ETV Bharat / business

ಸತತ ಕುಸಿತ ಕಂಡಿದ್ದ ಐಟಿ ಷೇರುಗಳಲ್ಲಿ ಖರೀದಿ ಭರಾಟೆ, ವಿದೇಶಿ ಹೂಡಿಕೆದಾರರಿಂದಲೂ ಬೂಸ್ಟ್: ಆರಂಭಿಕ ಏರಿಕೆ ಕಂಡ ಷೇರು ಮಾರುಕಟ್ಟೆ

ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 303 ಪಾಯಿಂಟ್‌ಗಳ ಏರಿಕೆ ದಾಖಲಿಸಿದರೆ, ನಿಫ್ಟಿ 85.1 ಪಾಯಿಂಟ್‌ಗಳ ಏರಿಕೆ ಕಂಡಿದೆ.

Stock Markets Trade Higher In Early Deals On Buying In IT Shares
ಆರಂಭಿಕ ಏರಿಕೆ ಕಂಡ ಷೇರು ಮಾರುಕಟ್ಟೆ (File/ANI)
author img

By ETV Bharat Karnataka Team

Published : February 26, 2026 at 11:03 AM IST

2 Min Read
Choose ETV Bharat

ಮುಂಬೈ: ಐಟಿ ಷೇರುಗಳ ಖರೀದಿ ಮತ್ತು ವಿದೇಶಿ ನಿಧಿಯ ಒಳಹರಿವಿನ ಕಾರಣದಿಂದ ಗುರುವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಕೆ ದಾಖಲಿಸಿದವು. ಅಮೆರಿಕದ ಮಾರುಕಟ್ಟೆಗಳಲ್ಲಿ ಕಂಡು ಬಂದ ಸಕಾರಾತ್ಮಕ ಅಂಶಗಳು ಭಾರತೀಯ ಮಾರುಕಟ್ಟೆಗಳ ಆರಂಭಿಕ ವಹಿವಾಟಿನಲ್ಲಿ ಸೂಚ್ಯಂಕಗಳ ಏರಿಕೆಗೆ ಮತ್ತಷ್ಟು ಬೆಂಬಲ ನೀಡಿತು.

ಬಿಎಸ್‌ಇ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 303 ಪಾಯಿಂಟ್‌ಗಳ ಏರಿಕೆಯಾಗಿ 82,579.16 ಕ್ಕೆ ತಲುಪಿತು. ಇನ್ನು ನಿಫ್ಟಿ 85.1 ಪಾಯಿಂಟ್‌ಗಳ ಏರಿಕೆಯಾಗಿ 25,567.60 ಕ್ಕೆ ತಲುಪಿತು. ಸೆನ್ಸೆಕ್ಸ್ ಪ್ಯಾಕ್‌ನಿಂದ ಟೆಕ್ ಮಹೀಂದ್ರಾ, ಇನ್ಫೋಸಿಸ್, ಎಚ್‌ಸಿಎಲ್ ಟೆಕ್, ಎಟರ್ನಲ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಮತ್ತು ಮಾರುತಿ ಅತಿದೊಡ್ಡ ಲಾಭ ಗಳಿಸಿದವು.

ಇಂಟರ್‌ಗ್ಲೋಬ್ ಏವಿಯೇಷನ್, ಅಲ್ಟ್ರಾಟೆಕ್ ಸಿಮೆಂಟ್, ಆಕ್ಸಿಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್‌ಗಳು ಕೊಂಚ ಕುಸಿತ ಕಂಡವು. ವಿನಿಮಯ ದತ್ತಾಂಶದ ಪ್ರಕಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬುಧವಾರ ಸುಮಾರು 2,991.64 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದರು. ದೇಶೀಯ ಸಾಂಸ್ಥಿಕ ಹೂಡಿಕೆದಾರರು ಸಹ 5,118.57 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದರು.

ಹಿಂದಿನ ವಹಿವಾಟಿನಲ್ಲಿ ವಿದೇಶಿ ಹಾಗೂ ದೇಶೀಯ ಹೂಡಿಕೆದಾರರು ಷೇರುಗಳ ಖರೀದಿಯಲ್ಲಿ ತೊಡಗಿದ್ದರಿಂದ ಹೂಡಿಕೆದಾರರಿಗೆ ಹೆಚ್ಚುವರಿ ಬೂಸ್ಟ್​ ನೀಡುವ ಸಾಧ್ಯತೆಯಿದೆ ಎಂದು ಆನ್‌ಲೈನ್ ವ್ಯಾಪಾರ ಮತ್ತು ಸಂಪತ್ತು ತಂತ್ರಜ್ಞಾನ ಸಂಸ್ಥೆಯಾದ ಎನ್‌ರಿಚ್ ಮನಿ ಸಿಇಒ ಪೊನ್ಮುಡಿ ಆರ್ ಹೇಳಿದ್ದಾರೆ.

ಏಷ್ಯಾದ ಮಾರುಕಟ್ಟೆಗಳಲ್ಲಿ ದಕ್ಷಿಣ ಕೊರಿಯಾದ ಕೋಸ್ಪಿ ಮತ್ತು ಜಪಾನ್‌ನ ನಿಕ್ಕಿ 225 ಅಂಕಗಳ ಏರಿಕೆ ದಾಖಲಿಸುವುದರೊಂದಿಗೆ ಸಕಾರಾತ್ಮಕ ವಹಿವಾಟು ನಡೆಸುತ್ತಿದ್ದರೆ, ಶಾಂಘೈನ ಎಸ್‌ಎಸ್‌ಇ ಕಾಂಪೋಸಿಟ್ ಸೂಚ್ಯಂಕ ಮತ್ತು ಹಾಂಕಾಂಗ್‌ನ ಹ್ಯಾಂಗ್ ಸೆಂಗ್ ಸೂಚ್ಯಂಕವು ಕೊಂಚ ಕುಸಿತ ಕಂಡಿವೆ.

ಬುಧವಾರ ಅಮೆರಿಕದ ಮಾರುಕಟ್ಟೆಗಳು ಏರಿಕೆಯಲ್ಲಿ ಕೊನೆಗೊಂಡಿದೆ. ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ ಶೇ. 0.25 ರಷ್ಟು ಏರಿಕೆಯಾಗಿ 71.03 ಡಾಲರ್‌ಗೆ ತಲುಪಿದೆ.

ಬುಧವಾರ, ಸೆನ್ಸೆಕ್ಸ್ 50.15 ಪಾಯಿಂಟ್ಸ್​ ಏರಿಕೆಯಾಗಿ 82,276.07 ಕ್ಕೆ ವ್ಯವಹಾರ ಕೊನೆಗೊಳಿಸಿತ್ತು. ನಿಫ್ಟಿ 57.85 ಪಾಯಿಂಟ್‌ಗಳು ಹೆಚ್ಚಳಗೊಂಡು 25,482.50 ಅಂಕಗಳಿಗೆ ದೈನಂದಿನ ವಹಿವಾಟನ್ನು ಮುಗಿಸಿತ್ತು.

ಆರು ಪೈಸೆ ಏರಿಕೆ ಕಂಡ ರೂಪಾಯಿ: ಗುರುವಾರದ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 6 ಪೈಸೆ ಏರಿಕೆಯಾಗಿ 90.85 ಕ್ಕೆ ತಲುಪಿದ್ದು, ದುರ್ಬಲವಾದ ಗ್ರೀನ್‌ಬ್ಯಾಕ್ ಮತ್ತು ಎಫ್‌ಐಐ ಒಳಹರಿವು ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ.

ದೇಶೀಯ ಷೇರು ಮಾರುಕಟ್ಟೆಗಳಲ್ಲಿ ವಹಿವಾಟಿನ ಸಕಾರಾತ್ಮಕ ಆರಂಭವು ಸ್ಥಳೀಯ ಘಟಕಕ್ಕೆ ಮತ್ತಷ್ಟು ಬೆಂಬಲ ನೀಡಿತು. ಆದರೆ, ಜಾಗತಿಕ ಕಚ್ಚಾ ತೈಲ ಬೆಲೆಗಳಲ್ಲಿನ ಏರಿಕೆ ಮತ್ತು ಭೌಗೋಳಿಕ ರಾಜಕೀಯ ಅನಿಶ್ಚಿತತೆಗಳು ತೀವ್ರ ಲಾಭವನ್ನು ಮಿತಿಗೊಳಿಸಿದವು ಎಂದು ಫಾರೆಕ್ಸ್ ವ್ಯಾಪಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ:

ಗ್ರಾಮಸ್ಥರಿಗೆ ಆರ್ಥಿಕ ಭದ್ರತೆ ನೀಡುವ ಬೊಂಬಾಟ ವಿಮಾ ಯೋಜನೆ: ಕಡಿಮೆ ಸಮಯ, ಹಣ ವಾಪಸಾತಿ ಸೌಲಭ್ಯವೂ ಉಂಟು!

200 ಎಕರೆಯಲ್ಲಿ ಡಿಫೆನ್ಸ್ ಎಲೆಕ್ಟ್ರಾನಿಕ್ಸ್ ಪಾರ್ಕ್, 100 ಎಕರೆಯಲ್ಲಿ ಏವಿಯಾನಿಕ್ಸ್-ಸೆನ್ಸರ್ ಪಾರ್ಕ್ ಸ್ಥಾಪನೆಗೆ ಚಿಂತನೆ: ಸಚಿವ ಎಂ.ಬಿ.ಪಾಟೀಲ್