ETV Bharat / business

ಇರಾನ್​ ಸಂಘರ್ಷ: ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದ ಪ್ರತಿ ಬ್ಯಾರೆಲ್​ ಕಚ್ಚಾ ತೈಲದ ದರ

ಇರಾನ್​ ಮೇಲೆ ಇಸ್ರೇಲ್​ ಮತ್ತು ಅಮೆರಿಕನ್​ ಪಡೆಗಳು ನಡೆಸಿದ ದಾಳಿಯಿಂದ ಕಚ್ಚಾ ತೈಲ ದರವು ಏರುತ್ತಿದೆ.

OIL PRICE HIKE
ಸಾಂದರ್ಭಿಕ ಚಿತ್ರ (IANS)
author img

By PTI

Published : March 2, 2026 at 1:37 PM IST

2 Min Read
Choose ETV Bharat

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಕಚ್ಚಾ ತೈಲದ ಬೆಲೆ ಇಂದು ಗಗನಕ್ಕೇರಿದೆ. ಪ್ರತಿ ಬ್ಯಾರೆಲ್‌ ಕಚ್ಚಾ ತೈಲವು ಒಂದೇ ದಿನ 504 ರೂಪಾಯಿ ಹೆಚ್ಚಳವಾಗಿ 6,596 ರೂಪಾಯಿಗೆ ತಲುಪಿದೆ.

ಸರಕು ಉತ್ಪನ್ನಗಳ ವಿನಿಮಯ ಕೇಂದ್ರವಾದ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (ಎಂಸಿಎಕ್ಸ್​) ಏಪ್ರಿಲ್​ ತಿಂಗಳಿಗೆ ಸಂಬಂಧಿಸಿದಂತೆ ನಡೆದ ವಹಿವಾಟಿನಲ್ಲಿ ಪ್ರತಿ ಬ್ಯಾರೆಲ್​ ಕಚ್ಚಾ ತೈಲವು ಶೇಕಡಾ 8.27ರಷ್ಟು (504 ರೂಪಾಯಿ) ಹೆಚ್ಚಳ ದಾಖಲಿಸಿದೆ.

ಇನ್ನು, ಜಾಗತಿಕವಾಗಿ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್​​​ನಲ್ಲಿ ಕಚ್ಚಾ ತೈಲವು ಬ್ಯಾರೆಲ್‌ಗೆ 70.74 ಅಮೆರಿಕನ್​ ಡಾಲರ್​ಗೆ ಏರಿಕೆಯಾಗಿದೆ. ಅಂದರೆ, ಶೇಕಡಾ 5.55 ರಷ್ಟು ಹೆಚ್ಚಳ. ನ್ಯೂಯಾರ್ಕ್‌ನಲ್ಲಿ ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್‌ಗೆ ಶೇ.5.86 ರಷ್ಟು ಏರಿಕೆಯಾಗಿ 77.14 ಅಮೆರಿಕರನ್​ ಡಾಲರ್​​ಗೆ ತಲುಪಿದೆ.

ಕಚ್ಚಾ ತೈಲ ಪೂರೈಕೆ ಏರುಪೇರಾಗುತ್ತಾ?: ಮಧ್ಯಪ್ರಾಚ್ಯದ ಪ್ರಮುಖ ತೈಲ ರಾಷ್ಟ್ರವಾದ ಇರಾನ್​ ಮೇಲೆ ಇಸ್ರೇಲ್​ ಮತ್ತು ಅಮೆರಿಕದ ಪಡೆಗಳು ಭೀಕರ ದಾಳಿ ನಡೆಸುತ್ತಿರುವುದು ವಿಶ್ವದ ಇಂಧನ ಭದ್ರತೆ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ.

ಇರಾನ್​ ವಿಶ್ವದ ಹಲವು ರಾಷ್ಟ್ರಗಳಿಗೆ ಇಂಧನ ಸರಬರಾಜಾಗುವ ಆಯಕಟ್ಟಿನ ಪ್ರದೇಶದಲ್ಲಿದೆ. ಇಲ್ಲಿ ನಡೆಯುವ ಯಾವುದೇ ವಿದ್ಯಮಾನಗಳು ವಿಶ್ವದ ಮೇಲೆ ಪರಿಣಾಮ ಬೀರುವುದು ಸಹಜ. ಈಗ ನಡೆಯುತ್ತಿರುವ ಸಂಘರ್ಷ ಹಲವು ರಾಷ್ಟ್ರಗಳ ಆರ್ಥಿಕತೆಯನ್ನೇ ಅಲುಗಾಡಿಸುವ ಭೀತಿಯಿದೆ.

ಇರಾನ್​ನಿಂದ ಅತಿಹೆಚ್ಚು ತೈಲ ಖರೀದಿ ಮಾಡುವ ರಾಷ್ಟ್ರಗಳಲ್ಲಿ ಚೀನಾ ಮುಂಚೂಣಿಯಲ್ಲಿದೆ. ಒಂದೇ ವೇಳೆ ಈ ಸಂಘರ್ಷದಲ್ಲಿ ತೈಲ ನಿಕ್ಷೇಪಗಳ ಮೇಲೆ ದಾಳಿ ನಡೆದಲ್ಲಿ ಮೊದಲು ನಷ್ಟಕ್ಕೀಡಾಗುವುದು ಚೀನಾ. ಈಗ ಆವರಿಸಿರುವ ಯುದ್ಧದ ಕಾರ್ಮೋಡ ಬೇಗ ತಿಳಿಯಾಗಲಿ ಎಂಬುದು ವಿಶ್ವದ ಕೋರಿಕೆ.

ಹಾರ್ಮುಚ್​ ಜಲಸಂಧಿ ಬಂದ್: ಇಸ್ರೇಲ್ ಮತ್ತು ಅಮೆರಿಕ ಇರಾನ್ ಮೇಲೆ ದಾಳಿ ನಡೆಸಿ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿಯನ್ನು ಹತ್ಯೆಗೈದ ಬಳಿಕ, ಪ್ರತೀಕಾರವಾಗಿ ಇರಾನ್ ಹಾರ್ಮುಚ್ ಜಲಸಂಧಿಯನ್ನು ಬಂದ್ ಮಾಡಿದೆ. ವಿಶ್ವರಾಷ್ಟ್ರಗಳಿಗೆ ತೈಲ ಪೂರೈಕೆಯಾಗುವುದು ಇದೇ ಮಾರ್ಗದಿಂದ. ಹೀಗಾಗಿ, ತೈಲ ಪೂರೈಕೆ ಸ್ಥಗಿತವಾದಲ್ಲಿ ಬೆಲೆ ಮತ್ತಷ್ಟು ಏರಿಕೆ ದಾಖಲಿಸುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

ಸದ್ಯ, ಸೀಮಿತ ಏರಿಕೆಯ ದಾಖಲಾಗಿದ್ದು, ಮುಂದೆ ಬ್ರೆಂಟ್ ತೈಲ ಪ್ರತಿ ಬ್ಯಾರೆಲ್‌ಗೆ 100ರಿಂದ 120 ಅಮೆರಿಕನ್​ ಡಾಲರ್‌ಗೆ ಏರಬಹುದು. ಕಡಲ ಅಡಚಣೆ ಹೆಚ್ಚಿದಲ್ಲಿ ಈ ಬೆಲೆಗಳು 120ರಿಂದ 140 ಡಾಲರ್‌ಗೂ ಹೆಚ್ಚಾಗಬಹುದು. ಆದರೆ, ಹಾರ್ಮುಜ್ ಜಲಸಂಧಿಯನ್ನು ನಿರಂತರವಾಗಿ ಬಂದ್ ಮಾಡಿದ್ದೇ ಆದಲ್ಲಿ ತೈಲ ಬೆಲೆ 150 ಡಾಲರ್ ಅಥವಾ ಅದಕ್ಕಿಂತಲೂ ಹೆಚ್ಚಾಗಬಹುದು ಎಂದು ವಿಶ್ಲೇಷಕರ ಅಭಿಮತ.

ಇವುಗಳನ್ನೂ ಓದಿ: