ETV Bharat / business

ಷೇರು ಮಾರುಕಟ್ಟೆಯಲ್ಲಿ ಕರಡಿ ಕುಣಿತ: ಸೆನ್ಸೆಕ್ಸ್​ 1 ಸಾವಿರ, ನಿಫ್ಟಿ 370ಕ್ಕೂ ಅಧಿಕ ಅಂಕ ಕುಸಿತ..ಹೂಡಿಕೆದಾರರಿಗೆ 10 ಲಕ್ಷ ಕೋಟಿ ನಷ್ಟ

ಭಾರತದ ದೇಶೀಯ ಷೇರು ಮಾರುಕಟ್ಟೆಯಲ್ಲಿ ಕರಡಿ ಕುಣಿತ ಜೋರಾಗಿದೆ. ಆರ್​ಬಿಐ ರೆಪೊ ದರ ಏರಿಸಿದ್ದರ ಪರಿಣಾಮ ಇಂದು ಸೆನ್ಸೆಕ್ಸ್​ 1 ಸಾವಿರ, ನಿಫ್ಟಿ 370ಕ್ಕೂ ಅಧಿಕ ಅಂಕ ಕುಸಿದಿವೆ.

STOCK MARKET NEWS
ಸಾಂದರ್ಭಿಕ ಚಿತ್ರ (IANS)
author img

By ETV Bharat Karnataka Team

Published : October 8, 2026 at 4:25 PM IST

2 Min Read
Choose ETV Bharat

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದ ಒಂದು ದಿನದ ನಂತರ, ಗುರುವಾರವಾದ ಇಂದು ಭಾರತೀಯ ಷೇರು ಮಾರುಕಟ್ಟೆ ಪ್ರಪಾತಕ್ಕೆ ಕುಸಿದಿದೆ. ಬಿಎಸ್‌ಇ ಸೆನ್ಸೆಕ್ಸ್ 1045.46 (ಶೇ.1.44) ಪಾಯಿಂಟ್‌ಗಳ ಕುಸಿತ ಕಂಡು 71,593.24 ಕ್ಕೆ ತಲುಪಿದರೆ, ಎನ್‌ಎಸ್‌ಇ ನಿಫ್ಟಿ 371.25 (ಶೇ.1.64) ಪಾಯಿಂಟ್‌ಗಳ ಕುಸಿತ ಕಂಡು 22,231.80 ಕ್ಕೆ ತಲುಪಿದೆ.

ಒಂದು ಹಂತದಲ್ಲಿ ಸೆನ್ಸೆಕ್ಸ್​ 1310, ನಿಫ್ಟಿ 417 ಕ್ಕೂ ಅಧಿಕ ಅಂಕಗಳನ್ನು ಕಳೆದುಕೊಂಡಿತ್ತು. ದಿನದ ವಹಿವಾಟಿನ ಕೊನೆಯಲ್ಲಿ ಅಲ್ಪ ಅಂಕಗಳ ಏರಿಕೆ ಕಂಡವು. ನಿಫ್ಟಿ 52 ವಾರಗಳಲ್ಲೇ ಅತ್ಯಧಿಕ ಕುಸಿತ ಕಂಡಿದ್ದರೆ, ಸೆನ್ಸೆಕ್ಸ್​​ ಪತನದಿಂದ ಹೂಡಿಕೆದಾರರ 10 ಲಕ್ಷ ಕೋಟಿ ರೂಪಾಯಿ ಅಧಿಕ ಹಣ ನಷ್ಟವಾಗಿದೆ.

ಯಾರಿಗೆ ಲಾಭ, ನಷ್ಟ?: ಪವರ್ ಗ್ರಿಡ್, ರಿಲಯನ್ಸ್ ಇಂಡಸ್ಟ್ರೀಸ್ (ಆರ್‌ಐಎಲ್), ಐಟಿಸಿ ಮತ್ತು ಅದಾನಿ ಪೋರ್ಟ್ಸ್ ಷೇರುಗಳು ಕುಸಿದರೆ, ಟೈಟಾನ್ ಮತ್ತು ಐಟಿ ಷೇರುಗಳು ಕುಸಿತದ ನಡುವೆಯೂ ಲಾಭ ಗಳಿಸಿದವು.

ಆರ್‌ಬಿಐ ರೆಪೊ ದರ ಏರಿಕೆ ಎಫೆಕ್ಟ್​: 3.5 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಆರ್​ಬಿಐ ರೆಪೊ ದರವನ್ನು ಏರಿಸಿದ್ದು, ದೇಶೀಯ ಷೇರು ಮಾರುಕಟ್ಟೆಯ ಮೇಲೆ ಭಾರಿ ಪರಿಣಾಮ ಬೀರಿತು. ಜಾಗತಿಕ ಭೌಗೋಳಿಕ ರಾಜಕೀಯ ಹಿನ್ನೆಲೆಯಲ್ಲಿ ಆರ್‌ಬಿಐ ತನ್ನ ತಟಸ್ಥ ನಿಲುವನ್ನು ಬದಲಿಸಿದೆ.

ಜಾಗತಿಕ ದಲ್ಲಾಳಿ ಸಂಸ್ಥೆ ಜೆಫರೀಸ್ ಪ್ರಕಾರ, ಆರ್‌ಬಿಐ ಬಡ್ಡಿದರಗಳನ್ನು ಸುಮಾರು 100 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಲಿದೆ ಎಂದು ಅಂದಾಜಿಸಿದೆ. 2027 ರ ಮೊದಲಾರ್ಧದವರೆಗೆ ಆರ್‌ಬಿಐ ಬಡ್ಡಿದರಗಳನ್ನು ಒಟ್ಟು 100 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸುತ್ತದೆ ಎಂದು ಬಿಒಎಫ್‌ಎ ಸೆಕ್ಯುರಿಟೀಸ್ ಭವಿಷ್ಯ ನುಡಿದಿದೆ. ಡಿಸೆಂಬರ್​​ನಲ್ಲಿ ನಡೆಯುವ ಎಂಪಿಸಿ ಸಭೆಯಲ್ಲಿ ಆರ್‌ಬಿಐ ರೆಪೊ ದರವನ್ನು ಮತ್ತೆ 25 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸುತ್ತದೆ ಎಂದು ಎಸ್‌ಬಿಐ ಕೂಡ ಭವಿಷ್ಯ ಹೇಳಿದೆ.

ಜಾಗತಿಕ ಬಾಂಡ್ ಮಾರಾಟ: ಜಾಗತಿಕ ಬಾಂಡ್ ಮಾರಾಟ ಮುಂದುವರಿದಿರುವುದರಿಂದ ಅಮೆರಿಕದ ದೀರ್ಘಾವಧಿಯ ಬಾಂಡ್ ಗಳಿಕೆಗಳು ಕಳೆದ ಎರಡು ದಶಕಗಳಲ್ಲೇ ಅತ್ಯಧಿಕ ಮಟ್ಟವನ್ನು ತಲುಪಿವೆ. ಇದರ ನೇರ ಲಾಭ ಡಾಲರ್​ಗೆ ಸಿಕ್ಕಿದೆ.

ಕಳೆದ ವಾರ ಬಿಡುಗಡೆಯಾದ ಪಿಸಿಇ ಹಣದುಬ್ಬರ ಮತ್ತು ಉದ್ಯೋಗಗಳ ದತ್ತಾಂಶದ ನಂತರ, ಯುಎಸ್​​ ರಿಸರ್ವ್​ ಅಧಿಕಾರಿಗಳು ಸಾಲದ ದರಗಳ ವಿಚಾರದಲ್ಲಿ ಸೌಮ್ಯ ನಿಲುವು ತಳೆಯುವ ಸೂಚನೆ ನೀಡಿದ್ದಾರೆ. ಈ ತಿಂಗಳು ಯುಎಸ್​ ಫೆಡ್ ದರಗಳಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಮಾರುಕಟ್ಟೆ ಶೇಕಡಾ 80 ರಷ್ಟು ನಂಬಿದೆ.

ಕಚ್ಚಾ ತೈಲ ಬೆಲೆ ಏರಿಕೆ: ಮಧ್ಯಪ್ರಾಚ್ಯದಲ್ಲಿ ಹಡಗುಗಳ ಮೇಲೆ ಹೆಚ್ಚುತ್ತಿರುವ ದಾಳಿಗಳ ಮಧ್ಯೆ, ತೈಲ ಬೆಲೆಗಳು ಬ್ಯಾರೆಲ್‌ಗೆ 102 ಅಮೆರಿಕನ್​ ಡಾಲರ್​​ಗಿಂತ ಅಧಿಕವಾಗಿದೆ. ಹಾರ್ಮುಜ್ ಜಲಸಂಧಿಯಲ್ಲಿ ಟ್ಯಾಂಕರ್​​ಗಳ ಮೇಲಿನ ದಾಳಿಯನ್ನು ಇರಾನ್ ತೀವ್ರಗೊಳಿಸಿದ್ದು, ಸೌದಿ ಪಡೆಗಳು ಹೌತಿ ಬಂಡುಕೋರರೊಂದಿಗೆ ಸಂಘರ್ಷ ಮುಂದುವರಿಸಿರುವುದು ತೈಲ ಬೆಲೆ ಏರಿಕೆಗೆ ಕಾರಣವಾಗಿದೆ. ಇದು ಹಣದುಬ್ಬರದ ಒತ್ತಡ ಮತ್ತು ಬಡ್ಡಿ ದರ ಏರಿಕೆಯ ಕಳವಳಗಳನ್ನು ಹೆಚ್ಚಿಸಿವೆ.

ಎಫ್‌ಐಐ ಮಾರಾಟದ ಅಬ್ಬರ: ವಿದೇಶಿ ಹೂಡಿಕೆದಾರರು ಯಾವುದೇ ಬಿಡುವಿಲ್ಲದೆ ಭಾರತೀಯ ಮಾರುಕಟ್ಟೆಯಿಂದ ಸತತವಾಗಿ ಹಣ ಹಿಂಪಡೆಯುತ್ತಿರುವುದು ದೇಶೀಯ ಮಾರುಕಟ್ಟೆಯ ಮೇಲೆ ತೀವ್ರ ಹೊಡೆತ ನೀಡಿದೆ. ಅಕ್ಟೋಬರ್​ 7 ರಂದು ವಿದೇಶಿ ಹೂಡಿಕೆದಾರರ ಬರೋಬ್ಬರಿ 6121 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿ ಹೊರನಡೆದಿದ್ದಾರೆ.

ಜಾಗತಿಕ ಮಾರುಕಟ್ಟೆಗಳಲ್ಲಿ ತಲ್ಲಣ: ಜಾಗತಿಕ ಮಾರುಕಟ್ಟೆಗಳೆಲ್ಲವೂ ಕೂಡ ಇಂದು ಕುಸಿದಿವೆ. ದಕ್ಷಿಣ ಕೊರಿಯಾದ ಕೋಸ್ಪಿ ಶೇಕಡಾ 2 ಕ್ಕಿಂತ ಹೆಚ್ಚು, ಜಪಾನ್‌ನ ನಿಕ್ಕಿ, ಚೀನಾದ ಶಾಂಘೈ ಕಾಂಪೋಸಿಟ್ ಮತ್ತು ಹಾಂಕಾಂಗ್‌ನ ಹ್ಯಾಂಗ್ ಸೆಂಗ್ ತಲಾ ಶೇಕಡಾ 1 ಕ್ಕಿಂತ ಹೆಚ್ಚು ಕುಸಿದಿವೆ.

ಇವುಗಳನ್ನೂ ಓದಿ: