ETV Bharat / education-and-career
ಪರೀಕ್ಷಾ ಒತ್ತಡ: ವಿದ್ಯಾರ್ಥಿಗಳಿಗೆ ಉಚಿತ ಟೆಲಿ ಸಮಾಲೋಚನಾ ಸೇವೆ ಆರಂಭಿಸಿದ CBSE
2026ರ ಫೆಬ್ರವರಿಯಿಂದ ವಾರ್ಷಿಕ ಬೋರ್ಡ್ ಪರೀಕ್ಷೆ ಪ್ರಾರಂಭವಾಗಲಿದ್ದು, ಸಿದ್ದತೆಯ ನಿರ್ಣಾಯಕ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳ ಒತ್ತಡ ಮತ್ತು ಭಾವನಾತ್ಮಕ ಸಮಸ್ಯೆಗಳನ್ನು ನಿವಾರಿಸುವ ಉದ್ದೇಶದಿಂದ ಸಿಬಿಎಸ್‌ಇ ಉಚಿತ ಟೆಲಿ ಸಮಾಲೋಚನಾ ಸೇವೆ ಆರಂಭಿಸಿದೆ.


Published : January 7, 2026 at 1:15 PM IST
ಹೈದರಾಬಾದ್(ಆಂಧ್ರ ಪ್ರದೇಶ): 10 ಮತ್ತು 12ನೇ ಬೋರ್ಡ್ ಪರೀಕ್ಷೆಗಳು ಹತ್ತಿರವಾಗುತ್ತಿವೆ. ವಿದ್ಯಾರ್ಥಿಗಳಲ್ಲಿ ಆತಂಕ ಮತ್ತು ಒತ್ತಡ ಹೆಚ್ಚುವ ಸಮಯವಿದು. ವಿದ್ಯಾರ್ಥಿಗಳ ಯೋಗಕ್ಷೇಮವನ್ನು ಗುರಿಯಾಗಿರಿಸಿಕೊಂಡು, ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಮಾನಸಿಕ-ಸಾಮಾಜಿಕ ಸಮಾಲೋಚನೆ ಸೇವೆ ಆರಂಭಿಸಿದೆ.
2026ರ ಫೆಬ್ರವರಿಯಿಂದ ವಾರ್ಷಿಕ ಬೋರ್ಡ್ ಪರೀಕ್ಷೆ ಪ್ರಾರಂಭವಾಗಲಿದ್ದು, ಈ ಸಿದ್ದತೆಯ ನಿರ್ಣಾಯಕ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಒತ್ತಡ ಮತ್ತು ಭಾವನಾತ್ಮಕ ಸಮಸ್ಯೆಗಳ ಕುರಿತು ವಿಶೇಷವಾಗಿ ಗಮನ ಹರಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆರಂಭಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನವರಿ 6ರಿಂದ ಮಂಡಳಿ ಮೊದಲ ಹಂತದ ಸಮಾಲೋಚನಾ ಕಾರ್ಯಕ್ರಮವನ್ನು ಏರ್ಪಡಿಸಲಿದೆ. ಇದು ಜೂನ್ 1ರ ವರೆಗೆ ನಡೆಯಲಿದ್ದು, ವಿದ್ಯಾರ್ಥಿಗಳಲ್ಲಿ ಪರೀಕ್ಷೆ ವೇಳೆಯಲ್ಲಿ ಮಾನಸಿಕ ಆತಂಕ ನಿಯಂತ್ರಿಸುವ ಹಾಗೂ ಅವರಲ್ಲಿ ಸಮತೋಲನ ಕಾಪಾಡಿ, ಆತ್ಮವಿಶ್ವಾಸ ಹೆಚ್ಚಿಸುವ ಗುರಿ ಹೊಂದಿದೆ.
ಈ ಸಮಾಲೋಚನೆಗಾಗಿ 24/7 ಟೋಲ್ ಫ್ರೀ ಐವಿಆರ್ಎಸ್ (1800-11-8004) ಸೇವೆ ಲಭ್ಯವಿದೆ. ಸಮಲೋಚನೆಯನ್ನು ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ನೀಡಲಾಗುತ್ತದೆ. ಒತ್ತಡರಹಿತ ಪರೀಕ್ಷಾ ಸಿದ್ಧತೆ, ಸಮಯದ ಪರಿಣಾಮಕಾರಿ ಬಳಕೆ, ಪ್ರಶ್ನೆಗಳಿಗೆ ಉತ್ತರ ಸೇರಿದಂತೆ ಪ್ರಯೋಜನಕಾರಿ ಮಾಹಿತಿ ನೀಡಲಾಗುವುದು.
ಟೆಲಿ ಸಮಾಲೋಚನಾ ಸೇವೆ ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 9.30ರಿಂದ ಸಂಜೆ 5.30ರವರೆಗೆ ಪ್ರತೀ ವಾರ ನಡೆಯಲಿದೆ. ಸಿಬಿಎಫ್ಸಿ ಮಾನ್ಯತೆ ಶಾಲೆಯ ಪ್ರಾಂಶುಪಾಲರು, ಸಮಾಲೋಚಕರು, ವಿಶೇಷ ಶಿಕ್ಷಕರು ಮತ್ತು ನುರಿತ ಮನೋವಿಜ್ಞಾನಿಗಳು ಸೇರಿದಂತೆ 73 ತರಬೇತಿ ಪಡೆದ ಉದ್ಯೋಗಿಗಳು ಕಾರ್ಯಕ್ರಮದಲ್ಲಿ ಕಾರ್ಯನಿರ್ವಹಿಸಲಿದ್ದು, ವಿದ್ಯಾರ್ಥಿಗಳಿಗೆ ಸಲಹೆ ಸೂಚನೆ ನೀಡಲಿದ್ದಾರೆ.
ಇದರಲ್ಲಿ 61 ಸಮಾಲೋಚಕರು ಭಾರತದವರಾಗಿದ್ದು, 12 ಸಮಾಲೋಚಕರು ಜಪಾನ್, ನೇಪಾಳ, ಕತಾರ್, ಒಮನ್ ಮತ್ತು ಯುಎಇಯವರಾಗಿದ್ದಾರೆ ಎಂದು ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸಿಬಿಎಸ್‌ಇ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಒತ್ತಡ ನಿರ್ವಹಣೆ, ಪರಿಣಾಮಕಾರಿ ಅಧ್ಯಯನ ವಿಧಾನಗಳು ಮತ್ತು ಭಾವನಾತ್ಮಕ ಸಮಸ್ಯೆಗಳ ಕುರಿತು ಅರ್ಥಮಾಡಿಕೊಳ್ಳುವ ಮಾಹಿತಿ ಹಂಚಿಕೊಂಡಿದೆ ಎಂದು ತಿಳಿಸಲಾಗಿದೆ.
ಇವುಗಳನ್ನೂ ಓದಿ:

