲಿ ಶಿವಣ್ಣ, ರಾಜ್​ ಬಿ ಶೆಟ್ಟಿ ಜೊತೆ ಉಪ್ಪಿ (Photo: Film Team)

ಗುರುಗಳಾದ ಕಾಶಿನಾಥ್ ಅವರಿಗೆ ಸಿನಿಮಾ ಡೈರೆಕ್ಟರ್ ಪಾತ್ರ ಕೊಟ್ಟು, ಯುವ ನಟ ಕುಮಾರ್ ಗೊಂವಿಂದ್ ಅವರನ್ನು ಹೀರೋ ಮಾಡಿದ ಹಾರರ್ ಥ್ರಿಲ್ಲರ್ ಚಿತ್ರ 'ಶ್' (1993) ದೊಡ್ಡ ಮಟ್ಟದಲ್ಲಿ ಸದ್ದು ಮಾಡಿ, ಉಪೇಂದ್ರ ಅವರಿಗೆ ಸಕ್ಸಸ್​​ಫುಲ್​ ಡೈರೆಕ್ಟರ್​ ಅನ್ನೋ ಹೆಸರು ತಂದುಕೊಡುತ್ತದೆ.

ಹೀಗೆ ಆರಂಭದ ದಿನಗಳಲ್ಲೇ ಯಶಸ್ಸು ಕಂಡ ಉಪೇಂದ್ರ ಅವರಿಗೆ ಹ್ಯಾಟ್ರಿಕ್​ ಸಕ್ಸಸ್ ತಂದುಕೊಟ್ಟ ಚಿತ್ರ 'ಓಂ' (1995). ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್ ಮುಖ್ಯಭೂಮಿಕೆಯ ಈ ಯಶಸ್ವಿ ಸಿನಿಮಾದಲ್ಲಿ ರಿಯಲ್ ರೌಡಿಗಳು ಕಾಣಿಸಿಕೊಂಡಿದ್ದರು. ಈ ಚಿತ್ರದ ಭರ್ಜರಿ ಯಶಸ್ಸು ನಿರ್ದೇಶಕ ಉಪೇಂದ್ರ ಮತ್ತು ನಾಯಕ ನಟ ಶಿವಣ್ಣ ಇಬ್ಬರಿಗೂ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿತ್ತು. 75 ಲಕ್ಷ ರೂಪಾಯಿ ಬಜೆಟ್​ನಲ್ಲಿ ಪಾರ್ವತಮ್ಮ ರಾಜ್​ಕುಮಾರ್​ ನಿರ್ಮಾಣ ಮಾಡಿದ್ದ ಈ ಚಿತ್ರ ಆ ಕಾಲದಲ್ಲೇ 25 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿತು. ಅಲ್ಲದೇ ಈ ಯಶಸ್ವಿ ಸಿನಿಮಾ ಚಿತ್ರಮಂದಿರಗಳಲ್ಲಿ ಅಸಂಖ್ಯಾತ ಬಾರಿ ಪ್ರದರ್ಶನಗೊಂಡಿದೆ. ಜೊತೆಗೆ, ಈ ಚಿತ್ರಕ್ಕಾಗಿ ರಾಜ್​ ಕುಟುಂಬದಿಂದ ಉಪೇಂದ್ರ ಅವರಿಗೆ 5,000 ರೂಪಾಯಿ ಅಡ್ವಾನ್ಸ್​ ಕೂಡಾ ಸಿಕ್ಕಿತ್ತು ಎಂದು ಆಪ್ತರು ಮಾಹಿತಿ ನೀಡಿದ್ದರು.

Real Star Upendra
ಬುದ್ಧಿವಂತ ನಟ-ನಿರ್ದೇಶಕ ಉಪೇಂದ್ರ (Photo: ETV Bharat)

ಇದನ್ನೂ ಓದಿ: ಕಾಂತಾರ ಬಳಿಕ ಯಶ್ ಟಾಕ್ಸಿಕ್​ ಅಡ್ಡಕ್ಕೆ ರುಕ್ಮಿಣಿ ವಸಂತ್: ಮೆಲಿಸಾ ಸ್ಟನ್ನಿಂಗ್​ ಲುಕ್​​ಗೆ ಫ್ಯಾನ್ಸ್​ ಫಿದಾ

ನಂತರ 1998ರ ಫೆಬ್ರವರಿ 12ರಂದು ತೆರೆಕಂಡ 'A' ಸಿನಿಮಾ‌ ಉಪೇಂದ್ರ ಅವರ ಯಶಸ್ಸಿನಾದಿಯನ್ನು ಮುಂದುವರಿಸಿತು. ನಟಿಸಿ, ನಿರ್ದೇಶಿಸಿದ ಈ ಚಿತ್ರ ರಾತ್ರೋರಾತ್ರಿ ಉಪ್ಪಿಗೆ ಸ್ಟಾರ್ ಪಟ್ಟ ತಂದುಕೊಟ್ಟಿತು. ಈ ಚಿತ್ರ ಸೂಪರ್ ಹಿಟ್ ಆದ ನಂತರ ಬಂದ ಚಿತ್ರವೇ 'ಉಪೇಂದ್ರ'. ನಾನು ಎಂಬ ಅಹಮ್ ಇದ್ರೆ ಏನಾಗುತ್ತೆ ಅನ್ನೋದನ್ನು ಈ ಚಿತ್ರದಲ್ಲಿ ತೋರಿಸಿ ಬುದ್ದಿವಂತ ಅನ್ನೋ ಪಟ್ಟ ಗಳಿಸಿಕೊಳ್ತಾರೆ. ಹೀಗೆ ಚಿತ್ರರಂಗಕ್ಕೆ ಬಂದ ಹೊಸತರಲ್ಲೇ ಪ್ರೀತ್ಸೆ, ಕುಟುಂಬ, ಗೋಕರ್ಣ, ಗೌರಮ್ಮ, ಸೂಪರ್ ಅಂತಹ ಯಶಸ್ವಿ ಚಿತ್ರಗಳನ್ನು ಕೊಟ್ಟು ಇತ್ತೀಚೆಗೆ ಕಬ್ಜ, ಯುಐ, 45 ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಎ ಹಾಗೂ ಉಪೇಂದ್ರ ಸಿನಿಮಾಗಳಲ್ಲಿ ನಾಯಕನಟನಾಗಿ ಕಾಣಿಸಿಕೊಳ್ಳುವುದಕ್ಕೂ ಮುನ್ನ ಅವರೇ ಹೇಳಿಕೊಂಡಿರುವ ಹಾಗೇ, ನನಗೆ ನಟಿಸುವ ಆಸೆಯಿತ್ತು. ನಿರ್ದೇಶಕನಾಗಿ ಯಶಸ್ಸು ಕಂಡ ಬಳಿಕ ಅದನ್ನು ಮರೆತುಬಿಟ್ಟಿದ್ದೆ. ಆದ್ರೆ, ನಿರ್ಮಾಪಕರೇ ಬಂದು ಹೇಳಿದಾಗ ಮಾಡೋಣ ಎಂದುಕೊಂಡೆ. ನನಗೆ ಸೂಕ್ತ ಎನ್ನುವಂತೆ ಪಾತ್ರ, ಕಥೆ ಡಿಸೈನ್ ಮಾಡಿಕೊಂಡೆ. ಆದ್ರೆ ಆ ಸಿನಿಮಾ ಶುರುವಾಗುವಾಗ ಸಾಕಷ್ಟು ಅಪಶಕುನಗಳಾಯಿತು. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದೇ ಸಿನಿಮಾ ಮಾಡಿದೆವು ಎಂದು ತಿಳಿಸಿದ್ದರು.

ಇದನ್ನೂ ಓದಿ: ಕೆಜಿಎಫ್ 2​ ದಾಖಲೆ ಪುಡಿಗಟ್ಟಿದ ಧುರಂಧರ್: ಯಶ್​ ಟಾಕ್ಸಿಕ್​​ಗೆ ಟಕ್ಕರ್ ಕೊಡಲು ಸಜ್ಜಾದ ಧುರಂಧರ್ 2

ಉಪೇಂದ್ರ ಬೆಳೆದು ಬಂದ ದಾರಿ ಇಂದಿನ ಅದೆಷ್ಟೋ ಯುವ ಪ್ರತಿಭೆಗಳಿಗೆ ಸ್ಫೂರ್ತಿ. ಮುಂದಿನ ದಿನಗಳಲ್ಲಿ ಮತ್ತಷ್ಟು ಇಂಥ ಒಳ್ಳೆ ಚಿತ್ರಗಳು ಬರಲಿ ಅನ್ನೋದು ಅಭಿಮಾನಿಗಳ ಹಾರೈಕೆ.